ಭಾನುವಾರ, ಮೇ 16, 2021
28 °C

ಹುಡುಗಿಯರಿಗೆ ಎಂ.ಟೆಕ್ ಯಾಕೆ ಬೇಡ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಮ್ಮ ದೇಶ ಬಹಳ ಮುಂದುವರಿದೇತಿ ಅನ್ನೋದೇನೋ ಖರೇ. ಆದರ ನಮ್ಮ ಜನಗಳು ಯಾಕ್ ಹೀಂಗ್ ಮಾಡ್ತಾರೋ? ಹುಡುಗೀರು ಅಂದ ಕೂಡಲೇ  ಆರ್ಟ್ಸ್ ಅಥವಾ ಹೆಚ್ಚೆಂದ್ರೆ ಕಾಮರ್ಸ್‌ಗೆ ಸೇರಿಸಿ ಬಿಡ್ತಾರ. ಸೈನ್ಸ್ ಅಂದರೆ ಹುಡುಗರೇ ಓದಬೇಕಂತೆ!ಈಗ ಕಾಲ ಬದಲಾಗ್ಯದ. ಹೆಣ್ಣು ಮಕ್ಕಳೂ ಸೈನ್ಸ್ ಓದ್‌ತಿದ್ದಾರ‌್ರೀ ಅಂತ ಘಟ್ಟಸಬ್ಯಾಡರಿ. ನೀವು ಹೇಳೂ ಮಾತು ಸ್ವಲ್ಪ ಖರೇ. ಆದ್ರ ಈ `ಬಿಇ~ ಅನ್ನೂದನ್ನು ಹೆಣ್ಣು ಮಕ್ಕಳಿಗೆ ಕಲಿಸೋದಂದ್ರ ಯಾಕೊ ಹಿಂಜರಿಕೆ ಕಣ್ರಿ. ಅಂತಾದ್ರೊಳಗೆ ಮುಂದುವರಿದ ತಂದಿ-ತಾಯಿ ಅನಿಸಕೊಂಡವರು ಬಿಇ ಕೂಡ ತಮ್ಮ ಮಗಳಂದಿರಿಗೆ ಕಲಿಸ್ಯಾರ.

 

ಆದ್ರ ಎಂಇ ಅಥವಾ ಎಂಟೆಕ್ ಅಂದ ಕೂಡಲೇ `ಬ್ಯಾಡ ಬಿಡವ್ವ~ ಅನ್ನೋರೆ ಹೆಚ್ಚು. ಅಂತಾದ್ರೊಳಗ ನಮ್ಮಂತವರು ಒಂದಿಷ್ಟು ಹುಡುಗ್ಯಾರು ಎಂಟೆಕ್ ಓದಿವಿ ಅಂದ್ರ ಏಳು ಜನ್ಮದ ಪುಣ್ಯ.ನಮ್ಮ ಇಡೀ ದೇಶದಾಗ ಬಿಇ ಆದ ಹುಡಿಗಿಯರೊಳಗೆ ಎಂಟೆಕ್ ಮುಗಿಸಿದವರು ಬರೀ ಶೇ 3. ಆದ್ರ ಎಂಬಿಬಿಎಸ್‌ನಾಗ ಹೀಂಗಿಲ್ಲರಿ. ಅದರಾಗ ಶೇ 8ರಷ್ಟು ಹೆಣ್ಣುಮಕ್ಕಳು ಎಂಡಿ ಅಥವಾ ಎಂಎಸ್ ಆಗ್ಯಾರಂತ.ಇನ್ನ ಬಿಎಸ್ಸಿ ಆದ ಹುಡುಗಿಯರೊಳಗೆ ಶೇ 88 ಎಂಎಸ್ಸಿ ಓದ್ಯಾರಂತ. ಇದರ ಅರ್ಥ ಹುಡುಗ್ಯಾರು ಎಂಟೆಕ್ ಗೊಡವಿಗೆ ಹೋಗದ ಎಂಎಸ್ಸಿ ಮುಗಿಸಿಕೊಂಡು ಮನ್ಯಾಗಿರೀ ಅಂದಹಾಂಗ.ಕಷ್ಟದ ಮೆಟ್ಟಿಲು

