ಭಾನುವಾರ, ಮೇ 22, 2022
26 °C

ಹೆಚ್ಚುವರಿ ವಿದ್ಯುತ್: ಕೇಂದ್ರ ನಕಾರ, ರಾಜ್ಯಕ್ಕೆ ನಿರಾಸೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ವಿದ್ಯುತ್ ಸಮಸ್ಯೆ ಎದುರಿಸುತ್ತಿರುವ ಕರ್ನಾಟಕಕ್ಕೆ ಕೇಂದ್ರದ ನೆರವು ಸಿಗುವ ಸಾಧ್ಯತೆಗಳಿಲ್ಲ. ಹೆಚ್ಚುವರಿ ವಿದ್ಯುತ್ ಪೂರೈಸುವಂತೆ  ಮಂಗಳವಾರ ಮನವಿ ಮಾಡಿದ ರಾಜ್ಯಕೆ ಇಂಧನ ಸಚಿವಾಲಯ ಸ್ಪಷ್ಟ ಭರವಸೆ ಕೊಡದೆ `ಬಂದ ದಾರಿಗೆ ಸುಂಕ  ಇಲ್ಲ~ ಎಂಬಂತೆ  ಬರಿಗೈ ತೋರಿಸಿ ಕಳುಹಿಸಿದೆ.~ರಾಜ್ಯವೇ ವಿದ್ಯುತ್ ಸಮಸ್ಯೆಗೆ ಪೂರ್ಣ ಹೊಣೆ. ಇದರಲ್ಲಿ ಕೇಂದ್ರದ ಪಾತ್ರವೇನೂ ಇಲ್ಲ. ವಿದ್ಯುತ್ ಸಮವರ್ತಿ ಪಟ್ಟಿಯಲ್ಲಿರುವ ವಿಷಯವಾದರೂ ನಮ್ಮಲ್ಲಿರುವ ಸೀಮಿತ ಸಂಪನ್ಮೂಲವನ್ನು ಎಲ್ಲ ರಾಜ್ಯಗಳಿಗೂ ಹಂಚಿಕೆ ಮಾಡುತ್ತಿದ್ದೇವೆ~ ಎಂದು ಕೇಂದ್ರ ಇಂಧನ ಸಚಿವ ಸುಶೀಲ್ ಕುಮಾರ್ ಶಿಂಧೆ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.ವಿದ್ಯುತ್ ಅಭಾವದಿಂದ ~ಲೋಡ್ ಶೆಡ್ಡಿಂಗ್~ ಸಮಸ್ಯೆ ಎದುರಿಸುತ್ತಿರುವ ರಾಜ್ಯಕ್ಕೆ ಹೆಚ್ಚುವರಿ ವಿದ್ಯುತ್ ಪೂರೈಸಬೇಕು ಎಂದು ಸುಶೀಲ್ ಕುಮಾರ್ ಶಿಂಧೆ ಅವರಿಗೆ ರಾಜ್ಯ ವಿದ್ಯುತ್ ಸಚಿವೆ ಶೋಭಾ ಕರಂದ್ಲಾಜೆ ಮನವಿ ಸಲ್ಲಿಸಿದರು. ಆದರೆ, ರಾಜ್ಯದ ಮನವಿಗೆ ಕೇಂದ್ರದಿಂದ ಸಕಾರಾತ್ಮಕ ಸ್ಪಂದನ ದೊರೆಯಲಿಲ್ಲ.~ಕರ್ನಾಟಕ ವಿದ್ಯುತ್ ಸಮಸ್ಯೆಗೆ ಕೇಂದ್ರದ ಕಡೆ ಬೆರಳು ತೋರುವುದು ಸರಿಯಲ್ಲ. ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದು ರಾಜ್ಯದ ಹೊಣೆ. ಆದರೂ ಕರ್ನಾಟಕದ ಮನವಿಯನ್ನು ಪರಿಶೀಲಿಸಲು ಇಲಾಖೆ ಕಾರ್ಯದರ್ಶಿಗೆ ಸೂಚಿಸಲಾಗಿದೆ. ಬುಧವಾರ ಬೆಳಿಗ್ಗೆ ರಾಜ್ಯದ ಅಧಿಕಾರಿಗಳ ಜತೆ ಸಭೆ ನಡೆಯಲಿದೆ~ ಎಂದು ಶಿಂಧೆ ತಿಳಿಸಿದರು.~ವಿದ್ಯುತ್ ಹೆಸರಿನಲ್ಲಿ ರಾಜಕೀಯ ಮಾಡುವುದು ನನಗಂತೂ ಇಷ್ಟವಿಲ್ಲ. ಕರ್ನಾಟಕದ ಬಗೆಗೆ ಯುಪಿಎ ಸರ್ಕಾರ ಮಲತಾಯಿ ಧೋರಣೆ ತಳೆದಿದೆ ಎಂದು ಹೇಳುವುದು ಸರಿಯಲ್ಲ. ವಿದ್ಯುತ್ ಸಮಸ್ಯೆ ಆ ರಾಜ್ಯದಲ್ಲಿ ಮಾತ್ರ ಇಲ್ಲ. ಮಹಾರಾಷ್ಟ್ರ, ದೆಹಲಿ ಒಳಗೊಂಡಂತೆ ಬಹುತೇಕ ರಾಜ್ಯಗಳಲ್ಲಿದೆ~ ಎಂದು ಸ್ಪಷ್ಟಪಡಿಸಿದರು.ಕೇಂದ್ರ ಸರ್ಕಾರದ ಬಳಿ ಸೀಮಿತ ಪ್ರಮಾಣದಲ್ಲಿ ವಿದ್ಯುತ್ ಇದೆ. ಅದನ್ನು ಎಲ್ಲರಿಗೂ ಹಂಚಿಕೆ ಮಾಡಲಾಗುತ್ತಿದೆ. ಎಲ್ಲವನ್ನು ಕೇಂದ್ರವೇ ಪೂರೈಸಬೇಕೆಂದು ನಿರೀಕ್ಷಿಸಬಾರದು. ಅನಗತ್ಯವಾಗಿ ಕೇಂದ್ರ ಸರ್ಕಾರವನ್ನು ದೂಷಣೆ ಮಾಡಬಾರದು. ಕಾಲಕಾಲಕ್ಕೆ  ಅಗತ್ಯವಾದ ವಿದ್ಯುತ್ ಅನ್ನು ರಾಜ್ಯಗಳೇ ಉತ್ಪಾದಿಸಿಕೊಳ್ಳಬೇಕು ಎಂದು ಸಲಹೆ ಮಾಡಿದರು.ನೆರವು ಭರವಸೆ: ಸಮಸ್ಯೆಗೆ ಸಿಕ್ಕಿರುವ ರಾಜ್ಯಕ್ಕೆ ಅಗತ್ಯ ನೆರವು ನೀಡುವ ಭರವಸೆಯನ್ನು ಕೇಂದ್ರ ಸಚಿವರು ನೀಡಿದ್ದಾರೆ ಎಂದು ಸಭೆಯ ಬಳಿಕ  ಶೋಭಾ ಸ್ಪಷ್ಟಪಡಿಸಿದರು.  ರಾಜ್ಯಕ್ಕೆ  ಕೊರತೆ ಆಗಿರುವ ವಿದ್ಯುತ್ ಪೂರೈಕೆಗೆ ಪರ್ಯಾಯ ವ್ಯವಸ್ಥೆ ಮಾಡಬೇಕು ಎಂದು ಸಚಿವರಿಗೆ ಕೇಳಲಾಗಿದೆ.

