ಗುರುವಾರ , ಮೇ 6, 2021
27 °C

ಹೀಗೊಂದು ವಿವಾಹ ವಿಚ್ಛೇದನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಆತ ಮೂವತ್ತರ ಆಸುಪಾಸಿನ ಯುವಕ. ನೋಡಲು ಲಕ್ಷಣವಾಗಿದ್ದ, ಕೌಟುಂಬಿಕ ನ್ಯಾಯಾಲಯದಿಂದ ಬಂದಿದ್ದ ಸಮನ್ಸ್ ಕೈಯಲ್ಲಿ ಹಿಡಿದುಕೊಂಡು ಕಚೇರಿಗೆ ಬಂದ.ಆತನ ಪತ್ನಿ ಆತನ ವಿರುದ್ಧ ವಿವಾಹ ವಿಚ್ಛೇಧನ ಕೋರಿ ಅರ್ಜಿ ಸಲ್ಲಿಸಿದ್ದಳು. ಆತ ಸಾಫ್ಟ್‌ವೇರ್ ಉದ್ಯೋಗಿ, ಲಕ್ಷಾಂತರ ರೂಪಾಯಿ ವೇತನ, ವಿದೇಶಿ ಕಂಪೆನಿಯಲ್ಲಿ ಕೆಲಸ. ಆತನ ಪತ್ನಿಯೂ ಪ್ರತಿಷ್ಠಿತ ಸಾಪ್ಟ್‌ವೇರ್ ಕಂಪೆನಿಯಲ್ಲಿಯೇ ಉದ್ಯೋಗಿ.ಆಕೆಗೆ ರೂ. 60,000ಕ್ಕೂ ಮಿಗಿಲಾದ ವೇತನ. ಆಕೆಯೂ ಲಕ್ಷಣವಂತೆ! ಇವರಿಬ್ಬರ ನಡುವೆ ವೈಮನಸ್ಯವೇಕೆ ಬಂತು? ಯೋಚಿಸಿದೆ. ಪ್ರಕರಣದ ವಿವರ ತಿಳಿದುಕೊಂಡೆ. ಆಕೆಯು ಆತನ ವಿರುದ್ಧ `ಕ್ರೌರ್ಯ~ದ ಆಪಾದನೆ ಹೊರಿಸಿದ್ದಳು. ಆತ ಎಸಗಿದ ಕ್ರೌರ್ಯವಾದರೂ ಏನು?ಅವರಿಬ್ಬರ ವಿವಾಹದ ನಂತರ ಆಕೆ ಉದ್ಯೋಗ ತೊರೆದು ಆತನೊಂದಿಗೆ ವಿದೇಶಕ್ಕೆ ಹಾರಿದ್ದಳು. ಇಬ್ಬರೂ ಸುಖವಾಗಿದ್ದರು. ಗರ್ಭಿಣಿಯಾದಾಗ ತವರು ಮನೆಗೆ ಬಂದ ಆಕೆ ನಂತರ ಪತಿಯುನ್ನು ದೂರತೊಡಗಿದಳು. ಆತ ತನ್ನನ್ನು ನಿರ್ಲಕ್ಷಿಸುತ್ತಿದ್ದನೆಂದೂ, ಹಿಂಸೆ ಕೊಡುತ್ತಿದ್ದನೆಂದೂ ಆಪಾದಿಸತೊಡಗಿದಳು. ಹೆರಿಗೆಯ ಸಂದರ್ಭದಲ್ಲಿ ಆತ ತನ್ನನ್ನು ನೋಡಲೂ ಬರಲಿಲ್ಲ ಎಂದು ಗಂಭೀರ ಆರೋಪ ಹೊರಿಸಿದ್ದಳು. ನಂತರ ಆಕೆ ಪ್ರತಿಷ್ಠಿತ ಸಂಸ್ಥೆಯಲ್ಲಿ ಉದ್ಯೋಗಕ್ಕೆ ಸೇರಿ ತವರು ಮನೆಯಲ್ಲೇ ವಾಸಿಸತೊಡಗಿದ್ದಳು.ನ್ಯಾಯಾಲಯವು ಇಬ್ಬರನ್ನೂ ಕೂರಿಸಿ ಸಂಧಾನಕ್ಕೆ ಪ್ರಯತ್ನಿಸಿತು. ಸಾಧ್ಯವಾಗಲಿಲ್ಲ. ಆಕೆ ಆಪಾದನೆ ಹೊರಿಸಲು ಪ್ರಾರಭಿಸಿದಳು. ನ್ಯಾಯಾಧೀಶರು ಪ್ರಶ್ನಿಸಿದರು. ಆತ ಎಸಗಿದ ಕ್ರೌರ್ಯವಾದರೂ ಏನು ಎಂದು. ಆಕೆ ಎಲ್ಲವನ್ನೂ ತನ್ನದೇ ಶೈಲಿಯಲ್ಲಿ ವಿವರಿಸತೊಡಗಿದಳು. ತನ್ನ ಮಗು ಹುಟ್ಟಿದಾಗಲೂ ಆತ ನೋಡಲು ಬರಲಿಲ್ಲ. ಮಗು ಹುಟ್ಟಿದ ಮೂರನೇ ದಿನ ಬಂದ. ಆತನಿಗೆ ಮಗುವಿನ ಮೇಲೆ ಮಮತೆಯಿಲ್ಲ .... ಈ ರೀತಿ ಆರೋಪಿಸುತ್ತಲೇ ಇದ್ದಳು.