ಶನಿವಾರ, ಮೇ 21, 2022
23 °C

ಹಿಡುವಳಿದಾರರಿಗೆ ಸಹಾಯಧನ: ಬಿಎಸ್‌ವೈ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿವಮೊಗ್ಗ: ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ 5 ಸಾವಿರ ಫಲಾನುಭವಿಗಳಂತೆ ರಾಜ್ಯದ ಒಟ್ಟು 10 ಲಕ್ಷ ಸಣ್ಣ ಮತ್ತು ಅತಿ ಸಣ್ಣ ಹಿಡುವಳಿದಾರರಿಗೆ ಕೃಷಿಗೆ ಸಂಬಂಧಿಸಿದ ಯಾವುದೇ ಪ್ರಕಾರದ ಬೆಳೆ ಬೆಳೆಯಲು ರೂ10 ಸಾವಿರವರೆಗೆ ಸಹಾಯಧನ ನೀಡಲು ಉದ್ದೇಶಿಸಲಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದರು.

ಜಿಲ್ಲಾಡಳಿತ ಮತ್ತು ವಿವಿಧ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ನಗರದ ಸೈನ್ಸ್ ಮೈದಾನದಲ್ಲಿ ಹಮ್ಮಿಕೊಂಡಿದ್ದ ನಗರದಲ್ಲಿ ನೂತನವಾಗಿ ನಿರ್ಮಿಸಿದ ವಿವಿಧ ಕಟ್ಟಡಗಳ ಉದ್ಘಾಟನೆ ಮತ್ತು ಶಂಕುಸ್ಥಾಪನಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.ಅಲ್ಲದೇ, ರಾಜ್ಯದ 2 ಲಕ್ಷ ರೈತರನ್ನು ತೋಟಗಾರಿಕೆ ಬೆಳೆಗಳಿಗೆ ಪರಿವರ್ತಿಸಲು ವಿಶೇಷ ಕಾರ್ಯಕ್ರಮ ರೂಪಿಸಲಾಗುತ್ತಿದೆ ಎಂದರು.ಅಧಿಕಾರಿಗಳಿಗೆ ಸುತ್ತೋಲೆ: ಬಜೆಟ್‌ನಲ್ಲಿ ಮಂಡನೆಯಾದ ಎಲ್ಲಾ ಕಾಮಗಾರಿಗಳು ಏಪ್ರಿಲ್ ಮೊದಲ ವಾರದಲ್ಲೇ ಆರಂಭಿಸುವಂತೆ ಈಗಾಗಲೇ ಅಧಿಕಾರಿಗಳಿಗೆ ಸುತ್ತೋಲೆ ಹೊರಡಿಸಲಾಗಿದೆ. ರಾಜ್ಯದ ಹಲವೆಡೆ ಅಗತ್ಯಕ್ಕಿಂತ ಹೆಚ್ಚಿನ ಪಡಿತರ ಕಾರ್ಡುಗಳು ವಿತರಣೆಗೊಂಡಿರುವುದು ಗಮನಕ್ಕೆ ಬಂದಿದ್ದು, ಅಂತಹ ಕಾರ್ಡುಗಳ ತಡೆಗೆ ಸಮರ್ಪಕ ಪಡಿತರ ಮತ್ತು ಅಡುಗೆ ಅನಿಲ ವಿತರಣೆಗೆ ವಿಶೇಷ ಕ್ರಿಯಾಯೋಜನೆ ರೂಪಿಸಲಾಗುವುದು ಎಂದು ತಿಳಿಸಿದರು.ಅಷ್ಟೇ ಅಲ್ಲ, ನಗರದ ಅಭಿವೃದ್ಧಿ ಕಾರ್ಯಕ್ರಮಗಳಿಗೆ ್ಙ 100 ಕೋಟಿ ಬಿಡುಗಡೆ ಮಾಡಲಾಗಿದೆ. ಈ ಹಣದಲ್ಲಿ ಕೇವಲ ಪ್ರಮುಖ ರಸ್ತೆಗಳನ್ನು ಅಭಿವೃದ್ಧಿ ಮಾಡಿದರೆ ಸಾಲದು; ನಗರದ ಪ್ರತಿ ರಸ್ತೆಗಳೂ ಡಾಂಬರೀಕರಣವಾಗಬೇಕು ಎಂದು ನರಸಭೆ ಅಧ್ಯಕ್ಷ ಕೆ.ಎಸ್. ಗಂಗಾಧರಪ್ಪ ಅವರಿಗೆ ಸೂಚಿಸಿದರು. ಅತ್ಯವಶ್ಯವಾದ ಜಾತಿ ಮತ್ತು ಆದಾಯ ಪ್ರಮಾಣಪತ್ರಗಳು ಜಿಲ್ಲೆಯ ನಾಗರಿಕರಿಗೆ ಮುಂದಿನ ತಿಂಗಳಿಂದ ಒಂದೇ ದಿನದಲ್ಲಿ ದೊರೆಯಲಿವೆ ಎಂದು ಅವರು ತಿಳಿಸಿದರು.ರೂ ಒಂದು ಕೋಟಿ ವೆಚ್ಚದಲ್ಲಿ ಮುಂದಿನ ದಿನಗಳಲ್ಲಿ ಜಿಲ್ಲೆಯಲ್ಲಿ ಮಹಿಳೆಯರ ಸಾಂಸ್ಕೃತಿಕ ಭವನ ನಿರ್ಮಿಸಲಾಗುವುದು. ಉದ್ದೇಶಿತ ಭವನದಲ್ಲಿ ಮಹಿಳೆಯರಿಗೆ ಸ್ವ-ಸಹಾಯ ಸಂಘಗಳು ತಯಾರಿಸಿದ ಉತ್ಪನ್ನಗಳ ಮಾರುಕಟ್ಟೆ, ಮಹಿಳೆಯರ ವಿಶೇಷ ಕಾರ್ಯಕ್ರಮಗಳಿಗೆ ಅವಕಾಶ ಮಾಡಿಕೊಡಲಾಗುವುದು ಎಂದು ಹೇಳಿದರು.

