ಗುರುವಾರ , ಮೇ 13, 2021
39 °C

ಹಾಲಕ್ಕಿ ಪರಿಶಿಷ್ಟರ ಪಟ್ಟಿಗೆ: ಕೇಂದ್ರದ ಪರಿಶೀಲನೆಯಲ್ಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾರವಾರ: ಹಾಲಕ್ಕಿ ಜನಾಂಗವನ್ನು ಪರಿಶಿಷ್ಟರ ಪಟ್ಟಿಗೆ ಸೇರ್ಪಡೆ ಮಾಡುವ ಪ್ರಸ್ತಾವಕ್ಕೆ ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿದ್ದು, ಈಗ ಕೇಂದ್ರ ಸರಕಾರದ ಪರಿಶೀಲನೆಯಲ್ಲಿದೆ ಎಂದು ಮೀನುಗಾರಿಕೆ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಆನಂದ ಅಸ್ನೋಟಿಕರ್ ಹೇಳಿದರು.ಅಂಕೋಲಾ ತಾಲ್ಲೂಕಿನ ಬೆಳಸೆ ಗ್ರಾಮ ಪಂಚಾಯಿತಿ ಆವರಣದಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಬಸವ ಇಂದಿರಾ ಯೋಜನೆಯಡಿ 120 ಫಲಾನುಭವಿಗಳಿಗೆ ವಸತಿ ಯೋಜನೆಯ ಹಕ್ಕುಪತ್ರ ವಿತರಿಸಿ ಅವರು ಮಾತನಾಡಿದರು.ಹಾಲಕ್ಕಿ ಜನಾಂಗದವರು ರಾಜ್ಯದಲ್ಲಿಯೇ ಹಿಂದುಳಿದವರಾಗಿದ್ದಾರೆ. ಸಾಮಾಜಿಕವಾಗಿ ಅನ್ಯಾಯಕ್ಕೊಳಪಟ್ಟಿದ್ದಾರೆ. ಹಾಲಕ್ಕಿಗಳ ಸ್ಥಿತಿಗತಿಗಳ ಬಗ್ಗೆ  ಮುಖ್ಯಮಂತ್ರಿ ಸದಾನಂದ ಗೌಡ ಅವರೂ ಮಾಹಿತಿ ಪಡೆದುಕೊಂಡಿದ್ದಾರೆ. ಅಗತ್ಯವಿದ್ದರೆ ಅವರ ನಾಯಕತ್ವದಲ್ಲಿ ದೆಹಲಿಗೆ ನಿಯೋಗ ಕೊಂಡೊಯ್ಯಲು ಸಿದ್ಧ ಎಂದರು.  ರಾಜ್ಯದಲ್ಲಿಯೇ ಕಾರವಾರ-ಅಂಕೋಲಾ ಹಿಂದುಳಿದ ಕ್ಷೇತ್ರವಾಗಿದೆ. ಹಿಂದುಳಿದ ಅನೇಕ ಸಮುದಾಯಗಳು ಇಲ್ಲಿದ್ದು ಒಂದಿಲ್ಲೊಂದು ಸಮಸ್ಯೆ ಎದುರಿಸುತ್ತಿದ್ದಾರೆ ಎಂದರು.ಸರಕಾರದ ಸೌಲಭ್ಯಗಳನ್ನು ಹಿಂದುಳಿದವರು ವಿಶೇಷವಾಗಿ ಬಡತನ ರೇಖೆಗಿಂತ ಕೆಳಗಿರುವವರು ಪಡೆದುಕೊಳ್ಳಬೇಕು. ವಸತಿ ಯೋಜನೆಯಲ್ಲಿ ವಿವಿಧ ರೀತಿಯ ಷರತ್ತುಗಳಿಂದಾಗಿ ಅನೇಕ ಬಡ ವಸತಿ ರಸತಿ ರಹಿತರಿಗೆ ಯೋಜನೆಯ ಪೂರ್ಣ ಪ್ರಯೋಜನವಾಗುತ್ತಿಲ್ಲ ಎಂದ ಸಚಿವರು, ಅಧಿಕಾರಿಗಳು ಸಾರ್ವಜನಿಕರಿಗೆ ಸರಿಯಾದ ಮಾಹಿತಿ ಒದಗಿಸಬೇಕು ಎಂದರು.ಉತ್ತರ ಕನ್ನಡ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಉದಯ ನಾಯ್ಕ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಜಿ.ಪಂ. ಸದಸ್ಯ ವಿನೋದ ನಾಯ್ಕ, ಸರಸ್ವತಿ ಗೌಡ, ಸಹಕಾರಿ ಧುರೀಣ ಆರ್.ಎನ್. ನಾಯಕ,  ತಹಶಿಲ್ದಾರ ಉದಯಕುಮಾರ ಶೆಟ್ಟಿ, ಬೆಳಸೆ ಗ್ರಾಮ ಪಂಚಾಯಿಯಿ ಅಧ್ಯಕ್ಷ ಶಂಕರ ವಿಠೋಬಾ ಗೌಡ ಹಾಜರಿದ್ದರು.ಅಂಕೋಲಾ ಸಮೀಪದ ಹುಲಿದೇವವಾಡಾದಲ್ಲಿ ಬುಧವಾರ ಬೀಸಿದ ಮಳೆಯಿಂದ ಹಾನಿಗೊಳಗಾಗಿದ್ದ 13 ಕುಟುಂಬದವರಿಗೆ ಸಚಿವರು ಪರಿಹಾರದ ಚೆಕ್ ವಿತರಿಸಿದರು.ಚೆಕ್ ವಿತರಣೆ: ಪ್ರಕೃತಿ ವಿಕೋಪಕ್ಕೆ ಬಲಿಯಾದ ಅಂಕೋಲಾ ತಾಲ್ಲೂಕಿನ ಸಕಲಬೇಣ ಗ್ರಾಮದ ಸುಕ್ರು ಗೌಡ ಅವರ ತಾಯಿ ಓಮಿ ಗೌಡ ಹಾಗೂ ಹಿಲ್ಲೂರು ಗ್ರಾಮದ ತಿಂಗಳಬೈಲ್ ಗ್ರಾಮದಲ್ಲಿ ಮೃತಪಟ್ಟ ಗಣಪತಿ ರಾಮ ಗುನಗಾ ಅವರ ಪತ್ನಿ ಸುಶೀಲಾ ಗಣಪತಿ ಗುನಗಾ ಅವರಿಗೆ ತಲಾ ಒಂದು ಲಕ್ಷ ರೂಪಾಯಿ ಪರಿಹಾರದ ಚೆಕ್ ಅನ್ನು ಹಟ್ಟಿಕೇರಿ ಗ್ರಾಮ ಪಂಚಾಯಿತಿ ಆವರಣದಲ್ಲಿ ಶುಕ್ರವಾರ ಸಚಿವ ಆನಂದ ಅಸ್ನೋಟಿಕರ್‌ವಿತರಿಸಿದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.