ಮಂಗಳವಾರ, ಮೇ 11, 2021
24 °C

ಹೀಗೊಬ್ಬ `ಟ್ರಾಫಿಕ್ ಕಂಟ್ರೋಲರ್...'

-ಸುಚೇತನಾ ನಾಯ್ಕ Updated:

ಅಕ್ಷರ ಗಾತ್ರ : | |

ಒಂದು ರಸ್ತೆ ಫ್ರೇಜರ್ ಟೌನ್, ಟ್ಯಾನರಿ ಕಡೆ ಸಾಗಿದರೆ, ಇನ್ನೊಂದು ರಸ್ತೆ ಜಯಮಹಲ್, ನಂದಿದುರ್ಗದೆಡೆಗೆ. ಮೊತ್ತೊಂದು ರಸ್ತೆ ಶಿವಾಜಿನಗರ, ಹಲಸೂರಿನತ್ತ. ಈ ಮೂರು ರಸ್ತೆಗಳು ಕೂಡುವ ವೃತ್ತದಲ್ಲೊಬ್ಬ ಹರಕಲು ಬಟ್ಟೆಯ, ಈ ಬಟ್ಟೆ ಮುಚ್ಚಲು ಕರಿಕೋಟು ಧರಿಸಿದ, ಕುರುಚಲು ಗಡ್ಡದ, ಕಪ್ಪು ಬಣ್ಣದ ವ್ಯಕ್ತಿಯ ದರ್ಶನ.ವೇಷ-ಭೂಷಣವನ್ನು ನೋಡಿದ ತಕ್ಷಣ ಈತನೊಬ್ಬ ಭಿಕ್ಷುಕ ಇರಬಹುದು ಎಂದುಕೊಳ್ಳುವವರೇ ಎಲ್ಲ. ಆದರೆ ಅಲ್ಲಿ ನಿಂತು ನೋಡಿದರೇನೇ ತಿಳಿಯುವುದು ಇವರ ನಿಜವಾದ `ಬಣ್ಣ'. ಇವರೊಬ್ಬ `ಅಘೋಷಿತ ಟ್ರಾಫಿಕ್ ಕಂಟ್ರೋಲರ್' ಎಂದು!ಹೆಸರು ಷಾನುವಾಸ್ ಯಾಕೂಬ್. 60 ವರ್ಷದ ಆಸುಪಾಸು. ಹಿಂದಿ ಬಿಟ್ಟರೆ ಬೇರೆ ಭಾಷೆ ಸರಿಯಾಗಿ ಗೊತ್ತಿಲ್ಲ. ಸಂಚಾರ ದಟ್ಟಣೆ ಹೆಚ್ಚಿರುವಾಗ ಮಾತನಾಡಲೂ ಸಮಯ ಇಲ್ಲದಷ್ಟು ಕೆಲಸ. ಇವರ ಬೆರಳುಗಳೇ ಸೀಟಿ. ಸೀಟಿ ಊದುತ್ತ ಮೂರೂ ಕಡೆಗಳಿಂದ ಬರುವ ವಾಹನಗಳನ್ನು ನಿಯಂತ್ರಿಸುವುದರಲ್ಲೇ ತಲ್ಲೆನ. ಒಮ್ಮಮ್ಮೆ ಅಲ್ಲಿ ಟ್ರಾಫಿಕ್ ಇನ್ಸ್‌ಪೆಕ್ಟರ್ ಇದ್ದಾಗಲೂ ಈತನದ್ದೇ ಕಾರುಬಾರು.ಕೆಲವು ವಾಹನ ಚಾಲಕರಿಗೆ ಇವರೇ ಸಲಾಂ ಹೊಡೆದರೆ, ಇನ್ನು ಹಲವರು ಇವರಿಗೇ ಸಲಾಂ ಹೊಡೆದು ಹೋಗುವಷ್ಟರ ಮಟ್ಟಿಗಿನ ಗೌರವ. ಸಂಬಳ ಪಡೆದುಕೊಂಡೇ ಸರಿಯಾಗಿ ಕೆಲಸ ಮಾಡದ ಈ ದಿನಗಳಲ್ಲಿ ಉಚಿತ ಸೇವೆ ಮಾಡುವವರೂ ಇದ್ದಾರೆಯೇ ಎಂದು ಅಚ್ಚರಿ ಪಡುವಂಥ ಕೆಲಸ ಇವರದ್ದು.ದಶಕದ ಸೇವೆ

