ಬುಧವಾರ, ಜೂಲೈ 8, 2020
29 °C

ಹುಚ್ಚೆದ್ದ ಜನ, ರೊಚ್ಚಿಗೆದ್ದ ಆನೆಗಳು...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಚ್ಚೆದ್ದ ಜನ, ರೊಚ್ಚಿಗೆದ್ದ ಆನೆಗಳು...

ಮೈಸೂರು:  ನಗರದಲ್ಲಿ ಬುಧವಾರ ಬೆಳಿಗ್ಗೆ ಆನೆಗಳು ಕಾಣಿಸಿಕೊಂಡಾಗಿನಿಂದಲೂ ಜನರೂ ಹುಚ್ಚೆದ್ದಿದ್ದರು. ಕೆಲವರು ಆನೆಯನ್ನೇ ಹಿಂಬಾಲಿಸುತ್ತಿದ್ದರು.  ಆನೆಯ ಬಳಿ ತೆರಳದಂತೆ ಹಾಗೂ ಅವುಗಳಿಗೆ ತೊಂದರೆ ಕೊಡದಂತೆ ಪೊಲೀಸರು ಮೈಕ್‌ನ ಸಹಾಯದಿಂದ ಎಚ್ಚರಿಕೆ ನೀಡುತ್ತಿದ್ದರೂ ಜನರು ಮಾತ್ರ ಕಿವಿಗೆ ಹಾಕಿಕೊಳ್ಳಲಿಲ್ಲ. ಆನೆಯಂತೆಯೇ ಘೀಳಿಟ್ಟು ಅದನ್ನು ರೇಗಿಸುತ್ತಿದ್ದರು. ಇದರಿಂದ ಆನೆಗಳು ರೊಚ್ಚಿಗೆದ್ದವು. ಮತ್ತೆ ಕೆಲವರು ಪ್ರಾಣವನ್ನು ಲೆಕ್ಕಿಸದೆ ಆನೆಯ  ಹಿಂದೆಯೇ ಓಡುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.ಸರಸ್ವತಿಪುರಂ ದೋಬಿ ಘಾಟ್‌ನ ಬಳಿ ಪೊದೆಯನ್ನು ಹೊಕ್ಕಿದ ಆನೆಯನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆ ಸಿಬ್ಬಂದಿ ಸಿದ್ಧತೆ ನಡೆಸುತ್ತಿದ್ದರು. ಹಗ್ಗಗಳನ್ನು ಹಾಕಿ ಹತ್ತಿರಕ್ಕೆ ಬರದಂತೆ ಪೊಲೀಸರು ನಿರ್ಬಂಧ ಹಾಕಿದ್ದರು. ಆದರೆ ಆನೆ ನೋಡುವ ತವಕದಲ್ಲಿ ಪೊಲೀಸರ ಮಾತನ್ನು ಲೆಕ್ಕಿಸದ ಯುವಕರು ಹಗ್ಗವನ್ನು ದಾಟಿ  ಕಾರ್ಯಾಚರಣೆ ಸ್ಥಳಕ್ಕೆ ತೆರಳಿ ಅಡ್ಡಿಪಡಿಸಿಸುತ್ತಿದ್ದರು. ಕೆಲವರು ಪೊಲೀಸರ ಕೆಂಗಣ್ಣಿಗೆ ಗುರಿಯಾಗಿ ಲಾಠಿ ಏಟು ತಿಂದರು. ಆನೆ ನೋಡುವ ತವಕದಲ್ಲಿ ಕೆಲವರು ಬಿದ್ದು-ಎದ್ದು ಸಣ್ಣಪುಟ್ಟ ಗಾಯ ಮಾಡಿಕೊಂಡರು.30 ಮಂದಿ ಬಂಧನ: ಆನೆ ಸೆರೆ ಹಿಡಿಯುವ ಕಾರ್ಯಾಚರಣೆಗೆ ಅಡ್ಡಿಪಡಿಸಿದ 30 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.`ಸರಸ್ವತಿಪುರಂ ದೋಬಿ ಘಾಟ್ ಬಳಿ ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ನಡೆಸುವ ಸಂದರ್ಭದಲ್ಲಿ ಕೆಲ ಯುವಕರು ಆನೆ ಸೆರೆಗೆ ಅಡ್ಡಿಪಡಿಸಿದರು. ಕರ್ನಾಟಕ ಪೊಲೀಸ್ ಕಾಯ್ದೆಯಡಿ 30 ಮಂದಿಯನ್ನು ಬಂಧಿಸಲಾ  ಗಿದೆ~ ಎಂದು ನಗರ ಪೊಲೀಸ್ ಕಮಿಷನರ್ ಸುನಿಲ್ ಅಗರವಾಲ್ ತಿಳಿಸಿದರು.ರೂ.5 ಲಕ್ಷ ಪರಿಹಾರ

 
ನಗರದಲ್ಲಿ ಆನೆ ದಾಳಿಗೆ ಬುಧವಾರ ಬಲಿಯಾದ ಮೃತ ರೇಣುಕಾ ಸ್ವಾಮಿ ಅವರ ಮನೆಗೆ ಭೇಟಿ ನೀಡಿದ ಅರಣ್ಯ ಸಚಿವ ಸಿ.ಎಚ್.ವಿಜಯಶಂಕರ್ ಅವರು ರೂ.5 ಲಕ್ಷದ ಪರಿಹಾರದ ಚೆಕ್ ವಿತರಿಸಿದರು.ರೇಣುಕಾ ಸ್ವಾಮಿಗೆ ಇಬ್ಬರು ಪುತ್ರರಿದ್ದು, ಒಬ್ಬನಿಗೆ ಅರಣ್ಯ ಇಲಾಖೆಯಲ್ಲಿ ಹಂಗಾಮಿ ಉದ್ಯೋಗ ನೀಡಲಾಗುವುದು. ಮುಂದೆ ಕಾಯಂ ಮಾಡಲು  ಶ್ರಮಿಸಲಾಗುವುದು ಎಂದು ಕುಟುಂಬದವರಿಗೆ ಭರವಸೆ ನೀಡಿದರು. `ಆನೆ ದಾಳಿಯಿಂದ ಗಾಯಗೊಂಡವರು ಮತ್ತು ಮೃತಪಟ್ಟ ಹಸುಗಳ ಮಾಲೀಕರಿಗೆ ಸೂಕ್ತ ಪರಿಹಾರ ನೀಡಲಾಗುವುದು ಎಂದರು.ಆನೆಗಳು ಬಂದಿದ್ದು ಎಲ್ಲಿಂದ?

