ಶನಿವಾರ, ಮೇ 28, 2022
26 °C

ಹುಡಾ ನಿವೇಶನ ಬೆಲೆ ದುಬಾರಿ: ಆರೋಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾಸನ: ನಗರಾಭಿವೃದ್ಧಿ ಪ್ರಾಧಿಕಾರದ ಸ್ವಾಧೀನದಲ್ಲಿರುವ ನಾಗರಿಕ ಸೌಕರ್ಯ ನಿವೇಶನಗಳ ಮಾರಾಟಕ್ಕಾಗಿ ಪ್ರಾಧಿಕಾರ ಅರ್ಹ ಮತ್ತು ಆಸಕ್ತ ಸಂಘ ಸಂಸ್ಥೆಗಳು, ಸರ್ಕಾರಿ ಇಲಾಖೆ ಅಥವಾ ಇನ್ನಿತರರಿಂದ ಅರ್ಜಿ ಆಹ್ವಾನಿಸಿದ್ದು, ನಿವೇಶನಗಳಿಗೆ ದುಬಾರಿ ಬೆಲೆ ನಿಗದಿ ಮಾಡಲಾಗಿದೆ ಎಂದು ಅನೇಕ ಸಂಘ ಸಂಸ್ಥೆಗಳವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.ಪ್ರಾಧಿಕಾರ ಎಸ್.ಎಂ. ಕೃಷ್ಣ ನಗರದಲ್ಲಿ ಮಾರಾಟಕ್ಕೆ ನಿಗದಿಮಾಡಿರುವ ನಿವೇಶನಗಳ ದರಕ್ಕಿಂತ ಸಿ.ಎ. ನಿವೇಶನಗಳು ದುಬಾರಿಯಾಗುತ್ತಿವೆ. ಸಿ.ಎ. ನಿವೇಶನಗಳನ್ನು 30 ವರ್ಷಗಳ ಮಟ್ಟಿಗೆ ಲೀಸ್ ನೀಡುವುದರಿಂದ ಇಷ್ಟು ದುಬಾರಿ ಹಣ ತೆರಲು ಯಾವ ಸಂಸ್ಥೆಯೂ ಸಿದ್ಧ ಇರುವುದಿಲ್ಲ ಎಂದು ಸಂಸ್ಥೆಗಳವರು ನುಡಿದಿದ್ದಾರೆ.ಪ್ರಾಧಿಕಾರಿ ನೀಡಿರುವ ಜಾಹೀರಾತಿನಲ್ಲಿ ನಿವೇಶನಗಳಿಗೆ 560 ರಿಂದ ಒಂದು ಸಾವಿರ ರೂಪಾಯಿ ವರೆಗೆ ಬೆಲೆ ನಿಗದಿ ಮಾಡಲಾಗಿದೆ. `ಹಿಂದುಳಿದ ವರ್ಗದವರು, ಸರ್ಕಾರಿ ಇಲಾಖೆಗಳು ಮುಂತಾಗಿ ಕೆಲವರಿಗೆ ಶೇ. 50ರ ರಿಯಾಯಿತಿ ದರದಲ್ಲಿ ನಿವೇಶನ ಹಂಚಿಕೆಗೆ ಅವಕಾಶ ಇರುತ್ತದೆ. ಆದರೆ ಹುಡಾ ನೀಡಿರುವ ಜಾಹೀರಾತಿನಲ್ಲಿ ಈ ಬಗ್ಗೆ ಉಲ್ಲೇಖ ಇಲ್ಲ. ಅರ್ಜಿ ಆಹ್ವಾನಿಸಿದ್ದರಲ್ಲಿ ತಪ್ಪಿಲ್ಲ, ಆದರೆ ಹುಡಾಗೆ ಹೊಸ ಅಧ್ಯಕ್ಷರು ಹಾಗೂ ಮಂಡಳಿ ನೇಮಕವಾಗುವವರೆಗೆ ನಿವೇಶನ ಹಂಚಿಕೆಯನ್ನು ಮಾಡಬಾರದು' ಎಂದು ಹುಡಾ ನಿಕಟಪೂರ್ವ ಅಧ್ಯಕ್ಷ ನವಿಲೆ ಅಣ್ಣಪ್ಪ ಒತ್ತಾಯಿಸಿದ್ದಾರೆ.