ಭಾನುವಾರ, ಜನವರಿ 26, 2020
22 °C

ಹಿಂದುಳಿದ ಮಾದಿಗ ಸಮುದಾಯ: ವಿಷಾದ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಳ್ಳಾರಿ: ರಾಜ್ಯದಲ್ಲಿರುವ ಮಾದಿಗ ಸಮುದಾಯದಲ್ಲಿ ಬಳ್ಳಾರಿ ಜಿಲ್ಲೆಯಲ್ಲೇ  ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿದ್ದು, ಸಮುದಾಯದ ಜನತೆ ರಾಜಕೀಯವಾಗಿ, ಶೈಕ್ಷಣಿಕವಾಗಿ ಹಾಗೂ ಆರ್ಥಿಕವಾಗಿ ಹಿಂದುಳಿದಿರುವುದು ವಿಷಾದನೀಯ ಎಂದು ಐಎಎಸ್ ಅಧಿಕಾರಿ ಬಿ.ಎಚ್. ಅನಿಲಕುಮಾರ್ ತಿಳಿಸಿದರು.ನಗರದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಸಮಾರಂಭದಲ್ಲಿ ಡಾ. ಬಾಬು ಜಗಜೀವನರಾಮ್ ಜನಜಾಗೃತಿ ವೇದಿಕೆಯ ಜಿಲ್ಲಾ ಘಟಕ ಉದ್ಘಾಟಿಸಿ ಅವರು ಮಾತನಾಡಿದರು.

ಜನಾಂಗವು ರಾಜಕೀಯವಾಗಿ ಪ್ರಬಲವಾದಲ್ಲಿ ಶೈಕ್ಷಣಿಕವಾಗಿ ಹಾಗೂ ಆರ್ಥಿಕವಾಗಿ ಮುಂದುವರಿಯಲು ಸಾಧ್ಯ. ಈ ನಿಟ್ಟಿನಲ್ಲಿ ಶ್ರಮಿಸಿ, ರಾಜಕೀಯವಾಗಿ ಮುಂದೆಬರಲು ಸಮುದಾಯದ ಜನ ಶ್ರಮಿಸಬೇಕಿದೆ ಎಂದು ಅವರು ಸಲಹೆ ನೀಡಿದರು.ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿದ ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿ, ಸಮುದಾಯದ ಪ್ರತಿಯೊಬ್ಬರೂ ಏಳ್ಗೆಗೆ ಶ್ರಮಿಸುವ ಮೂಲಕ ಎಲ್ಲರ ಅಭಿವೃದ್ಧಿಗೆ ಕೈಜೋಡಿಸಬೇಕು. ವಿಶೇಷವಾಗಿ ಸಮುದಾಯದ ಅಧಿಕಾರಿಗಳು, ರಾಜಕಾರಣಿಗಳು ಇತರರ ಶ್ರೇಯೋಭಿವೃದ್ಧಿಗೆ ಮುಂದಾಗಬೇಕು ಎಂದು ತಿಳಿಸಿದರು.ಡಾ. ಬಾಬು ಜಗಜೀವನರಾಮ್ ಅವರು ದೇಶದ ಉಪಪ್ರಧಾನಿಯಾಗಿ ಸೇವೆ ಸಲ್ಲಿಸಿ, `ಹಸಿರು ಕ್ರಾಂತಿಯ ಹರಿಕಾರ~ ಎಂದೇ ಖ್ಯಾತರಾಗಿದ್ದಾರೆ. ಅವರ ಈ ಸಾಧನೆಗೆ ಶಿಕ್ಷಣವೇ ಕಾರಣ. ಈ ಹಿನ್ನೆಲೆಯಲ್ಲಿ ಸಮುದಾಯದ ಪ್ರತಿಯೊಬ್ಬರೂ ಶಿಕ್ಷಣಕ್ಕೆ ಆದ್ಯತೆ ನೀಡುವ ಅಗತ್ಯವಿದೆ ಎಂದು ಉಪನ್ಯಾಸ ನೀಡಿದ ಸುರೇಶಬಾಬು ಅಭಿಪ್ರಾಯಪಟ್ಟರು.ಜಗಜೀವನರಾಮ್ ಅವರ ಮಾರ್ಗದಲ್ಲೇ ಪ್ರತಿಯೊಬ್ಬರೂ ಮುನ್ನಡೆಯುವ ಮೂಲಕ ಸಮುದಾಯದ ಸರ್ವಾಂಗೀಣ ಅಭಿವೃದ್ಧಿಯ ಕನಸನ್ನು ನನಸು ಮಾಡಬೇಕು ಎಂದು ಅವರು ಕಿವಿಮಾತು ಹೇಳಿದರು.ಯಲ್ಲಪ್ಪ ಬಂಡಾರಿ ಕ್ರಾಂತಿಗೀತೆ ಹಾಡಿದರು. ರಾಜ್ಯ ಘಟಕದ ಅಧ್ಯಕ್ಷ ಟಿ. ಪಂಪಾಪತಿ, ಉಪಾಧ್ಯಕ್ಷ ದಾನಪ್ಪ, ಕುಮಾರಸ್ವಾಮಿ, ಶೇಕಣ್ಣ, ಜಿಲ್ಲಾ ಘಟಕದ ಅಧ್ಯಕ್ಷ ಜೆ. ಸುಂಕಣ್ಣ, ಉಪಾಧ್ಯಕ್ಷ ರಾಮಚಂದ್ರಪ್ಪ, ಕೆಂಚಪ್ಪ, ಡಾ.ಬಿ.ಆರ್. ಅಂಬೇಡ್ಕರ್ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎಲ್. ಮಾರೆಣ್ಣ ಉಪಸ್ಥಿತರಿದ್ದರು. ಡಾ. ಗೋವಿಂದರಾಜು ಸ್ವಾಗತಿಸಿದರು. ರವಿ ಚೇಳ್ಳಗುರ್ಕಿ ಕಾರ್ಯಕ್ರಮ ನಿರೂಪಿಸಿದರು. ಎಚ್. ವೀರೇಶ ವಂದಿಸಿದರು.

ಪ್ರತಿಕ್ರಿಯಿಸಿ (+)