 

ರಾಜ್ಯಕ್ಕೆ ಪ್ರತಿನಿತ್ಯ ಏಳು ಸಾವಿರ ಮೆ.ವಾ ವಿದ್ಯುತ್ ಅಗತ್ಯವಿದೆ. ಆದರೆ, ಆರು ಸಾವಿರ ಮೆ.ವಾ ಲಭ್ಯತೆ ಇದೆ. ಅಂತರ ಹೆಚ್ಚೇನೂ ಇಲ್ಲ. ಸಮಸ್ಯೆಯನ್ನು ಗಂಭೀರ ಎಂಬಂತೆ ಬಿಂಬಿಸಲಾಗುತ್ತಿದೆ. ಇದು ಬರೀ ಮಾಧ್ಯಮಗಳ ಸೃಷ್ಟಿ ಎಂದು ಇಂಧನ ಸಚಿವರು ದೂರಿದರು.ಛತ್ತೀಸ್‌ಗಢದಿಂದ 200 ಮೆ.ವಾ ವಿದ್ಯುತ್ ಖರೀದಿ ಮಾಡಲಾಗುತ್ತಿದೆ. ವಿತರಣಾ ಜಾಲದ ಸಮಸ್ಯೆಯಿಂದ ಕೇವಲ 16 ಮೆ.ವಾ ಮಾತ್ರ ಪೂರೈಕೆ ಆಗುತ್ತಿದೆ. ಈ ಕಾರಣಕ್ಕೆ ಪೂರ್ವದ ಬದಲಿಗೆ ಪಶ್ಚಿಮದ ಮಹಾರಾಷ್ಟ್ರ ಮತ್ತು ಗೋವಾದ ಮುಖಾಂತರ ವಿದ್ಯುತ್ ಒದಗಿಸುವಂತೆ ಕೋರಲಾಗಿದೆ ಎಂದು ಸ್ಪಷ್ಟಪಡಿಸಿದರು.ಬುಧವಾರ ಕಲ್ಲಿದ್ದಲು ಸಚಿವರನ್ನು ಭೇಟಿ ಮಾಡಲಾಗುತ್ತಿದೆ. ರಾಜ್ಯಕ್ಕೆ ಪ್ರತಿದಿನ 23 ಸಾವಿರ ದಶಲಕ್ಷ ಟನ್ ಕಲ್ಲಿದ್ದಲು ಅಗತ್ಯವಿದೆ. 11 ಸಾವಿರ ದಶಲಕ್ಷ ಟನ್ ಪೂರೈಕೆ ಆಗುತ್ತಿದೆ. ಶೇ. 50ಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಕೊರತೆ ಆಗಿದೆ ಎಂದು ಸಚಿವರು ಖಚಿತಪಡಿಸಿದರು.ಸಿಂಗರೇಣಿಯಿಂದ ಏಪ್ರಿಲ್‌ನಿಂದ ಸೆಪ್ಟೆಂಬರ್‌ವರೆಗೆ 10.5ದಶಲಕ್ಷ ಟನ್ ಕಲ್ಲಿದ್ದಲು ಬರಬೇಕಿತ್ತು. 5.5 ದಶಲಕ್ಷ ಟನ್ ಬಂದಿದೆ. ತಲಚೇರಿಯಿಂದ 14.5 ದಶಲಕ್ಷ ಟನ್ ಬರಬೇಕಿತ್ತು. ಎಂಟು ದಶಲಕ್ಷ ಟನ್ ಮಾತ್ರ ಪೂರೈಕೆ ಆಗಿದೆ. `ವೆಸ್ಟ್ ಕೋಸ್ಟ್~ ಗಣಿಯಿಂದ ಮಾತ್ರ ಸರಿಯಾದ ಪ್ರಮಾಣದ ಕಲ್ಲಿದ್ದಲು ಬಂದಿದೆ ಎಂದು ಸಚಿವರು ನುಡಿದರು. ಕರ್ನಾಟಕದ ದೆಹಲಿಯ ವಿಶೇಷ ಪ್ರತಿನಿಧಿ ಧನಂಜಯ ಕುಮಾರ್, ವಿಶೇಷ ಸಹಾಯಕ ಪ್ರತಿನಿಧಿ ಬೈಕೆರೆ ನಾಗೇಶ್, ರೆಸಿಡೆಂಟ್ ಕಮಿಷನರ್ ವಂದನಾ ಗುರ್ನಾನಿ, ಇಂಧನ ಇಲಾಖೆ ಅಧಿಕಾರಿಗಳಾದ ಶಮೀಮ್ ಬಾನು, ಯೋಗೇಂದ್ರ ತ್ರಿಪಾಠಿ ಮೊದಲಾದವರು ಸಚಿವರ ಜತೆಯಲ್ಲಿದ್ದರು.ಪೂರ್ವ ನಿಗದಿಯಂತೆ ಮುಖ್ಯಮಂತ್ರಿ ನೇತೃತ್ವದ ರಾಜ್ಯದ ನಿಯೋಗ ಈ ತಿಂಗಳ 14ರಂದು ದೆಹಲಿಗೆ ಬರುವುದಿತ್ತು. ಎರಡು ದಿನ ಮೊದಲೇ ಶೋಭಾ ಕರಂದ್ಲಾಜೆ ರಾಜಧಾನಿಗೆ ಧಾವಿಸಿ ಶಿಂಧೆ ಅವರನ್ನು ಭೇಟಿ ಮಾಡಿರುವುದು ಅಚ್ಚರಿ ಉಂಟುಮಾಡಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.