ಶುಕ್ರವಾರ, ಫೆಬ್ರವರಿ 26, 2021
26 °C
ಸಿಸಿಟಿವಿ ಕ್ಯಾಮೆರಾಗಳಿಂದ 20 ಪೊಲೀಸ್ ಠಾಣೆಗಳ ಮಧ್ಯೆ ತಳಕು

ಹುಬ್ಬಳ್ಳಿ ಕಮಿಷನರೇಟ್‌ಗೇ `ಕಣ್ಗಾವಲು'!

ರಾಜೇಶ್ ರೈ ಚಟ್ಲ / ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ ಕಮಿಷನರೇಟ್‌ಗೇ `ಕಣ್ಗಾವಲು'!

ಹುಬ್ಬಳ್ಳಿ: ಮಹಿಳೆಯರ ಕತ್ತಿನಿಂದ ಚಿನ್ನಾಭರಣ ಎಗರಿಸುವ, ಬೈಕ್ ಕದ್ದೊಯ್ಯುವ, ಸಂಚಾರ ನಿಯಮ ಉಲ್ಲಂಘಿಸಿ ಪರಾರಿಯಾಗುವ ಅಪರಾಧಿಗಳೇ ಹುಷಾರ್... ಇನ್ನು ಮುಂದೆ ಇಂತಹ ದುಷ್ಕೃತ್ಯಗಳಿಗೆ ಹುಬ್ಬಳ್ಳಿ-ಧಾರವಾಡ ಅವಳಿನಗರದಲ್ಲಿ ಅವಕಾಶವಿಲ್ಲ!ರಾಜ್ಯದಲ್ಲೇ ಮೊದಲ ಬಾರಿಗೆ ಇಡೀ ನಗರ (ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಎಲ್ಲ 20 ಠಾಣೆಗಳ ವ್ಯಾಪ್ತಿ), ಅತ್ಯಾಧುನಿಕ ತಂತ್ರಜ್ಞಾನದ, ವಿದೇಶಿ ನಿರ್ಮಿತ ಸಿಸಿಟಿವಿ ಕ್ಯಾಮೆರಾಗಳ ಮೂಲಕ ಶೀಘ್ರದಲ್ಲೇ ಪರಸ್ಪರ ಬೆಸೆದುಕೊಂಡು ದಿನದ 24 ಗಂಟೆಯೂ ಸೂಕ್ಷ್ಮ ಕಣ್ಗಾವಲಿಗೆ ಒಳಪಡಲಿದೆ. `ಡಿಜಿಟಲ್ ಸಿಟಿ ಸರ್ವೇಲನ್ಸ್' ಎಂಬ ಯೋಜನೆಯಡಿ ಎಲ್ಲ ಪೊಲೀಸ್ ಠಾಣೆಗಳನ್ನು `ಪರಸ್ಪರ' ಬೆಸೆಯುವ ವಿಶಿಷ್ಟ ಯೋಜನೆಯಿದು. ಆ ಮೂಲಕ ಅಪರಾಧಗಳಲ್ಲಿ ಭಾಗಿಯಾಗಿ ಪರಾರಿಯಾಗುವವರನ್ನು ಖೆಡ್ಡಾಕ್ಕೆ ಬೀಳಿಸಲು ಪೊಲೀಸ್ ಕಮಿಷನರ್ ಬಿ.ಎ.ಪದ್ಮನಯನ ಸ್ವತಃ ನೆಯ್ದ ಬಲೆಯಿದು.ಅಂದಾಜು ರೂ1.50 ಕೋಟಿ ವೆಚ್ಚದಲ್ಲಿ ಕಾರ್ಯರೂಪಕ್ಕೆ ಬರಲಿರುವ ಈ ಯೋಜನೆಯ ಮೊದಲ ಹಂತದಲ್ಲಿ ರೂ50 ಲಕ್ಷ ವೆಚ್ಚದಲ್ಲಿ ಸೂಕ್ಷ್ಮ ಕ್ಯಾಮೆರಾಗಳನ್ನು ಅಳವಡಿಸುವ ಕಾಮಗಾರಿಯನ್ನು ಬೆಂಗಳೂರು ಮೂಲದ ಸ್ಕ್ವಾಡಮ್ ಟೆಕ್ನಾಲಜಿಸ್ ಕಂಪೆನಿಗೆ ಗುತ್ತಿಗೆ ನೀಡಲಾಗಿದೆ. ಕೇಬಲ್‌ಗಳ ಜೋಡಣೆ ಮತ್ತು ಕಂಬಗಳನ್ನು ಅಳವಡಿಸುವ ಕಾರ್ಯ ಕೊನೆ ಹಂತ ತಲುಪಿದ್ದು, ಇದೇ 22ರಂದು ಅಮೆರಿಕಾ ಮತ್ತು ಚೀನಾದಿಂದ ಕ್ಯಾಮೆರಾಗಳು ಬರಲಿವೆ.ಈ ಕುರಿತು `ಪ್ರಜಾವಾಣಿ'ಗೆ ಮಾಹಿತಿ ನೀಡಿದ ಪೊಲೀಸ್ ಕಮಿಷನರ್ ಬಿ.ಎ.