ಶನಿವಾರ, ಏಪ್ರಿಲ್ 17, 2021
31 °C

ಹೂವಿಲಾಸ! ಭೂಮಿಯ ಮಂದಹಾಸ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಎಲ್ಲೋ ಯಾರೋ ನಗುತ್ತಿದ್ದಾರೆ! ಸದ್ದು ಕೇಳಿಸಿತಾ? ಈ ಸುಡುಧಗೆಯ ದಿನಗಳಲ್ಲಿ ನಿಟ್ಟುಸಿರ ಹೊರತು ನಗುವೆಲ್ಲಿಂದ ಬರಬೇಕು ಎಂದಿರಾ? ಉಹುಂ, ಯಾರೋ ನಗುತ್ತಿದ್ದಾರೆ... ಕಿವಿ ನಿಮಿರಿಸಿ ಕೇಳಿಸಿಕೊಳ್ಳಿ, ಮೈಯೆಲ್ಲ ಕಿವಿಯಾಗಿಸಿ ಆಲಿಸಿ- ಹಾಂ, ಈಗ ನಗು ಕೇಳಿಸಿತಾ, ಅದು ಭೂಮಿಯ ನಗು!‘ಭೂಮಿ ನಗುತ್ತದೆ’ ಎಂದು ಹೇಳಿದ್ದು ರಾಲ್ಫ್  ವಾಲ್ಡೊ ಎಮರ್ಸನ್ ಎನ್ನುವ ಅಮೆರಿಕದ ಕವಿ, ದಾರ್ಶನಿಕ. ಆತ ಮತ್ತೂ ಹೇಳುತ್ತಾನೆ, ‘ಭೂಮಿ ನಗುವುದು ಹೂಗಳ ಮೂಲಕ’ ಎಂದು. ಎಮರ್ಸನ್ನನ ಕವಿನುಡಿ ಅದೆಷ್ಟು ಸತ್ಯವಲ್ಲವೇ? ಕೆಲಕ್ಷಣ ಧಗೆಯ ಮರೆತು, ಧಗೆಯ ಕುರಿತ ಕೊರಗ ಮರೆತು ಬಯಲಿಗೆ ಬಂದು ನೋಡಿ- ಅಲ್ಲೊಂದು ಸೌಂದರ್ಯ ಸ್ಪರ್ಧೆ ಚಾಲ್ತಿಯಲ್ಲಿದೆ. ಬಯಲು ಬಣ್ಣಗಳ ಹೊದ್ದಿದೆ. ಗುಡ್ಡಸಾಲು ಹೂ- ಹಸಿರಲ್ಲಿ ಹುದುಗಿಕೊಂಡಿದೆ. ಈ ಹೂವಿಲಾಸವೇ ಭೂಮಿಯ ಮಂದಹಾಸವಾಗಿ ಹೊರಹೊಮ್ಮಿದೆ.ಹೂಸ್ಪರ್ಶಕ್ಕೆ ಒಳಗಾಗಿರುವ ಜಗತ್ತು ಕಿನ್ನರಲೋಕದಂತೆ ರಮಣೀಯವಾಗಿದೆ. ಮುಗಿಲೂರಿನ ಚುಕ್ಕಿಚೆಲುವೆಯರು ತಮ್ಮ ಆಭರಣಗಳನ್ನು ಇಳೆಯತ್ತ ಉದಾಸೀನದಿಂದ ಬಿಸಾಡಿರಬೇಕು. ಹಾಗೆ ತೂರಿಬಂದ ಆಭರಣಗಳು ಮರಗಿಡಗಳಲ್ಲಿ ಸಿಲುಕಿ ಹೂಗಳಾಗಿರಬೇಕು. ಇರಲೇಬೇಕು, ಇದು ಅಲೌಕಿಕ ಸೌಂದರ್ಯ. ಈ ಲೋಕದಲ್ಲಿ ಸಾಧ್ಯವಾದ ಇಂಥ ಅತಿರಮ್ಯ ಸೌಂದರ್ಯದ ಹಿಂದೆ ಇನ್ನೊಂದು ಲೋಕದ ಪ್ರಭೆಯೂ ಇರಬೇಕು. ಈ ದಿವ್ಯದರ್ಶಕ್ಕೆ ಈಡಾಗಿಯೇ- ‘ಪ್ರಕೃತಿ ಪೂಜೆಗೆ ಬನ್ನಿರೆಲ್ಲರು/ ಪ್ರಕೃತಿ ಪೂಜೆಗೆ ಬನ್ನಿರಿ/ ಕಣ್ಣು ಹೃದಯಗಳೆಂಬ ಎರಡನು/ ಮಾತ್ರ ಇಲ್ಲಿಗೆ ತಂದಿರಿ’ ಎಂದು ಕವಿ (ಜಿ.ಎಸ್.