ಬುಧವಾರ, ಜನವರಿ 22, 2020
22 °C

ಹುಲ್ಲಿಗೆ ಬಂತು ಚಿನ್ನದ ಬೆಲೆ !

ಪ್ರಜಾವಾಣಿ ವಾರ್ತೆ/ ಆರ್‌.ಚೌಡರೆಡ್ಡಿ Updated:

ಅಕ್ಷರ ಗಾತ್ರ : | |

ಶ್ರೀನಿವಾಸಪುರ: ತಾಲ್ಲೂಕಿನಲ್ಲಿ ಒಣ ಹುಲ್ಲಿಗೆ ಚಿನ್ನದ ಬೆಲೆ ಬಂದಿದೆ. ಹಣ ಕೊಟ್ಟರೂ ಹುಲ್ಲು ಸಿಗದಂಥ ಪರಿಸ್ಥಿತಿ ನಿರ್ಮಾಣವಾಗಿದೆ. ರೈತರು ಬೇಸಿಗೆಗಾಗಿ ಸುಗ್ಗಿ ಕಾಲದಲ್ಲಿ ಹುಲ್ಲು ಖರೀದಿಗೆ ಸ್ಪರ್ಧಿಸುತ್ತಿರುವುದರಿಂದ ಬೆಲೆ ಗಗನಕ್ಕೇರಿದೆ.ಈ ಬಾರಿ ಶ್ರೀನಿವಾಸಪುರ ತಾಲ್ಲೂಕಿ­ನಲ್ಲಿ ಜಿಲ್ಲೆಯಲ್ಲಿಯೇ ಅತಿ ಕಡಿಮೆ ಪ್ರಮಾಣದ ಮಳೆಯಾಗಿದೆ. ಮುಂಗಾರಿನಲ್ಲಿ ರಾಗಿ ಬಿತ್ತನೆ ಮಾಡುವ ಸಮಯದಲ್ಲೇ ಮಳೆ ಕೈಕೊಟ್ಟ ಪರಿಣಾಮವಾಗಿ ನಿರೀಕ್ಷಿತ ವಿಸ್ತೀರ್ಣದಲ್ಲಿ ಬಿತ್ತನೆ ಸಾಧ್ಯವಾಗ­ಲಿಲ್ಲ. ತಡವಾಗಿ ಸುರಿದ ಅಲ್ಪ ಮಳೆಗೆ ಬಿತ್ತನೆ ಮಾಡಲಾದ ಪ್ರದೇಶದಲ್ಲಿ, ಮಳೆ ಕೊರತೆಯಿಂದಾಗಿ ಬೀಜ ಮೊಳಕೆ ಒಡೆಯಲಿಲ್ಲ. ತಡವಾಗಿ ಬಿತ್ತನೆ ಮಾಡಲಾದ ಕಡೆ ಮತ್ತೆ ಮಳೆ ಬಾರದೆ ಬೆಳೆ ಒಣಗಿ ಹಾಳಾಯಿತು.ಇನ್ನು ಗದ್ದೆ ಬಯಲು ಪೂರ್ಣ ಪ್ರಮಾಣದಲ್ಲಿ ಬೀಡು ಬಿದ್ದಿದೆ. ಕೆರೆಗಳಲ್ಲಿ ಹೂಳು ತುಂಬಿ ನೀರು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಕಳೆದುಕೊಂಡ ಮೇಲೆ ಭತ್ತದ ಬೇಸಾಯ ನಿಂತುಹೋಯಿತು. ಕೆಲವು ಕಡೆ ಒಂದು ಕಾಲದಲ್ಲಿ ಭತ್ತದ ಕಣಜಗಳಾಗಿದ್ದ ಗದ್ದೆಗಳಲ್ಲಿ ನೀಲಗಿರಿ ಮರ ಬೆಳೆದು ನಿಂತಿದೆ. ಇದರಿಂದಾಗಿ ಭತ್ತದ ಹುಲ್ಲು ಸಿಗುವುದು ಕನಸಿನ ಮಾತಾಗಿದೆ.ಬೇಸಿಗೆಯಲ್ಲಿ ಜಾನುವಾರು ಮೇವಿಗೆ ರಾಗಿ ಹುಲ್ಲು ಆಧಾರವಾಗಿತ್ತು. ಸುಗ್ಗಿ ಕಾಲದಲ್ಲಿ ಬಣವೆ ಹಾಕಿಟ್ಟು, ಬೇಸಿಗೆ ಕಾಲದಲ್ಲಿ ಹಸಿರು ಮೇವಿನ ಸಮಸ್ಯೆ ಉಂಟಾದಾಗ ಒಣ ಹುಲ್ಲನ್ನು ಆಹಾರವಾಗಿ ನೀಡಲಾಗುತ್ತಿತ್ತು. ಆದರೆ ಈ ಬಾರಿ ಅದೂ ಇಲ್ಲ. ಹಾಗಾಗಿ ಮೇವು ಸಿಗುವ ಸುಗ್ಗಿ ಕಾಲದಲ್ಲೇ ಜಾನುವಾರು ಮೇವಿನ ಸಮಸ್ಯೆ ಎದುರಾಗಿದೆ. ಬೇಸಿಗೆಯಲ್ಲಿ ಗತಿಯೇನು ಎಂಬ ಚಿಂತೆ ಕೃಷಿಕರನ್ನು ಕಾಡುತ್ತಿದೆ.