ಹಂಗ ನೋಡಿದ್ರ 1939 ರಿಂದ 1982 ತನಕ ತಂತ್ರಜ್ಞಾನದೊಳಗೆ ಸಂಶೋಧನೆ ಮಾಡಿದವರು ಬರೀ 5 ಮಂದಿ ಹೆಣ್ಣು ಮಕ್ಕಳು. 1931ರಲ್ಲಿ ಕಮಲಾ ಸಹಾನಿಯವರು ತಂತ್ರಜ್ಞಾನದ ಮೇಲೆ ಪಿಎಚ್‌ಡಿ ಮಾಡಿದ್ರಂತ. 1945ರೊಳಗೆ ಅಣ್ಣಾಮಣಿ ಎನ್ನುವ ಹೆಣ್ಣು ಮಗಳು ಸಿ.ವಿ.ರಾಮನ್ ಟೀಮಿನ್ಯಾಗ ಇದ್ದು ತಂತ್ರಜ್ಞಾನದ ಮೇಲೆ ಪಿಎಚ್‌ಡಿ ಮಾಡಿದ್ರಂತ.ಇನ್ನು  ಎ.ಚಟರ್ಜಿ (1944), ದರ್ಶನ ರಂಗನಾಥನ್ (1967), ಬಿ.ವಿಜಯಲಕ್ಷ್ಮೀ  (1982) ಎಂಬುವವರು ತಂತ್ರಜ್ಞಾನದ ಸಂಶೋಧನೆ ಮಾಡಿದ್ದ ಬಿಟ್ರ ತಂತ್ರಜ್ಞಾನ ಸಂಶೋಧನೆ ಅನ್ನೊದು ಮಹಿಳೆಯರಿಗೆ ಗಗನ ಕುಸುಮ ಅನ್ನಿಸಿಬಿಟ್ಟಿತ್ತು.ಇತ್ತೀಚೆಗೆ `ನಾವೂ ವಿಶ್ವೇಶ್ವರಯ್ಯ ಆಗಬೇಕಂತ~ ಬಾಯಿ ಬಾಯಿ ಬಿಟ್ಕೊಂಡು ಕುಂತ ಬಿಇ ಮುದುಕಿಯರ ಸಂಖ್ಯೆ ಬೇಕಾದಷ್ಟು ಅದ.ಬಿಇ ಆದ ಹುಡಿಗಿಯರನ್ನು ಮುಂದ ಯಾಕ ಓದ್ಲಾಕ ಕಳಸುವದಿಲ್ಲ ಅಂತಿರೇನು? ಅಯ್ಯೋ ಅದೊಂದು ದೊಡ್ಡ ಕತಿ. ಹುಡಗಿ ಬಿಇ ಮುಗಸಿದ  ಕೂಡಲೇ ಚೊಲೋ ವರ ಹುಡುಕಿ ಮದುವಿ ಮಾಡೋಣ ಅಂತ ತಂದಿ-ತಾಯಿ ಕುಣಿತಾರ.ಮದುವಿ ಒಲ್ಲೆ ಅಂತ ಹುಡಗಿ ಅಂದ್ರ ಅಕ್ಕ-ಪಕ್ಕದವರು, ಬಳಗದವರು ಹೀಂಗ ಎಲ್ಲರನ್ನೂ ಕರಿಸಿ ಬುದ್ಧಿ ಹೇಳಸ್ತಾರ. ಬಿಇ ಆದ ಹುಡಗಿ ಒದರಿ ಒದರಿ ಸುಮ್ಮನಾಗಿ ಮದುವಿ ಮಾಡ್ಕೊಬೇಕು ಅಷ್ಟ.ಇಷ್ಟರ ಮ್ಯೋಲೆ ಓದೇ ತೀರತೀನಿ ಅಂದ್ರ `ನಿನ್ನ ಜೊತೆಗೆ ಯಾರ ಬರಬೇಕ ಬೇ. ಒಂದ ಹುಡುಗೀನ ದೂರ ಊರಾಗ ಬಿಡತಾರೇನ ಬೇ~ ಅಂತ ಹೇಳಿ ಬಾಯಿ ಮುಚ್ಚಸತಾರ್. ಹೆಣ್ಣಿಗೆ ಮದುವೆ, ಮಕ್ಕಳು ಇವೇ ಸಮಾಜದಲ್ಲಿ ಬೆಲೆ ನೀಡುವ ವಸ್ತುಗಳೆಂದುಕೊಂಡ ಭಾರತೀಯ ಶಿಷ್ಟಾಚಾರ, ಅವಳ ಅಧ್ಯಯನದ ಹಸಿವನ್ನ, ತವಕವನ್ನು ಮನದಾಳದಲ್ಲಿ ಇಂಗಿಸಿ ಬಿಡತದ.