ಶನಿವಾರ, ಮೇ 8, 2021
19 °C

`ಹುಲ್ಲು, ಕಳೆಯಿಂದ ಇಂಧನ'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: `ಇಂಧನಕ್ಕೆ ಪರ್ಯಾಯವಾಗಿ ಹಸಿ ಹುಲ್ಲು ಮತ್ತು ಕಳೆ ಗಿಡಗಳಿಂದ ಇಂಧನವನ್ನು ಉತ್ಪಾದಿಸುವ ಕುರಿತು ಪ್ರಯೋಗಾತ್ಮಕ ಸಂಶೋಧನೆ ನಡೆಯುತ್ತಿದೆ' ಎಂದು ಭಾರತೀಯ ವಿಜ್ಞಾನ ಸಂಸ್ಥೆಯ ಮುಖ್ಯ ಸಂಶೋಧನಾ ವಿಜ್ಞಾನಿ ಪ್ರೊ.ಎಚ್.ಎನ್. ಚಾಣಕ್ಯ  ಹೇಳಿದರು.ವಿಶ್ವೇಶ್ವರಯ್ಯ ಕೈಗಾರಿಕಾ ಮತ್ತು ತಾಂತ್ರಿಕ ಸಂಗ್ರಹಾಲಯದಲ್ಲಿ ಶನಿವಾರ ನಡೆದ `ಸುಸ್ಥಿರ ಶಕ್ತಿ' ಪ್ರದರ್ಶನವನ್ನು ಉದ್ಘಾಟಿಸಿ ಅವರು ಮಾತನಾಡಿದರು. `ಹುಲ್ಲು ಮತ್ತು ಕಳೆ ಗಿಡಗಳಿಂದಲೂ ಇಂಧನವನ್ನು ಉತ್ಪಾದಿಸಬಹುದು. ಒಂದು ಟನ್ ಹಸಿ ಹುಲ್ಲಿನಲ್ಲಿ 2 ರಿಂದ 3 ಗ್ಯಾಸ್ ಸಿಲಿಂಡರ್‌ನಷ್ಟು ಇಂಧನವನ್ನು ಉತ್ಪಾದಿಸಬಹುದು. ಈ ಕುರಿತು ಸಂಶೋಧನೆ ನಡೆಯುತ್ತಿದೆ' ಎಂದು ಹೇಳಿದರು.`ಹುಲ್ಲಿನಿಂದ ತಯಾರಾದ ಇಂಧನವನ್ನು ಬಸ್‌ಗಳಲ್ಲಿ ಮತ್ತು ಮನೆಯ ಉಪಯೋಗಕ್ಕೂ ಬಳಸಬಹುದು. ಇಲ್ಲಿ ಉತ್ಪಾದನೆಯಾಗುವ ತ್ಯಾಜ್ಯವನ್ನು ಜೈವಿಕ ಗೊಬ್ಬರವಾಗಿ ಗಿಡಗಳಿಗೂ ಬಳಸಬಹುದು' ಎಂದು ವಿವರಿಸಿದರು. `ಮುಂದಿನ ವರ್ಷಗಳಲ್ಲಿ ಇಂಧನದ ಪೂರೈಕೆಯೇ ಒಂದು ದೊಡ್ಡ ಸವಾಲಾಗಲಿದೆ. ಗ್ಯಾಸ್, ಪೆಟ್ರೋಲ್, ಡಿಸೇಲ್ ಅನೇಕ ಇಂಧನ ಮೂಲಗಳನ್ನು ಮಿತಿಯಿಲ್ಲದೆ ಬಳಸುತ್ತಿರುವುದರಿಂದ ಮುಂದಿನ 20 ವರ್ಷಗಳಲ್ಲಿ ಅವುಗಳು ಮುಗಿಯುವ ಹಂತಕ್ಕೆ ಬಂದಿವೆ' ಎಂದು ವಿಷಾದಿಸಿದರು.`ನಮಗೆ ಬೇಕಾದ ಇಂಧನಗಳ ಅವಶ್ಯಕತೆಯನ್ನು ಪೂರೈಸಿಕೊಳ್ಳಲು ಹೊಸ ಸಂಶೋಧನೆಯನ್ನು ಕೈಗೊಳ್ಳಬೇಕಾದ ಅಗತ್ಯವಿದೆ. ಇದರಿಂದ ಭಾರತೀಯ ವಿಜ್ಞಾನ ಸಂಸ್ಥೆಯು ಇದರ ಕಡೆಗೆ ಗಮನವನ್ನು ಹರಿಸುತ್ತಿದೆ' ಎಂದರು. `ತ್ಯಾಜ್ಯದಿಂದ ಇಂಧನ ಉತ್ಪಾದಿಸುವ ಘಟಕಗಳನ್ನು ನಗರದಲ್ಲಿ ಮತ್ತೀಕೆರೆ, ಕೋರಮಂಗಲ ಸೇರಿದಂತೆ ಇನ್ನುಳಿದ ಎರಡು ಪ್ರದೇಶಗಳಲ್ಲಿ ತೆರೆಯಲಾಗುವುದು' ಎಂದು ಹೇಳಿದರು.ಸುಸ್ಥಿರ ಶಕ್ತಿಗಳ ಪ್ರದರ್ಶನ

ಗಾಳಿ ಶಕ್ತಿ, ಸೌರಶಕ್ತಿ, ಅಲೆಗಳ ಶಕ್ತಿ, ಭೂ ಶಾಖದ ಶಕ್ತಿ, ಉಬ್ಬರವಿಳಿತದ ಶಕ್ತಿಯನ್ನು ಪ್ರದರ್ಶಿಸುವ ಒಟ್ಟು 35 ಮಾದರಿಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ. ಜುಲೈ 31 ರವರೆಗೆ ಪ್ರದರ್ಶನ ತೆರೆದಿರುತ್ತದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.