ಮಂಗಳವಾರ, ಮೇ 24, 2022
25 °C

ಹೆಚ್ಚು ಲಾಭ ತರುವ ಈರುಳ್ಳಿ ಬೀಜೋತ್ಪಾದನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಈರುಳ್ಳಿ ಬೆಳೆದರೆ ಸಿಗುವ ಲಾಭಕಿಂತ ಈರುಳ್ಳಿ ಬೀಜ ಉತ್ಪಾದನೆ ಮಾಡುವುದು ಹೆಚ್ಚು ಲಾಭದಾಯಕ.  ದೊಡ್ಡಬಳ್ಳಾಪುರ ತಾಲ್ಲೂಕಿನ ಸಾಸಲು ಹೋಬಳಿಯ ಅನೇಕ ರೈತರು ಕಳೆದ ಕೆಲ ವರ್ಷಗಳಿಂದ ಈರುಳ್ಳಿ ಬೀಜ ಉತ್ಪಾದನೆಗೆ ಹೆಚ್ಚಿನ ಗಮನ ನೀಡಿದ್ದಾರೆ.ಕಳೆದ ಒಂದೆರಡು ತಿಂಗಳಿನಲ್ಲಿ ದೇಶದಲ್ಲಿ ಈರುಳ್ಳಿ ಬೆಲೆ ಹೆಚ್ಚಾಗಿದೆ. ಜನರು ಗುಣಮಟ್ಟದ ಈರುಳ್ಳಿ ಸಿಗದೆ ಪರದಾಡುತ್ತಿದ್ದಾರೆ. ಆದರೆ ಬೆಲೆ ಎಷ್ಟು ದಿನ ಹೀಗೆ ಏರುಮುಖವಾಗಿದ್ದೀತು? ಹೊಸ ಈರುಳ್ಳಿ ಮಾರುಕಟ್ಟೆಗೆ ಬರಲು ಆರಂಭವಾಗಿದೆ. ಈರುಳ್ಳಿಗೆ ಸದಾ ಹೆಚ್ಚಿನ ಬೆಲೆ ಸಿಗುವುದಿಲ್ಲ. ಆದರೆ ಈರುಳ್ಳಿ ಬೀಜಕ್ಕೆ ಇಂತಹ ಪರಿಸ್ಥಿತಿ ಬರುವುದಿಲ್ಲ. ನಮ್ಮೂರು ಹಾಗೂ ಸುತ್ತಲಿನ ರೈತರು ಈಗ ಈರುಳ್ಳಿ ಗೆಡ್ಡೆ ಬೆಳೆಯುವುದಿಲ್ಲ ಎನ್ನುತ್ತಾರೆ ಸಾಸಲು ಹೋಬಳಿಯ ಸೋಣ್ಣೇನಹಳ್ಳಿ ಗ್ರಾಮದ ರೈತ ನಾರಾಯಣಪ್ಪ.ಮಾರುಕಟ್ಟೆಯಲ್ಲಿ ಬೆಲೆ ಕುಸಿದರೆ ಬೀಜಗಳನ್ನು ಮನೆಯಲ್ಲಿ ಇಟ್ಟು ದಾಸ್ತಾನು ಮಾಡಬಹುದು. ಬೆಲೆ ಬಂದಾಗ ಮಾರಾಟ ಮಾಡಬಹುದು. ಆದರೆ ಈರುಳ್ಳಿ ಗೆಡ್ಡೆಯನ್ನು ಹೀಗೆ ಹೆಚ್ಚು ಕಾಲ ಸಂಗ್ರಹಿಸಿಡಲು ಆಗದು ಎನ್ನುವುದು ಅನೇಕ ರೈತರ ಅನುಭವ.  ಸಾಸಲು ಹೋಬಳಿಯ ಗುಂಡಮಗೆರೆ, ಹೊಸಹಳ್ಳಿ, ಓಜೇನಹಳ್ಳಿ, ವಾಬಸಂದ್ರ ಅಲ್ಲಿನ ಗ್ರಾಮಗಳಲ್ಲಿ   ಗುಣಮಟ್ಟದ ಈರುಳ್ಳಿ ಬಿತ್ತನೆ ಬೀಜ ಬೆಳೆಯುವುದಕ್ಕೆ ಅಲ್ಲಿನ ಕೆಂಪು, ಕಪ್ಪು ಮಿಶ್ರಿತ ಮಣ್ಣು ಹಾಗೂ ಉಷ್ಣ ವಾತಾವರಣ ಕಾರಣ. ಕೆರೆಯ ನೀರು ಮತ್ತು ಕೊಳವೆ ಬಾವಿ ಸೌಲಭ್ಯ ಇರುವ ರೈತರು ಕನಿಷ್ಠ ಒಂದು ಎಕರೆ ಪ್ರದೇಶದಲ್ಲಾದರೂ ಈರುಳ್ಳಿ ಬೀಜ ಬೆಳೆಯುತ್ತಾರೆ.