ಶುಕ್ರವಾರ, ಸೆಪ್ಟೆಂಬರ್ 20, 2019
29 °C

ಹುಬ್ಬಳ್ಳಿ-ಸೊಲ್ಲಾಪುರ ಹೆದ್ದಾರಿ ಸಂಚಾರ ಕಡಿತ

Published:
Updated:

ಬಾಗಲಕೋಟೆ:  ಜಿಲ್ಲೆಯಲ್ಲಿ ಹರಿಯುವ ಕೃಷ್ಣಾ ಮತ್ತು ಘಟಪ್ರಭಾ ನದಿಗಳಲ್ಲಿ ಪ್ರವಾಹದ ಇಳಿಮುಖವಾಗಿದೆ. ಇದೇ ಸಂದರ್ಭದಲ್ಲಿ ಮಲಪ್ರಭಾ ನದಿಯಲ್ಲಿ ಪ್ರವಾಹ ತಲೆದೂರಿದೆ.ಮಲಪ್ರಭಾ ನದಿಯಲ್ಲಿ ಗುರುವಾರ ಬೆಳಿಗ್ಗೆಯಿಂದ ಉಂಟಾಗಿರುವ ಪ್ರವಾಹದಿಂದಾಗಿ ಜಿಲ್ಲೆಯ ಗೋವಿನಕೊಪ್ಪ ಬಳಿ ಸೇತುವೆ ಮೇಲೆ ಸುಮಾರು 4ರಿಂದ 5 ಅಡಿ ನೀರು ಹರಿಯುತ್ತಿರುವುದರಿಂದ ಹುಬ್ಬಳ್ಳಿ-ಸೊಲ್ಲಾಪುರ ರಾಷ್ಟ್ರೀಯ ಹೆದ್ದಾರಿ 218ರ ಸಂಪರ್ಕ ಕಡಿತಗೊಂಡಿದೆ. ಈ ಮಾರ್ಗವಾಗಿ ಸಂಚರಿಸುವ ವಾಹನಗಳು ಗದಗ ಮತ್ತು ರಾಮದುರ್ಗ ಮಾರ್ಗವಾಗಿ ಸುತ್ತುಬಳಸಿ ಹೋಗುತ್ತಿವೆ.ಹೆದ್ದಾರಿ ಸಂಚಾರ ಕಡಿತವಾಗಿರುವುದರಿಂದ ಈ ಮಾರ್ಗದಲ್ಲಿ ಸಂಚರಿಸುವವರಿಗೆ ತೀವ್ರ ತೊಂದರೆ ಯಾಗಿದ್ದು, ಹೆಚ್ಚು ಸಮಯ ವ್ಯಯಿಸಿ ಪ್ರಯಾಸ ದಿಂದ ಅನ್ಯ ಮಾರ್ಗದಲ್ಲಿ ಸಂಚರಿಸಬೇಕಾದ ಅನಿವಾರ್ಯತೆ ನಿರ್ಮಾಣವಾಗಿದೆ.ಮಲಪ್ರಭಾ ಪ್ರವಾಹದಿಂದ ಬಾದಾಮಿ ತಾಲ್ಲೂಕಿನ ಸುಮಾರು 45 ಗ್ರಾಮಗಳ ವ್ಯಾಪ್ತಿಯಲ್ಲಿ ಬೆಳೆಯಲಾಗಿರುವ ಜೋಳ, ಕಬ್ಬು, ಸೂರ್ಯಕಾಂತಿ ಮತ್ತಿತರ ಬೆಳೆ ನೀರಿನಲ್ಲಿ ಮುಳುಗಿದೆ. ನದಿ ವ್ಯಾಪ್ತಿಯಲ್ಲಿ ತೊಂದರೆಗೆ ಒಳಗಾಗುವ ಗ್ರಾಮದ ಜನತೆಗೆ ಮುನ್ಸೂಚನೆ ನೀಡಲಾಗಿದ್ದು, ಸುರಕ್ಷಿತ ಪ್ರದೇಶಕ್ಕೆ ತೆರಳು ಸೂಚಿಸಲಾಗಿದೆ.ಆಲಮಟ್ಟಿ ಜಲಾಶಯದ ಕೆಳಭಾಗದ ಕೃಷ್ಣಾ ನದಿ ವ್ಯಾಪ್ತಿಯಲ್ಲಿ ಬರುವ ಬಾಗಲಕೋಟೆ ಮತ್ತು ಹುನಗುಂದ ತಾಲ್ಲೂಕಿನ ಸುಮಾರು 22ಕ್ಕೂ ಹೆಚ್ಚು  ಹಳ್ಳಿಗಳ ಸುತ್ತಲಿನ ಗದ್ದೆಗಳಲ್ಲಿ ನೀರು ಆವರಿಸಿಕೊಂಡಿದ್ದು, ಇದರಿಂದ ಸಾವಿರಾರು ಎಕರೆ ಕಬ್ಬು, ಮೆಕ್ಕೆಜೋಳ, ಈರುಳ್ಳಿ, ಸಜ್ಜೆ ಮುಂತಾದ ಬೆಳೆಗಳು ಹಾನಿಯಾಗಿವೆ.ಪ್ರವಾಹ ವ್ಯಾಪ್ತಿಯ ಹಳ್ಳಿ ಜನರು ನದಿಯಲ್ಲಿ ಬಟ್ಟೆ ತೊಳೆಯುವುದು ಸೇರಿದಂತೆ ಯಾವುದೇ ಕೆಲಸಕ್ಕೆ ನದಿಗೆ ಇಳಿಯಬಾರದು ಮತ್ತು  ನದಿ ದಡದಲ್ಲಿ ಮೀನು ಹಿಡಿಯಲು ಹೋಗಬಾರದು ಎಂದು ಡಂಗುರ ಸಾರಲಾಗುತ್ತಿದೆ.