ಷಾನುವಾಸ್ ಅವರು ಮುಂಬೈ ಮೂಲದವರು. `ಬೆಂಗಳೂರಿಗೆ 10 ವರ್ಷಗಳ ಹಿಂದೆ ಕೆಲಸ ಹುಡುಕಿ ಬಂದೆ. ಗ್ಯಾರೆಜ್ ಒಂದರಲ್ಲಿ ಮೆಕ್ಯಾನಿಕ್ ಆಗಿ ಕೆಲಸ ಮಾಡಿದೆ. ಆದರೆ ಅದೇಕೋ ಆ ಕೆಲಸ ಸರಿಹೋಗಲಿಲ್ಲ. ಇಲ್ಲಿಯೇ (ಫ್ರೇಜರ್ ಟೌನ್ ಬಳಿ) ಮನೆಯೊಂದರಲ್ಲಿ ಪತ್ನಿಗೆ ಕೆಲಸ ದೊರಕಿತು.ಅವಳ ಜೊತೆ ನಾನೂ ಹೋಗುತ್ತಿದ್ದೆ. ಆಗ ಇಲ್ಲಿ ವಾಹನಗಳ ಸಂಚಾರದ ದಟ್ಟಣೆ ಹೆಚ್ಚಿದ್ದುದು ನೋಡಿದೆ. ಇಲ್ಲಿ ಟ್ರಾಫಿಕ್ ಪೊಲೀಸರು ಸದಾ ಇಲ್ಲದೇ ಇರುವುದು ನನ್ನ ಗಮನಕ್ಕೆ ಬಂತು. ಸರಿ. ಸುಮ್ಮನೆ ಇರುವ ಬದಲು ಒಂದಿಷ್ಟು ಸೇವೆ ಮಾಡೋಣ ಎಂದುಕೊಂಡು ವಾಹನ ದಟ್ಟಣೆ ನಿಯಂತ್ರಿಸಲು ಶುರುಮಾಡಿದೆ.ದಿನನಿತ್ಯ ಇದೇ ರಸ್ತೆಯಲ್ಲಿ ಹೋಗಿ-ಬರುವ ವಾಹನ ಸವಾರರು ತುಂಬಾ ಖುಷಿಪಟ್ಟುಕೊಂಡರು. ನನಗೆ ಧನ್ಯವಾದ ಹೇಳಲು ಆರಂಭಿಸಿದರು. ಇದು ನನಗೆ ಖುಷಿ ಕೊಟ್ಟಿತು. ಅಲ್ಲಿಂದ ಇದೇ ಕೆಲಸದಲ್ಲಿ ಮುಂದುವರಿದಿದ್ದೇನೆ' ಎಂದು ಸಂತಸದಲ್ಲಿ ನುಡಿಯುತ್ತಾರೆ ಷಾನುವಾಸ್.ಬೆಳಿಗ್ಗೆ 9ಕ್ಕೆ ಸರಿಯಾಗಿ ಕರ್ತವ್ಯಕ್ಕೆ ಹಾಜರಾದರೆ ಮುಗೀತು. ಮನೆಗೆ ಹೋಗುವುದು ರಾತ್ರಿ 8-9 ಗಂಟೆಗೇ. ವಾಹನಗಳ ಸಂಚಾರ ದಟ್ಟಣೆ ಹೆಚ್ಚಿದ್ದರೆ ಇನ್ನೂ ಹೆಚ್ಚಿನ ಕೆಲಸ ಇವರದ್ದು. ವಾರದ ರಜೆ ಇಲ್ಲ. ಭಾನುವಾರವೂ ಕೆಲಸಕ್ಕೆ ಹಾಜರ್.