 ನಗರಕ್ಕೆ ಆನೆಗಳು ಎಲ್ಲಿಂದ ಬಂದವು ಎಂಬುದು ಪ್ರಶ್ನೆಯಾಗಿದೆ. ನಗರದ ಸಯ್ಯಾಜಿರಾವ್ ರಸ್ತೆಯ ಆರ್‌ಎಂಸಿ ಬಳಿ ಬೆಳಿಗ್ಗೆ 5.15 ರ ಸುಮಾರಿನಲ್ಲಿ  ದಾರಿಹೋಕರಿಗೆ ಆನೆಗಳು ಕಂಡವು. ಕಾಡಾನೆಗಳು ನಾಡಿನಲ್ಲಿ ಏಕಾಏಕಿ ಕಾಣಿಸಿಕೊಂಡಿದ್ದರಿಂದ ಜನರು ಭಯಭೀತರಾದರು.ತಿ.ನರಸೀಪುರ ತಾಲ್ಲೂಕಿನ ಸುತ್ತಮುತ್ತ ಗ್ರಾಮಗಳಲ್ಲಿ ಒಂದು ವಾರದ ಹಿಂದೆಯೇ ಆನೆಗಳು ಪ್ರತ್ಯಕ್ಷವಾಗಿವೆ. ಬನ್ನೂರು ಹೋಬಳಿಯ ತುರಗನೂರು ಬಳಿಯ ಕೊಡಗಳ್ಳಿ ಬಳಿ ಮಂಗಳವಾರ ಗದ್ದೆಯಲ್ಲಿ ಆನೆಗಳೆರಡು ಕಾಣಿಸಿಕೊಂಡು ಬೆಳೆ ನಾಶ ಮಾಡುತ್ತಿದ್ದವು. ಕೂಡಲೇ ಅರಣ್ಯ ಇಲಾಖೆ ಸಿಬ್ಬಂದಿ  ಸ್ಥಳಕ್ಕೆ ತೆರಳಿ ಗ್ರಾಮಸ್ಥರ ಸಹಾಯದೊಂದಿಗೆ ಪಟಾಕಿಗಳನ್ನು ಸಿಡಿಸಿ ಆನೆಗಳನ್ನು ಓಡಿಸಿದ್ದರು.ಗದ್ದೆಯಿಂದ ಓಡಿಸಿದ ಆನೆಗಳು ಕಾಡಿಗೆ ಮರಳಿವೆ ಎಂದು ಅಧಿಕಾರಿಗಳು ಮತ್ತು ಸಿಬ್ಬಂದಿ ನಿರಾಳರಾದರು. ಆದರೆ ಅದೇ ಆನೆಗಳು 24 ಕಿ.ಮೀ. ಹಾದಿಯನ್ನು ಸವೆಸಿ ಮೈಸೂರು ನಗರವನ್ನು ತಲುಪಿದೆ ಎಂದು ಹೇಳಲಾಗುತ್ತಿದೆ. ಕೊಡಗಳ್ಳಿ ಬಳಿ ಎರಡು ಆನೆಗಳು ಒಂದು ದಿನದ ಹಿಂದೆ ಪ್ರತ್ಯಕ್ಷವಾಗಿರುವುದು ಈ ಅನುಮಾನಕ್ಕೆ ಮತ್ತಷ್ಟು ಪುಷ್ಟಿ ನೀಡಿದೆ.ಮೈಸೂರಿಗೆ ಬಂದದ್ದು ಇದೇ  ಮೊದಲು

 ಮೈಸೂರಿಗೆ ಕಾಡಾನೆಗಳು ತಪ್ಪಿಸಿಕೊಂಡು ಬಂದು ದಾಂಧಲೆ ನಡೆಸಿದ್ದು ಇತಿಹಾಸದಲ್ಲಿ ಇದೇ ಮೊದಲು. ಸಾಂಸ್ಕೃತಿಕ ನಗರಿ ಎಲ್ಲ ರೀತಿಯಿಂದಲೂ ಸುರಕ್ಷಿತ ಎಂದೇ ಹೇಳಲಾಗುತ್ತದೆ. ಮೈಸೂರು ನಗರ ಸುತ್ತಮುತ್ತಲ ಕಾಡಿನಿಂದ ದೂರವೇ ಇದೆ. ಚಾಮುಂಡಿ ಬೆಟ್ಟದ ಅರಣ್ಯ ಪ್ರದೇಶದಿಂದ ಚಿರತೆಗಳು ಆಗಾಗ್ಗೆ ಪ್ರತ್ಯಕ್ಷವಾಗುತ್ತಿದ್ದವು. ಇಲ್ಲವೆ ವಾಹನಗಳಿಗೆ ಸಿಲುಕಿ ಅಪಘಾತಕ್ಕೀಡಾಗುತ್ತಿದ್ದವು. ಆದರೆ ಕಾಡಿನಿಂದ ನಗರಕ್ಕೆ ಬಂದ ಆನೆಗಳೆರಡು ದಾಂಧಲೆ ನಡೆಸಿ ವ್ಯಕ್ತಿ, ಹಸುಗಳನ್ನು ಬಲಿ ತೆಗೆದುಕೊಂಡಿದ್ದರಿಂದ ಜನತೆ ಭಯಭೀತರಾಗಿದ್ದಾರೆ.