ಪದ್ಮನಯನ, `ಸೂಕ್ಷ್ಮ ಕಣ್ಗಾವಲು ಕ್ಯಾಮೆರಾ ತಂತ್ರಜ್ಞಾನ ಬಳಸಿ ಅಪರಾಧ ಕೃತ್ಯ ನಿಯಂತ್ರಿಸುವ ಉದ್ದೇಶದಿಂದ ಬೃಹತ್ ಯೋಜನೆ ರೂಪಿಸಲಾಗಿದೆ. ಇದಕ್ಕಾಗಿ ಜಿಲ್ಲಾಧಿಕಾರಿ ರೂ50 ಲಕ್ಷ ಮಂಜೂರು ಮಾಡಿದ್ದಾರೆ. ಕಮಿಷನರೇಟ್‌ನಲ್ಲಿ ರೂ30 ಲಕ್ಷ ಲಭ್ಯವಿದ್ದು, ಉಳಿದ ಹಣವನ್ನು ಇಲಾಖೆ ಭರಿಸುವ ಭರವಸೆ ಸಿಕ್ಕಿದೆ' ಎಂದರು.ಕಮಿಷನರೇಟ್ ವ್ಯಾಪ್ತಿಯಲ್ಲಿ ಅಲ್ಲಲ್ಲಿ ಅಳವಡಿಸಿದ ಸಿಸಿಟಿವಿ ಕ್ಯಾಮೆರಾಗಳು ಸೆರೆ ಹಿಡಿಯುವ ದೃಶ್ಯಗಳನ್ನು ಎಲ್ಲ 20 ಪೊಲೀಸ್ ಠಾಣೆಗಳಲ್ಲಿ ಸ್ಥಾಪಿಸಿದ ಡಿಜಿಟಲ್ ಪರದೆಯಲ್ಲಿ ಏಕಕಾಲಕ್ಕೆ ಪೊಲೀಸ್ ಅಧಿಕಾರಿಗಳು ವೀಕ್ಷಿಸಲು, ನಿಯಂತ್ರಿಸಲು ಮತ್ತು ಪರಸ್ಪರ ಸಂಭಾಷಣೆ ನಡೆಸಲು, ಸಾರ್ವಜನಿಕ ಧ್ವನಿವರ್ಧಕ ಪ್ರಕಟಣೆ ನೀಡಲು ಸಾಧ್ಯವಾಗುವಂತೆ ಆವಿಷ್ಕರಿಸಿದ ತಂತ್ರಜ್ಞಾನವಿದು. ಕಮಿಷನರೇಟ್ ಕಚೇರಿಯ ನಿಯಂತ್ರಣ ಕೊಠಡಿಯಲ್ಲಿ 64 ಕ್ಯಾಮೆರಾಗಳಲ್ಲಿ ಮೂಡಿದ ದೃಶ್ಯಗಳನ್ನು ಪೊಲೀಸ್ ಕಮಿಷನರ್ ಬೃಹತ್ ಪರದೆಯಲ್ಲಿ ವೀಕ್ಷಿಸಲು ಸಾಧ್ಯವಾಗುವಂತೆ ರೂಪರೇಷೆ ಸಿದ್ಧಪಡಿಸಲಾಗಿದೆ.`ಪೊಲೀಸ್ ಠಾಣೆಗಳಲ್ಲಿ ಏಕಕಾಲಕ್ಕೆ ಅದೇ ಠಾಣೆ ಮತ್ತು ಇತರ ಠಾಣಾ ವ್ಯಾಪ್ತಿಯಲ್ಲಿ ಅಳವಡಿಸಿದ ಕ್ಯಾಮೆರಾಗಳಲ್ಲಿ ಮೂಡುವ ದೃಶ್ಯಗಳನ್ನು ಪರಸ್ಪರ ಹಂಚಿಕೊಂಡು ವೀಕ್ಷಿಸಬಹುದು. ಜೊತೆಗೆ ಆಯಾ ಠಾಣೆಯ ವ್ಯಾಪ್ತಿಯ ಕ್ಯಾಮೆರಾಗಳಲ್ಲಿ ದಾಖಲಾದ ದೃಶ್ಯಗಳನ್ನು ಸಂಗ್ರಹಿಸಿಡಲು ಮತ್ತು ಆ ದೃಶ್ಯಗಳನ್ನು ಯಾವುದೇ ಠಾಣೆಯಿಂದಲೂ ಮರುವೀಕ್ಷಿಸಲು ಸಾಧ್ಯವಾಗಲಿದೆ.ಜೊತೆಗೆ ಏಕಕಾಲಕ್ಕೆ ಧ್ವನಿವರ್ಧಕ ಸಹಾಯದಿಂದ ಸಾರ್ವಜನಿಕ ಪ್ರಕಟಣೆಗೂ ಅವಕಾಶವಿದೆ. ಎರಡನೇ ಹಂತದಲ್ಲಿ ನಿರ್ಬಂಧಿತ ಪ್ರದೇಶಕ್ಕೆ ಅಕ್ರಮ ಪ್ರವೇಶ ಅಥವಾ ಅಪರಿಚಿತ ವಸ್ತುವೊಂದು ನಿಗದಿತ ಸಮಯಕ್ಕೆ ಹೆಚ್ಚು ಸಮಯ ಒಂದೇ ಜಾಗದಲ್ಲಿದ್ದರೆ ಅಥವಾ ಕ್ಯಾಮೆರಾಗಳಿಗೆ ಹಾನಿಯಾದರೆ ಕಟ್ಟೆಚ್ಚರ ನೀಡುವ ವ್ಯವಸ್ಥೆಯನ್ನೂ ಅಳವಡಿಸಲಾಗುವುದು. ಅಪರಾಧಿಗಳ ಪತ್ತೆಗೆ ಈ ತಂತ್ರಜ್ಞಾನ ವರದಾನವಾಗುವ ನಿರೀಕ್ಷೆಯಿದೆ' ಎಂದು ಪದ್ಮನಯನ ತಿಳಿಸಿದರು.

