ಶುಕ್ರವಾರ, ಜೂನ್ 25, 2021
30 °C

ಹಿಂದಿನ ಭಾರತ ಈಗಿನ ಗೋಕರ್ಣದಂತಿರಲಿಲ್ಲ: ಕಾರ್ನಾಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕುಮಟಾ: `ತಾನು ಮೊದಲ ಸಲ ಇಂಗ್ಲೆಂಡಿಗೆ ಹೋಗುವಾಗ ಇದ್ದ ಭಾರತ ಇಂದಿನ ಗೋಕರ್ಣದ ರೀತಿಯಲ್ಲಿ ಖಂಡಿತಾ ಇರಲಿಲ್ಲ. ಆಗ ಹಡಗಿನಲ್ಲಿ ಇಂಗ್ಲೆಂಡ್ ತಲುಪಿದರೆ ಸ್ವರ್ಗ ದಕ್ಕಿದಷ್ಟೇ ಸಾರ್ಥಕತೆ ಇತ್ತು~ ಎಂದು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಗಿರೀಶ ಕಾರ್ನಾಡ ಹೇಳಿಸಿದರು.ಕುಮಟಾ ತಾಲ್ಲೂಕಿನ ಗೋಕರ್ಣದಲ್ಲಿ  ಶನಿವಾರ  ಗೌರೀಶ ಕಾಯ್ಕಿಣಿ ಜನ್ಮ ಶತಾಬ್ದಿ ಅಂಗವಾಗಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ತಮ್ಮ ಆತ್ಮ ಕಥನ ` ಆಡತಾಡತಾ ಆಯುಷ~ ದ ಆಯ್ದ ಅಧ್ಯಾಯಗಳನ್ನು ಅವರು ಓದಿದರು.`ಇಂಗ್ಲೆಂಡಿನಲ್ಲಿ ಬಿಳಿಯ ಹುಡುಗಿಯ ದೇಹ ಸೌಂದರ್ಯದ ಬಗ್ಗೆ ಆಗ ತಮಗೆಲ್ಲ ಭವ್ಯವಾದ ಕಲ್ಪನೆ ಇತ್ತು. ಇಂಗ್ಲೆಂಡಿನಲ್ಲಿ ಒಮ್ಮೆ ಒಂದು ಹುಡುಗಿಗೆ ಮುತ್ತು ಕೊಡಲೇ ಎಂದಾಗ, ಆಕೆ ಕೊಡಿ ಎಂದಳು. ಕೊಟ್ಟ ನಂತರ ತಾನು ಆಕೆಗೆ `ನಾನು ಮೊದಲು ಮುತ್ತು ಕೊಟ್ಟ ಹೆಣ್ಣು ನೀನು~ ಎಂದೆ. ಅದಕ್ಕೆ ಆಕೆ ` ಅದನ್ಯಾರೂ ಕೇಳಲ್ಲ~ ಎಂದಳು. ಅವಳ ಮಾತು ತನಗೆ ಹೆಣ್ಣುಗಳ ಬಗ್ಗೆ ಇದ್ದ ನೀತಿಯ ಅರಿವನ್ನೇ ಅಲ್ಲಾಡಿಸಿಬಿಟ್ಟಿತು. ದೆಹಲಿ ಅಂತರರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಹೋದಾಗ ಮುಂಬೈ ಗಲಭೆ ಬಗ್ಗೆ ಅಂದಿನ ಪ್ರಧಾನಿ ನರಸಿಂಹ ನೀಡಿದ ಪ್ರತಿಕ್ರಿಯೆ, ನಂತರದ ಸಂಸತ್ ಚುನಾವಣೆಗಾಗಿ ಕಾಂಗ್ರೆಸ್ ಬಗ್ಗೆ ಸಾಕ್ಷ್ಯ ಚಿತ್ರ ಸಿದ್ಧಪಡಿಸುವಂತೆ ಅವರು ತಮಗೆ ನೀಡಿದ ಅಗ್ಗದ ಅಮಿಷ ತನ್ನಲ್ಲಿ ನರಸಿಂಹರಾವ್ ಅವರನ್ನು ಕೊನೆಗೂ ಕ್ಷಮಿಸಲೂ ಸಾಧ್ಯವಾಗದ ಮನಸ್ಥಿತಿ ನಿರ್ಮಾಣ ಮಾಡಿತ್ತು~ ಎಂದರು.