ಮೈಸೂರು ಅರಮನೆ ಆನೆಯೊಂದು 6 ವರ್ಷಗಳ ಹಿಂದೆ ರಸ್ತೆಗಿಳಿದು ಜನರನ್ನು ಆತಂಕಕ್ಕೀಡು ಮಾಡಿತ್ತು. ಆದರೆ ದಾಂಧಲೆ ಮಾಡಿರಲಿಲ್ಲ. ನಗರದ ಸಯ್ಯಾಜಿರಾವ್ ರಸ್ತೆ, ಅಗ್ರಹಾರ ಸೇರಿದಂತೆ ವಿವಿಧೆಡೆ ಸುತ್ತಾಡಿಸಿ ಜನರಿಗೆ ದಿಗಿಲು ಮೂಡಿಸಿದ್ದ ಆನೆ ಕೊನೆಗೆ ಜಯನಗರದಲ್ಲಿ ಸೆರೆಸಿಕ್ಕಿತ್ತು.ಚುಚ್ಚುಮದ್ದಿಗೆ ಜಗ್ಗದ ಗಜ

ನಗರದ ಜನನಿಬಿಡ ಸ್ಥಳಗಳಲ್ಲಿ ಕಾಣಿಸಿಕೊಂಡ ಪುಂಡಾನೆಯನ್ನು ಸೆರೆಹಿಡಿಯಲು ಅರಣ್ಯ ಇಲಾಖೆ ಸಿಬ್ಬಂದಿ ಹರಸಾಹಸಪಟ್ಟರು. ಆನೆ ಬೆನ್ನತ್ತಿದ ಸಿಬ್ಬಂದಿ ಓವೆಲ್ ಮೈದಾನದಲ್ಲಿ ಅರವಳಿಕೆ ಚುಚ್ಚುಮದ್ದು ಹಾಕಿದರು. ಆದರೂ ಆನೆಯ ಅಟಾಟೋಪ ನಿಲ್ಲಲಿಲ್ಲ. ಒಟ್ಟು ಐದು ಚುಚ್ಚುಮದ್ದುಗಳನ್ನು ನೀಡಲಾಯಿತು.`ಆನೆಯ ತೂಕಕ್ಕೆ ಅನುಗುಣವಾಗಿ ಅರವಳಿಕೆ ಚುಚ್ಚುಮದ್ದನ್ನು ನೀಡಲಾಗುತ್ತದೆ. ಒಂದು ಟನ್ ತೂಕದ ಆನೆಗೆ 1 ಎಂಎಲ್ ಅರವಳಿಕೆ ಚುಚ್ಚುಮದ್ದನ್ನು ಸಾಮಾನ್ಯವಾಗಿ ನೀಡಲಾಗುತ್ತದೆ. ಎರಡು ಚುಚ್ಚುಮದ್ದಿಗೆ ಆನೆಗಳು ಪ್ರಜ್ಞಾಶೂನ್ಯವಾಗಿ ಮಂಪರಿಗೆ ಹೋಗುತ್ತವೆ. ಆದರೆ ನಾಲ್ಕು ಚುಚ್ಚುಮದ್ದುಗಳನ್ನು ಯಶಸ್ವಿಯಾಗಿ ನೀಡಿದರೂ ಗಂಡಾನೆ ಪ್ರಜ್ಞೆ ತಪ್ಪುವುದು ತಡವಾಯಿತು. ಎಟ್ರೊಪಿನ್ ಹೈಡ್ರೊಫ್ಲೋರೈಡ್‌ನ್ನು ಅರವಳಿಕೆ ಚುಚ್ಚುಮದ್ದಿಗೆ ಬಳಸಲಾಗುತ್ತದೆ~ ಎಂದು ಪಶುವೈದ್ಯ ಡಾ.ಖಾದರ್ ತಿಳಿಸಿದರು.

