ಭಾನುವಾರ, ಜೂನ್ 13, 2021
29 °C

ಹಿರಿಯೂರು ;ಬಿತ್ತನೆಬೀಜ ಸಮರ್ಪಕ ದಾಸ್ತಾನಿಗೆ ಸೂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಿರಿಯೂರು: ಏಪ್ರಿಲ್ ಅಂತ್ಯದೊಳಗೆ ತಾಲ್ಲೂಕಿಗೆ ಅಗತ್ಯವಿರುವ ಬಿತ್ತನೆ ಬೀಜ ಮತ್ತು ರಸಗೊಬ್ಬರದ ದಾಸ್ತಾನು ಮಾಡಿಕೊಳ್ಳಲು ಕೃಷಿ ಇಲಾಖೆ ಸಿದ್ಧತೆ ನಡೆಸಬೇಕು ಎಂದು ತಾಲ್ಲೂಕು ಪಂಚಾಯ್ತಿ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಸದಸ್ಯ ಶಿವಪ್ರಸಾದಗೌಡ ಸೂಚಿಸಿದರು.



ತಾಲ್ಲೂಕು ಪಂಚಾಯ್ತಿ ಸಭಾಂಗಣದಲ್ಲಿ ಬುಧವಾರ ನಡೆದ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು.

ಹಿಂದಿನ ವರ್ಷ ಬಿತ್ತನೆ ಬೀಜ ವಿತರಣೆಯಲ್ಲಿ ಸಾಕಷ್ಟು ಲೋಪ ಆಗಿದ್ದವು. ಕಳಪೆ ಬೀಜ ವಿತರಿಸಿದ ಆರೋಪ ರೈತರಿಂದ ಕೇಳಿಬಂದಿತ್ತು. ಸತತ 2 ವರ್ಷದ ಬರಗಾಲದಿಂದ ರೈತರು ತತ್ತರಿಸಿದ್ದಾರೆ.



ಈ ವರ್ಷ ಮುಂಗಾರು ಉತ್ತಮವಾಗಿ ಆಗುತ್ತದೆ ಎಂಬ ಆಶಾ ಭಾವನೆ ರೈತರಲ್ಲಿದೆ. ಗುಣಮಟ್ಟದ ಬಿತ್ತನೆ ಬೀಜವನ್ನು ದಾಸ್ತಾನು ಮಾಡಿಕೊಳ್ಳಬೇಕು ಎಂದು ಕೃಷಿ ಅಧಿಕಾರಿಗೆ ಅವರು ತಾಕೀತು ಮಾಡಿದರು.

ಹನುಮಂತರಾಯಪ್ಪ ಮಾತನಾಡಿ, ಜಲಾನಯನ ಇಲಾಖೆಯಿಂದ ಕೈಗೊಂಡಿರುವ ಕಾಮಗಾರಿಗಳಲ್ಲಿ ಶೇ. 60ರಷ್ಟು ಅವ್ಯವಹಾರ ನಡೆದಿದೆ ಎಂದು ಹಳ್ಳಿಗಳಲ್ಲಿ ಜನ ಮಾತನಾಡಿಕೊಳ್ಳುತ್ತಿದ್ದಾರೆ.

 

ತಾಳವಟ್ಟಿ ಗ್ರಾಮಕ್ಕೆ ಸ್ವತಃ ಭೇಟಿ ಕೊಟ್ಟಿದ್ದೆ. ಅಲ್ಲಿ ರೂ 3.41ಲಕ್ಷ ವೆಚ್ಚದಲ್ಲಿ ನಡೆಸಿರುವ ಕಾಮಗಾರಿ ಸಂಪೂರ್ಣ ಕಳಪೆಯಾಗಿದೆ. ಇಲಾಖೆ ನಡೆಸಿರುವ 598 ಎಕರೆಯಲ್ಲೂ ಇದೇ ರೀತಿ ಕಾಮಗಾರಿ ನಡೆಸಲಾಗಿದೆ. ಇಲಾಖೆ ಮುಖ್ಯಸ್ಥರು ಸಭೆಗೆ ತಾವು ಬರದೆ ಸಹಾಯಕರನ್ನು ಕಳುಹಿಸಿದ್ದಾರೆ. ಇವರಿಗೆ ಯಾವ ಮಾಹಿತಿ ಕೇಳಿದರೂ `ಗೊತ್ತಿಲ್ಲ~ ಎಂಬ ಉತ್ತರ ಬಿಟ್ಟರೆ ಬೇರೆ ಹೇಳಲು ಬರುವುದಿಲ್ಲ. ಇಲಾಖೆ ಕಾಮಗಾರಿಗಳ ಬಗ್ಗೆ ಉನ್ನತಮಟ್ಟದ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.



