ಶನಿವಾರ, ಫೆಬ್ರವರಿ 27, 2021
31 °C

ಹೆಣ್ಣಿನ ಭಾವಲೋಕದ ‘ನಿಮಿತ್ತ’

ರೂಪಾ ಕೆ.ಎಂ. Updated:

ಅಕ್ಷರ ಗಾತ್ರ : | |

ಹೆಣ್ಣಿನ ಭಾವಲೋಕದ ‘ನಿಮಿತ್ತ’

ಹೆಣ್ಣು ಜೀವ ನದಿಯಂತೆ. ಬದುಕಿನ ಆಕಸ್ಮಿಕ ಹಾಗೂ ಅನಿವಾರ್ಯ ಕಷ್ಟಗಳ ನಡುವೆಯೂ ಸರಾಗವಾಗಿ ಹರಿದು, ಹರಿದೆಡೆಯೆಲ್ಲ ಫಲವತ್ತತೆಯನ್ನು ಪಸರಿಸಿ ಬೆರಗು ಮೂಡಿಸುತ್ತಾಳೆ. ಈ ಬೆರಗು ಪ್ರಕೃತಿಯ ವಿಸ್ಮಯದಲ್ಲಿ ಒಂದು ಎಂಬಂತೆ ವ್ಯಾಖ್ಯಾನಗೊಳ್ಳುತ್ತದೆ.ನದಿ ಹರಿಯುವುದು, ಹರಿಯುತ್ತಲೇ ಎಲ್ಲವನ್ನು ಒಳಗೊಂಡು ಪೊರೆಯುವುದು ಪ್ರಕೃತಿಯ ವಿಷಯಕ್ಕೆ ಒಂದು ಸಲೀಸಾದ ವಿಚಾರವೇ. ಆದರೆ, ಹೆಣ್ಣೆಂಬ ಆತ್ಮವು ವ್ಯವಸ್ಥೆಯ ಎಲ್ಲಾ ಕಲ್ಮಶಗಳನ್ನು ಒಳಗೊಂಡು, ನೋಯುತ್ತಲೇ ನಾದವಾಗುವುದು ಅಷ್ಟೇನೂ ಸರಳ ಸಂಗತಿಯಲ್ಲವೆಂಬುದನ್ನು  ಎಸ್‌.ಎನ್‌.ಸೇತುರಾಂ ನಿರ್ದೇಶನದ ‘ನಿಮಿತ್ತ’ ನಾಟಕವು ಮನೋಜ್ಞವಾಗಿ ಅಭಿವ್ಯಕ್ತಿಗೊಳಿಸುತ್ತದೆ.ಆಂಬುಲೆನ್ಸ್‌ ಸದ್ದಿನೊಂದಿಗೆ, 50ರ ಆಸುಪಾಸಿನ ವ್ಯಕ್ತಿಯೊಬ್ಬರು ಹೃದಯಾಘಾತಕ್ಕೆ ಒಳಗಾಗಿ ಆಸ್ಪತ್ರೆಗೆ ಸೇರುವುದು ಹಾಗೂ ಅದೇ ಆಸ್ಪತ್ರೆಯ ಸಂಸ್ಥಾಪಕ ಹೃದಯತಜ್ಞನ ಮಾತುಗಾರಿಕೆಗೆ ನಾಟಕದ ಮೊದಲ ದೃಶ್ಯ ಅರ್ಪಿತಗೊಳ್ಳುತ್ತದೆ.

