ಭಾನುವಾರ, ಏಪ್ರಿಲ್ 18, 2021
31 °C

ಹೆಚ್ಚುತ್ತಿರುವ ಜಾಗತಿಕ ತಾಪಮಾನ: ಮುಂಗಾರು ಮಾರುತಗಳಿಗೆ ಧಕ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಭಾರತದ ಕೃಷಿ ಮೇಲೆ ಕವಿಯಲಿದೆ ಕಾರ್ಮೋಡ

ಲಂಡನ್ (ಪಿಟಿಐ): ಜಾಗತಿಕ ತಾಪಮಾನ ಏರಿಕೆ ಫಲ ವಾಗಿ ಮುಂದಿನ 200 ವರ್ಷಗಳಲ್ಲಿ ಭಾರತದಲ್ಲಿ ಮುಂಗಾರು ಮಳೆ ಕೈಕೊಡುವ ಸಾಧ್ಯತೆ ಇದೆ ಎಂಬ ಆತಂಕಕಾರಿ  ಅಂಶವನ್ನು ಸಂಶೋಧನೆಯೊಂದು ಬೆಳಕಿಗೆ ತಂದಿದೆ.ತಾಪಮಾನ ಹೆಚ್ಚಳದಿಂದ ಮುಂಗಾರು ಮಳೆ ಶೇ 40ರಿಂದ 70 ರಷ್ಟು ಕುಂಠಿತಗೊಳ್ಳಲಿದೆ. ಇದರ ನೇರ ಪರಿಣಾಮ ಭಾರತೀಯ ಕೃಷಿ ಮತ್ತು ಆರ್ಥಿಕ ಕ್ಷೇತ್ರದ ಮೇಲಾಗಲಿದೆ. ದೇಶದಲ್ಲಿ ಆಹಾರ ಸರಬರಾಜು ವ್ಯವಸ್ಥೆಗೆ ಧಕ್ಕೆ ಬರಲಿದೆ ಎಂದು ಸಂಶೋಧಕರು ಹೇಳಿದ್ದಾರೆ.ಭಾರತದ ಕೃಷಿ ಕ್ಷೇತ್ರ ಪ್ರಮುಖವಾಗಿ ಮುಂಗಾರು ಮಳೆಯನ್ನು ನೆಚ್ಚಿಕೊಂಡಿದೆ.  ಜೂನ್‌ನಿಂದ ಸೆಪ್ಟೆಂಬರ್ ವರೆಗಿನ ಮುಂಗಾರು ಮಳೆಯಲ್ಲಿ ಇಲ್ಲಿನ ರೈತರು ಅಕ್ಕಿ, ಗೋಧಿಯಂತಹ ಆಹಾರಧಾನ್ಯಗಳನ್ನು ಬೆಳೆಯುತ್ತಾರೆ.ದೇಶದಲ್ಲಿ ಶೇ 70ರಷ್ಟು ಮಳೆಯನ್ನು ನೈರುತ್ಯ ಮಾರುತ ಹೊತ್ತು ತರುತ್ತದೆ. ಹಿಂದೂ ಮಹಾಸಾಗರದ ಪಶ್ಚಿಮ ಭಾಗದಿಂದ ಭಾರತ ಪ್ರವೇಶಿಸುವ ಪೆಸಿಫಿಕ್ ಮಾರುತ (ಎಲ್‌ನಿನೋ ) ಈ ಮಳೆಗೆ ಕಾರಣವಾಗುತ್ತವೆ. ಆದರೆ, ಮುಂಬರುವ ದಿನಗಳಲ್ಲಿ  ಈ ಮಾರುತಗಳು ಪೂರ್ವ ಭಾಗಕ್ಕೆ ತಮ್ಮ ದಿಕ್ಕನ್ನು ಬದಲಾಯಿಸುವ ಕಾರಣ ಮುಂಗಾರು ದುರ್ಬಲಗೊಳ್ಳುತ್ತದೆ, ಹವಾಮಾನ ವೈಪರೀತ್ಯ ಕಾಣಿಸಿಕೊಳ್ಳಲಿದೆ.ಪಾಟ್ಸ್‌ಡ್ಯಾಂ ವಿವಿ ಮತ್ತು ಹವಾಮಾನ ಸಂಶೋಧನಾ ಕೇಂದ್ರದ ವಿಜ್ಞಾನಿಗಳ ಪ್ರಕಾರ 22ನೇ ಶತಮಾನದಲ್ಲಿ ಮುಂಗಾರು ಮಾರುತಗಳ ವ್ಯವಸ್ಥೆ ಹದಗೆಡಲಿದೆ. ತಾಪಮಾನ ಮತ್ತು ಪೆಸಿಫಿಕ್ ಸಾಗರದ ಮಾರುತಗಳ ಬದಲಾವಣೆ ಇದಕ್ಕೆ ಪ್ರಮುಖ ಕಾರಣವಾಗಲಿವೆ. `ಎನ್ವಿರಾನ್‌ಮೆಂಟಲ್ ರಿಸರ್ಚ್ ಲೆಟರ್ಸ್‌~ ಸಂಶೋಧನಾ ಪತ್ರಿಕೆಯಲ್ಲಿ ಈ ವರದಿ ಪ್ರಕಟವಾಗಿದೆ.

 

ಕುಗ್ಗುತ್ತಿರುವ ಜಲಚರಗಳ ಗಾತ್ರ

ಜಾಗತಿಕ ತಾಪಮಾನ ಕೇವಲ ಭೂಮಿಯ ಮೇಲಿನ ಪ್ರಾಣಿಗಳ ಮೇಲಲ್ಲದೆ ಜಲ ಚರಗಳ ಮೇಲೂ ದುಷ್ಪರಿಣಾಮ ಬೀರುತ್ತಿದೆ ಎಂದು ಲಂಡನ್ ಸಂಶೋಧಕರು ಬಹಿರಂಗಪಡಿಸಿದ್ದಾರೆ.ಜಾಗತಿಕ ತಾಪಮಾನದಿಂದಾಗಿ ಭೂಮಿ ಮೇಲಿನ ಪ್ರಾಣಿಗಳಿಗಿಂತ ಜಲಚರಗಳ ಗಾತ್ರ ಹತ್ತು ಪಟ್ಟು ಕುಗ್ಗುತ್ತಿದೆ ಎಂದು ಲಂಡನ್ ವಿಶ್ವವಿದ್ಯಾನಿಲಯದ ಕ್ವೀನ್ ಮೇರಿ ಕಾಲೇಜಿನ ಸಂಶೋಧಕರು ಹಾಗೂ ಲಿವರ್‌ಪೂಲ್ ವಿವಿಗಳ ವಿದ್ಯಾರ್ಥಿಗಳ ತಂಡ ಹೇಳಿದೆ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.