ಇಂದಿನ ವಿದ್ಯಮಾನ ನೋಡಿದ್ರ ನಮಗೆ ಕಾಣೋದು, ತಾಂತ್ರಿಕ ಶಿಕ್ಷಣದ ಕಡೆ ಮುಖ ಮಾಡಿದವರಲ್ಲಿ  ಹುಡುಗಿಯರೇ ಹೆಚ್ಚು. ಅದರಲ್ಲಿ  ಮೇಲುಗೈ ಸಾಧಿಸಿದವರಲ್ಲೂ ಅವರ ಮುಂದ.ಆದರೆ ಸಾಮಾಜಿಕ ಕಟ್ಟುಪಾಡುಗಳಿಗೆ ಒಳಗಾಗಿ ಮದುವೆ, ಮಕ್ಕಳು, ಸಂಸಾರ ಭಾರವೇ ಹೆಚ್ಚಾಗಿ ಎಂಟೆಕ್ ನಂತಹ ಶಿಕ್ಷಣವನ್ನು ಮುಂದುವರಿಸಾಕ ಆಗೂದಿಲ್ಲ. ತಮಗ ತಾವ ಅಡುಗೆ ಮನೆಗೆ ಸೀಮಿತಗೊಳಿಸಿಕೊಳ್ಳುವುದೂ ಒಂದು ತರಹ ಮಹಿಳೆಯ ಮೇಲೆ ಭಾರತೀಯ ಪರಂಪರೆ ಎಸಗುವ ಶೋಷಣೆ.ಇನ್ನೂ ಇದನ್ನೆಲ್ಲಾ ದಾಟಿದ ಕೆಲವು ಹುಡುಗಿಯರು ಸ್ನಾತಕೋತ್ತರ ಶಿಕ್ಷಣವನ್ನು ಪೂರೈಸಿದರೂ, ಅದರ ಆಶಯವಾದ ಮುಂದಿನ ಸಂಶೋಧನೆಯ ಶಿಕ್ಷಣದ ಗುರಿಯನ್ನು ಗಾಳಿಗೆ ತೂರಿ ಅಲ್ಲಿಗೆ ತಮ್ಮ ಓದಿಗ ಮುಕ್ತಾಯ ಹಾಡ್ತಾರ.ಮತ್ತದೇ ಜಿಡ್ಡುಗಟ್ಟಿದ ಸಾಂಪ್ರದಾಯಿಕತೆಗೆ ಹೊರಳುವ ಅನಿವಾರ್ಯತೆ ಇಂದಿನ ಸ್ನಾತಕೋತ್ತರ ಎಂಜಿನಿಯರಿಂಗ್ ಪದವಿ ಮುಗಿಸಿದ ಯುವತಿಯರದು.ಸ್ನಾತಕೋತ್ತರ ಮುಗಿಸಿದ ಯುವತಿಯರ ವಯಸ್ಸು 23ರ ಆಜೂಬಾಜು. ಅವರ ಜೊತೆಗಾರರು ಮದುವೆಯಾಗಿ ಮಕ್ಕಳು  ಹೆರುವ ಬಯಕೆಯಲ್ಲಿರುತ್ತಾರೆ. ಓದಿಸಿ ಆರ್ಥಿಕವಾಗಿ ದಣಿದ ತಂದೆ-ತಾಯಿಗಳು ಒಂದು ಕಡೆ ಆದ್ರ, ಇನ್ನೂ ಮದುವಿಯಾಗಿಲ್ಲ ಎಂದು ಹಂಗಿಸುವ, ಅನುಮಾನಿಸುವ ಸಮಾಜದ ಕೆಟ್ಟ ಮನಸ್ಸಗಳು ಇನ್ನೊಂದು ಕಡಿ.

