ಶುಕ್ರವಾರ, ಜೂನ್ 25, 2021
30 °C

ಹಾವೇರಿಯಲ್ಲಿ ನೀರಿನ ಗುಣಮಟ್ಟ ಪರೀಕ್ಷಾ ಕೇಂದ್ರ ಸ್ಥಾಪನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾವೇರಿಯಲ್ಲಿ ನೀರಿನ ಗುಣಮಟ್ಟ ಪರೀಕ್ಷಾ ಕೇಂದ್ರ ಸ್ಥಾಪನೆ

ಹಾವೇರಿ: `ಗ್ರಾಮೀಣ ಪ್ರದೇಶದಲ್ಲಿನ ನೀರಿನ ಗುಣಮಟ್ಟ ಪರೀಕ್ಷಿಸುವ `ನೀರು ಪರೀಕ್ಷಾ ಕೇಂದ್ರ~ವನ್ನು ನಗರದ ಹಳೇ ಜಿಲ್ಲಾ ಪಂಚಾಯಿತಿ ಆವರಣದಲ್ಲಿ ನೂತನವಾಗಿ ಆರಂಭಿಸಲಾಗಿದೆ~ ಎಂದು ಜಿ.ಪಂ. ಎಂಜನಿಯರಿಂಗ್ ವಿಭಾಗದ ಮುಖ್ಯ ಎಂಜಿನಿಯರ್ ಶ್ರೀಕಾಂತ ಮೈಸೂರ ತಿಳಿಸಿದರು.ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲಾ ಪಂಚಾಯಿತಿ ಎಂಜಿನಿಯರಿಂಗ್ ವಿಭಾಗದ ಉಸ್ತುವಾರಿಯಲ್ಲಿ ನಡೆಯುವ ಈ ನೀರಿನ ಗುಣಮಟ್ಟ ಪರೀಕ್ಷಾ ಕೇಂದ್ರ ಗ್ರಾಮೀಣ ಪ್ರದೇಶದ ಜನರಿಗೆ ವರದಾನವಾಗಿದೆ ಎಂದರು.ಜಿಲ್ಲೆಯಲ್ಲಿ ನೀರಿನ ಗುಣಮಟ್ಟ ಪರೀಕ್ಷಿಸಲು ಯಾವುದೇ ಕೇಂದ್ರ ಇಲ್ಲದಿರುವುದರಿಂದ ಇಲ್ಲಿವರೆಗೆ ಕುಡಿಯುವ ನೀರಿನ ಪರೀಕ್ಷೆಗಾಗಿ ಸಂಘ ಸಂಸ್ಥೆ ಇಲ್ಲವೇ ಹುಬ್ಬಳ್ಳಿ, ದಾವಣಗೆರೆ ಎಂಜಿನಿಯರಿಂಗ್ ಕಾಲೇಜುಗಳನ್ನು ಅವಲಂಬಿಸಬೇಕಿತ್ತು. ಇದರಿಂದ ಹೆಚ್ಚಿನ ಸಮಯ ವ್ಯಯವಾಗುವುದರಿಂದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದು ವಿಳಂಬವಾಗುತ್ತಿತ್ತು. ಇದನ್ನು ಗಮನದಲ್ಲಿಟ್ಟುಕೊಂಡು ತಮ್ಮ ವಿಭಾಗದಲ್ಲಿಯೇ ಕೇಂದ್ರ ಸ್ಥಾಪಿಸಲಾಯಿತು ಎಂದು ಹೇಳಿದರು.ಜಿ.ಪಂ. ಎಂಜಿನಿಯರಿಂಗ್ ಕಚೇರಿ ಆವರಣದಲ್ಲಿ ಈ ಕೇಂದ್ರ ಸ್ಥಾಪನೆಯಾಗಿದ್ದರಿಂದ ನೀರಿನ ಗುಣಮಟ್ಟ ಪರೀಕ್ಷಿಸಲು ಕಾಲೇಜ್‌ಗಳಿಗೆ ಅಲೆಯುವುದು ತಪ್ಪಿದಂತಾಗಿದೆಯಲ್ಲದೇ, ಕೇವಲ 10 ನಿಮಿಷದಲ್ಲಿ ನೀರಿನಲ್ಲಿರುವ ರಸಾಯನಿಕಗಳನ್ನು ಪತ್ತೆ ಮಾಡುವ ಮೂಲಕ ಸಮಸ್ಯೆಗಳಿಗೆ ತೀವ್ರಗತಿಯಲ್ಲಿ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗಿದೆ ಎಂದು ತಿಳಿಸಿದರು.