`ಸರ್ಕಾರದ ನೆರವಿಲ್ಲ, ಮಾಸಿಕವಾಗಿ ಸಂಬಳವೂ ಇಲ್ಲ. ಹಾಗಿದ್ದರೆ ಸಂಸಾರ ನಿರ್ವಹಣೆ ಹೇಗೆ?' ಎಂದು ವಿಚಾರಿಸಿದರೆ, `ಇಲ್ಲಿ ಹೋಗಿ- ಬರುವ ವಾಹನ ಸವಾರರು ನನ್ನ ಸೇವೆಗೆ ಮೆಚ್ಚುಗೆ ವ್ಯಕ್ತಪಡಿಸಿ ಒಂದಿಷ್ಟು ಕಾಸು ಕೊಡುತ್ತಾರೆ. ದಿನಕ್ಕೆ 100-150 ರೂಪಾಯಿ ಸಂಪಾದನೆ ಆಗುತ್ತದೆ. ಆಗಾಗ್ಗೆ ಜನರೇ ನನಗೆ ತಿಂಡಿ-ತಿನಿಸು, ಊಟ ಕೊಡುತ್ತಾರೆ. ಅವರು ಕೊಟ್ಟರೆ ಊಟ, ಇಲ್ಲದಿದ್ದರೆ ಇಲ್ಲ. ನನ್ನ ಪತ್ನಿ ಮನೆಕೆಲಸ ಮಾಡಿ ಸಂಪಾದನೆ ಮಾಡುತ್ತಾಳೆ. ಮಗನೂ ಚಿಕ್ಕಪುಟ್ಟ ಕೆಲಸ ಮಾಡುತ್ತಾನೆ. ಹಾಗೂ ಹೀಗೂ ಸಂಸಾರ ಸಾಗುತ್ತದೆ. ಅಲ್ಲಾಹ್ ಎಷ್ಟು ಕೊಟ್ಟಿದ್ದಾನೋ, ಅದರಲ್ಲೇ ನಮಗೆ ತೃಪ್ತಿ' ಎನ್ನುವ ಸಂತೃಪ್ತದ ಮಾತು ಷಾನುವಾಸ್ ಅವರದ್ದು.ಇಷ್ಟು ವರ್ಷ ಸೇವೆ ಸಲ್ಲಿಸುತ್ತಿದ್ದರೂ ಒಮ್ಮೆಯೂ ಪೊಲೀಸ್ ಇಲಾಖೆಯ ಗಮನಕ್ಕೆ ಬಂದೇ ಇಲ್ಲವೇ ಅಂದರೆ, `ಎಚ್.ಟಿ. ಸಾಂಗ್ಲಿಯಾನಾ ಅವರು ಇಲ್ಲಿಯ ಪೊಲೀಸ್ ಕಮಿಷನರ್ ಆಗಿದ್ದ ವೇಳೆ ಒಮ್ಮೆ ಯಾರೋ ಅವರಲ್ಲಿ ನನ್ನ ಬಗ್ಗೆ ಹೇಳಿದ್ದರು. ಅವರು ನನ್ನನ್ನು ಕರೆಸಿ ಶಹಬಾಸ್‌ಗಿರಿ ಕೊಟ್ಟಿದ್ದರು ಅಷ್ಟೇ. ಅಷ್ಟು ಬಿಟ್ಟರೆ ಇಲ್ಲಿಯವರೆಗೆ ಮತ್ತ್ಯಾರೂ ನನ್ನನ್ನು ಮಾತನಾಡಿಸಿಲ್ಲ. ನನ್ನ ಈ ಸೇವೆಯ ಬಗ್ಗೆ ಸಾಂಗ್ಲಿಯಾನಾ ಅವರ ಬಳಿ ಲಿಖಿತ ರೂಪದಲ್ಲಿ ಬರೆಸಿಕೊಂಡಿದ್ದರೇ ಏನಾದರೂ ಸಹಾಯ ಆಗುತ್ತಿತ್ತೇನೋ. ನಾನು ತಪ್ಪು ಮಾಡಿದೆ.