 

ಇದೆಲ್ಲದರ ವಿರುದ್ಧ ಹೋರಾಡಿ ಸಂಶೋಧನಾ ಕಾರ್ಯವನ್ನು ಕೈಗೆತ್ತಿಕೊಳ್ಳುವ ಭಾರತೀಯ ಮಹಿಳೆ ನಿಜಕ್ಕೂ ಇಂದಿನ ಮಹಿಳಾ ದಿನಾಚರಣೆಯ ರೂವಾರಿ ಅನ್ನಬಹುದು.

ಹೂ ಅರಳುವುದು ಸೂರ್ಯನ ಕಡೆಗೆ. ಆದರೆ ನಮ್ಮ ದಾರಿ ಬರಿ ಚಂದ್ರನ ವರೆಗೆ ಮಾತ್ರ ಯಾಕ ಅನ್ನುವುದು ಇಂದಿನ ಯುವತಿಯರ ಸರ್ವೆ ಸಾಮಾನ್ಯ ಪ್ರಶ್ನೆ.ಪರದೇಶದಾಗ ಮಹಿಳಾ ವಿಜ್ಞಾನಿಗಳು ಸಾಂಸಾರಿಕ ಬದುಕಿಗೆ ಮಹತ್ವ ನೀಡದೇ ಸಂಶೋಧನಾತ್ಮಕ ಜೀವನಕ್ಕೆ ಹೆಚ್ಚಗಿ ಒತ್ತುಕೊಟ್ಟು ತಂತ್ರಜ್ಞಾನ ಲೋಕದಲ್ಲೂ ಸ್ತ್ರೀಶಕ್ತಿಯನ್ನು ಮೆರೆತಾ ಅದಾರ.ಆದರೆ ಭಾರತೀಯ ಯುವತಿಯರು ಶಿಕ್ಷಣವನ್ನು ಕೇವಲ ದುಡಿಮೆ, ಪ್ರತಿಷ್ಠೆ, ಮಕ್ಕಳ ವಿದ್ಯಾಭ್ಯಾಸಕ್ಕ ಸೀಮಿತ ಮಾಡಿ ತಮ್ಮ ಛಾಪನ್ನು ಕೇವಲ ಸಾಂಸಾರಿಕತೆಯಲ್ಲಿ ಬಿಂಬಿಸ್ತಾ ಇದ್ದಾರ.ವಿದ್ಯಾವಂತ ಯುವಕರು ಕೂಡ ಎಲ್ಲೋ ಒಂದು ಕಡೆ ಇನ್ನೂ ಸಾಂಪ್ರದಾಯಿಕತೆಯಲ್ಲಿ ಮಿಂದು ಹೋಗ್ಯಾರ. ಮಹಿಳಾ ಉನ್ನತ ಶಿಕ್ಷಣದ ಬಗ್ಗೆ ಗೌರವ ಕಡಿಮೆಯಾಗಿದೆ. ಇದಕ್ಕೆಲ್ಲ ಕಾರಣ ಅಹಂ. `ಇವಳಿಂದಾಗಿ ನನ್ನನ್ನು ಮಂದಿ ಗುರುತಿಸೋದು ಶುರು ಆದ್ರ ಹ್ಯಾಂಗಪ್ಪಾ~ ಅನ್ನೂ ಸಣ್ಣ ಅಳುಕು. ಮನೆ, ಮಕ್ಕಳನ್ನ ಎಲ್ಲಿ ನಿರ್ಲಕ್ಷ್ಯ ಮಾಡ್ತಾಳೊ ಎನೋ ಅಂಬೋ ಅಪನಂಬಿಕೆ.ಹೀಗಾಗಿ ಮದುವಿ ಆದ ಮ್ಯಾಲೂ ಎಷ್ಟೊ ಹೆಣ್ಣುಮಕ್ಕಳಿಗ ಓದೋ  ಅವಕಾಶಗಳಿಲ್ಲ. ಅವಕಾಶ ಕಲ್ಪಿಸಿದರೂ ಅವಳೂ ಮನೆಗೆಲಸ, ಮಕ್ಕಳ ಪಾಲನೆ ಎಲ್ಲದನ್ನು ತೂಗಿಸಿಕೊಂಡ ಓದಬೇಕು.ಉನ್ನತ ಶಿಕ್ಷಣ ಅಂದ್ರ ನಮ್ಮನ್ನ ನಾವು ದಿನವಿಡೀ ಅದಕ್ಕಾಗಿ ಅರ್ಪಿಸಿಕೊಳ್ಳುವ ಮಟ್ಟಕ್ಕೆ ಓದಬೇಕು. ಹೀಗಾಗೇ ಮಹಿಳೆಗೆ ಸಂಸಾರದ ಜೊತೆ ಉನ್ನತ ಶಿಕ್ಷಣ ಕಷ್ಟ ಆಗ್ಯದ. ವಿದ್ಯಾವಂತ ಗಂಡ ಸಂಸಾರದ ಬಹುಪಾಲು ಜವಾಬ್ದಾರಿಯನ್ನು ಅವಳ ಶಿಕ್ಷಣದ ಅವಧಿಯಲ್ಲಿ ವಹಿಸಿಕೊಂಡರೆ ಅವಳು ಕೂಡಾ ಯಶಸ್ವಿ ಆಗಬಹುದು.ಕೇವಲ ಎಂಎನ್‌ಸಿಗಳಲ್ಲಿ ದುಡಿಯೋದೇ ಮಹಿಳೆಗೆ ತಂತ್ರಜ್ಞಾನದಲ್ಲಿ ಕೊಟ್ಟ ಉಡುಗೊರಿ, ಅದ ಅಕಿಯ ದೊಡ್ಡ ಯಶಸ್ಸು ಅಂಥ ಹೇಳೋದು ಸರಿ ಅಲ್ಲ. ಸಂಶೋಧನೆಗಳಲ್ಲೂ ಮಹಿಳೆಗೆ ಅವಕಾಶ ಸಿಕ್ಕರ ಮಾತ್ರ ಹೊಸ ತಾಂತ್ರಿಕ ಅವಿಷ್ಕಾರಗಳಿಗೆ ಸ್ತ್ರೀ ಬೆಳಕಾಗ್ತಾಳ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.