ಮುಧೋಳ ತಾಲ್ಲೂಕಿನಲ್ಲಿ ಹರಿಯುವ ಘಟಪ್ರಭಾ ನದಿಯಲ್ಲಿ ಪ್ರವಾಹ ಇಳಿಮುಖವಾಗಿದೆ.ಮಹಾರಾಷ್ಟ್ರ ಮತ್ತು ಬೆಳಗಾವಿ ಜಿಲ್ಲೆಯಲ್ಲಿ ಮಳೆಯಾಗುತ್ತಿರುವುದರಿಂದ ಮತ್ತು ಪ್ರಮುಖ ಜಲಾಶಯಗಳಿಂದ ನೀರನ್ನು ಹೊರಬಿಡುತ್ತಿರುವುದರಿಂದ ಕೃಷ್ಣಾ, ಘಟಪ್ರಭಾ ಮತ್ತು ಮಲಪ್ರಭಾ ನದಿ ದಡದ ಹಳ್ಳಿಗಳಲ್ಲಿ ಯಾವುದೇ ಸಂದರ್ಭದಲ್ಲಿ ಪ್ರವಾಹ ಬರುವ ಸಾಧ್ಯತೆ ಇದ್ದು, ಗ್ರಾಮಸ್ಥರು ಎಚ್ಚರಿಕೆಯಿಂದ ಇರಲು ಜಿಲ್ಲಾಡಳಿತ ಸೂಚನೆ ನೀಡಿದೆ.ಕೆರೂರ ವರದಿ: ಮಹಾರಾಷ್ಟ್ರದಲ್ಲಿ ವ್ಯಾಪಕವಾಗಿ ಸುರಿ ಯುತ್ತಿರುವ ಮಳೆಯಿಂದಾಗಿ ಹಾಗೂ  ಸವದತ್ತಿ ಬಳಿಯ ನವಿಲುತೀರ್ಥ ಅಣೆಕಟ್ಟೆಯಿಂದಲೂ  ನೀರು ಬಿಡುಗಡೆ ಮಾಡಿರುವುದರಿಂದ ಅಪಾರ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಪ್ರವಾಹ ಹೆಚ್ಚಾದರೆ ನದಿ ತಟದ ಗ್ರಾಮ ಗಳಾದ ಆಲೂರ,  ಎಸ್.ಕೆ. ಹಾಗನೂರ ಹಾಗೂ ಗೋವನಕೊಪ್ಪ ಗ್ರಾಮಗಳು ಜಲಾವೃತಗೊಳ್ಳುವ ಸಾಧ್ಯತೆ ಇದೆ. ಕೆಲವು ಗ್ರಾಮಗಳ ಕುಟುಂಬ ಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತಗೊಳಿಸಿದರೂ ಕೆಲವು ಕುಟುಂಬಗಳು ಅಲ್ಲಿಯೇ ಉಳಿದುಕೊಂಡಿವೆ.ತಹಸೀಲ್ದಾರರಿಂದ ಪರಿಶೀಲನೆ

