ಮಂಗಳವಾರ, ಮೇ 18, 2021
22 °C
ಗುಂಡ್ಲುಪೇಟೆ ತಾಲ್ಲೂಕಿನಲ್ಲಿ ವಿಚಿತ್ರ ಪದ್ಧತಿ

ಹುತ್ತದ ಕೋವಿ ಸೇರುವ ಶಿಶುವಿನ ಶವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಾಮರಾಜನಗರ: ಹಸುಳೆಗಳು ಮೃತಪಟ್ಟರೆ ದೇಹವನ್ನು ಶವಸಂಸ್ಕಾರ ಮಾಡದೆ ಹುತ್ತದ ಕೋವಿಯೊಳಕ್ಕೆ ಹಾಕುವ ಪದ್ಧತಿ ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕಿನಲ್ಲಿ ಜೀವಂತವಾಗಿದೆ.ಗುಂಡ್ಲುಪೇಟೆ ತಾಲ್ಲೂಕಿನ ಕಬ್ಬಹಳ್ಳಿ ಗ್ರಾಮದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಜೂನ್  4ರಂದು ಅನ್ನಪೂರ್ಣಮ್ಮ ಎಂಬುವವರು ಅವಳಿ ಮಕ್ಕಳಿಗೆ ಜನ್ಮ ನೀಡಿದರು. ಮೊದಲು ಹೆಣ್ಣು ಮಗು ಜನಿಸಿದೆ. ಆ ನಂತರ ಗಂಡು ಮಗು ಜನಿಸಿದ್ದು, ಹೆರಿಗೆಗೆ ಮೊದಲೇ ಮೃತಪಟ್ಟಿತ್ತು ಎನ್ನಲಾಗಿದೆ.ಅನ್ನಪೂರ್ಣಮ್ಮ ಹಾಗೂ ಪತಿ ಸಿದ್ದಮಲ್ಲಪ್ಪ ಅವರದು ಬಂಡೀಪುರ ರಾಷ್ಟ್ರೀಯ ಉದ್ಯಾನದ ಅಂಚಿನಲ್ಲಿರುವ ಯಲಚೆಟ್ಟಿ ಗ್ರಾಮ. ಕಬ್ಬಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನುರಿತ ವೈದ್ಯರಿರುವ ಕಾರಣ ಈ ಕೇಂದ್ರದಲ್ಲಿಯೇ ಅನ್ನಪೂರ್ಣಮ್ಮ ಚಿಕಿತ್ಸೆ ಪಡೆದಿದ್ದರು. ಹೆಣ್ಣುಮಗುವಿನ ತೂಕ ಕಡಿಮೆಯಿದ್ದ ಹಿನ್ನೆಲೆಯಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಕೆ.ಆರ್. ಆಸ್ಪತ್ರೆಗೆ ದಾಖಲಿಸುವಂತೆ ವೈದ್ಯರು ಸೂಚಿಸ್ದ್ದಿದರು.ಆದರೆ ಆಸ್ಪತ್ರೆಗೆ ತೆರಳುವ ಮೊದಲು ಅನ್ನಪೂರ್ಣಮ್ಮ ಅವರ ಕುಟುಂಬದ ಸದಸ್ಯರು ಕಬ್ಬಹಳ್ಳಿ ಹೊರವಲಯದ ಜಮೀನೊಂದರಲ್ಲಿರುವ ಹುತ್ತದ ಕೋವಿಯೊಳಕ್ಕೆ ಮಗುವಿನ ಶವ ಹಾಕಿದ್ದಾರೆ. ನಂತರ, ಅದರ ಮೇಲೆ ಪಾಪಸ್ ಕಳ್ಳಿ ಹಾಗೂ ಕಲ್ಲು ಇಟ್ಟು ಮೈಸೂರಿಗೆ ತೆರಳಿದ್ದಾರೆ. ಈ ಹುತ್ತವು ರಾಜ್ಯ ವಿಧಾನಸಭೆಯ ಪ್ರಥಮ ಮಹಿಳಾ ಸ್ಪೀಕರ್ ದಿ. ಕೆ.