ಶನಿವಾರ, ಮೇ 15, 2021
26 °C

ಹೆಂಡತಿ ಬೇಡ, ವಿಚ್ಛೇದನ ಬೇಕು ಎಂದ ಪತಿ ಅರ್ಜಿ ವಜಾ:ಮುನಿಸಿಕೊಂಡ ಪತ್ನಿಯನ್ನು ರಮಿಸಿ ತನ್ನಿ

ಪ್ರಜಾವಾಣಿ ವಾರ್ತೆ/ಸುಚೇತನಾ ನಾಯ್ಕ Updated:

ಅಕ್ಷರ ಗಾತ್ರ : | |

ಬೆಂಗಳೂರು: `ಪತ್ನಿ ಮುನಿಸಿಕೊಂಡು ತವರಿಗೆ ಹೋಗಿದ್ದರೆ ಆಕೆಯನ್ನು ರಮಿಸಿ ಕರೆತನ್ನಿ. ವರ್ಷಾನುಗಟ್ಟಲೆ ಅವಳತ್ತ ಚಿತ್ತ ಹರಿಸದೆ ಕೊನೆಗೆ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದರೆ, ಅದನ್ನು ಮಾನ್ಯ ಮಾಡಲಾಗದು~ ಎಂದು ಹೈಕೋರ್ಟ್ ತೀರ್ಪು ನೀಡಿದೆ.`ನಿಶ್ಚಿತಾರ್ಥದ ನಂತರ `ನೀವೆಂದ್ರೆ ನನಗಿಷ್ಟ~ ಎಂದು ಪತ್ನಿ ಒಮ್ಮೆಯೂ ಹೇಳಿಲ್ಲ, ಅಪ್ಪಟ ಸಂಪ್ರದಾಯದ ಪತ್ನಿಗೆ ಹೊರಗಡೆ ತಿಂಡಿ ತಿನ್ನುವುದೆಂದರೆ ಅಲರ್ಜಿ~ ಎಂಬಿತ್ಯಾದಿ ಕಾರಣ ನೀಡಿದ್ದ ಪತಿಯೊಬ್ಬ, ಮುನಿಸಿಕೊಂಡ ಪತ್ನಿಯನ್ನು ಮನೆಗೆ ಕರೆತರುವ ಗೋಜಿಗೆ ಹೋಗದೆ ವಿಚ್ಛೇದನಕ್ಕೆ ಸಲ್ಲಿಸಿದ್ದ ಅರ್ಜಿಯನ್ನು ಕೋರ್ಟ್ ವಜಾಗೊಳಿಸಿದೆ.ಮಗಳ ಜೊತೆ ತವರಿಗೆ ತೆರಳಿದ್ದ ಪತ್ನಿ ತಮ್ಮ ಜೊತೆ ಇರಲು ಇಚ್ಛೆಪಟ್ಟರೂ, 12 ವರ್ಷಗಳಾದರೂ ಆಕೆಯನ್ನು ಕರೆತರುವ ಪ್ರಯತ್ನ ಮಾಡದ ಮೈಸೂರಿನ ಶಿವು ಹಾಗೂ ಅವರ ಪತ್ನಿ ಸುಮಿತ್ರಾ (ಇಬ್ಬರ ಹೆಸರು ಬದಲಾಯಿಸಲಾಗಿದೆ) `ಕಥೆ~ ಇದು.`ನನಗೆ ಯಾವುದೇ ಕಾರಣಕ್ಕೂ ಪತ್ನಿ ಬೇಡ, ವಿಚ್ಛೇದನವೇ ಬೇಕು~ ಎಂದು ವಾದಿಸಿ ಶಿವು ಅವರು ಸಲ್ಲಿಸಿದ್ದ ಅರ್ಜಿಯನ್ನು ಕೌಟುಂಬಿಕ ಕೋರ್ಟ್ ವಜಾಗೊಳಿಸಿತ್ತು. ಈಗ ಹೈಕೋರ್ಟ್ ಕೂಡ ವಿಚ್ಛೇದನ ನೀಡಲಾಗದು ಎಂದಿದೆ.ಅರ್ಜಿಯ ವಿವರ: ಇವರ ವಿವಾಹ 2000ನೇ ಸಾಲಿನ ಜನವರಿಯಲ್ಲಿ ನಡೆದಿದೆ. ಶಿವು ಖಾಸಗಿ ಕಂಪೆನಿಯ ಉದ್ಯೋಗಿ. ಸುಮಿತ್ರಾ ವಿವಾಹದ ವೇಳೆ ರಾಷ್ಟ್ರೀಕೃತ ಬ್ಯಾಂಕ್ ಒಂದರಲ್ಲಿ ಉದ್ಯೋಗಿ ಆಗಿದ್ದರು (ನಂತರ ಮಗುವನ್ನು ನೋಡಿಕೊಳ್ಳುವ ಸಂಬಂಧ ಕೆಲಸಕ್ಕೆ ರಾಜೀನಾಮೆ ನೀಡಿದರು).