ಮಂಗಳವಾರ, ಮೇ 11, 2021
20 °C

ಹು-ಧಾ ಒನ್ ಕೇಂದ್ರಕ್ಕೆ ನೌಕರನಿಂದಲೇ ಕನ್ನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ವಿಜಯನಗರ ಪ್ರದೇಶದ ಹುಬ್ಬಳ್ಳಿ-ಧಾರವಾಡ ಒನ್ ಕೇಂದ್ರದಲ್ಲಿ ನಾಲ್ಕು ದಿನಗಳ ಹಿಂದೆಯಷ್ಟೇ ನಡೆದಿದ್ದ ಕಳುವು ಪ್ರಕರಣವನ್ನು ಭೇದಿಸಿರುವ ಪೊಲೀಸರು, ಗುರುವಾರ ನಸುಕಿನಲ್ಲಿ ಮೂವರು ಆರೋಪಿಗಳನ್ನು ಬಂಧಿಸಿದ್ದು, ಅವರಿಂದ 9.21 ಲಕ್ಷ ನಗದು ಹಾಗೂ 1.88 ಮೊತ್ತದ 20 ಚೆಕ್‌ಗಳನ್ನು ವಶಕ್ಕೆ ಪಡೆದಿದ್ದಾರೆ.`ಹು-ಧಾ ಒನ್~ ವಿಜಯನಗರ ಕೇಂದ್ರದಲ್ಲೇ ಕಂಪ್ಯೂಟರ್ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದ ಚಂದ್ರನಾಥನಗರದ ದೀಪಕ್ ಚಿಕ್ಕೋಡಿ, ಶಿರಡಿನಗರದ ಆಟೋ ಚಾಲಕ ವೀರೇಶ್ ಸೋಟ್ನಾಳ ಹಾಗೂ ಮಂಟೂರು ರಸ್ತೆ ಕೃಪಾನಗರದ ಮೊಬೈಲ್ ವ್ಯಾಪಾರಿ ರಾಕೇಶ್ ಯಾದವ್ ಬಂಧಿತ ಆರೋಪಿಗಳಾಗಿದ್ದಾರೆ. ಮೂವರೂ 20ರಿಂದ 23 ವರ್ಷದ ಯುವಕರಾಗಿದ್ದಾರೆ.ಕಳೆದ ಭಾನುವಾರ ಮಧ್ಯರಾತ್ರಿ ಹು-ಧಾ ಒನ್ ಕೇಂದ್ರದ ಕೀಲಿ ತೆರೆದು 9.51 ಲಕ್ಷ ನಗದು ಹಾಗೂ 1.88 ಲಕ್ಷ ಮೊತ್ತದ ಚೆಕ್ ಕಳುವು ಮಾಡಲಾಗಿದೆ ಎಂದು ಆ ಕೇಂದ್ರದ ವ್ಯವಸ್ಥಾಪಕ ಅನಿಸ್ ಅಹ್ಮದ್ ಮೊಹಮ್ಮದ್ ಅಲಿ ಶೇಖ್ ಅಶೋಕನಗರ ಠಾಣೆಗೆ ದೂರು ನೀಡಿದ್ದರು. `ಘಟನಾ ಸ್ಥಳದ ವಾತಾವರಣ ಗಮನಿಸಿ ಸಿಬ್ಬಂದಿ ಮೇಲೇ ಸಂಶಯ ಬಂದಿತ್ತು. ಅದೇ ಜಾಡಿನಲ್ಲಿ ತನಿಖೆ ಮುಂದುವರಿಸಿದಾಗ ಆರೋಪಿಗಳು ಸುಲಭವಾಗಿ ಸಿಕ್ಕಿಬಿದ್ದರು~ ಎಂದು ಪೊಲೀಸ್ ಆಯುಕ್ತ ಡಾ. ಕೆ.ರಾಮಚಂದ್ರರಾವ್ ತಿಳಿಸಿದರು. ಪತ್ರಿಕಾ ಗೋಷ್ಠಿಯಲ್ಲಿ ಗುರುವಾರ ಅವರು ಪ್ರಕರಣದ ಮಾಹಿತಿ ನೀಡಿದರು.`ಹು-ಧಾ ಒನ್ ಕೇಂದ್ರದಲ್ಲಿ ಕೆಲಸ ಮಾಡುತ್ತಿದ್ದ ದೀಪಕ್, ಸಂತೋಷನಗರದ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದ. ಅವಳನ್ನೇ ಮದುವೆಯಾಗಿ ಬೇರೆ ಸ್ಥಳದಲ್ಲಿ ನೆಲೆಸುವ ಉದ್ದೇಶದಿಂದ ಈ ಕೃತ್ಯಕ್ಕೆ ಕೈಹಾಕಿದ. ಅದಕ್ಕಾಗಿ ತನ್ನ ಸ್ನೇಹಿತ ವೀರೇಶ್ ಮತ್ತು ಆತನ ಗೆಳೆಯ ರಾಕೇಶ್ ಅವರ ಸಹಾಯ ಪಡೆದು ಯೋಜನೆ ಸಿದ್ಧಪಡಿಸಿದ~ ಎಂದು ಅವರು ಹೇಳಿದರು.`ಕೇಂದ್ರದ ಬೀಗದ ಕೈಗಳನ್ನು ತನ್ನ ಸ್ನೇಹಿತರಿಗೆ ಕೊಟ್ಟು, ಲಾಕರ್‌ನಿಂದ ಹಣ ತೆಗೆದುಕೊಳ್ಳುವ ವಿಧಾನವನ್ನೂ ಅವರಿಗೆ ದೀಪಕ್ ಹೇಳಿದ್ದ. ರಾತ್ರಿ 1.30ರ ಸುಮಾರಿಗೆ ಲಾಕರ್ ತೆಗೆದು ಹಣ ಲಪಟಾಯಿಸಿದ ವೀರೇಶ್ ಮತ್ತು ರಾಕೇಶ್, ಬೆಳಿಗ್ಗೆ 6.30ರ ಸುಮಾರಿಗೆ ಬೀಗದ ಕೈಗಳನ್ನು ಮತ್ತೆ ದೀಪಕ್‌ಗೆ ಕೊಟ್ಟು ಹೋಗಿದ್ದರು. ಹಾಗೆಯೇ ರೂ 10 ಸಾವಿರ ನಗದನ್ನೂ ಆತನಿಗೆ ಕೊಟ್ಟಿದ್ದರು. ಉಳಿದ ಹಣವನ್ನು ನಿಧಾನವಾಗಿ ಹಂಚಿಕೊಳ್ಳುವ ಯೋಜನೆ ಹಾಕಿಕೊಂಡಿದ್ದರು~ ಎಂದು ತಿಳಿಸಿದರು.`ಆಟೋ ಬಿಟ್ಟು ತೆರಳಿದ್ದ ಆತನ ಸ್ನೇಹಿತರು ನಗರದ ವಸತಿ ಗೃಹವೊಂದರಲ್ಲಿ ಸಿಕ್ಕಿಬಿದ್ದರು. ಕಳುವಾದ ಹಣದ ಪೈಕಿ ರೂ 30 ಸಾವಿರವನ್ನು ಆರೋಪಿಗಳು ಖರ್ಚು ಮಾಡಿದ್ದು, ಮಿಕ್ಕ ದುಡ್ಡನ್ನು ವಶಪಡಿಸಿಕೊಳ್ಳಲಾಗಿದೆ~ ಎಂದು  ಮಾಹಿತಿ ನೀಡಿದರು.ಎಸಿಪಿ (ಉತ್ತರ) ಎ.ಆರ್. ಬಡಿಗೇರ್ ನೇತೃತ್ವದಲ್ಲಿ ನಡೆದ ತನಿಖೆಯಲ್ಲಿ ಅಶೋಕನಗರ ಠಾಣೆ ಇನ್ಸ್‌ಪೆಕ್ಟರ್ ಜಿ. ಗುರುದತ್, ಕೇಶ್ವಾಪುರ ಠಾಣೆ ಇನ್ಸ್‌ಪೆಕ್ಟರ್ ಡಿ.