ಎಸ್. ನಾಗರತ್ನಮ್ಮ ಅವರ ಸಮಾಧಿ ಬಳಿಯಲ್ಲಿಯೇ ಇದೆ.ಗುರುವಾರ ಬೆಳಿಗ್ಗೆ ನಾಯಿಗಳು ಹುತ್ತದಲ್ಲಿದ್ದ ಮಗುವಿನ ಮೃತದೇಹವನ್ನು ರಸ್ತೆಯಲ್ಲಿ ಎಳೆದಾಡಿಕೊಂಡು ತಿನ್ನುತ್ತಿದ್ದ ದೃಶ್ಯ ಕಂಡ ಗ್ರಾಮಸ್ಥರು ಹೌಹಾರಿದರು. ತಕ್ಷಣವೇ ನಾಯಿಗಳನ್ನು ಓಡಿಸಿ ಮಗುವಿನ ಅಳಿದುಳಿದ ಅಂಗಾಂಗಗಳನ್ನು ಹೂತು ಹಾಕಿದರು. ಸ್ಥಳಕ್ಕೆ ಕಬ್ಬಹಳ್ಳಿಯ ಉಪ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದರು.ಏನಿದು ಪದ್ಧತಿ?

ನವಜಾತ ಶಿಶು ಮೃತಪಟ್ಟರೆ ಹುತ್ತದ ಕೋವಿಗಳ ಮೇಲ್ಭಾಗವನ್ನು ಕೊಂಚ ಕತ್ತರಿಸಲಾಗುತ್ತದೆ. ಆ ನಂತರ ಹುತ್ತದ ಒಳಭಾಗದಲ್ಲಿರುವ ದೊಡ್ಡ ಕೋವಿಯೊಳಕ್ಕೆ ಮಗುವಿನ ದೇಹವನ್ನು ಇಳಿಬಿಡಲಾಗುತ್ತದೆ. ಆ ಕೋವಿಯ ಮೇಲ್ಭಾಗದಲ್ಲಿ ಪಾಪಸ್ ಕಳ್ಳಿ ಇಟ್ಟು ಕಲ್ಲಿನಿಂದ ಮುಚ್ಚುವ ಪದ್ಧತಿ ಗುಂಡ್ಲುಪೇಟೆ ಹಾಗೂ ಚಾಮರಾಜನಗರ ತಾಲ್ಲೂಕಿನಲ್ಲಿ ಆಚರಣೆಯಲ್ಲಿದೆ.`ವಯಸ್ಕರು ಮೃತಪಟ್ಟರೆ ಅವರಿಗೆ ಧಾರ್ಮಿಕ ವಿಧಿವಿಧಾನ ಅನುಸರಿಸಿ ಶವಸಂಸ್ಕಾರ ನೆರವೇರಿಸುತ್ತೇವೆ. ಅಂತೆಯೇ, ಈ ಭಾಗದಲ್ಲಿ ನವಜಾತ ಶಿಶುಗಳು ಮೃತಪಟ್ಟರೆ ಹುತ್ತದ ಕೋವಿ ಅಗೆದು ಅದರೊಳಗೆ ಮೃತದೇಹ ಇಟ್ಟು ಮಣ್ಣು ಮುಚ್ಚಲಾಗುತ್ತದೆ. ಹಿಂದಿನಿಂದಲೂ ಈ ಪದ್ಧತಿ ಅನುಸರಿಸಿಕೊಂಡು ಬರಲಾಗುತ್ತಿದೆ. ಎಲ್ಲ ಜಾತಿಗಳಲ್ಲೂ ಈ ಆಚರಣೆ ಇದೆ' ಎಂದು ಕಬ್ಬಹಳ್ಳಿಯ ವಯೋವೃದ್ಧೆ ಬಸಮ್ಮ `ಪ್ರಜಾವಾಣಿ'ಗೆ ವಿವರಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.