ಸೋಮವಾರ, ಮೇ 10, 2021
20 °C

ಹೆಚ್ಚುತ್ತಿರುವ ಆಂಗ್ಲ ವ್ಯಾಮೋಹ: ಪ್ರೊ .ಅನಂತನ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: `ಇಂದಿನ ಯುವಕರು ಆಂಗ್ಲ ಭಾಷೆಯ ವ್ಯಾಮೋಹಕ್ಕೆ ಸಿಲುಕಿ ಸಾವಿರಾರು ವರ್ಷಗಳ ಇತಿಹಾಸವನ್ನು ಹೊಂದಿರುವ ಕನ್ನಡ ಭಾಷೆಯನ್ನು ಮರೆಯುತ್ತಿರುವದು ಕಳವಳಕಾರಿ ಸಂಗತಿಯಾಗಿದೆ' ಎಂದು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಬಿ.ಆರ್.ಅನಂತನ್ ವಿಷಾದ ವ್ಯಕ್ತಪಡಿಸಿದರು.ತಾಲ್ಲೂಕಿನ ಕಾಕತಿ ಗ್ರಾಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಆಶ್ರಯದಲ್ಲಿ ಭಾನುವಾರ ನಡೆದ ಬೆಳಗಾವಿ ತಾಲ್ಲೂಕು ಮೂರನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.`ಪಾಶ್ಚಿಮಾತ್ಯ ಸಂಸ್ಕೃತಿಯು ಸಮಾಜವನ್ನು ಆವರಿಸಿಕೊಳ್ಳುತ್ತಿದ್ದು, ಯುವಕರು ಭವ್ಯ ಪರಂಪರೆಯನ್ನು ಹೊಂದಿರುವ ಭಾರತೀಯ ಸಂಸ್ಕೃತಿಯನ್ನು ಮರೆಯುತ್ತಿದ್ದಾರೆ. ಇದರಿಂದಾಗಿ ಕನ್ನಡ ಭಾಷೆಯು ಅವಸಾನದ ಅಂಚಿಗೆ ತಲುಪುತ್ತಿದೆ. ಈ ಹಿನ್ನೆಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ಹಾಗೂ ಕನ್ನಡದ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಯುವಕರಲ್ಲಿ ಕನ್ನಡ ಅಭಿಮಾನವನ್ನು ಹೆಚ್ಚಿಸುವ ಅವಶ್ಯಕತೆಯಿದೆ' ಎಂದರು.ಸಾಹಿತ್ಯ ಸಾರಥಿ: ಹಿರಿಯ ಲೇಖಕಿ ನೀಲಗಂಗಾ ಚರಂತಿಮಠ ಅವರು ತಮ್ಮದೇ ಆದ ಸಾಹಿತ್ಯವನ್ನು ಸೃಷ್ಠಿ ಮಾಡಿ, ಇತರರಿಗೂ ಮಾರ್ಗದರ್ಶನ ನೀಡುತ್ತಿದ್ದಾರೆ. ಅವರನ್ನು ಇಂದಿನ ಸಮ್ಮೇಳನದ ಅಧ್ಯಕ್ಷರನ್ನಾಗಿ ಮಾಡಿ ಚನ್ನಮ್ಮನ ನಾಡಿನಲ್ಲಿ ಮಹಿಳೆಗೆ ಮನ್ನಣೆ ನೀಡಿರುವುದು ಅರ್ಥಪೂರ್ಣ ಹಾಗೂ ಔಚಿತ್ಯಪೂರ್ಣವಾಗಿದೆ. ನೀಲಗಂಗಾ ಚರಂತಿಮಠ ಅವರು `ಸಾಹಿತ್ಯ ಸಾರಥಿ'. ಕನ್ನಡ ಸಾಹಿತ್ಯ ಲೋಕಕ್ಕೆ ಅವರ ಕೊಡುಗೆ ಅಪಾರ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.`ಕನ್ನಡವು ಮುಖ್ಯ ಭಾಷೆಯಾದರೂ ಇದರಲ್ಲಿ ಹಲವು ಉಪಭಾಷೆಗಳಿವೆ. ವಿವಿಧ ಪ್ರಾಂತ್ಯಗಳಲ್ಲಿ ಕನ್ನಡ ಭಾಷೆಯನ್ನು ಮಾತನಾಡುವ ಶೈಲಿಯೂ ವಿಭಿನ್ನವಾಗಿದೆ. ಮುಖ್ಯ ಭಾಷೆಯು ಬೆಳೆಯಬೇಕಾದರೆ ತನ್ನ ಉಪಭಾಷೆಗಳನ್ನು ಬೆಳೆಸಬೇಕು. ಈ ನಿಟ್ಟಿನಲ್ಲಿ ಕನ್ನಡ ಭಾಷೆಯು ತನ್ನ ಉಪಭಾಷೆಗಳನ್ನು ಬೆಳೆಸುವ ಮೂಲಕ ತಾನು ಬೆಳೆಯುವ ಅಗತ್ಯವಿದೆ' ಎಂದು ಅಭಿಪ್ರಾಯಪಟ್ಟರು.