ನ್ಯಾಯಾಧೀಶರು ಆತನತ್ತ ನೋಡಿದರು. ಆತ ಹೇಳಿದ `ನಾನು ಆ ದಿನ ತುಂಬಾ ಸಂತಸ ಪಟ್ಟಿದ್ದೆ ..... ಮಗು ಹುಟ್ಟುವ ಗಳಿಗೆಯಲ್ಲಿ ಆಕೆಯ ಹೆಸರಿನಲ್ಲಿ ಮನೆಯೊಂದನ್ನು ಖರೀದಿಸಲು ಬಯಸಿದ್ದೆ. ಆ ದಿನ ಬೆಂಗಳೂರಿನಲ್ಲಿ ನೋಂದಣಿ ಪ್ರಕ್ರಿಯೆ ಇತ್ತು. ಮನೆ ಖರೀದಿಸಿದೆ. ನಂತರ ಮಾರನೇ ದಿನವೇ ಮನೆಗೆ ಹೋಗಿ ಆಕೆಯನ್ನು ಸಂತೈಸಿದೆ. ಇಲ್ಲಿ ನಾನೆಸಗಿದ ಕ್ರೌರ್ಯವಾದರೂ ಏನು?....~ ಹೀಗೆಯೇ ಸಾಗಿತ್ತು ಆತನ ಸಮಜಾಯಿಷಿ.ಆತ ನ್ಯಾಯಾಲಯದ ಹೊರಗೆ ಬಂದ ನಂತರ ಅವನನ್ನು ಪ್ರಶ್ನಿಸಿದೆ. `ನಿಮ್ಮಿಬ್ಬರ ನಡುವೆ ಭಿನ್ನಾಭಿಪ್ರಾಯ ಏನೂ ಕಾಣಿಸುತ್ತಿಲ್ಲ. ಆದರೂ ಏಕೆ ಇಂತಹ ನಿರ್ಧಾರಕ್ಕೆ ಬಂದಿದ್ದಾಳೆ ಆಕೆ?~ ಎಂದು. ಆಗ ಆತ ಹೇಳಿದ ಉತ್ತರ ಕೇಳಿ ದಂಗಾದೆ.`ನೀವು ಹೇಳುತ್ತಿರುವುದು ನಿಜ ಸಾರ್. ನಮ್ಮಿಬ್ಬರ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಆದರೆ ಆ ಭಿನ್ನಾಭಿಪ್ರಾಯವನ್ನು ಮೂಡಿಸಿ ನಮ್ಮಿಬ್ಬರನ್ನು ಬೇರ್ಪಡಿಸಲು ಪ್ರಯತ್ನಿಸುತ್ತಿರುವವರು ಬೇರೆ ಯಾರೂ ಅಲ್ಲ. ನನ್ನ ಮಾವ ..... ಅಂದರೆ ಆಕೆಯ ತಂದೆ.~ ನನಗೆ ಆಶ್ಚರ್ಯವಾಯ್ತು. ಆಕೆಯ ತಂದೆ ಹಾಗೇಕೆ ಮಾಡುತ್ತಿದ್ದಾನೆ? ತನ್ನ ಮಗಳ ಜೀವನವನ್ನು ಅವರೇ ಏಕೆ ಹಾಳು ಮಾಡುತ್ತಿದ್ದಾರೆ? ಎಂದು ಪ್ರಶ್ನಿಸಿದೆ.ಆತ ಹೇಳಿದ `ಸಾರ್ .... ನನ್ನ ಮಾವ ಧನ ಪಿಶಾಚಿ. ಅವರಿಗೆ ಮಗಳ ಮೇಲಿನ ಮೋಹಕ್ಕಿಂತ ಆಕೆ ತರುತ್ತಿರುವ ಸಂಬಳದ ಮೇಲೆ ಹೆಚ್ಚು ಮಮತೆ. ಆಕೆ ತವರು ಮನೆಯಲ್ಲಿದ್ದರೆ ಆಕೆ ತರುವ ಆಕರ್ಷಕ ವೇತನ ಅವರ ಕೈ ಸೇರುತ್ತದೆ. ಅವಳು ನನ್ನೊಂದಿಗೆ ಬಂದರೆ ಆ ಅವಕಾಶವು ತಪ್ಪಿಹೋಗುತ್ತದೆ. ಇದಕ್ಕಾಗಿ ನಮ್ಮಿಬ್ಬರ ನಡುವೆ ನನ್ನ ಮಾವನೇ ಭಿನ್ನಾಭಿಪ್ರಾಯ ಬರುವಂತೆ ಮಾಡಿ ಆಕೆ ಈ ಕೇಸು ದಾಖಲಿಸಿದ್ದಾಳೆ~ ಎಂದ.