ಬುಧವಾರ, ಮೇ 19, 2021
24 °C

ಹಿಂದೂ ಮಹಾಸಾಗರದಲ್ಲಿ ಕಡಲ್ಗಳ್ಳರಿಗೆ ಕಡಿವಾಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಹಿಂದೂ ಮಹಾಸಾಗರ ವಲಯದ ರಾಷ್ಟ್ರಗಳು ಕಡಲ್ಗಳ್ಳರ ಹಾವಳಿ ಇರುವ ವ್ಯಾಪ್ತಿಯನ್ನು ಸ್ಪಷ್ಟವಾಗಿ ಗುರುತಿಸುವ ಜತೆಗೆ ವಿವಿಧ ರಾಷ್ಟ್ರಗಳ ನೌಕಾಪಡೆಗಳ ಕಾರ್ಯನಿರ್ವಹಣೆಯಲ್ಲಿ ಏಕರೂಪತೆ ಜಾರಿಗೊಳಿಸಬೇಕು ಎಂದು ಭಾರತ ಪ್ರತಿಪಾದಿಸಿದೆ.ದಕ್ಷಿಣ ಆಫ್ರಿಕಾದ ಕೇಪ್‌ಟೌನ್‌ನಲ್ಲಿ ಈಚೆಗೆ ನಡೆದ `ಹಿಂದೂ ಮಹಾಸಾಗರ ರಾಷ್ಟ್ರಗಳ ನೌಕಾಪಡೆಗಳ ಸಮಾವೇಶ~ದಲ್ಲಿ ಭಾರತದ ನೌಕಾಪಡೆ ಮುಖ್ಯಸ್ಥ ಅಡ್ಮಿರಲ್ ನಿರ್ಮಲ್ ವರ್ಮ ಈ ಕುರಿತು ಪ್ರಸ್ತಾಪಿಸಿದರು.

ಸರಕು ಸಾಗಣೆ ಹಡಗುಗಳಲ್ಲಿ ಶಸ್ತ್ರಸಜ್ಜಿತ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸುವ ಅಗತ್ಯದ ಬಗ್ಗೆಯೂ ವರ್ಮ ದನಿ ಎತ್ತಿದರು. ಕೇರಳ ಕರಾವಳಿಯಲ್ಲಿ ಈಚೆಗೆ ಅಲ್ಲಿನ ಇಬ್ಬರು ಮೀನುಗಾರರನ್ನು ಇಟಲಿ ವಾಣಿಜ್ಯ ಹಡಗಿನ ಸಿಬ್ಬಂದಿ ಗುಂಡು ಹಾರಿಸಿ ಕೊಂದಿದ್ದರ ಹಿನ್ನೆಲೆಯಲ್ಲಿ ಈ ಕುರಿತು ಪ್ರಸ್ತಾಪಿಸಲಾಯಿತು ಎಂದು ಮೂಲಗಳು ತಿಳಿಸಿವೆ.ಹಡಗು ವಿಮೆ ಏಜೆನ್ಸಿಗಳು ಇಡೀ ಹಿಂದೂ ಮಹಾಸಾಗರ ವ್ಯಾಪ್ತಿಯನ್ನು ಕಡಲ್ಗಳ್ಳರ ಹಾವಳಿಯಿರುವ ಪ್ರದೇಶವೆಂದು ಗುರುತಿಸಿದ್ದು, ಇದರಿಂದ ವಿಮೆ ಮೊತ್ತ ದುಬಾರಿಯಾಗುತ್ತಿದೆ. ಹೀಗಾಗಿ ಈ ಪ್ರದೇಶದ ಮೂಲಕ ನಡೆಯುವ ಎಲ್ಲ ವಾಣಿಜ್ಯ ವಹಿವಾಟಿನ ಮೇಲೆ ದುಷ್ಪರಿಣಾಮವಾಗಿದೆ ಎಂದು ನೌಕಾಪಡೆಯ ಸಹಾಯಕ ಮುಖ್ಯಸ್ಥರಾದ ರೇರ್ ಅಡ್ಮಿರಲ್ ಮೊಂಟಿ ಖನ್ನಾ ಹೇಳಿದರು.ಸರಕು ಸಾಗಣೆ ಹಡಗುಗಳಲ್ಲಿ ಶಸ್ತ್ರಸಜ್ಜಿತ ಭದ್ರತಾ ಸಿಬ್ಬಂದಿ ನಿಯೋಜಿಸುವ ಕುರಿತು ಶೀಘ್ರವೇ ತೀರ್ಮಾನ ಹೊರಹೊಮ್ಮುವ ನಿರೀಕ್ಷೆ ಇದೆ ಎಂದೂ ತಿಳಿಸಿದ್ದಾರೆ.ಕೇಪ್‌ಟೌನ್‌ನಲ್ಲಿ ನಾಲ್ಕು ದಿನಗಳ ಕಾಲ ನಡೆದ ಸಮಾವೇಶದಲ್ಲಿ ಹಿಂದೂ ಮಹಾಸಾಗರ ವಲಯದ 35 ರಾಷ್ಟ್ರಗಳು ಹಾಗೂ ಈ ವ್ಯಾಪ್ತಿಗೆ ಹೊರತಾದ ಜರ್ಮನಿ, ಬ್ರೆಜಿಲ್, ಇಟಲಿ ಮತ್ತು ಚಿಲಿ ಭಾಗವಹಿಸಿದ್ದವು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.