ಕೆ. ಪ್ರಭುಗೌಡ, ಪಿಎಸ್‌ಐ ಬಸವರಾಜ ಬುದ್ನಿ, ಸಿಬ್ಬಂದಿಯಾದ ಎಸ್.ಎಚ್. ನದಾಫ್, ಗುಳೇಶ, ನಾಗರಾಜ, ಬಿ.ಬಿ.ಪೂಜಾರ, ಡಿ.ಸಿ. ಮುದೇನೂರ, ವಿ.ಎಸ್. ಪಾಟೀಲ, ಎಂ.ಎಂ. ಭಾವನೂರ, ಎಂ.ಎಂ. ಹಾಲವಾರ, ಸಿ.ಎಂ. ಕಂಬಾಳಿಮಠ, ಎಸ್.ಕೆ. ಕರೆಪ್ಪಗೌಡರ, ಎಸ್.ಸಿ. ವಡ್ಡರ ಭಾಗವಹಿಸಿದ್ದರು. ಅವರಿಗೆ ವಿಶೇಷ ಬಹುಮಾನ ನೀಡಲಾಗುವುದು ಎಂದು ಹೇಳಿದರು.ಡಿಸಿಪಿಗಳಾದ ಎಸ್.ಎಂ. ಪ್ರತಾಪನ್, ಪಿ.ಆರ್. ಬಟಕುರ್ಕಿ, ಎಸಿಪಿಗಳಾದ ಎ.ಆರ್. ಬಡಿಗೇರ್, ಜಿ.ಎಂ. ದೇಸೂರ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.

ದೀಪಕ್ ಸಿಕ್ಕಿಬಿದ್ದಿದ್ದು ಹೇಗೆ?

ಹು-ಧಾ ಒನ್ ಕೇಂದ್ರಕ್ಕೆ ಇದ್ದದ್ದೇ ಎರಡು ಬೀಗದ ಕೈ. ಒಂದು ದೀಪಕ್ ಬಳಿ ಇತ್ತು. ಇನ್ನೊಂದು ಬೀಗದ ಕೈ ವಾಚ್‌ಮನ್ ಜಗದೀಶ್ ಹತ್ತಿರವಿತ್ತು. ಜಗದೀಶ್‌ಗೆ ಭಾನುವಾರ ರಾತ್ರಿ 10.30ಕ್ಕೆ ಕರೆಮಾಡಿ ಆತ ರಾತ್ರಿ ಮಲಗಲು ಕಚೇರಿಗೆ ಬರುವುದಿಲ್ಲ ಎಂಬುದನ್ನು ದೀಪಕ್ ಮೊದಲೇ ಖಚಿತಪಡಿಸಿಕೊಂಡಿದ್ದ. ಆ ಹೊತ್ತಿನಲ್ಲಿ ಜಗದೀಶ್‌ಗೆ ಹೀಗೆ ಪ್ರಶ್ನಿಸಲು ಏನು ಕಾರಣ ಎಂಬ ಸಂಶಯ ವ್ಯಕ್ತವಾದಾಗ `ಮೊಬೈಲ್ ಚಾರ್ಜರ್ ಕಚೇರಿಯಲ್ಲೇ ಮರೆತು ಬಂದಿದ್ದೆ~ ಎಂಬ ಉತ್ತರ ನೀಡಿದ್ದ ದೀಪಕ್.ತನ್ನ ಬಳಿ ಇನ್ನೊಂದು ಬೀಗದ ಕೈ ಇದ್ದರೂ ದೀಪಕ್‌ನ ಈ ವರ್ತನೆ ಪೊಲೀಸರಿಗೆ ಬೇಕಾದ ಮಹತ್ವದ ಸುಳಿವನ್ನು ಬಿಟ್ಟುಕೊಟ್ಟಿತ್ತು. ಆಮೇಲೆ ಆತನ ಮೊಬೈಲ್ ಕರೆ ಪರಿಶೀಲಿಸುತ್ತಾ ಹೋದಂತೆ ಸಂಶಯದ ಒಂದೊಂದೇ ಗಂಟುಗಳು