ಪತಿಯ ಮನೆಯಲ್ಲಿ ಹಣಕ್ಕಾಗಿ ಪೀಡಿಸುತ್ತಿದ್ದರು ಎನ್ನುವುದು ಸುಮಿತ್ರಾ ಆರೋಪ. ಇದೇ ಹಿನ್ನೆಲೆಯಲ್ಲಿ ನಂಜನಗೂಡಿನಲ್ಲಿ ಇರುವ ತವರಿಗೆ ಹೆರಿಗೆಗೆಂದು ಅದೇ ಸಾಲಿನ ಡಿಸೆಂಬರ್‌ನಲ್ಲಿ ಹೋದ ಅವರು ಪತಿಯ ಮೇಲೆ ಮುನಿಸಿಕೊಂಡು ಮರಳಿ ವಾಪಸು ಬರಲಿಲ್ಲ. `ಹೆಣ್ಣು ಮಗು ಜನಿಸಿದೆ ಎಂಬ ಕಾರಣಕ್ಕೆ ಪತಿ, ಅವರ ಪೋಷಕರು ಕೂಡ ನಮ್ಮನ್ನು ನೋಡಲು ಬರಲಿಲ್ಲ. ಈ ನಡುವೆ ಮಗುವನ್ನು ಎರಡು ಶಸ್ತ್ರಚಿಕಿತ್ಸೆಗೆ ಒಳಪಡಿಸಿದ್ದರೂ, ಪತಿ ಇತ್ತ ಗಮನಹರಿಸಿಲ್ಲ~ ಎನ್ನುವುದು ಅವರ ದೂರು.ಆದರೆ ಈ ಎಲ್ಲ ಆರೋಪಗಳನ್ನು ಶಿವು ಅಲ್ಲಗಳೆದಿದ್ದರು. `ಮಗಳಿಗೆ ಶಸ್ತ್ರಚಿಕಿತ್ಸೆಗೆ ಆಗಿದ್ದು ನನಗೆ ತಿಳಿದೇ ಇಲ್ಲ. ಪತ್ನಿಯ ತವರು ಮನೆಗೆ ಅವಳನ್ನು ನೋಡಲು ಹೋದರೂ ಮಗಳನ್ನು ನನಗೆ ತೋರಿಸುತ್ತಿರಲಿಲ್ಲ~ ಇತ್ಯಾದಿಯಾಗಿ ಅವರು ಮರುವಾದಿಸಿದ್ದರು. ಇದೇ ವಾದವನ್ನಿಟ್ಟು ಅವರು 2004ರಲ್ಲಿ ವಿಚ್ಛೇದನ ಕೋರಿ ಕೌಟುಂಬಿಕ ಕೋರ್ಟ್ ಮೊರೆ ಹೋದರು.ಆದರೆ ಸುಮಿತ್ರಾ, ಪತಿಯ ಬಳಿ ಹೋಗುವ ಇಚ್ಛೆಯನ್ನು ನ್ಯಾಯಾಧೀಶರ ಮುಂದೆ ಇಟ್ಟರು. ತಮ್ಮ ಮಗಳ ಪೋಷಣೆಗಾಗಿ ತವರಿನವರು ಎರಡು ಲಕ್ಷ ರೂಪಾಯಿ ಠೇವಣಿ ಇಡಲೂ ತಯಾರು ಇದ್ದಾರೆ ಎಂದು ನ್ಯಾಯಾಧೀಶರ ಮುಂದೆ ಅವರು ಹೇಳಿದರು.ತಳ್ಳಿಹಾಕಿದ ಆರೋಪ: `ಪತ್ನಿ ನನ್ನನ್ನು ಪ್ರೀತಿಸುವುದಿಲ್ಲ. ನಾನೆಂದರೆ ಆಕೆಗೆ ನಿರ್ಲಕ್ಷ್ಯ. ನನ್ನನ್ನು ಬಿಟ್ಟುಹೋಗಿದ್ದಾಳೆ. ಹೊರಗಡೆ ಹೋಗಿ ತಿನ್ನುವುದೆಂದರೆ ಆಕೆಗೆ ಆಗದು~ ಇತ್ಯಾದಿ ಶಿವು ಅವರ ವಾದ.  ಹಣಕ್ಕಾಗಿ ನಾನು ಪತ್ನಿಯನ್ನು ಪೀಡಿಸಿಲ್ಲ. ವಿವಾಹದ ವೇಳೆ ನೀಡಿರುವ ಆಭರಣಗಳನ್ನು ಬ್ಯಾಂಕ್ ಲಾಕರ್‌ನಲ್ಲಿ ಇಟ್ಟಿದ್ದು, ಅದರಲ್ಲಿ ಏನಿದೆ ಎನ್ನುವುದನ್ನೂ ನೋಡಿಲ್ಲ~ ಎಂದು ನ್ಯಾಯಾಧೀಶರ ಮುಂದೆ ಶಿವು ವಿವರಿಸಿದರು.ಆದರೆ ಪತ್ನಿ ಆಕೆಯ ಹಣದಲ್ಲಿ ಕೊಡಿಸಿದ ಸ್ಕೂಟರ್‌ನಲ್ಲಿಯೇ ಈಗಲೂ ತಾವು ಓಡಾಡುತ್ತಿರುವುದನ್ನು ಅವರು ಒಪ್ಪಿಕೊಂಡಿದ್ದರು. 2008ರಲ್ಲಿ ವಿಚ್ಛೇದನದ ಅರ್ಜಿಯನ್ನು ಕೌಟುಂಬಿಕ ಕೋರ್ಟ್ ವಜಾಗೊಳಿಸಿತ್ತು.