ಬೋಗಿಗಳ ತಯಾರಿಕಾ ಘಟಕ: ಜಿಲ್ಲೆಯಲ್ಲಿ ರೈಲ್ವೆ ಬೋಗಿಗಳನ್ನು ತಯಾರಿಸುವ ಘಟಕವನ್ನು ಸ್ಥಾಪಿಸುವ ಸಂಬಂಧ ಕೇಂದ್ರ ರೈಲ್ವೆ ಸಚಿವೆ ಮಮತಾ ಬ್ಯಾನರ್ಜಿ ಜತೆ ಚರ್ಚಿಸಲಾಗಿದೆ ಎಂದು  ಬಿ.ಎಸ್. ಯಡಿಯೂರಪ್ಪ ತಿಳಿಸಿದರು.ದೀನ್‌ದಯಾಳು ಅವರ ಹೆಸರಿನಲ್ಲಿ ವೃತ್ತಿ ಕೌಶಲ್ಯ ತರಬೇತಿ ಕೇಂದ್ರವನ್ನು ಮಲೆನಾಡಿನ ಭಾಗದಲ್ಲೇ ಸ್ಥಾಪಿಸಲಾಗುವುದು. ಶಿವಮೊಗ್ಗ ಅಕ್ಕಪಕ್ಕದ ಯಾವುದಾದರೂ ಜಿಲ್ಲೆಯಲ್ಲಿ ಸ್ಥಾಪಿಸಲು ಉದ್ದೇಶಿಸಿದ್ದು, ಮುಂದಿನ ದಿನಗಳಲ್ಲಿ ವಿಧಾನ ಮಂಡಲದಲ್ಲಿ ಜಿಲ್ಲೆಯ ಹೆಸರನ್ನು ಸೂಚಿಸಲಾಗುವುದು ಎಂದು ಸ್ಪಷ್ಟಪಡಿಸಿದರು.ಸಭಾಪತಿ ಡಿ.ಎಚ್. ಶಂಕರಮೂರ್ತಿ, ವಿಧಾನ ಪರಿಷತ್ ಸದಸ್ಯ ಪ್ರೊ.ಪಿ.ವಿ. ಕೃಷ್ಣಭಟ್ಟ, ರಾಜ್ಯಸಭೆ ಸದಸ್ಯ ಆಯನೂರು ಮಂಜುನಾಥ, ಸಂಸದ ಬಿ.ವೈ. ರಾಘವೇಂದ್ರ, ಶಾಸಕ ಕೆ.ಜಿ. ಕುಮಾರಸ್ವಾಮಿ, ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ಗಿರೀಶ್ ಪಟೇಲ್, ಎಂಪಿಎಂ ಅಧ್ಯಕ್ಷ ಆರಗ ಜ್ಞಾನೇಂದ್ರ, ಮ್ಯಾಮ್‌ಕೋಸ್ ಉಪಾಧ್ಯಕ್ಷ ಕೆ. ನರಸಿಂಹನಾಯಕ್, ಎಪಿಎಂಸಿ ಅಧ್ಯಕ್ಷ ಎಸ್.ಎಸ್. ಜ್ಯೋತಿಪ್ರಕಾಶ್, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಅಗಡಿ ಅಶೋಕ್, ‘ಕಾಡಾ’ ಅಧ್ಯಕ್ಷ ಶೇಖರಪ್ಪ ಮತ್ತಿತರರು ಉಪಸ್ಥಿತರಿದ್ದರು. ಜಿ.ಪಂ. ಅಧ್ಯಕ್ಷೆ ಶುಭಾ ಕೃಷ್ಣಮೂರ್ತಿ ಪ್ರಾರ್ಥಿಸಿದರು. ಜಿಲ್ಲಾಧಿಕಾರಿ ವಿ. ಪೊನ್ನುರಾಜ್ ಸ್ವಾಗತಿಸಿದರು. ಇದೇ ಸಂದರ್ಭದಲ್ಲಿ ಕಷ್ಟದಲ್ಲಿರುವ ಹಿರಿಯ ಕ್ರೀಡಾಪಟುಗಳಿಗೆ ಮಂಜೂರಾದ ಮಾಸಾಶನದ ಪತ್ರವನ್ನು ವಿತರಿಸಲಾಯಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.