ಇಒ ರಮೇಶ್ ಮಾತನಾಡಿ, ಮೀನುಗಾರಿಕೆ ಇಲಾಖೆ ಸರ್ಕಾರದಿಂದ ಬಂದಿರುವ ಸಹಾಯಧನವನ್ನು ಇನ್ನೂ ಖರ್ಚು ಮಾಡಿಲ್ಲ. ಅರ್ಹ ಫಲಾನುಭವಿಗಳನ್ನು ಗುರುತಿಸಿ ತಕ್ಷಣ ಸಹಾಯಧನ ವಿತರಿಸಬೇಕು. ಜನಪ್ರತಿನಿಧಿಗಳ ಗಮನಕ್ಕೆ ತಾರದೆ ಅಲಂಕಾರಿಕ ಮೀನುಗಳನ್ನು ವಿತರಿಸಬಾರದು. ಸಭೆಗೆ ಬರುವ ಮುಂಚೆ ಅಧಿಕಾರಿಗಳು ಪೂರ್ಣ ವಿವರದೊಂದಿಗೆ ಬರಬೇಕು ಎಂದು ಎಚ್ಚರಿಸಿದರು.



ಸ್ಥಾಯಿ ಸಮಿತಿ ಅಧ್ಯಕ್ಷ ರಾಮಚಂದ್ರಪ್ಪ ಅಧ್ಯಕ್ಷತೆ ವಹಿಸಿದ್ದರು. ತಾ.ಪಂ. ಅಧ್ಯಕ್ಷೆ ಗಿರಿಜಮ್ಮ, ಲಕ್ಷ್ಮೀದೇವಿ, ಸಿದ್ದಗಂಗಮ್ಮ, ಸಿದ್ದೇಗೌಡ ಉಪಸ್ಥಿತರಿದ್ದರು.



ದೇಶಭಕ್ತಿ ಬೆಳೆಸಿಕೊಳ್ಳಲು ಯುವಕರಿಗೆ ಕರೆ



ಸ್ವಾಮಿ ವಿವೇಕಾನಂದರಂತೆ ನಮ್ಮ ಸಂಸ್ಕೃತಿಯ ರಕ್ಷಣೆಯ ಜತೆಗೆ, ದೇಶ ಭಕ್ತಿಯನ್ನು ಬೆಳೆಸಿಕೊಳ್ಳುವ ಮೂಲಕ ದೇಶವನ್ನು ಪ್ರಗತಿಯತ್ತ ತೆಗೆದುಕೊಂಡು ಹೋಗಬೇಕು ಎಂದು ನಿವೃತ್ತ ಪ್ರಾಂಶುಪಾಲ ಜೆ. ಮೂಡಲಗಿರಿಯಪ್ಪ ಯುವಕರಿಗೆ ಕರೆ ನೀಡಿದರು.



ತಾಲ್ಲೂಕಿನ ರಂಗೇನಹಳ್ಳಿಯಲ್ಲಿ ಬುಧವಾರ ವಾಣಿ ಸಕ್ಕರೆ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ವತಿಯಿಂದ ಹಮ್ಮಿಕೊಂಡಿದ್ದ ರಾಷ್ಟ್ರೀಯ ಸೇವಾ ಯೋಜನೆಯ ವಿಶೇಷ ವಾರ್ಷಿಕ ಶಿಬಿರದಲ್ಲಿ ಅವರು ಮಾತನಾಡಿದರು.

ಯುವಕರು ದೇಶದ ನಿಜವಾದ ಆಸ್ತಿ. ಯುವ ಪೀಳಿಗೆಯನ್ನು ಸರಿಯಾದ ದಿಕ್ಕಿನಲ್ಲಿ ಕೊಂಡೊಯ್ಯುವ ಕೆಲಸವನ್ನು ಹಿರಿಯರು ಮಾಡಬೇಕು. ಗುರು- ಹಿರಿಯರಲ್ಲಿ ಭಕ್ತಿ, ಅಸಹಾಯಕರಿಗೆ ನೆರವು ನೀಡುವ ಮನೋಭಾವವನ್ನು ಯುವಕರು ರೂಢಿಸಿಕೊಳ್ಳಬೇಕು ಎಂದರು.



ಶಿಬಿರಾಧಿಕಾರಿ ಎಚ್. ತಿಪ್ಪೇಸ್ವಾಮಿ ಮಾತನಾಡಿ, ಶಿಬಿರಾರ್ಥಿಗಳು ಕಾಯಕವೇ ಕೈಲಾಸ ಎಂಬ ಬಸವಣ್ಣನವರ ತತ್ವದಲ್ಲಿ ನಂಬಿಕೆ ಇಡಬೇಕು. ಶಿಬಿರದ ಅವಧಿಯಲ್ಲಿ ನಡೆಸುವ ಕೆಲಸಗಳು ನೆನಪಿನಲ್ಲಿ ಉಳಿಯುವಂತೆ ಇರಬೇಕು. ಹಳ್ಳಿಗಳ ಅಭಿವೃದ್ಧಿಗೆ ಶಿಬಿರಗಳ ಮೂಲಕ ನಾಂದಿ ಹಾಡಬೇಕು. ಸಾಂಕ್ರಾಮಿಕ ರೋಗಗಳಿಂದ ದೂರವಿರಲು ಸ್ವಚ್ಛತೆ ಮುಖ್ಯ ಎಂಬ ಅರಿವನ್ನು ಹಳ್ಳಿಗರಲ್ಲಿ ಮೂಡಿಸಬೇಕು ಎಂದು ಕರೆ ನೀಡಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.