ಗುರುವಾರ , ಜೂನ್ 24, 2021
30 °C

ಹಿಪ್ಪುನೇರಳೆಗೆ ಸೋಂಕು: ನಿವಾರಣೆಗೆ ಸಲಹೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿಡ್ಲಘಟ್ಟ: ರೇಷ್ಮೆ ಹುಳುಗಳಿಗೆ ರೋಗಗಳು ಬರದಂತೆ ಮತ್ತು ಹರಡದಂತೆ ತಡೆಯಲು ರೇಷ್ಮೆ ಇಲಾಖೆ ವತಿಯಿಂದ ಉಚಿತ ಸೋಂಕು ನಿವಾರಕಗಳನ್ನು ವಿತರಿಸಲಾಗುತ್ತಿದ್ದು, ರೇಷ್ಮೆ ಕೃಷಿಕರು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಜಿಲ್ಲಾ ರೇಷ್ಮೆ ಇಲಾಖೆ ಉಪನಿರ್ದೇಶಕ ಎಂ.ವಿ.ಚಂದ್ರು ತಿಳಿಸಿದರು.ಜಿಲ್ಲಾಧಿಕಾರಿಯ ಪ್ರಕೃತಿ ವಿಕೋಪ ನಿಧಿಯಡಿ ಬಿಡುಗಡೆಯಾದ ಅನುದಾನದ ನೆರವಿನಿಂದ ಸೋಂಕು ನಿವಾರಕಗಳನ್ನು ವಿತರಿಸಲಾಗುತ್ತಿದೆ. ರೇಷ್ಮೆ ಕೃಷಿಕರು ಇದರ ಪ್ರಯೋಜನ ಪಡೆಯಬೇಕು ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.ಬೇಸಿಗೆಯಲ್ಲಿ ರೇಷ್ಮೆ ಹುಳು ಸಾಕಣೆಯಲ್ಲಿ ಅನುಸರಿಸಬೇಕಾದ ಕ್ರಮಗಳು ಮತ್ತು ತಾಂತ್ರಿಕತೆ ಬಗ್ಗೆ ಮಾಹಿತಿ ನೀಡಿದ ಅವರು, `ರೇಷ್ಮೆ ಬೆಳೆ ಸಫಲತೆಗೆ ಹಿಪ್ಪುನೇರಳೆ ಸೊಪ್ಪಿನ ಗುಣಮಟ್ಟ, ತಳಿ, ವಾತಾವರಣ ಹಾಗೂ ರೋಗ ರಹಿತ ಪರಿಸರದ ಬಗ್ಗೆ ಗಮನ ಹರಿಸಬೇಕು. ಬೇಸಿಗೆಯಲ್ಲಿ ಉಷ್ಣಾಂಶ ಅಧಿಕ ಇರುವುದರಿಂದ ಉತ್ತಮ ಬೆಳೆ ಪಡೆಯುವುದು ಕಷ್ಟ. ಆದರೂ ಕೆಲವಾರು ಕ್ರಮಗಳನ್ನು ಪಾಲಿಸುವುದು ಅತ್ಯಗತ್ಯ ಎಂದು ತಿಳಿಸಿದರು.ಬೇಸಿಗೆಯಲ್ಲಿ ತೆಗೆದುಕೊಳ್ಳಬೇಕಿರುವ ಕ್ರಮ: ಹೆಚ್ಚಿನ ಉಷ್ಣಾಂಶದಿಂದಾಗಿ ನೀರು ಬೇಗ ಆವಿಯಾಗುವುದರಿಂದ ಅವಶ್ಯಕತೆ ಅನುಗುಣವಾಗಿ ಹಿಪ್ಪೆ ನೇರಳೆ ತೋಟಕ್ಕೆ ನೀರುಣಿಸಬೇಕು. ನೀರು ನಷ್ಟವಾಗದಂತೆ ಎಚ್ಚರಿಕೆ ವಹಿಸಬೇಕು. ಸೊಪ್ಪು ಬಿಡಿಸಿ ಶೇಖರಿಸಿ: ಇಡೀ ದಿನಕ್ಕೆ ಅಗತ್ಯವಾದ ಸೊಪ್ಪನ್ನು ಒಂದೇ ಬಾರಿ ತಂದು