`ನಮ್ಮ ಅವಧಿಯಲ್ಲೇ ನಿವೇಶನಗಳ ಪಟ್ಟಿ ಮಾಡಿ ಅವುಗಳನ್ನು ಆಸಕ್ತ ಸಂಘ-ಸಂಸ್ಥೆಗಳಿಗೆ ನೀಡಲು ತೀರ್ಮಾನಿಸಲಾಗಿತ್ತು. ಆದರೆ ನಿವೇಶನಗಳಿಗೆ ದರ ನಿಗದಿ ಮಾಡಿರಲಿಲ್ಲ. ಈಚೆಗೆ ಸರ್ಕಾರ ಸ್ಟಾಂಪ್ ಡ್ಯೂಟಿ ಹೆಚ್ಚಳ ಮಾಡಿರುವ ಹಿನ್ನೆಲೆಯಲ್ಲಿ ಹುಡಾದವರು ನಿವೇಶನದ ದರವನ್ನೂ ಹೆಚ್ಚಿಸಿರುವ ಸಾಧ್ಯತೆ ಇದೆ. ಆದರೆ ಕೆಲವು ಅಶಕ್ತ ವರ್ಗಗಳವರಿಗೆ ನೆರವು ನೀಡುವ ಉದ್ದೇಶ ಈಡೇರಬೇಕಾದರೆ ಅವರಿಗೆ ಕಡಿಮೆ ದರದಲ್ಲಿ ನಿವೇಶನ ನೀಡುವುದು ಅಗತ್ಯ. ನನ್ನ ಅವಧಿಯಲ್ಲಿ ಹಿಂದುಳಿದ ವರ್ಗದವರ ಹಾಸ್ಟೆಲ್, ಸರ್ಕಾರಿ ಕಚೇರಿಗಳ ನಿರ್ಮಾಣ ಸೇರಿದಂತೆ ವಿವಿಧ ಉದ್ದೇಶಗಳಿಗೆ ಕಡಿಮೆ ದರದಲ್ಲಿ ನಿವೇಶನ ನೀಡಿದ್ದೇನೆ' ಎಂದು ಅಣ್ಣಪ್ಪ ನುಡಿದಿದ್ದಾರೆ.ಸರ್ಕಾರಿ ಕಚೆರಿಗಳಿಗೆ ಕೊಡಿ: ಜಿಲ್ಲೆಯಲ್ಲಿ ಅನೇಕ ಸರ್ಕಾರಿ ಕಚೇರಿಗಳು ಬಾಡಿಗೆ ಕಟ್ಟಡಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವಾಗ ನಿವೇಶನಗಳನ್ನು ಈ ರೀತಿ ಹಂಚಿಕೆ ಮಾಡುವುದು ಸೂಕ್ತವಲ್ಲ. ಯಾವುದೇ ಬಡಾವಣೆಯಲ್ಲಿ ಒಂದು ಸರ್ಕಾರಿ ಕಚೇರಿ ಬಂದರೆ ಹಂತಹಂತವಾಗಿ ಆ ಬಡಾವಣೆ ಅಭಿವೃದ್ಧಿಯಾಗುತ್ತದೆ. ಜತೆಗೆ ಜನರಿಗೂ ಅನುಕೂಲವಾಗುತ್ತದೆ. ಈ ನಿಟ್ಟಿನಲ್ಲಿ ಬಾಡಿಗೆ ಕಟ್ಟಡಗಳಲ್ಲಿ ನಡೆಯುತ್ತಿರುವ ಸರ್ಕಾರಿ ಕಚೆರಿಗಳಿಗೆ ಆದ್ಯತೆಯ ಮೇರೆಗೆ ನಿವೇಶನಗಳನ್ನು ನೀಡಬೇಕು' ಎಂದು ಕಾಂಗ್ರೆಸ್‌ನ ಹರಿಗೋಪಾಲ್ ಒತ್ತಾಯಿಸಿದ್ದಾರೆ.ಹುಡಾಗೆ ಅಧ್ಯಕ್ಷರ ನೇಮಕವಾಗುವವರೆಗೆ ನಿವೇಶನಗಳನ್ನು ಹಂಚಿಕೆ ಮಾಡಬಾರದು. ಈ ಬಗ್ಗೆ ಸಚಿವ ವಿನಯಕುಮಾರ್ ಸೊರಕೆ ಅವರನ್ನು ಭೇಟಿಮಾಡಿ ಮನವಿ ಮಾಡುತ್ತೇವೆ. ಜನಪರ ಕಾಳಜಿ ಹೊಂದಿರುವ ಸಚಿವರು ಸೂಕ್ತ ತೀರ್ಮಾನ ಕೈಗೊಳ್ಳುತ್ತಾರೆ ಎಂಬ ಭರವಸೆ ಇದೆ ಎಂದು ಹರಿಗೋಪಾಲ್ ನುಡಿದಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.