ಅನೇಕರು ಈರುಳ್ಳಿ ಬೀಜ ಬೆಳೆಯುವುದರಲ್ಲಿ ಪರಿಣತರು. ಬೆಳೆದ ಬೀಜಗಳನ್ನು ಮಧ್ಯವರ್ತಿಗಳ ಸಹಕಾರವಿಲ್ಲದೆ ಮಾರಾಟ ಮಾಡುತ್ತಾರೆ. ರೈತರೇ ಗ್ರಾಮಗಳಿಗೆ ಬಂದು ಬೀಜ ಖರೀದಿ ಮಾಡುತ್ತಾರೆ. ಹೆಚ್ಚಿನ ಪ್ರಮಾಣದಲ್ಲಿ ಬೀಜ ಬೆಳೆಯುವ ರೈತರು ಚಿಕ್ಕಬಳ್ಳಾಪುರ, ಹಿಂದೂಪುರ ಮಾರುಕಟ್ಟೆಗಳಲ್ಲಿ ಬೀಜ ಮಾರಾಟ ಮಾಡುತ್ತಾರೆ.  ಬೀಜವನ್ನು ಕೆ.ಜಿ.ಲೆಕ್ಕದಲ್ಲಿ ಮಾರಾಟ ಮಾಡುವ ಬದಲು ಆಳತೆ ಸೇರಿನ ಲೆಕ್ಕದಲ್ಲಿ ಮಾರಾಟ ಮಾಡುತ್ತಾರೆ.  ಇಲ್ಲಿನ ರೈತರು ಒಂದು ಎಕರೆ ಪ್ರದೇಶದಲ್ಲಿ 6 ರಿಂದ 8 ಕ್ವಿಂಟಲ್‌ವರೆಗೆ ಬೀಜದ ಇಳುವರಿ ಪಡೆಯುತ್ತಾರೆ. ಸಾಮಾನ್ಯವಾಗಿ ಆಗಸ್ಟ್ ತಿಂಗಳಲ್ಲಿ ಚಿಕ್ಕಬಳ್ಳಾಪುರ ಮಾರುಕಟ್ಟೆಯಲ್ಲಿ ಸಿಗುವ ಸಣ್ಣ ಸಣ್ಣ ಈರುಳ್ಳಿ ಬಿತ್ತನೆ ಗೆಡೆಗಳನ್ನು ತಂದು ನಾಟಿ ಮಾಡುತ್ತಾರೆ. ಒಂದು ಎಕರೆ ಪ್ರದೇಶಕ್ಕೆ 50 ಕೆ.ಜಿ.ಯಷ್ಟು ಬಿತ್ತನೆ ಗೆಡ್ಡೆ ಬೇಕಾಗುತ್ತವೆ. ಗೆಡ್ಡೆ ನಾಟಿ ಸಮಯದಲ್ಲಿ ಹಾಗೂ ನಂತರ ಮಳೆ ಹೆಚ್ಚಾದರೂ ಬೆಳೆಗೆ ತೊಂದರೆ ಇಲ್ಲ. ಆದರೆ ಈರುಳ್ಳಿ ಹೂ ಬಿಟ್ಟು ಬೀಜ ಬಲಿತು ಕಾಳು ಆಗುವ ಸಮಯದಲ್ಲಿ ಅಂದರೆ ಡಿಸೆಂಬರ್‌ನಿಂದ ಜನವರಿ ಅವಧಿಯಲ್ಲಿ ಮಳೆ ಬಂದರೆ ಗುಣಮಟ್ಟದ ಈರುಳ್ಳಿಯನ್ನು ಪಡೆಯಬಹುದು.                                                     

 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.