ಇವೆಲ್ಲ ವಾದ, ಪ್ರತಿವಾದಗಳನ್ನು ಆಲಿಸಿದ ನ್ಯಾಯಮೂರ್ತಿಗಳಾದ ಎನ್. ಕೆ.ಪಾಟೀಲ್ ಹಾಗೂ ಬಿ.ವಿ.ಪಿಂಟೊ ಅವರನ್ನು ಒಳಗೊಂಡ ವಿಭಾಗೀಯ ಪೀಠ ಈಗ ಅರ್ಜಿ ವಜಾಗೊಳಿಸಿದೆ.ಕೋರ್ಟ್ ಹೇಳಿದ್ದೇನು? `ಈ ಪ್ರಕರಣದಲ್ಲಿ ಸುಮಿತ್ರಾ ಅವರು, ಪತಿಯನ್ನು ತ್ಯಜಿಸಿ ಹೋದದ್ದಲ್ಲ. ಬದಲಿಗೆ ಅವರು ಮನೆಬಿಟ್ಟು ಇಷ್ಟು ವರ್ಷಗಳ ಕಾಲ ತವರಿನಲ್ಲಿ ನೆಲೆಸುವಂತೆ ಮಾಡಿರುವುದು ಶಿವು ಅವರೇ. ಇಲ್ಲಿಯವರೆಗೆ ಪತ್ನಿ ಅಥವಾ ಮಗಳ ಖರ್ಚಿಗಾಗಿ ಒಂದೇ ಒಂದು ರೂಪಾಯಿ ನೀಡುವ ಗೋಜಿಗೂ ಶಿವು ಹೋಗಿಲ್ಲ. ಸುಮಾರು 12 ವರ್ಷಗಳ ಕಾಲ ಪತಿ ತಮ್ಮ ಬಗ್ಗೆ ನಿರ್ಲಕ್ಷ್ಯ ತೋರಿದ್ದರೂ, ಅವರೊಟ್ಟಿಗೆ ಬಾಳಲು ಸುಮಿತ್ರಾ ಇಚ್ಛಿಸಿರುವ ಕಾರಣ, ವಿಚ್ಛೇದನ ನೀಡಲಾಗದು~ ಎಂದು ಹೈಕೋರ್ಟ್ ತೀರ್ಪು ನೀಡಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.