ಆಗ ನನಗೆ ಅದು ಹೊಳೆಯಲೇ ಇಲ್ಲ. ಕರ್ತವ್ಯದ ಮೇಲೆ ಇರುವ ಸರ್ಕಲ್ ಇನ್ಸ್‌ಪೆಕ್ಟರ್ ಇಲ್ಲಿಗೂ ಆಗ್ಗಾಗ್ಗೇ ಬರುತ್ತಿರುತ್ತಾರೆ. ಅವರ ಮೂಲಕ ಪೊಲೀಸ್ ಇಲಾಖೆಗೂ ನನ್ನ ಬಗ್ಗೆ ಗೊತ್ತಿದೆ. ಕೆಲವು ಪೊಲೀಸರು ದುಡ್ಡುಕೊಡಲು ಮುಂದೆ ಬಂದರು. ಅವರಿಂದ ನಾನು ದುಡ್ಡು ಪಡೆದರೆ ಲಂಚ ತೆಗೆದುಕೊಳ್ಳುತ್ತೇನೆ ಎಂಬ ಆಪಾದನೆ ಬರಬಹುದು ಎಂದು ಅದನ್ನೂ ಬೇಡ  ಎಂದೆ. ಆದರೆ ಅಧಿಕೃತವಾಗಿ ಯಾರೂ ನನ್ನ ಬಗ್ಗೆ ಗಮನ ಹರಿಸಿಲ್ಲ. ಜನರೇ ಸಹಾಯ ಮಾಡುತ್ತಿದ್ದಾರಲ್ಲ, ಎಲ್ಲೆವರೆಗೆ ಶಕ್ತಿ ಇದೆಯೋ, ಅಲ್ಲೆವರೆಗೆ ಇಲ್ಲೇ ಅವರ ಸೇವೆ ಮಾಡುವೆ' ಎನ್ನುವುದು ಅವರ ನುಡಿ.`ನಾವೂ ಇಲ್ಲಿ ಕರ್ತವ್ಯದಲ್ಲಿ ಇರುತ್ತೇವೆ. ಕೆಲವೊಮ್ಮೆ ಸುತ್ತಮುತ್ತಲೂ ಏನಾದರೂ ಘಟನೆ ಸಂಭವಿಸಿದರೆ ಅಲ್ಲಿಗೆ ಹೋಗಲು ಕಂಟ್ರೋಲ್ ರೂಂನಿಂದ ಆದೇಶ ಬರುತ್ತದೆ. ನಾವು ಇದ್ದಾಗಲೂ ಈತ ಬೇಡ ಎಂದರೂ ಇಲ್ಲೇ ಇರುತ್ತಾನೆ. ಹಾಗೆಯೇ ನಾವು ಕರ್ತವ್ಯದ ಮೇಲೆ ಅತ್ತ ಇತ್ತ ಹೋದ ಮೇಲೂ ಅಷ್ಟೇ. ಇವನಿಗೂ ನಾಲ್ಕು ಕಾಸು ಆಗುತ್ತದೆ ಎಂದು ಇರಲಿ ಎಂದು ಬಿಟ್ಟಿದ್ದೇವೆ ಅಷ್ಟೇ.ಇದೇನೂ ಅಂಥಾ ಸೇವೆ ಅಲ್ಲ. ಹೊಟ್ಟೆಪಾಡಿಗೆ ಈ ರೀತಿಯ ಕೆಲಸ ಮಾಡುತ್ತಿದ್ದಾನೆ' ಎಂಬ ಮಾತು ಅಲ್ಲಿಯೇ ಕರ್ತವ್ಯದಲ್ಲಿದ್ದ ಸರ್ಕಲ್ ಇನ್ಸ್‌ಪೆಕ್ಟರ್ ಅವರದ್ದು. ಅದೇನೇ ಇದ್ದರೂ, ಪೊಲೀಸರು ಏನೇ ಹೇಳಿದರೂ ಪೊಲೀಸ್ ಇದ್ದರೂ, ಇಲ್ಲದಿದ್ದರೂ ಸಂಚಾರ ನಿಯಂತ್ರಣ ಮಾಡುವಲ್ಲಿ ಈತನದ್ದು ಎತ್ತಿದ ಕೈ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.