ಮಾಜಿ ಮೇಯರ್ ಡಾ. ಸಿದ್ದನಗೌಡ ಪಾಟೀಲ ಮಾತನಾಡಿ, `ಬೆಳಗಾವಿಯನ್ನು ಎರಡನೇ ರಾಜಧಾನಿ ಮಾಡುವ ನಿಟ್ಟಿನಲ್ಲಿ ಸುಮಾರು 400 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ ಸುವರ್ಣ ವಿಧಾನಸೌಧ ಇಂದು ಕಾರ್ಯಚಟುವಟಿಕೆ ಇಲ್ಲದೇ ನರಳುತ್ತಿದ್ದೆ. ಇದು ಮ್ಯೂಸಿಯಂ ಆಗಬಾರದು, ಹೀಗಾಗಿ ಸುವರ್ಣ ವಿಧಾನಸೌಧಕ್ಕೆ ರಾಜ್ಯಮಟ್ಟದ ಎಲ್ಲ ಕಚೇರಿಗಳನ್ನು ಸ್ಥಳಾಂತರಿಸಬೇಕು. ಗಡಿನಾಡಿನ ಎಲ್ಲ ಸರ್ಕಾರಿ ಸಮಾರಂಭಗಳು ಸುವರ್ಣ ವಿಧಾನಸೌಧದಲ್ಲಿಯೇ ನಡೆಯಬೇಕು. ಈ ಮೂಲಕ ಗಡಿನಾಡಿನಲ್ಲಿ ಕನ್ನಡದ ಕಹಳೆ ಮೊಳಗಬೇಕು' ಎಂದು ಆಶಿಸಿದರು.ಹಿರಿಯ ಪತ್ರಕರ್ತ ಡಾ. ಸರಜೂ ಕಾಟ್ಕರ್ ಮಾತನಾಡಿ, `ನೀಲಗಂಗಾ ಚರಂತಿಮಠ ಅವರ `ಅವ್ವ' ಕವನಸಂಕಲನ ಇಡೀ ರಾಜ್ಯದ ತಾಯಂದಿರಿಗೆ ಅರ್ಪಿತವಾದ ಕೃತಿ. ಅವರ ಕೈಚಳಕದಿಂದ ಮೂಡಿ ಬಂದ ಸುಮಾರು 80ಕ್ಕೂ ಅಧಿಕ ಪುಸ್ತಕಗಳು ಸಾಹಿತ್ಯ ಲೋಕಕ್ಕೆ ವರದಾನವಾಗಿವೆ' ಎಂದರು.ಸಾನ್ನಿಧ್ಯ ವಹಿಸಿದ್ದ ನಾಗನೂರು ರುದ್ರಾಕ್ಷಿಮಠದ ಡಾ. ಸಿದ್ಧರಾಮ ಸ್ವಾಮೀಜಿ, `ಸಮ್ಮೇಳನಗಳು ಭಾಷೆ, ನೆಲ, ಜಲ, ಗಡಿ, ಸಾಹಿತ್ಯ, ಸಂಸ್ಕೃತಿಯ ಕುರಿತು ಅಭಿಮಾನ ಮೂಡಿಸುತ್ತವೆ. ಹೀಗಾಗಿ ವಿಶೇಷವಾಗಿ ಗಡಿ ಪ್ರದೇಶಗಳಲ್ಲಿ ಹೆಚ್ಚಿನ ಸಮ್ಮೇಳನಗಳು ನಡೆಯುವ ಅವಶ್ಯಕತೆಯಿದೆ' ಎಂದರು.`ಪ್ರತಿಯೊಂದು ಭಾಷೆಯು ಬೆಳೆಯಬೇಕಾದರೆ, ಎಲ್ಲ ಭಾಷೆಗಳ ನಡುವೆ ಭಾಷಾ ಬಾಂಧವ್ಯ ಬೆಳೆಯಬೇಕು.  ಜೊತೆಗೆ ವಿವಿಧ ಭಾಷೆಗಳಲ್ಲಿರುವ ಉತ್ಕೃಷ್ಟ ಕೃತಿಗಳು ಅನುವಾದಗೊಳ್ಳುವ ಸನ್ನಿವೇಶ ನಿರ್ಮಾಣವಾಗಬೇಕು. ಆಗ ಎಲ್ಲ ಭಾಷೆಗಳು ಬೆಳೆಯಲು ಸಾಧ್ಯವಾಗುತ್ತದೆ' ಎಂದು ತಿಳಿಸಿದರು.ಶಿವರಾಯಿ ಏಳುಕೋಟಿ ಹಾಗೂ ಮಹಾಂತೇಶ ಮೆಣಸಿನಕಾಯಿ ಅವರ ಸಂಪಾದಕತ್ವದಲ್ಲಿ ಮೂಡಿ ಬಂದ ಸುವರ್ಣ ಸಿರಿ ಸಂಸ್ಮರಣ ಸಂಚಿಕೆಯನ್ನು ಇದೇ ಸಂದರ್ಭದಲ್ಲಿ ಬಿಡುಗಡೆಗೊಳಿಸಲಾಯಿತು. ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಯ.ರು.ಪಾಟೀಲ ಉಪಸ್ಥಿತರಿದ್ದರು. ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಬಸವರಾಜ ಸಸಾಲಟ್ಟಿ ಸ್ವಾಗತಿಸಿದರು. ರತ್ನಪ್ರಭಾ ಬೆಲ್ಲದ ವಂದಿಸಿದರು. ಡಾ. ಗುರುದೇವಿ ಹುಲೆಪ್ಪನವರಮಠ ನಿರೂಪಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.