ಕೂಡಲಸಂಗಮ:
  ಕೃಷ್ಣಾ ನದಿಗೆ ಬುಧವಾರ ಭಾರಿ ಪ್ರಮಾಣದಲ್ಲಿ ನೀರು ಹರಿದು ಬಂದರೂ ಗುರುವಾರ ಪ್ರವಾಹ ಸ್ವಲ್ಪ ಮಟ್ಟಿಗೆ ಇಳಿಮುಖವಾಗಿದೆ. ಕೃಷ್ಣಾ ನದಿಯ ದಡದ ಗ್ರಾಮಗಳಾದ ಕಟಗೂರ, ತುರಡಗಿ ಗ್ರಾಮಗಳಿಗೆ ಬಾಗಲಕೋಟೆ ಉಪ ವಿಭಾಗಾಧಿಕಾರಿ ಎ.ಸಿ. ಗೋವಿಂದರಡ್ಡಿ, ಹುನಗುಂದ ತಸೀಲ್ದಾಪ್ ಅಪರ್ಣಾ ಪಾವಟೆ ಭೇಟಿ ನೀಡಿ ಪರಿಶೀಲಿಸಿದರು.ಬ್ಯಾಂಕಿನಲ್ಲಿ ಸಾಲಾ ಮಾಡಿ ಬೀಜ ಗೊಬ್ಬರ ಖರಿದೀಸಿ ಬಿತ್ತನೆ ಮಾಡಿದ್ದೇವೆ. ಪ್ರವಾಹದಿಂದಾಗಿ ಬೆಳೆ ನೀರಿನಲ್ಲಿ ಮುಳುಗಿದೆ. ಪರಿಸ್ಥಿತಿ ಹೀಗಾದರೆ ಹೇಗೆ ಸಾಲ ಮರುಪಾವತಿಸಬೇಕು. ಬದುಕು ಹೇಗೆ ನಡೆಸಬೇಕು ಎಂದು   ಕಟಗೂರದ  ನಿಲ್ಲಮ್ಮ ಗೌಡರ ತನ್ನ ನೋವು ತೋಡಿಕೊಂಡಳು.ಒಂದು ವಾರದಿಂದ ಕೃಷ್ಣಾ ನದಿ ತುಂಬಿ ಹರಿಯುತ್ತಿದೆ. ನಾರಾಯಣಪುರ ಜಲಾಶಯದ ಹಿನ್ನೀರಿನಲ್ಲಿ ಸಾವಿರಾರು ಎಕರೆ ಜಮೀನು ನೀರಿನಲ್ಲಿ ಮುಳುಗಿದೆ. ಪ್ರತಿ ಎರಡು ವರ್ಷಕ್ಕೆ ಇದೇ ಹಾಡು. ರೈತರ ಗೋಳು ಕೇಳುವವರು ಯಾರು ಎಂದು  ತುರಡಗಿಯ ಶಿವಪ್ಪ ಹೊಸೂರ ಹೇಳಿದರು.

Post Comments (+)