ಮಂಗಳವಾರ, ಮಾರ್ಚ್ 2, 2021
26 °C

ಹುಬ್ಬಳ್ಳಿಯಲ್ಲಿ ಕೂತ್ಕೊಂಡು ಮಂಡ್ಯಕ್ಕೂ ಪಾಠ!

ಪ್ರಜಾವಾಣಿ ವಾರ್ತೆ ಪ್ರವೀಣ ಕುಲಕರ್ಣಿ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿಯಲ್ಲಿ ಕೂತ್ಕೊಂಡು ಮಂಡ್ಯಕ್ಕೂ ಪಾಠ!

ಹುಬ್ಬಳ್ಳಿ: ಇದುವರೆಗೆ ಅಂಬೆಗಾಲು ಹಾಕುತ್ತಿದ್ದ ನಾಲ್ಕು ವರ್ಷದ ಹಸುಳೆ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ ಈಗ ಇದ್ದಕ್ಕಿದ್ದಂತೆ ಓಡಲು ಆರಂಭಿಸಿದೆ. ಅದೂ `ದೊಡ್ಡಣ್ಣ~ರಾದ ಬೇರೆ ವಿವಿಗಳು ನೋಡಿ ಬೆಚ್ಚಿ ಬೀಳುವಷ್ಟು ವೇಗದಲ್ಲಿ!ಹೌದು, ಉಳಿದ ವಿವಿಗಳು ಉಪನ್ಯಾಸಕರ ಕೊರತೆಯ ಕೊರಗಿನಲ್ಲಿದ್ದರೆ ಕಾನೂನು ವಿವಿ ಮಾತ್ರ ಕೇಂದ್ರ ಸರ್ಕಾರದ ಸಂವಹನ ಮತ್ತು ಮಾಹಿತಿ ತಂತ್ರಜ್ಞಾನದ ಮೂಲಕ ಶಿಕ್ಷಣ ಯೋಜನೆ (ಎನ್‌ಎಂಇಐಸಿಟಿ) ಲಾಭವನ್ನು `ಅರ್ಥ~ಪೂರ್ಣವಾಗಿ ಪಡೆದುಕೊಂಡು ತನ್ನೆಲ್ಲ ಕಾಲೇಜುಗಳಲ್ಲಿ ಉಪನ್ಯಾಸದ ನೇರ ಪ್ರಸಾರ ಆರಂಭಿಸಿದೆ.ಕೇಂದ್ರ ಮಾನವ ಸಂಪನ್ಮೂಲ ಇಲಾಖೆ ಎನ್‌ಎಂಇಐಸಿಟಿಗಾಗಿ ರೂ 1.25 ಕೋಟಿ ವೆಚ್ಚದಲ್ಲಿ ಹೈ ಸ್ಪೀಡ್ ಇಂಟರ್‌ನೆಟ್ ಸೌಲಭ್ಯ ಒದಗಿಸಿದ್ದು, `ಎ-ವಿವ್~ ಎಂಬ ಹೊಸ ಸಾಫ್ಟ್‌ವೇರ್‌ಅನ್ನೂ ಪೂರೈಸಿದೆ. ಈ ತಂತ್ರಜ್ಞಾನದಿಂದ ಕಾನೂನು ವಿವಿ ಸಂಪರ್ಕ ಜಾಲದ ಯಾವುದೇ ಕಾಲೇಜಿನಲ್ಲಿ ನಡೆಯುವ ಉಪನ್ಯಾಸ ತರಗತಿಗೆ ಉಳಿದ ಕಾಲೇಜಿನ ವಿದ್ಯಾರ್ಥಿಗಳು ತಮ್ಮ ಕಾಲೇಜಿನ ಕೋಣೆಗಳಲ್ಲಿ ಕುಳಿತುಕೊಂಡೇ ಹಾಜರಾಗಬಹುದು. ಅಂದರೆ ಹುಬ್ಬಳ್ಳಿಯಲ್ಲಿ ನಡೆಯುವ ಪಾಠವನ್ನು ಮಂಡ್ಯದ ವಿದ್ಯಾರ್ಥಿ ತನ್ನ ಕಾಲೇಜಿನಲ್ಲೇ ಕೇಳಿಸಿಕೊಳ್ಳಬಲ್ಲ.ಕಾಲೇಜಿನ ಕೋಣೆಯಲ್ಲಿ ಒದಗಿಸಲಾದ ಬೃಹತ್ ಪರದೆ ಮೇಲೆ ಉಪನ್ಯಾಸ ನೇರ ಪ್ರಸಾರ ಆಗುತ್ತದೆ. ಯಾವುದೇ ಊರಿನಲ್ಲಿ ಕುಳಿತ ವಿದ್ಯಾರ್ಥಿ ತನಗೆ ಏನಾದರೂ ಸಮಸ್ಯೆಗಳು ಇದ್ದರೆ ಕೂಡಲೇ ಕರ್ಸರ್ ಒತ್ತುವ ಮೂಲಕ `ಕೈ~ ಮೇಲೆತ್ತಬಹುದು. ಆಗ ಉಪನ್ಯಾಸಕರು ಆ ವಿದ್ಯಾರ್ಥಿಯ ಸಂದೇಹವನ್ನು ಆಲಿಸುತ್ತಾರೆ. ಅದಕ್ಕೆ ಆ ಕ್ಷಣದಲ್ಲೇ ಪರಿಹಾರವನ್ನೂ ಸೂಚಿಸುತ್ತಾರೆ. ಬೇರೆ ಊರಿನಲ್ಲಿ ಕುಳಿತ ವಿದ್ಯಾರ್ಥಿಗಳೂ ಈ ಸಂವಾದವನ್ನು ಆಲಿಸುತ್ತಾರೆ.ಕೇಂದ್ರ ಮಾನವ ಸಂಪನ್ಮೂಲ ಇಲಾಖೆ ಈ ಯೋಜನೆಯನ್ನು ಪ್ರಕಟಿಸಿದ ತಕ್ಷಣ ಅದನ್ನು ಲಬಕ್ಕನೆ ಹಿಡಿದುಕೊಂಡವರು ಕಾನೂನು ವಿಶ್ವವಿದ್ಯಾಲಯದ ಕುಲಪತಿ ಡಾ.ಜೆ.ಎಸ್. ಪಾಟೀಲ. ಎನ್‌ಎಂಇಐಸಿಟಿಯನ್ನು ಅತಿ ಪರಿಣಾಮಕಾರಿಯಾಗಿ ಬಳಸುತ್ತಿರುವ ದೇಶದ ಹತ್ತು ವಿದ್ಯಾಸಂಸ್ಥೆಗಳಲ್ಲಿ ಕಾನೂನು ವಿವಿ ಕೂಡ ಒಂದಾಗಿದೆ.

