ಸೋಮವಾರ, ಮೇ 23, 2022
22 °C

ಹೆಚ್ಚಿದ ಸಂಚಾರ: ಅಪಾಯ ನಿಶ್ಚಿತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಕ್ಷ್ಮೇಶ್ವರ: ಸ್ಥಳೀಯ ಶಿಗ್ಲಿ ಕ್ರಾಸ್ ಹತ್ತಿರದ ಎಂ.ಎ. ಕಾಲೇಜಿಗೆ ಹೋಗುವ ರಸ್ತೆಯಲ್ಲಿ ವಾಹನ ದಟ್ಟಣೆ ಹೆಚ್ಚಾಗಿದ್ದು ಇಲ್ಲಿ ಯಾವಾಗ ಬೇಕಾದರೂ ಅಪಾಯ ಸಂಭವಿಸುವ ಭಯ ಇದೆ.ಹೊಳೆಇಟಗಿಯಿಂದ ಮರಳು ಸಾಗಿಸಲು ನಿತ್ಯವೂ ನೂರಾರು ಲಾರಿಗಳು ಹಾಗೂ ಟಂಟಂ, ಟ್ರ್ಯಾಕ್ಟರ್, ಸರ್ಕಾರಿ ಬಸ್ಸುಗಳು ಇದೇ ರಸ್ತೆ ಮೂಲಕ ದೊಡ್ಡೂರು, ಶಿಗ್ಲಿ ಕಡೆ ಸಂಚರಿಸುತ್ತವೆ.ಅಲ್ಲದೆ ನೂರಾರು ವಿದ್ಯಾರ್ಥಿಗಳು ಇದೇ ರಸ್ತೆ ಮುಖಾಂತರ ದಿನಾಲೂ ಪುರಸಭೆ ಉಮಾ ವಿದ್ಯಾಲಯ ಪ್ರೌಢಶಾಲೆ, ಸ್ಕೂಲ್ ಚಂದನ ಹಾಗೂ ಕಾಲೇಜಿಗೆ ಹೋಗಿ ಬರುತ್ತಾರೆ. ಕೆಲವೇಳೆ ಲಾರಿ ಹಾಗೂ ಬೇರೆ ವಾಹನಗಳು ಎದುರು ಬದುರಾಗುತ್ತವೆ. ಈ ಸಮಯದಲ್ಲಿ ಇಡೀ ರಸ್ತೆ ವಾಹನಗಳಿಂದ ತುಂಬಿ ಹೋಗುತ್ತದೆ. ಆಗ ವಿದ್ಯಾರ್ಥಿಗಳು ಹಾಗೂ ಜನತೆ ಸುಲಭವಾಗಿ ಓಡಾಡಲು ಸಾಧ್ಯವಾಗುವುದೇ ಇಲ್ಲ.ಖಾಸಗಿ ವಾಹನ ಚಾಲಕರು ಶಿಗ್ಲಿ ಕ್ರಾಸ್ ದಾಟಿ ದೊಡ್ಡೂರು ಕಡೆ ಹೋಗುವಾಗ ರಸ್ತೆ ಪಕ್ಕದಲ್ಲಿ ಲಾರಿ ರಿಪೇರಿಗೆ ಅಥವಾ ಚಹಾ ಸೇವಿಸಲು ಲಾರಿ ಹಾಗೂ ಟಂಟಂ ಮಾಲೀಕರು ಪ್ರಯಾಣಿಕರನ್ನು ಹತ್ತಿಸಿಕೊಳ್ಳಲು ಹಾಗೂ ಇಳಿಸಲು ನಿಲ್ಲಿಸುತ್ತಾರೆ. ಮೊದಲೇ ರಸ್ತೆ ಇಕ್ಕಟ್ಟಾಗಿದ್ದು ಹೀಗೆ ಬೇಕಾಬಿಟ್ಟಿ ಲಾರಿ ಹಾಗೂ ಟಂಟಂ ನಿಲ್ಲುವುದರಿಂದ ರಸ್ತೆ ಇನ್ನಷ್ಟು ಇಕ್ಕಟ್ಟಾಗುತ್ತದೆ. ಅಲ್ಲದೆ ರಸ್ತೆ ಅಲ್ಲಲ್ಲಿ ಕಿತ್ತಿದ್ದು ಗುಂಡಿ ಸಹ ಉಂಟಾಗಿವೆ. ಗುಂಡಿ ತಪ್ಪಿಸಿ ವಾಹನ ಓಡಿಸಲು ಚಾಲಕರು ತಮ್ಮ ವಾಹನವನ್ನು ರಸ್ತೆ ಪಕ್ಕಕ್ಕೆ ತೆಗೆದುಕೊಳ್ಳುತ್ತಾರೆ. ಆಗ ಅಪಘಾತ ಸಂಭವಿಸುವ ಭಯ ಇದೆ. ಅಲ್ಲದೆ ಇಂಥ ಸಂದರ್ಭದಲ್ಲಿ ಶಾಲಾ ವಿದ್ಯಾರ್ಥಿಗಳು ಹಾಗೂ ಇಂದಿರಾ ನಗರ ಮತ್ತು ಮುಕ್ತಿನಗರದ ಜನತೆಗೆ ಓಡಾಡಲು ತೀವ್ರ ತೊಂದರೆ ಆಗುತ್ತದೆ. ಇದೆಲ್ಲವನ್ನು ಕಂಡರೂ ಕಾಣದವರಂತೆ ಪೊಲೀಸರು ಕೇವಲ ಸೀಟಿ ಊದುತ್ತಾ ನಿಂತಿರುತ್ತಾರೆ. ಆದರೆ ಚಾಲಕರು ಮಾತ್ರ ಯಥಾಪ್ರಕಾರ ತಮ್ಮ ಕಾಯಕ ಮುಂದುವರೆಸಿರುತ್ತಾರೆ.ಹೆಚ್ಚಿರುವ ವಾಹನ ದಟ್ಟಣೆಯಿಂದಾಗಿ ವಿದ್ಯಾರ್ಥಿಗಳು ಜೀವವನ್ನು ಕೈಯಲ್ಲಿ ಹಿಡಿದುಕೊಂಡೇ ಓಡಾಡಬೇಕಾಗಿದೆ.ರಸ್ತೆ ಪಕ್ಕದಲ್ಲಿ ಪುರಸಭೆ ನೀರು ಪೂರೈಕೆಯ ಕೆಲವೊಂದು ವಾಲ್ವ್‌ಗಳು ಒಡೆದಿದ್ದು ನೀರು ರಸ್ತೆಗೆ ಬಂದು ಅಲ್ಲಿನ ಗುಂಡಿಗಳಲ್ಲಿ ಶೇಖರಣೆ ಆಗುತ್ತದೆ. ಲೋಕೋಪಯೋಗಿ ಇಲಾಖೆಗೆ ಒಳಪಡುವ ಈ ರಸ್ತೆ ದುರಸ್ತಿಗೆ ಇಲಾಖೆ ಅಧಿಕಾರಿಗಳು ಪ್ರಯತ್ನಿಸುತ್ತಿಲ್ಲ. ಅಲ್ಲದೆ ಒಡೆದ ವಾಲ್ವ್‌ಗಳ ರಿಪೇರಿಗೆ ಪುರಸಭೆ ಮುಂದಾಗಿಲ್ಲ.ಇವರಿಬ್ಬರ ಮುಸುಕಿನ ಗುದ್ದಾಟದಲ್ಲಿ ಜನತೆ ಕಷ್ಟ ಪಡುತ್ತಿರುವುದು ಮಾತ್ರ ತಪ್ಪಿಲ್ಲ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.