ಶುಕ್ರವಾರ, ಮೇ 14, 2021
21 °C

ಹೀಗೊಂದು `ಕೌಟುಂಬಿಕ ಚಿತ್ರ'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತಂದೆ ಈಗಾಗಲೇ ನಿರ್ದೇಶನದ ಏಣಿ ಹತ್ತಿದವರು. ತಾಯಿ ನಿರ್ಮಾಪಕಿ. ಕಿರಿಯ ಸಹೋದರ ಸಂಗೀತದ ಅಲೆಗಳ ಜೊತೆಗೆ ನಿರ್ದೇಶನದ ತಂತಿ ಮೀಟುತ್ತಿರುವವರು. ಅಣ್ಣ ಚಿತ್ರದ ನಾಯಕ. `ಯುವ ಸಾಮ್ರಾಟ್'ನ ವಿಶೇಷಗಳು ಇವು.`ಐಯಾಮ್ ಇನ್ ಲವ್' ಮೂಲಕ ಪ್ರೇಮಕತೆ ಹೇಳಿದ್ದ ನಿರ್ದೇಶಕ ನಂದಕುಮಾರ್ ಈ ಬಾರಿ ಕುಟುಂಬದ ಕನಸನ್ನು ನನಸಾಗಿಸಲು ಹೊರಟಿದ್ದಾರೆ. ಎರಡು ವರ್ಷದಿಂದ ತಮ್ಮ ಪುತ್ರ ಕಿರಣ್‌ಕುಮಾರ್‌ರನ್ನು ತೆರೆಗೆ ತರುವ ಯತ್ನ `ಯುವ ಸಾಮ್ರಾಟ್' ಮೂಲಕ ಸಾಕಾರಗೊಳ್ಳುತ್ತಿದೆ.

`ಅಭಿನಯ ತರಂಗ'ದಲ್ಲಿ ನಟನೆಯ ಮೊದಲ ಸೊಲ್ಲುಗಳನ್ನು ಕಲಿತ ಕಿರಣ್ ಎಂಟು ವರ್ಷಗಳಿಂದ ಸಮರಕಲೆ ಅಭ್ಯಾಸ ಮಾಡುತ್ತಿದ್ದಾರೆ. ಜೊತೆಗೆ ಹದಿನೈದು ವರ್ಷಗಳ ನೃತ್ಯ ಅನುಭವವಿದೆ. ನಂದಕುಮಾರರ ಕಿರಿಯ ಪುತ್ರ ಯಶವಂತ್ ಅವರಿಗೆ ತಮ್ಮದೇ ಬ್ಯಾನರ್‌ನಲ್ಲಿ ಚಿತ್ರ ನಿರ್ಮಿಸುತ್ತಿರುವುದು ಎಲ್ಲಿಲ್ಲದ ಖುಷಿ ತಂದಿದೆಯಂತೆ.

ತಾಯಿ ನಿರ್ಮಾಪಕಿಯಾಗಿರುವುದು ಇನ್ನೊಂದು ಖುಷಿಯಾದರೆ ಅಣ್ಣ ನಾಯಕನಾಗುತ್ತಿರುವುದು ಮತ್ತೊಂದು ಖುಷಿ ಎನ್ನುತ್ತ ಖುಷಿಯ ಅಲೆಯಲ್ಲಿ ತೇಲಿದರು ಅವರು. ಯಶವಂತ್ ಅವರಿಗೆ ಸಂಗೀತದ ಮೇಲೂ ಒಲವು. ಆ ಜ್ಞಾನ ಚಿತ್ರದಲ್ಲಿ ಬಳಕೆಯಾಗುತ್ತಿದೆ.ಚಿತ್ರದ ನಾಯಕಿ ಕನ್ನಡದವರಲ್ಲ. ಹಾಗೆಂದು ಪಕ್ಕದ ರಾಜ್ಯದವರೂ ಅಲ್ಲ. ದೂರದ ಉಕ್ರೇನ್ ಅವರ ನೆಲೆ. ಹೆಸರು ಸ್ನಿಜ್ಹಾನಾ. ರೂಪದರ್ಶಿಗಳ ಲೋಕದಿಂದ ಜಿಗಿದ ಈ ಬೆಡಗಿ ಕಿರಣ್‌ರ `ರಾಕ್‌ಸ್ಟಾರ್'ನಲ್ಲಿಯೇ ನಾಯಕಿಯಾಗಬೇಕಿತ್ತು. ಅದರ ಬದಲು `ಯುವ ಸಾಮ್ರಾಟ್' ಕೈಗೆತ್ತಿಕೊಂಡಿದ್ದರಿಂದ ಸ್ನಿಜ್ಹಾನಾರ ಚಿತ್ರವೂ ಬದಲಾಯಿತು. ಇದು ಅವರ ಮೊದಲ ಚಿತ್ರ.