ನೀರು ಗುಣಮಟ್ಟ ಪರೀಕ್ಷಾ ಕೇಂದ್ರ ಕಳೆದ ಎರುಡು ತಿಂಗಳಿನಿಂದ ಕಾರ್ಯ ನಿರ್ವಹಣೆ ಆರಂಭ ಮಾಡಿದ್ದು, ಈ ಕೇಂದ್ರದಲ್ಲಿ ಫಿಲ್ಡ್ ಟೆಸ್ಟ್ ಕಿಟ್ ಮೂಲಕ ನೀರಿನಲ್ಲಿರುವ  ಗಡಸುತನ, ಪಿಎಚ್ ಪ್ರಮಾಣ, ಕ್ಲೋರೈಡ್, ಪ್ಲೋರೈಡ್, ಕಬ್ಬಿಣಾಂಶ, ನೈಟ್ರೇಟ್ ಪ್ರಮಾಣಗಳನ್ನು ಪತ್ತೆ ಹಚ್ಚಬಹುದಾಗಿದೆ. ಜಿಲ್ಲೆಯಲ್ಲಿ ಕೆಲವೊಂದು ನೀರಿನ ಮೂಲಗಳು ಕುಡಿಯಲು ಯೋಗ್ಯವಾಗಿಲ್ಲ. ಬಹುತೇಕ ಕಡೆಗಳಲ್ಲಿ ದೊರೆಯುವ ನೀರಿನ ಮೂಲದಿಂದ ಯಾವುದೇ ಸಮಸ್ಯೆ ಇಲ್ಲ ಎಂಬುದು ಪರೀಕ್ಷೆಯಿಂದ ಸಾಬೀತಾಗಿದೆ ಎಂದು ಹೇಳಿದರು.ಸಾರ್ವಜನಿಕರಿಗೆ ಸರಬರಾಜು ಮಾಡಲಾಗುವ ನೀರು ಕುಡಿಯಲು ಯೋಗ್ಯವಾಗಿದೆಯೋ ಇಲ್ಲವೋ ಎಂಬುದನ್ನು ಪತ್ತೆ ಮಾಡುವುದು ಈ ಕೇಂದ್ರದ ಮೂಲ ಉದ್ದೇಶವಾಗಿದ್ದು, ಪ್ರತಿ ವರ್ಷ ಎರಡು ಬಾರಿ ನೀರಿನ ಗುಣಮಟ್ಟವನ್ನು ಪರೀಕ್ಷೆ ಮಾಡಲಾಗುತ್ತದೆ. ಮೊದಲನೇ ಸಲ ಮಳೆಗಾಲಕ್ಕೂ ಮುನ್ನ, ಎರಡನೇ ಸಲ ಮಳೆಗಾಲದ ನಂತರ ಪರೀಕ್ಷಿಸಲಾಗುತ್ತದೆ ಎಂದರು.ಕೇಂದ್ರ ಆರಂಭವಾದ ಮೇಲೆ ಮಳೆಗಾಲದ ಮುನ್ನದ ಪರೀಕ್ಷೆ ನಡೆಸಲಾಗಿದೆ. ಈವರೆಗೆ 2,790 ನೀರಿನ ಮಾದರಿಗಳನ್ನು ಪರೀಕ್ಷಿಸಲಾಗಿದೆ. ಇನ್ನೂ ಮಳೆಗಾಲದ ನಂತರ ನೀರಿನ ಮಾದರಿಯ ಪರೀಕ್ಷೆ ಮಾಡುವ ಪ್ರಕ್ರಿಯೆ ಚಾಲನೆಯಲ್ಲಿದೆ ಎಂದ ಅವರು, ಮಳೆಗಾಲ ಮುನ್ನ ಮಾಡಿದ 2,790 ಮಾದರಿಗಳಲ್ಲಿ 356 ಮಾದರಿಗಳು ಕುಡಿಯಲು ಯೋಗ್ಯವಿಲ್ಲ ಎಂಬದು ಖಚಿತವಾಗಿದೆ.ಅಂತಹ ಕಡೆಗಳಲ್ಲಿ ಆ ಮೂಲದ ನೀರಿನ ಬಳಕೆ ಬಿಟ್ಟು ಬೇರೆ ನೀರು ಬಳಕೆ ಮಾಡಲು ಸಾರ್ವಜನಿಕರಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.