ಶಿವರುದ್ರಪ್ಪ) ಉದ್ಗರಿಸಿರಬೇಕು.ಈ ಕಾಲದ ಸೋಜಿಗ ನೋಡಿ: ಲಕ್ಷ ಲಕ್ಷ ತೆತ್ತು ಕೊಂಡರೂ ಯಾವುದಕ್ಕೆ ತಾನೆ ಈ ಕೊಳ್ಳುಬಾಕ ಮಾರುಕಟ್ಟೆ ಪೂರ್ಣ ಖಾತರಿ ಇದ್ದೀತು? ಸರಕುಗಳ ಮಾತು ಬಿಡಿ, ಅಚ್ಚರಿಗಳ ಗೂಡು ಈ ದೇಹಕ್ಕೆ ತಾನೆ ಎಲ್ಲಿದೆ ಖಾತರಿ? ಆದರೆ, ನಿಸರ್ಗದ ಮಾತು ಬೇರೆ. ಋತುಗಳ ರಾಜ ವಸಂತನ ಹಾಜರಿಯಲ್ಲಿ ಚೈತ್ರಯಾತ್ರೆ ಆರಂಭವಾಯಿತೆಂದರೆ ಬಯಲು - ಬೆಟ್ಟದಲ್ಲೆಲ್ಲ ಜೀವಸಂಚಾರ ಆಗಲೇಬೇಕು. ಅದು ತಪ್ಪದ ಕ್ರಮ. ಈ ವಸಂತ - ಚೈತ್ರನೆಂಬ ಮಾಯಾವಿಗಳೀಗ ಪ್ರಕೃತಿಯ ಬಣ್ಣಗಳನ್ನೇ ಬದಲಿಸಿದ್ದಾರೆ. ‘ಹೂವಬಿಟ್ಟಿವೆ, ಹೂವತೊಟ್ಟಿವೆ, ಹೂವನುಟ್ಟಿವೆ ಮರಗಳು/ ಚೈತ್ರಯಾತ್ರೆಗೆ ಬಂದು ನಿಂತವೊ ನೂರು ಚೆಲುವಿನ ರಥಗಳು’ ಎನ್ನುವಂತಾಗಿದೆ.ಕುಲುಮೆಯ ಕಾವಿನುರಿಯ ಪರೀಕ್ಷೆಯಲ್ಲಿ ಚಿನ್ನ ಹೊಳಪುಗಟ್ಟುತ್ತದೆ. ಈ ಸ್ವರ್ಣರೂಪಿ ಸಸ್ಯಸಂಕುಲಕ್ಕೆ ಸೂರ್ಯನದು ಅಗ್ನಿಪರೀಕ್ಷೆ. ಅವನು ಉರಿದಷ್ಟೂ ಮರಗಿಡಗಳ ಮೊಗದಲ್ಲಿ ಹೂಗಳು ಅರಳುತ್ತವೆ, ಬೆಳಗುತ್ತವೆ. ಬೇಸಿಗೆಯೆಂದರೆ ಬರಿ ಬಿಸಿಲಲ್ಲ, ಅದು ಸೌಂದರ್ಯ ವಿಕಾಸದ ಸಂಧಿಕಾಲವೂ ಹೌದು. ಬಯಲಿಗೆ ಬಂದು ನೋಡಿ- ಮದುವೆಮಂಟಪಕ್ಕೆ ಹೊರಟು ದಾರಿಯಲ್ಲಿ ದಣಿವಾರಿಸಿಕೊಳ್ಳಲು ನಿಂತ ಸಾಲಂಕೃತ ಚೆಲುವೆಯರಂತೆ ಹೂಮರಗಳು ನಿಂತಿವೆ. ಬಯಲಿನಲ್ಲೆಗ ಸೌಂದರ್ಯದ ಉತ್ಕರ್ಷ - ‘ಹೂ’ತ್ಕರ್ಷ!‘ಹೂ’ತ್ಖನನದಲ್ಲಿ ಬದುಕಿನ ಕೆಲವು ಸತ್ಯಗಳು ಬಯಲಿಗೆ ಬೀಳುತ್ತವೆ. ಹೂಗಳದು ಕಣ್ಣನ್ನಷ್ಟೇ ತುಂಬುವ ಸೌಂದರ್ಯವಲ್ಲ. ಅವು ಆತ್ಮದ ಹಸಿವೆಯನ್ನೂ ತೀರಿಸುತ್ತವೆ. ಟಾಗೋರರು ಹೇಳಿದಂತೆ- ‘ಅನ್ನ ದೇಹಕ್ಕೆ ಕಸುವು ನೀಡುತ್ತದೆ; ಹೂಗಳು ಆತ್ಮದ ಹಸಿವೆ ತೀರಿಸುತ್ತವೆ’. ಈ ಹೂಗಳು ಬದುಕಿನ ರಸನಿಮಿಷಗಳೊಂದಿಗೆ, ನವಿರು ಕಲ್ಪನೆಗಳೊಂದಿಗೆ ತಳುಕು ಹಾಕಿಕೊಂಡಿವೆ. ಹೂನಗು, ಹೂಮನಸು, ಹೂಕನಸು, ಹೂಬಾಣ, ಹೂಬಾಲೆ (ಕುಸುಮಬಾಲೆ), ಕುಸುಮಕೋಮಲೆ- ಹೀಗೆ, ‘ಹೂ ಸ್ಪರ್ಶ’ವಿಲ್ಲದೆ ನಾಜೂಕಿನ ಮಾತುಗಳು ರಸಮಯ ಎನಿಸಿಯಾವೆ?