ಕಾನೂನು ವಿವಿಯ ಕೇಂದ್ರ ಕಚೇರಿಯಲ್ಲಿ ಉಪನ್ಯಾಸದ ನೇರ ಪ್ರಸಾರಕ್ಕೆ ಒಂದು ವಿಶೇಷ ಸ್ಟುಡಿಯೊ ವ್ಯವಸ್ಥೆಯನ್ನು ಮಾಡಲಾಗಿದೆ. ವಿವಿ ವ್ಯಾಪ್ತಿಯ 28 ಕಾಲೇಜುಗಳು ಈಗಾಗಲೇ `ಎ-ವಿವ್~ ಪಾಠಶಾಲೆಗಳನ್ನು ಹೊಂದಿದ್ದು, ಮಿಕ್ಕುಳಿದವು ಆ ಹಾದಿಯಲ್ಲಿವೆ. ಎನ್‌ಎಂಇಐಸಿಟಿಗೆ ಭಾರತ ಸಂಚಾರ ನಿಗಮ ಉಚಿತವಾಗಿ ಇಂಟರ್‌ನೆಟ್ ಸೌಲಭ್ಯವನ್ನು ಒದಗಿಸುತ್ತಿದೆ.ನೇರ ಪ್ರಸಾರವಾಗುವ ಉಪನ್ಯಾಸಗಳು ಬಳಿಕ ಡಿಜಿಟಲ್ ಲೈಬ್ರರಿಯಲ್ಲಿ ಭದ್ರವಾಗಿ ಉಳಿಯುತ್ತವೆ. ಯಾವುದೇ ವಿದ್ಯಾರ್ಥಿ ಬೇಕೆಂದಾಗ ಆ ಪಾಠವನ್ನು ಮತ್ತೆ ಕೇಳಲು ಅವಕಾಶ ಕಲ್ಪಿಸಲಾಗಿದೆ. ಕೇಳಿದ ಪಾಠಗಳಿಗೆ ವಿದ್ಯಾರ್ಥಿಗಳಿಂದ ಮೌಲ್ಯಮಾಪನವೂ ನಡೆಯುತ್ತದೆ. ಇದರಿಂದ ಉಪನ್ಯಾಸದ ಗುಣಮಟ್ಟ ಕೂಡ ಕುಲಪತಿಗಳ ಕೈಬೆರಳ ತುದಿಯಲ್ಲಿ ಲಭ್ಯವಾಗುತ್ತದೆ. ಪ್ರತಿ ಸೋಮವಾರ ಕುಲಪತಿಗಳೇ ವಿಶೇಷ ಪಾಠ ತೆಗೆದುಕೊಳ್ಳುತ್ತಾರೆ. ಅದರ ವೀಕ್ಷಕರ ಸಂಖ್ಯೆ ಅಧಿಕ ಎಂಬುದು ವೆಬ್‌ಸೈಟ್ ನೋಡಿದವರಿಗೆ ಗೊತ್ತಾಗುತ್ತದೆ.ಕಾನೂನು ವಿಶ್ವವಿದ್ಯಾಲಯಕ್ಕೆ ತಜ್ಞರು ಭೇಟಿ ನೀಡಿದಾಗಲೆಲ್ಲ ಅಲ್ಲಿ ನಡೆಯುವ, ಸಮಾರಂಭ, ಉಪನ್ಯಾಸಗಳನ್ನು ಎಲ್ಲ ಕಾಲೇಜುಗಳಲ್ಲಿ ಅದರ ನೇರ ಪ್ರಸಾರ ಆಗುವಂತೆ ನೋಡಿಕೊಳ್ಳುತ್ತಾರೆ ಡಾ. ಪಾಟೀಲ. `ಹೊಸ ವ್ಯವಸ್ಥೆ ಆರಂಭಿಸಿ ಈಗಷ್ಟೇ ಎರಡು ತಿಂಗಳು ಗತಿಸಿದೆ. ಒಂದು ರೂಪಾಯಿಯಲ್ಲೇ 90 ರೂಪಾಯಿಗೆ ಆಗುವಷ್ಟು ಕೆಲಸ ಮಾಡಿದ ತೃಪ್ತಿಕೊಟ್ಟಿದೆ. ಉಪನ್ಯಾಸಕರ ಕೊರತೆಯನ್ನೂ ಈ ವ್ಯವಸ್ಥೆ ಮೂಲಕ ನೀಗಿಸಿಕೊಳ್ಳುವ ಯತ್ನ ಮಾಡಿದ್ದೇವೆ~ ಎಂದು ಅವರು ಹೇಳುತ್ತಾರೆ.ಡಿಜಿಟಲ್ ಪಾಠಕೋಣೆಗಳ ವ್ಯವಸ್ಥೆಯಿಂದಾಗಿ ಯಾವ ಕಾಲೇಜಿನಲ್ಲಿ ಏನು ನಡೆಯುತ್ತಿದೆ ಎಂಬುದನ್ನು ಕುಲಪತಿಗಳು ಕುಳಿತಲ್ಲೇ ವೀಕ್ಷಿಸಲು ಸಾಧ್ಯವಾಗಿದೆ. ಕಾನೂನು ವಿವಿ ಕುಲಪತಿ ಇವರಾದರೂ ತಾಂತ್ರಿಕ ವಿವಿ ಕುಲಪತಿಯಂತೆ ತಂತ್ರಜ್ಞಾನದ ಆಳ-ಅಗಲದ ಅರಿವು ಅವರಿಗಿದೆ.ಆದ್ದರಿಂದಲೇ ಆಡಳಿತ ನಡೆಸುವುದು ಅವರಿಗೆ ಸಲೀಸಾಗಿದೆ. `ಭಾರತೀಯ ಬೇರು, ಜಾಗತಿಕ ಮೇರು~ ಎಂಬುದು ಡಾ.ಪಾಟೀಲ ಯಾವಾಗಲೂ ಪಠಿಸುವ ಮಂತ್ರವಾಗಿದೆ.