 

ಕುಡಿಯಲು ಯೋಗ್ಯವಿರದ 356 ನೀರಿನ ಮಾದರಿಗಳು ಜಿಲ್ಲೆಯ 206 ಗ್ರಾಮಗಳ ನೀರಿನ ಮೂಲದಲ್ಲಿವೆ. ಅದರಲ್ಲಿ ಹಾವೇರಿ ತಾಲ್ಲೂಕಿನ 3, ಹಾನಗಲ್ ತಾಲ್ಲೂಕಿನ 26, ಹಿರೇಕೆರೂರ ತಾಲ್ಲೂಕಿನ 87, ರಾಣೆಬೆನ್ನೂರ ತಾಲ್ಲೂಕಿನ 10, ಬ್ಯಾಡಗಿ ತಾಲ್ಲೂಕಿನ 19, ಸವಣೂರು ತಾಲ್ಲೂಕಿನ 39 ಹಾಗೂ ಶಿಗ್ಗಾವಿ ತಾಲ್ಲೂಕಿನ 22 ಹಳ್ಳಿಗಳು ಸೇರಿವೆ ಎಂದರು.ಆದರೆ, ನಗರದಲ್ಲಿ ಆರಂಭಿಸಲಾದ ನೀರು ಗುಣಮಟ್ಟ ಪರೀಕ್ಷಾ ಕೇಂದ್ರದಲ್ಲಿ ಕೇವಲ ರಾಸಾಯನಿಕ ವಸ್ತುಗಳ ಪರೀಕ್ಷೆ ಮಾತ್ರ ಮಾಡಲಾಗುತ್ತದೆ. ಆದರೆ ನೀರಿನಲ್ಲಿರುವ ಬ್ಯಾಕ್ಟರಿಯಾಗಳನ್ನು ಪತ್ತೆ ಮಾಡುವ ವ್ಯವಸ್ಥೆ ಇಲ್ಲಿಲ್ಲ. ಅಂತಹ ನೀರಿನ ಮಾದರಿಯನ್ನು ಬೆಂಗಳೂರಿಗೆ ಕಳುಹಿಸಿ ಪರೀಕ್ಷಿಸಲಾಗುತ್ತದೆ. ಮುಂಬರುವ ದಿನಗಳಲ್ಲಿ ಇದೇ ಪ್ರಯೋಗಾಲಯದಲ್ಲಿಯೇ ಬ್ಯಾಕ್ಟೇರಿಯಾ ಪತ್ತೆ ಮಾಡುವ ವ್ಯವಸ್ಥೆ ಆರಂಭಿಸುವ ಚಿಂತನೆ ನಡೆದಿದೆ ಎಂದು ತಿಳಿಸಿದರು.ನಂತರ ನೀರು ಗುಣಮಟ್ಟ ಪರೀಕ್ಷಾ ಕೇಂದ್ರದಲ್ಲಿ ಪ್ರಾತಿಕ್ಷಿಕೆ ಮೂಲಕ ನೀರಿ ಗುಣಮಟ್ಟ ಪತ್ತೆ ಮಾಡುವು ವಿಧಾನವನ್ನು ಪರಿಚಯಿಸಿದ ಅವರು, ಜಿಲ್ಲೆಯ ಜನರು ಯಾವುದೇ ನೀರನ್ನಾದರೂ ಈ ಕೇಂದ್ರದ ಮೂಲಕ ಪರೀಕ್ಷಿಸಿಕೊಳ್ಳಬಹುದು ಎಂದು ತಿಳಿಸಿದರು.ಈ ಸಂದರ್ಭದಲ್ಲಿಒ ಭೂವಿಜ್ಞಾನಿ ಬಾಲಕೃಷ್ಣ, ವಾರ್ತಾಧಿಕಾರಿ ಸಿ.ಪಿ.ಮಾಯಾಚಾರಿ ಸೇರಿದಂತೆ ಪ್ರಯೋಗಾಲಯದ ಸಿಬ್ಬಂದಿ ಹಾಜರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.