ಶಾಲಾ-ಕಾಲೇಜುಗಳಿಗೆ ರಜೆ

ಕಾಡಿನಿಂದ ನಾಡಿಗೆ ಆನೆಗಳು ಬಂದ ವಿಷಯ ತಿಳಿಯುತ್ತಿದ್ದಂತೆ ನಗರದ ಜನತೆ ಬೆಚ್ಚಿಬಿದ್ದರು. ಆನೆ ದಾಳಿಗೆ ವ್ಯಕ್ತಿಯೊಬ್ಬ ಬಲಿಯಾಗಿದ್ದಾನೆ ಎಂಬ ಸುದ್ದಿ ಎಲ್ಲೆಡೆ ಹರಡತೊಡಗಿತು. ಪೋಷಕರು ಮಕ್ಕಳನ್ನು ಶಾಲೆಗೆ ಕಳುಹಿಸಲು ಹಿಂದೇಟು ಹಾಕುತ್ತಿದ್ದರು. ಆನೆ ದಾಳಿಯ ಗಂಭೀರತೆಯನ್ನು ಅರಿತ ಜಿಲ್ಲಾಡಳಿತ ಬೆಳಿಗ್ಗೆಯೇ ಶಾಲಾ-ಕಾಲೇಜಿಗೆ ರಜೆ ಎಂದು ಘೋಷಿಸಿತು. ಇದರಿಂದ ಪೋಷಕರು ಮತ್ತು ಮಕ್ಕಳು ನಿರಾಳರಾದರು. ರಜೆ ಘೋಷಿಸಿದ್ದರೂ ಕೆಲವರು ಶಾಲಾ-ಕಾಲೇಜಿಗೆ ಬಂದು ಹೋಗುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.10 ಲಕ್ಷ ಜನಸಂಖ್ಯೆ ಇರುವ ಮೈಸೂರು ನಗರಕ್ಕೆ ಆನೆಗಳು ದಾಳಿ ಮಾಡಿವೆ. ಇಂತಹ ಸಂದರ್ಭಗಳಲ್ಲಿ ಪೊಲೀಸ್ ಇಲಾಖೆ ಕಾನೂನು ಮತ್ತು  ಸುವ್ಯವಸ್ಥೆ ಕಾಪಾಡಲು ಹಾಗೂ ಜನತೆಯನ್ನು ರಕ್ಷಿಸಲು ಆನೆಗಳಿಗೆ ಗುಂಡೇಟು ಪ್ರಯೋಗಿಸಬಹುದು. ಆದರೆ ಯಾವುದೇ ಗುಂಡೇಟು ಪ್ರಯೋಗಿಸದೆ  ಅವುಗಳನ್ನು ಜೀವಂತವಾಗಿ ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿರುವುದು ವಿಶ್ವದಲ್ಲೇ ಪ್ರಥಮ ಎಂದು ಅರಣ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಕೌಶಿಕ್ ಮುಖರ್ಜಿ ತಿಳಿಸಿದರು.ಎರಡು ಕಾಡಾನೆಗಳ ದಾಂಧಲೆಯಿಂದ ನಗರದಲ್ಲಿ ಉಂಟಾಗಿದ್ದ ಆತಂಕದ ವಾತಾವರಣವನ್ನು, ಅರಣ್ಯ ಮತ್ತು ಪೊಲೀಸ್ ಇಲಾಖೆ ಹಾಗೂ ಜಿಲ್ಲಾಡಳಿತದ ನೆರವಿನಿಂದ ಹೆಚ್ಚು ಅವಘಡ ಸಂಭವಿಸದಂತೆ ಯಶಸ್ವಿ ಕಾರ್ಯಾಚರಣೆ ನಡೆಸಲಾಗಿದೆ ಎಂದು ಅರಣ್ಯ ಸಚಿವ ಸಿ.ಎಚ್.ವಿಜಯಶಂಕರ್ ತಿಳಿಸಿದರು.  ಈ ಆನೆಗಳನ್ನು ನಿಯಂತ್ರಿಸಲು ವೈಜ್ಞಾನಿಕ ಪದ್ಧತಿಯ ಮೂಲಕ ಅರವಳಿಕೆ ಮದ್ದು ನೀಡಿ ಆನೆಗಳನ್ನು ಜೀವಂತವಾಗಿ ಸೆರೆ ಹಿಡಿಯಲಾಗಿದೆ. ಒಂದು ಕಡೆ ಜನರ ನಿಯಂತ್ರಣ ಮತ್ತೊಂದು ಕಡೆ ಆನೆಗಳ ನಿಯಂತ್ರಣವನ್ನು ವ್ಯವಸ್ಥಿತವಾಗಿ ನಿರ್ವಹಿಸಲಾಗಿದೆ ಎಂದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.