ಬಿಚ್ಚಿಕೊಳ್ಳುತ್ತಾ ಸಾಗಿದವು. ಹು-ಧಾ ಒನ್ ಕೇಂದ್ರದ ಬಳಿಯಿರುವ ಆಟೋ ಸ್ಟ್ಯಾಂಡ್‌ನಲ್ಲೇ ಇರುತ್ತಿದ್ದ ವೀರೇಶ್, ದೀಪಕ್‌ಗೆ ಹೇಗೆ ಸ್ನೇಹಿತನಾದ ಎಂಬ ಮಾಹಿತಿಯೂ ಸಿಕ್ಕಿತು. ಒಂದು ಸಲ ಜೈಲು ವಾಸವನ್ನೂ ಮಾಡಿಬಂದ ರಾಕೇಶ್ ಸಹ ಇವರ ಗೆಳೆಯ ಎಂಬುದು ಗೊತ್ತಾದಾಗ ತನಿಖೆಗೆ ಸ್ಪಷ್ಟ ದಿಕ್ಕು ಸಿಕ್ಕಿತು.ನಕಲಿ ಬೀಗದ ಕೈಗಳನ್ನೂ ತಯಾರಿಸಿದ್ದ ದೀಪಕ್, ಮೊದಲು ತನ್ನ ಸ್ನೇಹಿತರಿಗೆ ಅವುಗಳನ್ನೇ ಕೊಟ್ಟಿದ್ದ. ಅದರಿಂದ ಬೀಗ ತೆಗೆಯುವುದು ಅಸಾಧ್ಯವಾದಾಗ ರಾತ್ರಿ ಮೂಲ ಬೀಗದ ಕೈಗಳನ್ನೇ ತನ್ನ ಸ್ನೇಹಿತರಿಗೆ ತಂದುಕೊಟ್ಟ ಎಂಬುದು ಪೊಲೀಸರ ತನಿಖೆಯಿಂದ ಗೊತ್ತಾಗಿದೆ. ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಮೊಬೈಲ್ ಮಹತ್ವದ ಪಾತ್ರ ವಹಿಸಿದೆ.

 

ಕ್ಯಾಮೆರಾ ಅಳವಡಿಕೆಗೆ ಪೊಲೀಸರ ಸಲಹೆ

ಹುಬ್ಬಳ್ಳಿ: ಅವಳಿನಗರದ ಎಲ್ಲ ಹುಬ್ಬಳ್ಳಿ-ಧಾರವಾಡ ಒನ್ ಕೇಂದ್ರಗಳಿಗೆ ಸಿಸಿ ಕ್ಯಾಮೆರಾಗಳನ್ನು ಅಳವಡಿಸುವಂತೆ ಪಾಲಿಕೆ ಆಯುಕ್ತ ಡಾ.ಕೆ.ವಿ. ತ್ರಿಲೋಕಚಂದ್ರ ಅವರಿಗೆ ಸಲಹೆ ನೀಡಿದ್ದೇವೆ ಎಂದು ಡಾ.ಕೆ.ರಾಮಚಂದ್ರರಾವ್ ತಿಳಿಸಿದರು.`ಕೆಳಹಂತದ ಸಿಬ್ಬಂದಿ ಕೈಗೆ ಬೀಗದ ಕೈ ನೀಡುವ ಮೂಲಕ ಕೇಂದ್ರದ ಸಂಯೋಜಕ ಅನಿಸ್ ಅಹ್ಮದ್ ಶೇಖ್ ಬೇಜವಾಬ್ದರಿಯಿಂದ ವರ್ತಿಸಿದ್ದು, ಇದೇ ಕಾರಣದಿಂದ ಘಟನೆ ಸಂಭವಿಸಿದೆ. ಹೀಗಾಗಿ ಅವರ ಮೇಲೂ ಶಿಸ್ತುಕ್ರಮ ಕೈಗೊಳ್ಳಬೇಕು ಎಂಬ ಸಲಹೆಯನ್ನೂ ಅವರಿಗೆ ನೀಡಲಾಗಿದೆ~ ಎಂದು ಹೇಳಿದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.