 

`ಡಿಜಿಟಲ್ ಸಿಟಿ ಸರ್ವೇಲನ್ಸ್' ವಿಶೇಷ

ಈ ಯೋಜನೆಯಡಿ ಕ್ಯಾಲಿಫೋರ್ನಿಯಾದ ಸ್ಟಾರ್‌ಡಾಟ್ ಕಂಪೆನಿ ನಿರ್ಮಿತ ಎರಡು ಪ್ರತ್ಯೇಕ ಕ್ಯಾಮೆರಾಗಳನ್ನು ಒಂದೇ ಚೌಕಟ್ಟಿನಲ್ಲಿ (ಡಬಲ್ ಡೋಮ್) ಜೋಡಿಸಿದ, 180 ಡಿಗ್ರಿ ಸುತ್ತುನೋಟದಲ್ಲಿ ದೃಶ್ಯಗಳನ್ನು ಸೆರೆಹಿಡಿಯಬಲ್ಲ, ತಲಾ ರೂ1,57,028 ಬೆಲೆಯ 10 ಕ್ಯಾಮೆರಾ ಮತ್ತು ಚೀನಾ ನಿರ್ಮಿತ ತಲಾ ರೂ45,265 ಬೆಲೆ 15 ಐಪಿ ಬುಲೆಟ್ ಕ್ಯಾಮೆರಾಗಳನ್ನು ಸೂಕ್ಷ್ಮ ಪ್ರದೇಶಗಳಲ್ಲಿ ಅಳವಡಿಸಲಾಗುವುದು.ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಸಾರ್ವಜನಿಕ ಸಹಭಾಗಿತ್ವದಲ್ಲಿ ಈಗಾಗಲೇ ಅಳವಡಿಸಿದ 110 ಕ್ಯಾಮೆರಾಗಳನ್ನೂ ಸೇರಿಸಿಕೊಂಡು ಕೇಬಲ್ ಸಹಾಯದಿಂದ ಪರಸ್ಪರ ಜೋಡಿಸಿ ತಂತ್ರಜ್ಞಾನ ಆವಿಷ್ಕರಿಸಲಾಗಿದೆ ಎಂದು ಗುತ್ತಿಗೆ ವಹಿಸಿರುವ ಸ್ಕ್ವಾಡಮ್ ಟೆಕ್ನಾಲಾಜಿಸ್‌ನ ಸಿಇಒ ರಜನೀಶ್ ಗಂಜ್ಯಾಳ ತಿಳಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.