ತನ್ನ ಪತ್ನಿ ಹೊರಿಸಿದ ಕ್ರೌರ್ಯದ ಆರೋಪ .... ಸುಳ್ಳು ಆಪಾದನೆ .... ಇದರಿಂದ ಜರ್ಜರಿತನಾದ ಆತ ಕೊನೆಗೂ ವಿಚ್ಛೇದನಕ್ಕೆ ಸಮ್ಮತಿ ನೀಡಿದ. ಮತ್ತೊಂದು ದಿನ ಬರುವಂತೆ ನ್ಯಾಯಾಲಯ ಆದೇಶಿಸಿತು. ಆ ದಿನ ಆತ ನ್ಯಾಯಾಲಯದೆದುರು ಹಾಜರಾದ. ಆಕೆಯೂ ತಂದೆಯೊಡನೆ ಬಂದಳು.ಪತಿ - ಪತ್ನಿಯಿಬ್ಬರೂ ತಮ್ಮ ಸಾಕ್ಷ್ಯವನ್ನು `ಅಫಿಡವಿಟ್~ ಮೂಲಕ ನ್ಯಾಯಾಲಯಕ್ಕೆ ಸಲ್ಲಿಸಿದರು. ಅಫಿಡವಿಟ್ ಮೂಲಕ ತಮ್ಮ ವೈವಾಹಿಕ ಸಂಬಂಧಕ್ಕೆ ತಿಲಾಂಜಲಿ ಇಡುವ ಸಂದರ್ಭದಲ್ಲಿ ಆಕೆಯ ಕಂಗಳು ಭಾರವಾಗಿದ್ದುದನ್ನು ನಾನು ಗಮನಿಸಿದೆ.ಆತನ ಕಂಗಳಲ್ಲಿ ಕಣ್ಣೀರು ಹೆಪ್ಪುಗಟ್ಟಿತ್ತು. ಆಗ ಗದ್ಗದಿತನಾಗಿದ್ದ. ನ್ಯಾಯಾಲಯ ಮೂಕ ಪ್ರೇಕ್ಷಕನಂತೆ ಎಲ್ಲವನ್ನೂ ನೋಡುತ್ತಿತ್ತು. ಎಲ್ಲರೂ ಭಾವಪರವಶರಾಗಿ ಬೇಸರ ವ್ಯಕ್ತಪಡಿಸುತ್ತಿದ್ದರೆ ಆತನ ಮಾವ ಅರ್ಥಾತ್ ಆಕೆಯ ತಂದೆ ಮಾತ್ರ ಸಮರದಲ್ಲಿ ಗೆದ್ದಂತೆ ವಿಜಯದ ನಗೆ ಬೀರುತ್ತಿದ್ದುದನ್ನು ನಾನು ಸೂಕ್ಷ್ಮವಾಗಿ ಗಮನಿಸಿದೆ.ನ್ಯಾಯಾಧೀಶರು ಸದರಿ ಪ್ರಕರಣವನ್ನು ಸೂಕ್ತ ಆದೇಶ ನೀಡುವುದಕ್ಕಾಗಿ ದಿನಾಂಕ ನಿಗದಿ ಪಡಿಸಿ ಮುಂದೂಡಿದರು. ಅವರಿಬ್ಬರ ವಿವಾಹ ವಿಚ್ಛೇದನಗೊಂಡಂತಾಗಿತ್ತು. ಅವರಿಬ್ಬರ ಹೃದಯ ಏನನ್ನುತ್ತಿತ್ತೋ ಗೊತ್ತಿಲ್ಲ. ಕಂಗಳು ಮಾತ್ರ ಏನನ್ನೋ ಹೇಳುತ್ತಿರುವ ಹಾಗೆ ಭಾಸವಾಯಿತು. ಎಲ್ಲವೂ ಅಸ್ಪಷ್ಟ.ನಂತರ ಆತ ನನ್ನ ಬಳಿ ಬಂದು ಹೇಳಿದ `ಸಾರ್ .... ಆಕೆಯ ಜರ್ಕಿನ್ ಒಂದು ನನ್ನ ಬಳಿ ಇದೆ. ಆಕೆಗೆ ಕೊಡಬಹುದಾ ಸಾರ್ ....?~ ನಾನು ಆತನ ಮಾತಿಗೆ ಉತ್ತರಿಸುವ ಸ್ಥಿತಿಯಲ್ಲಿರಲಿಲ್ಲ. ಇದು ವಿಚ್ಛೇದನವೋ .... ಸಂಬಂಧದ ಶಿರಚ್ಛೇದನವೋ ತಿಳಿಯದಾಯಿತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.