ಕಾರ್ಯಕ್ರಮದಲ್ಲಿ ಧಾರವಾಡ ಮನೋಹರ ಗ್ರಂಥಮಾಲಾದ ರಮಾಕಾಂತ ಜೋಶಿ, `ಪ್ರಜಾವಾಣಿ~ ಯಲ್ಲಿ ಪ್ರತಿ ಭಾನುವಾರ ಬರುತ್ತಿದ್ದ ಗಿರೀಶ ಕಾರ್ನಾಡ ಅವರ `ಆಡಾಡತಾ ಆಯುಷ~ ಅಂಕಣ ನೋಡಿ ಅದನ್ನು ಪುಸ್ತಕ ರೂಪದಲ್ಲಿ ಬರೆದುಕೊಡಲು ಅವರ ಬೆನ್ನಿಗೆ ಬಿದ್ದೆ. ಅದು ಪುಸ್ತಕವಾದ ಮೇಲೆ ನಾಲ್ಕೇ ತಿಂಗಳಲ್ಲಿ 5 ಸಾವಿರ ಪ್ರತಿಗಳು ಖರ್ಚಾದವು. ಆತ್ಮ ಚರಿತ್ರೆಯ ಮುಂದಿನ ಭಾಗ ` ನೋಡ ನೋಡತಾ ದಿನಮಾನ~ ದ ಹಸ್ತಪ್ರತಿಯ ಕೆಲ ಅಧ್ಯಾಯಗಳನ್ನು ಗಿರೀಶ ಇದೇ ವೇದಿಕೆಯಲ್ಲಿ ಮೊದಲ ಸಲ ಓದಿದ್ದಾರೆ~ ಎಂದರು.ಬರಹಗಾರ ಡಾ. ರಹಮತ್ ತರಿಕೆರೆ, `ಆತ್ಮಕಥನಗಳು ಕನ್ನಡ ಭಾಷೆಗೆ ದೊಡ್ಡ ಕೊಡುಗೆಯಾಗಿ ಪರಿಣಮಿಸುತ್ತಿವೆ. ಗಿರೀಶ ಕಾರ್ನಾಡ ತಮ್ಮ ಆತ್ಮಕಥನದಲ್ಲಿ ಗತಕಾಲದ ನೆಪ ಮಾಡಿಕೊಂಡು ವರ್ತಮಾನವನ್ನು ಸೃಷ್ಟಿ ಮಾಡುತ್ತಾ ಹೋಗುವುದು ವಿಶಿಷ್ಟವಾದುದು~ ಎಂದರು.ಕಾರ್ಯಕ್ರಮಕ್ಕೆ ಮೊದಲು ಗೋಕರ್ಣದ  ವೆಂಕಟ ಗೌಡ ಮತ್ತು ತಂಡದವರು ಗುಮಟೆ ಪಾಂಗು ಪ್ರದರ್ಶನಕ್ಕೆ ಗೌರೀಶ ಕಾಯ್ಕಿಣಿ ಹಾಗೂ ದಿನಕರ ದೇಸಾಯಿ ಅವರ ಹಾಡುಗಳನ್ನು ಹಾಡಿದ್ದು ವಿಶೇಷವಾಗಿತ್ತು.

ಸಾಹಿತಿ ಜಯಂತ ಕಾಯ್ಕಿಣಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ  ಮಾತನಾಡಿದರು.ಕಾರ್ಯಕ್ರಮದಲ್ಲಿ ಬರಹಗಾರರಾದ ವಿಷ್ಣು ನಾಯ್ಕ, ಶ್ರೀಧರ ಬಳಗಾರ, ವಿ. ಜೆ. ನಾಯಕ, ಶಾಂತರಾಮ ಹಿಚಕಡ, ಅರವಿಂದ ಕರ್ಕಿಕೋಡಿ, ಸುಬ್ಬಲಕ್ಷ್ಮೀ ಕೊಡ್ಲಕೆರೆ, ಡಾ. ಎಸ್.ಡಿ. ಹೆಗಡೆ, ಕೃಷ್ಣಮೂರ್ತಿ ಹೆಬ್ಬಾರ, ಪಾಲ್ಗುಣ ಗೌಡ, ಡಾ. ಸಿದ್ಧಲಿಂಗಸ್ವಾಮಿ ವಸ್ತ್ರದ, ಮೋಹನ ಹಬ್ಬು, ವಿಠ್ಠಲ ಭಂಡಾರಿ, ತಾ.ಪಂ. ಸದಸ್ಯೆ ಭಾರತಿ ದೇವತೆ ಮೊದಲಾದವರಿದ್ದರು. ಅಥಿತಿಗಳಿಗೆ ಗೋಕರ್ಣದ ತಾಜಾ ಬಸಲೆಸೊಪ್ಪು, ಮಾವಿನ ಮಿಡಿ ಹಾಗೂ ಜೇನು ತುಪ್ಪವನ್ನು ನೆನಪಿನ ಕಾಣಿಕೆಯಾಗಿ ಕೊಟ್ಟಿದ್ದು ವಿಶೇಷವಾಗಿತ್ತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.