ಶೇಖರಿಸಿಡಬಾರದು. ತಂಪಾದ ವೇಳೆಯಲ್ಲಿ ಸೊಪ್ಪು ಬಿಡಿಸಿ, ಒದ್ದೆ ಮಾಡಿದ ಚೀಲದಲ್ಲಿ ಸಡಿಲವಾಗಿ ತುಂಬಿ ಸಾಗಿಸಬೇಕು. ಆಗಾಗ ನೀರು ಚಿಮುಕಿಸಿ ತಾಜಾತನ ಉಳಿಸಿಕೊಳ್ಳಬೇಕು. ಕೋಣೆಯಲ್ಲಿ ಗಾಳಿ ಸಂಚಾರಕ್ಕೆ ಗವಾಕ್ಷಿ ಇರಬೇಕು. ಹುಳು ಸಾಕಣೆ ಮನೆ: ಹುಳು ಸಾಕಣೆ ಪ್ರತ್ಯೇಕವಾದ ಮನೆಯಿರಬೇಕು. ಗಾಳಿ ಬೆಳಕು ಸರಾಗವಾಗಿರಲು ಎದುರು ಬದುರು ಕಿಟಕಿಗಳಿರಬೇಕು. ಮನೆ ಮೇಲ್ಬಾಗವನ್ನು ತೆಂಗಿನ ಗರಿಗಳಿಂದ ಅಥವಾ ಹುಲ್ಲಿನಿಂದ ಮುಚ್ಚುವುದರಿಂದ, ಚಪ್ಪರ ನಿರ್ಮಿಸುವುದರಿಂದ ಮತ್ತು ಸುತ್ತಲೂ ಮರಗಳನ್ನು ಬೆಳೆಸುವುದರಿಂದ ಉಷ್ಣಾಂಶ ತಗ್ಗಿಸಬಹುದು.ನಿಯಂತ್ರಣ: ಬೇಸಿಗೆಯಲ್ಲಿ ಹಾಲು ಮತ್ತು ಸಪ್ಪೆರೋಗದ ಹಾವಳಿ ಹೆಚ್ಚು. ಕ್ರಮಬದ್ಧ ಸೋಂಕು ನಿವಾರಣೆ, ಮೊಟ್ಟೆಗಳ ಪರಿಪಾಲನೆ, ಗುಣಮಟ್ಟದ ಸೊಪ್ಪು ನೀಡುವಿಕೆ, ವೈಜ್ಞಾನಿಕವಾಗಿ ಹುಳುಗಳ ಸಾಕಣೆ ಮತ್ತು ಅಗತ್ಯ ಉಷ್ಣಾಂಶದಿಂದ ರೋಗ ನಿಯಂತ್ರಿಸಬಹುದು. ಸೋಂಕು ನಿವಾರಣೆ:  ಸಾಕಣೆ ಆರಂಭಿಸುವುದಕ್ಕಿಂತ ಮೊದಲು ಸೋಂಕು ನಿವಾರಣೆ ಪರಿಣಾಮಕಾರಿ ಮಾಡುವುದರಿಂದ ರೋಗಾಣು ನಿಯಂತ್ರಿಸಬಹುದು. ಇದಕ್ಕೆ ಬ್ಲೀಚಿಂಗ್ ಪೌಡರ್, ಅಸ್ತ್ರ, ಡೆಕಾಲ್ ಮುಂತಾದ ಸೋಂಕು ನಿವಾರಕಗಳನ್ನು ಸರಿಯಾದ ಪ್ರಮಾಣದಲ್ಲಿ ಬಳಸಬೇಕು.ಉಷ್ಣಾಂಶದಲ್ಲಿ ರೋಗಾಣು ವೃದ್ಧಿ ಬಹು ಬೇಗ ಆಗುತ್ತದೆ. ವಾತಾವರಣದಲ್ಲಿ ನೀರಿನಾಂಶದ ಕೊರತೆಯಿಂದ ಸೊಪ್ಪಿನ ಗುಣಮಟ್ಟ ಕುಸಿಯುತ್ತದೆ. ಇದರಿಂದ ರೇಷ್ಮೆ ಹುಳುಗಳಲ್ಲಿ ರೋಗ ನಿರೋಧಕ ಶಕ್ತಿ ಕುಂಠಿತವಾಗುವುದರಿಂದ ರೋಗಕ್ಕೆ ಬೆಳೆ ತುತ್ತಾಗುತ್ತದೆ. ಈ ನಿಟ್ಟಿನಲ್ಲಿ ಸೂಕ್ತ ಕ್ರಮಗಳನ್ನು ಕೈಗೊಂಡು ರೈತರು ಉತ್ತಮ ಬೆಳೆಯನ್ನು ಬೆಳೆಯಬೇಕು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.