ಹೂಗಳ ಬಣ್ಣ ಗಮನಿಸಿದಿರಾ? ಮಂಜಿನಲ್ಲಿ ಮಿಂದು ಬಂದಂತಿದೆ ಹೂವೊಂದರ ಬಿಳುಪು. ಮತ್ತೊಂದು ‘ಹೂ’ಗೆನ್ನೆಗೆ ಯಾರೋ ಪೋರ ಅರಿಷಿಣ ಬಳಿದು ಹೋದಂತಿದೆ. ಯಾವ ನೆನಪಿನ ಪುಳಕದಲ್ಲೋ ಈ ಪುಷ್ಪಕನ್ನಿಕೆಯ ಗಲ್ಲ ಕೆಂಪೇರಿದೆ. ನವರಸಗಳು, ನೂರಾರು ಭಾವಗಳ ಧ್ವನಿಸುವಂತೆ ಒಂದೊಂದು ಹೂವಿನದು ಒದೊಂದು ಬಣ್ಣ. ಬಯಲು ಬೆಟ್ಟಗಳ ಒಂದಾಗಿಸಿ ಪರಿಪರಿ ಹೂಗಳು ಅರಳಿವೆಯಲ್ಲ- ಇವುಗಳದೇನು ಹೆಸರು? ಯಾವ ಊರು? ಯಾವ ವಿಳಾಸ? ಇಂಥ ಪ್ರಶ್ನೆಗಳಿಗೆ ಉತ್ತರಗಳ ಹುಡುಕುವುದರಲ್ಲೇನು ಸುಖವಿದೆ? ಪ್ರಕೃತಿಯ ಸೌಂದರ್ಯ ಸನ್ನಿಧಿಯಲ್ಲಿ ಪ್ರಶ್ನೆಗಳ ಸದ್ದಿಗೆ ಕಿಮ್ಮತ್ತಿಲ್ಲ. ಈ ದಿವ್ಯ ಸೌಂದರ್ಯದ ಸಂವಹನಕ್ಕೆ ಧ್ಯಾನದಂಥ ಮೌನವೇ ಸಾಧನ.ಎಲ್ಲ ಬಗೆ - ಬಣ್ಣದ ಹೂಗಳೂ ಸೇರಿ ಪ್ರಕೃತಿಯ ಒಂದು ಕಲಾಕೃತಿ ರೂಪುಗೊಂಡಿದೆ. ಈ ಚೌಕಟ್ಟಿನಿಂದ ಒಂದು ಹೂಬದಿಗಿಟ್ಟು ನೋಡಿ, ಕಲಾಕೃತಿ ಭಿನ್ನಗೊಳ್ಳುತ್ತದೆ, ಅಪೂರ್ಣ ಎನಿಸುತ್ತದೆ. ಈ ಹೂ ಲೆಕ್ಕಾಚಾರ ನಮ್ಮ ಲೌಕಿಕಕ್ಕೂ ಹೊಂದುವಂತಹದ್ದು. ‘ಸರ್ವ ಜನಾಂಗದ ಶಾಂತಿಯ ತೋಟ’ ಎನ್ನುವ ಕವಿ ಆಶಯ ವಾಸ್ತವದ ಕುದಿಯಲ್ಲಿ ಹುಸಿಯಾಗಿರುವ ದಿನಗಳಿವು. ಇಂಥ ಸಂದರ್ಭದಲ್ಲಿ ಬಣ್ಣ - ಭಾವಗಳ ಹಂಗು ತೊಡೆದು ‘ಮನುಷ್ಯಜಾತಿ ತಾನೊಂದೆ ವಲಂ’ ಎನ್ನುವಂತಾಗಲು ನಾವು ಕಲಿಯಬೇಕಾದ ಪಾಠ ಹೂಲೋಕದಲ್ಲಿ ಇದೆಯೆನ್ನಿಸುತ್ತದೆ.ಭೂಮಿ ಮತ್ತೆ ನಗುತ್ತಿದೆ! ಆ ನಗು, ಹೂವಿಲಾಸದ ಮಂದಹಾಸಕ್ಕೆ ಸಂಬಂಧಿಸಿದ್ದಾ ಅಥವಾ ಮನುಷ್ಯರ ಸಣ್ಣತನಕ್ಕೆ ಸಂಬಂಧಿಸಿದ ವಿಷಾದದ ನಗೆಯಾ?

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.