ತಾಲ್ಲೂಕಿನ ದಕ್ಷಿಣದ ಬಯಲು ಪ್ರದೇಶಕ್ಕೆ ಹೋಲಿಸಿದರೆ, ಉತ್ತರದ ಗುಡ್ಡಗಾಡು ಪ್ರದೇಶದಲ್ಲಿ ಸ್ವಲ್ಪ ಮಟ್ಟಿಗೆ ಮಳೆಯಾಗಿದೆ. ಆ ಪ್ರದೇಶದಲ್ಲಿ ನೆಲಗಡಲೆ ಬೆಳೆಯುವುದರಿಂದ ರಾಗಿ ಹುಲ್ಲು ಸಿಗುತ್ತಿಲ್ಲ. ಅಷ್ಟಿಷ್ಟು ಇದ್ದವರು ಮಾರಲು ಮುಂದೆ ಬರುತ್ತಿಲ್ಲ. ಕಾರಣ ಈಗ ಸೀಮೆ ಹಸು ಸಾಕಣೆ ಸಾಮಾನ್ಯವಾಗಿದೆ. ದುಡಿಯುವ ಎತ್ತುಗಳನ್ನು ಬದಿಗಿಟ್ಟು ಹಾಲಿಗಾಗಿ ಸೀಮೆ ಹಸು ಸಾಕುತ್ತಿರುವುದರಿಂದ ಹುಲ್ಲಿಗೆ ಬೇಡಿಕೆ ಹೆಚ್ಚಿದೆ.  ರಾಗಿ ಒಕ್ಕಣೆ ಮಾಡುವಾಗ ಸಿಗುವ ಗುಬ್ಬಿಗೂ ಆರ್ಥಿಕ ಮೌಲ್ಯ ಬಂದಿದೆ. ಎಮ್ಮೆ ಸಾಕುವ ರೈತರು ತಮ್ಮ ಗ್ರಾಮದಲ್ಲಿ ದೊರೆಯುವ ಗುಬ್ಬನ್ನು ಖರೀದಿಸಿ ಸಂಗ್ರಹಿಸುತ್ತಿ­ದ್ದಾರೆ. ಇದು ಒಣ ಮೇವಿಗೆ ಇರುವ ಬೇಡಿಕೆಯನ್ನು ತಿಳಿಸುತ್ತದೆ. ದನ ಹೊಂದಿರುವ ರೈತರು ಹುಲ್ಲು ಮಾರುವ ಗೋಜಿಗೆ ಹೋಗುವುದಿಲ್ಲ. ಅಪರೂಪಕ್ಕೆ ಯಾರಾದರೂ ಮಾರಲು ಮುಂದಾದರೆ, ರೈತರು ಜೇನುನೊಣದಂತೆ ಸುತ್ತಿಕೊಳ್ಳುತ್ತಾರೆ. ಇದು ಹುಲ್ಲಿನ ಬೆಲೆ ಹೆಚ್ಚಳಕ್ಕೆ ಕಾರಣವಾಗಿದೆ.  ತಾಲ್ಲೂಕಿನಲ್ಲಿ ಹುಲ್ಲು ಸಿಗುತ್ತಿಲ್ಲವಾದ್ದರಿಂದ, ಹುಲ್ಲಿನ ಅಗತ್ಯ ಇರುವ ರೈತರು ಪಕ್ಕದ ತಾಲ್ಲೂಕು ಹಾಗೂ ನೆರೆಯ ಆಂಧ್ರಪ್ರದೇಶದ ಗ್ರಾಮಗಳಿಂದ ಒಣ ಹುಲ್ಲು ಖರೀದಿಸಿ ಟ್ರ್ಯಾಕ್ಟರ್‌ಗಳಲ್ಲಿ ತುಂಬಿಕೊಂಡು ಬರುತ್ತಿದ್ದಾರೆ. ಒಂದು ಟ್ರ್ಯಾಕ್ಟರ್‌ ರಾಗಿ ಹುಲ್ಲು ರೂ. 