ಮುಂದೇನೈತೆ?

ಕಾನೂನು ವಿಶ್ವವಿದ್ಯಾಲಯ, ರಾಜ್ಯ ವಕೀಲರ ಸಂಘದ ಸಹಯೋಗದಲ್ಲಿ `ಭಾರತದಲ್ಲಿ ಕಾನೂನು ಶಿಕ್ಷಣದ ಮರುಚಿಂತನೆ~ ಎಂಬ ವಿಷಯವಾಗಿ ಅಂತರರಾಷ್ಟ್ರೀಯ ಕಾರ್ಯಾಗಾರವನ್ನು ಮೇ 26 ಮತ್ತು 27ರಂದು ಆಯೋಜಿಸಿದೆ. ದೇಶ-ವಿದೇಶಗಳ ಕಾನೂನು ಪಂಡಿತರು ಈ ಕಾರ್ಯಾಗಾರದಲ್ಲಿ ಪಾಲ್ಗೊಳ್ಳಲಿದ್ದಾರೆ.

ಸಾಗಾ ಆಫ್ ಕೆಎಸ್‌ಎಲ್‌ಯು, ವಿಸನ್ ಕೆಎಸ್‌ಎಲ್‌ಯು, ಲೀಗಲ್ ಎಜುಕೇಶನ್ ಇನ್ ಕರ್ನಾಟಕ: ಎ ರೋಡ್ ಮ್ಯಾಪ್ ಹಾಗೂ ಬುಲೆಟಿನ್ ಆಫ್ ಲಾ ಕಾಲೇಜಿಸ್ ಅಫಿಲೇಟೆಡ್ ಟು ಕೆಎಸ್‌ಎಲ್‌ಯು ಎಂಬ ನಾಲ್ಕು ಕೃತಿಗಳು ಬಿಡುಗಡೆಗೊಳ್ಳಲಿವೆ. ಬುಲೆಟಿನ್‌ಗಾಗಿ ಎಲ್ಲ ಕಾಲೇಜುಗಳು ಕಾತರದಿಂದ ಕಾದಿವೆ. ಏಕೆಂದರೆ, ಈ ಕಾಲೇಜುಗಳಿಗೆ ಎ, ಬಿ, ಸಿ, ಡಿ ಎಂಬ ಶ್ರೇಣಿ ನೀಡಲಾಗುತ್ತಿದೆ.

 

ಕಪ್ಪು ಕೋಟು ಏಕೆ?

ವಸಾಹತುಶಾಹಿಯ ದ್ಯೋತಕವಾಗಿ ನಮ್ಮ ವಕೀಲರು ಈಗಲೂ ಕಪ್ಪು ಕೋಟುಗಳನ್ನೇ ಏಕೆ ಧರಿಸಬೇಕು? ಯೂರೋಪಿನಲ್ಲಿ ತುಂಬಾ ಚಳಿ ಇರುತ್ತದೆ. ಅಲ್ಲಿಯ ವಕೀಲರು ಕೋಟು ಧರಿಸಿದರೆ ಅದಕ್ಕೊಂದು ಅರ್ಥ ಇರುತ್ತದೆ. ನಮ್ಮ ವಾತಾವರಣಕ್ಕೆ ಖಾದಿ ಬಟ್ಟೆಯೇ ಸರಿ. ಖಾದಿ ಬಟ್ಟೆಯನ್ನೇ ಸಮವಸ್ತ್ರ ಮಾಡುವತ್ತ ನ್ಯಾಯಾಂಗ ವ್ಯವಸ್ಥೆ ಗಮನಹರಿಸಬೇಕು.-ಡಾ.ಜೆ.ಎಸ್. ಪಾಟೀಲ, ಕಾನೂನು ವಿಶ್ವವಿದ್ಯಾಲಯ ಕುಲಪತಿ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.