ನಿಜಜೀವನದಲ್ಲಿ ತಾವಿನ್ನೂ ವಿದ್ಯಾಭ್ಯಾಸ ಮಾಡುತ್ತಿರುವುದರಿಂದ ಚಿತ್ರದ ಕಾಲೇಜು ಹುಡುಗಿಯ ಪಾತ್ರ ತಮಗೆಂದೇ ಹೇಳಿ ಮಾಡಿಸಿದಂತೆ ಇದೆ ಎಂದರವರು.ಕನ್ನಡದಲ್ಲಿ ನಾಯಕಿಯರು ಇರಲಿಲ್ಲವೇ ಎಂಬ ಪ್ರಶ್ನೆಗೂ ಚಿತ್ರತಂಡದ ಬಳಿ ಉತ್ತರವಿತ್ತು. ಇದ್ದರೂ ನಟಿಯರು ಸರಿಯಾದ ಸಮಯಕ್ಕೆ ಸಿಗಲಿಲ್ಲವಂತೆ. ಹಾಗಾಗಿ ಸ್ನಿಜ್ಹಾನಾ ಪ್ರವೇಶ ಸುಲಭವಾಗಿತ್ತು. ಸುಂದರ ಪ್ರೇಮಕತೆಯೊಂದಿಗೆ ತಂದೆ ಪ್ರೀತಿಯೂ ಚಿತ್ರದಲ್ಲಿ ಬೆರೆತಿದೆಯಂತೆ. ಅಂದಹಾಗೆ ತಂದೆಯ ಪಾತ್ರ ನಿರ್ವಹಿಸುತ್ತಿರುವುದು ಕಲಾವಿದ ಶ್ರೀನಿವಾಸಮೂರ್ತಿ. ಇದರ ಜೊತೆಗೆ ತಮಾಷೆಯ ಎಳೆ ಇರದಿದ್ದರೆ ಹೇಗೆ? ಅದರ ಹೊಣೆ ಹೊತ್ತವರು ನಟ ಎಂ.ಎಸ್. ಉಮೇಶ್.

ಇದೆಲ್ಲದರ ಜೊತೆಗೆ ಸಂದೇಶ ಸಾರುವ ಅಂಶವೊಂದು ಚಿತ್ರದ ದ್ವಿತೀಯಾರ್ಧದಲ್ಲಿ ಇಣುಕಲಿದೆಯಂತೆ. ಅದೇನೆಂಬುದಕ್ಕೆ ಉತ್ತರ ಮುಂದಿನ ದಿನಗಳಲ್ಲಿ ದೊರೆಯಲಿದೆ.ನಿರ್ಮಾಪಕಿ ವರಲಕ್ಷ್ಮೀ ನಂದಕುಮಾರ್ ಅವರಿಗೆ ಚಿಕ್ಕದಾಗಿ ಮಾತನಾಡುವುದರತ್ತ ಹೆಚ್ಚು ಒಲವು. `ನಮ್ಮ ಮಕ್ಕಳು ನಿಮ್ಮ ಮನೆ ಹುಡುಗರು. ನಮಗೆ ನೀಡಿದ ಬೆಂಬಲ ಅವರಿಗೂ ಬೇಕು' ಎಂದರು. ಶೇ 40ರಷ್ಟು ಚಿತ್ರೀಕರಣ ಮುಗಿಸಿದೆ ಚಿತ್ರ.

ಜೊತೆಗೆ ಹಾಡುಗಳ ಚಿತ್ರೀಕರಣವೂ ನಡೆದಿದೆ. ಅಂದಹಾಗೆ ಕಿರಣ್‌ಕುಮಾರ್ ಹುಟುಹಬ್ಬದ ದಿನವಾದ ಮೇ 10ರಂದು ಚಿತ್ರದ ಮುಹೂರ್ತ ನಡೆದಿತ್ತು. ನಟಿ ಭಾರತಿ ವಿಷ್ಣುವರ್ಧನ್ ಆ ವೇಳೆ ಚಿತ್ರತಂಡವನ್ನು ಹಾರೈಸಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.