ಬುಧವಾರ, ಏಪ್ರಿಲ್ 21, 2021
30 °C

ಹಿರಿಯ ಗಾಯಕ ಪಂ. ಮಾಧವ ಗುಡಿ ಅಸ್ವಸ್ಥ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಧಾರವಾಡ: ಬಡತನದಲ್ಲಿಯೇ ಸಂಗೀತದ ಶಿಖರಕ್ಕೇರಿದ ಕಿರಾಣಾ ಘರಾಣಾದ ಹಿರಿಯ ಗಾಯಕ ಪಂಡಿತ ಮಾಧವ ಗುಡಿ(69) ಅನಾರೋಗ್ಯಕ್ಕೆ ತುತ್ತಾಗಿದ್ದು, ಯಕೃತ್ (ಲಿವರ್) ಸಮಸ್ಯೆಯಿಂದ ಬಳಲುತ್ತಿದ್ದಾರೆ. ಮಾಧವ ಗುಡಿಯವರ ಮನೆಯಲ್ಲಿ ಸದಾ ಗುನುಗುಡುತ್ತಿದ್ದ ಸಂಗೀತ ಕಳೆದ 20 ದಿನಗಳಿಂದ ಇಲ್ಲವಾಗಿದೆ. ಪಂ. ಭೀಮಸೇನ ಜೋಶಿಯವರ ಪಟ್ಟಶಿಷ್ಯ ಹಾಸಿಗೆ ಹಿಡಿದಿದ್ದು, ಸದಾಕಾಲ ತಮ್ಮ ಗುರುಗಳನ್ನೇ ನೆನಪಿಸಿಕೊಳ್ಳುತ್ತಿದ್ದಾರೆ.‘ನನ್ನ ಗುರುಗಳು ಹೋದರು, ಅವರಿಲ್ಲದ ನಾ ಹ್ಯಾಂಗ್ ಇರಬೇಕು, ಯಾರ ಮುಂದ ನನ್ನ ಅಳಲನ್ನು ತೋಡ್ಕೋಬೇಕು’ ಎಂದು ನಿತ್ಯ ಜಪಿಸುವ ಇವರು ತಮ್ಮ ಗುರುಗಳ ಅಗಲಿಕೆಯ ನೋವಿನಿಂದ ಹೊರಬಂದಂತೆ ಕಾಣುತ್ತಿಲ್ಲ. ಅದನ್ನೇ ಮನಸ್ಸಿಗೆ ಹಚ್ಚಿಕೊಂಡು ಕೊರಗುತ್ತಿದ್ದಾರೆ ಎಂದು ಅವರ ಕುಟುಂಬದವರು ಹೇಳುತ್ತಾರೆ. ಪಂಡಿತ ಮಾಧವ ಗುಡಿ ಅವರದು ಅನನ್ಯ ಶೈಲಿ, ಅದಕ್ಕೆ ಕಿರಾಣಾ ಘರಾಣಾದ ಭದ್ರ ಬುನಾದಿ ಇದೆ. ಅವರದು ಗಾಯನದಲ್ಲಿ ಕ್ರಮಬದ್ಧ ಆಲಾಪ. ಇವರ ತಾನಗಳಲ್ಲಿ ವೈವಿಧ್ಯ ಮತ್ತು ಅವಿಚ್ಛಿನ್ನತೆ ಇವೆ.ತಾನಗಳಲ್ಲಿ ತುಡಿತ, ಲವಲವಿಕೆ ಇದ್ದು, ಅವರದು ಅದ್ಭುತ ಉಸಿರು ನಿಯಂತ್ರಣ. ಮಾಧವ ಗುಡಿಯವರು ಸ್ವರಗಳನ್ನು ಯಾಂತ್ರಿಕವಾಗಿ ಹಾಡದೇ ಭಾವನೆಗಳನ್ನು ಸಂಗೀತಾತ್ಮಕವಾಗಿ ಹೆಣೆಯುತ್ತಾರೆ. ಇವೆಲ್ಲವುಗಳನ್ನು ಕಂಡೇ ಪಂ. ಭೀಮಸೇನ ಜೋಶಿಯವರು ಇವರನ್ನು ತಮ್ಮ ಪುತ್ರನಂತೆ ಕಂಡರು. ಬಡತನದಲ್ಲಿಯೇ ಸಂಗೀತದಲ್ಲಿ ಮುಂದೆ ಬಂದಿರುವ ಪಂ. ಮಾಧವ ಗುಡಿ ಹಾಗೂ ಅವರ ಕುಟುಂಬದವರಿಗೆ ಚಿಕಿತ್ಸೆಯ ವೆಚ್ಚ ಭರಿಸುವುದು ದೊಡ್ಡ ಹೊರೆಯಾಗಿದೆ.‘ಮುಂಬೈಯ ಜುಪಿಟರ್ ಆಸ್ಪತ್ರೆಯಲ್ಲಿ ತಪಾಸಣೆ ಮಾಡಿಸಲಾಯಿತು. ಲೀವರ್‌ನಲ್ಲಿ ತೂತುಗಳು ಬಿದ್ದಿವೆ ಎಂದರು. ಇದನ್ನು ಔಷಧಿ, ಮಾತ್ರೆಗಳಿಂದ ಗುಣಪಡಿಸಬಹುದು ಎಂದು ಹೇಳಿದ್ದಾರೆ.ಔಷಧಿ- ಮಾತ್ರೆಗಳನ್ನು ತೆಗೆದುಕೊಂಡು ಮರಳಿ ಮನೆಗೆ ಬಂದಿದ್ದೇವೆ. ಮನೆಯಲ್ಲಿಯೇ ಚಿಕಿತ್ಸೆ ನೀಡಲಾಗುತ್ತಿದೆ’ ಎಂದು ಮಾಧವ ಗುಡಿಯವರ ಪುತ್ರ ಪ್ರಸನ್ನ ಹೇಳುತ್ತಾರೆ.‘ಹುಬ್ಬಳ್ಳಿಯ ಸಿಟಿ ಕ್ಲಿನಿಕ್‌ನ ಡಾ. ಅಜಿತ ಜೋಶಿ ಚಿಕಿತ್ಸೆ ನೀಡುತ್ತಿದ್ದು, ಔಷಧಿ- ಮಾತ್ರೆಗಳನ್ನು ನೀಡಿದ್ದಾರೆ. ಅವರ ಅಭಿಮಾನಿಗಳು ಔಷಧಿ- ಮಾತ್ರೆಗಳನ್ನು ಪೂರೈಸಲು ಮುಂದೆ ಬಂದಿದ್ದಾರೆ’ ಎಂದು ಅವರು ಹೇಳಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.