5000 ಗಡಿ ದಾಟಿದೆ. ಟ್ರ್ಯಾಕ್ಟರ್‌ ಬಾಡಿಗೆ ಸೇರಿದರೆ ರೂ.6 ರಿಂದ 7 ಸಾವಿರ ಬೀಳುತ್ತದೆ. ಈ ಬೆಲೆಯಲ್ಲಿ ಹುಲ್ಲು ತಂದು ದನ, ಕರು ಸಾಕುವುದು ಹೇಗೆ ಎಂಬುದು ಮೀಸಗಾನಹಳ್ಳಿ ಗ್ರಾಮದ ರೈತ ವೆಂಕಟರೆಡ್ಡಿ ಅವರ ಪ್ರಶ್ನೆ.  ಬರದ ಬೇಗೆ ರೈತರ ಹೊಟ್ಟೆ ಸುಡುತ್ತಿದೆ. ಜನ ಏನಾದರೂ ಮಾಡಿ ಹೊಟ್ಟೆ ತುಂಬಿಸಿಕೊಳ್ಳುತ್ತಾರೆ. ಆದರೆ ಈ ದನಗಳನ್ನು ಏನು ಮಾಡುವುದು. ಬಯಲಿನ ಮೇಲೆ ಒಂದು ಪೋಗಿಲ್ಲ. ವಾಮಿಯೂ ಇಲ್ಲ. ಹಾಳು ಮಳೆ ತೊಂದರೆ ಕೊಟ್ಟುಬಿಟ್ಟಿತು. ಇನ್ನೂ ಎಂಥ ಕಾಲ ನೋಡಬೇಕೋ ಏನೋ ಎಂದು ಪನಸಮಾಕನಹಳ್ಳಿ ಗ್ರಾಮದ ಕೃಷಿಕ ಮಹಿಳೆ ವೆಂಕಟಮ್ಮ ಕೈ ಚೆಲ್ಲಿದರು.  ಸುಗ್ಗಿ ಕಾಲದಲ್ಲಿ ಸಾಂಪ್ರದಾಯಿಕ ರಾಗಿ ಹೊಲದ ಸಾಲುಗಳಲ್ಲಿ ಬೆಳೆಯುತ್ತಿದ್ದ ಅವರೆ ಗಿಡಗಳನ್ನು ಕೊಯ್ದು ಒಂದೆಡೆ ಹಾಕಿ ದನ ಬಿಡುತ್ತಿದ್ದರು. ಅವು ಕಗ್ಗನ್ನು ತಿಂದು ನೀರು ಕುಡಿಯುತ್ತಿದ್ದವು. ಆದರೆ ಈ ಬಾರಿ ಅವರೆ ಬೆಳೆಯೂ ಕೈಕೊಟ್ಟಿದೆ. ಹಾಗಾಗಿ ಅವರೆ ಗಿಡವೂ ಇಲ್ಲ. ವಿಶಾಲವಾದ ಮಾವಿನ ತೋಟಗಲ್ಲಿ ಹುರುಳಿ ಬಿತ್ತಲಾಗಿದೆ. ಅದೂ ಮಳೆ ಕೊರತೆಯಿಂದ ಬೆಳೆಯಲಾಗಿಲ್ಲ. ಇನ್ನು ಕುರಿ ಮೇಕೆಗಳಿಗೆ ಹುರುಳಿ ಹೊಟ್ಟು ಸಿಗುವುದಾದರೂ ಹೇಗೆ?ಮೇವಿಗೆ ಹೆದರಿದ ರೈತರು, ತಮ್ಮ ದನಕರುಗಳನ್ನು ಕಡಿಮೆ ಮಾಡಿಕೊಳ್ಳುತ್ತಿದ್ದಾರೆ. ಬರದ ವಾತಾವರಣದಲ್ಲಿ ಜಾನುವಾರಿಗೆ ನಿರೀಕ್ಷಿತ ಬೆಲೆ ಸಿಗುವುದಿಲ್ಲ. ಆದರೂ ಕಡಿಮೆ ಮಾಡಿಕೊಳ್ಳಲೇ ಬೇಕಾದ ಅನಿವಾರ್ಯಕ್ಕೆ ಸಿಕ್ಕಿಬಿದ್ದಿದ್ದಾರೆ.

ಪ್ರತಿಕ್ರಿಯಿಸಿ (+)