ಹೃದಯತಜ್ಞನ ಪಾತ್ರದಲ್ಲಿ ಕಾಣಿಸಿಕೊಳ್ಳುವ ಸೇತುರಾಂ, ‘ಆಯಸ್ಸು, ನೆನಪು ಎರಡೂ ಹೆಚ್ಚಿರಬಾರದು. ಆಯಸ್ಸು ಹೆಚ್ಚಾದಂತೆ ಆಸ್ಪತ್ರೆಗೆ ಲಾಭ’ ಎಂದು ಹೇಳುತ್ತಲೇ, ವಾಣಿಜ್ಯೀಕರಣಗೊಂಡ ಆಸ್ಪತ್ರೆಗಳು, ಹಣಕ್ಕಾಗಿ ಬಾಯಿಬಿಡುವ ವೈದ್ಯರು, ವೈದ್ಯಕೀಯ ಶಿಕ್ಷಣ ಕ್ಷೇತ್ರದಲ್ಲಿರುವ ಭ್ರಷ್ಟಾಚಾರ, ರೋಗ ಹಾಗೂ ರೋಗಿಗಳನ್ನು ಬಳಸಿಕೊಂಡು ಹಣ ಮಾಡುವ ದಂಧೆ ಎಲ್ಲವನ್ನು ಕೆಲವೇ ಸಾಲಿನ ಸಂಭಾಷಣೆಯಲ್ಲಿ ಹಿಡಿದಿಡುತ್ತಾರೆ.ಅಲ್ಲಿಂದ ಆರಂಭವಾಗುವ ನಾಟಕವು ಹೃದಯಾಘಾತಕ್ಕೆ ಒಳಗಾಗಿದ್ದು ಒಬ್ಬ ಬೇಜವಾಬ್ದಾರಿ ಗಂಡ ಎಂಬುದನ್ನು ತೋರಿಸುತ್ತದೆ. ಪ್ರತಿಭಾವಂತ, ಕೈತುಂಬ ಸಂಬಳ ತರುವ ಪತ್ನಿಗೆ, ಅಯೋಗ್ಯ, ಬೇಜವಾಬ್ದಾರಿ, ಮನೆಹಾಳ ಗಂಡನು ಪತಿಯಾದರೆ ಆಕೆ ಬದುಕಿನುದ್ದಕ್ಕೂ ಏನೆಲ್ಲ ನೋವನ್ನು ಉಣ್ಣುತ್ತಾಳೆ ಹಾಗೂ ನೋವಿಗೆ ಸುಖದ ಹೊದಿಕೆಯನ್ನು ಹೇಗೆ ಹೊದಿಸುತ್ತಾಳೆ ಎಂಬ ಈ ನೆಲದ ಬಹುಪರಿಚಿತ ಕಥನವನ್ನು ಯಾವುದೇ ಕುತೂಹಲವಿಲ್ಲದೆಯೇ, ಜೀವಂತಿಕೆಯ ನೆಲೆಯಲ್ಲಿ ಕಟ್ಟಿಕೊಡುತ್ತಾರೆ.ಎರಡು ಹೆಣ್ಣುಮಕ್ಕಳನ್ನು ಹೆತ್ತ ಮಹಿಳೆಯೊಬ್ಬಳು ಬೇಜವಾಬ್ದಾರಿ ಗಂಡನನ್ನು ಕಟ್ಟಿಕೊಂಡು, ಇತ್ತ ಕುಟುಂಬ, ಅತ್ತ ವೃತ್ತಿ ಬದುಕನ್ನು ಬಹಳ ಸಶಕ್ತವಾಗಿ ನಿರ್ವಹಿಸುತ್ತಾಳೆ. ಮಕ್ಕಳಿಬ್ಬರಿಗೂ ಉನ್ನತ ವಿದ್ಯಾಭ್ಯಾಸ ಕೊಡಿಸಿ, ಉತ್ತಮ ಉದ್ಯೋಗವಿರುವ ವರರೊಂದಿಗೆ ಮದುವೆ ಮಾಡಿಸಿ, ಅವರು ಅಮೆರಿಕದಲ್ಲಿ ನೆಲೆಸುವವರೆಗೂ ಸಶಕ್ತ ತಾಯಿಯ ಜವಾಬ್ದಾರಿಯನ್ನು ನಿರ್ವಹಿಸುತ್ತಾಳೆ. ಅಯೋಗ್ಯ ಗಂಡನಿದ್ದರೂ, ಆತನ ದೌರ್ಬಲ್ಯಗಳನ್ನು ಸಮಾಜದ ಎದುರು ಮುಚ್ಚಿಟ್ಟು ಯಶಸ್ವಿ ಪತ್ನಿಯೂ ಆಗುತ್ತಾಳೆ.ಬೇಜವಾಬ್ದಾರಿಯ ಮಗನಿಗೆ ಬುದ್ಧಿ ಬರಲೆಂದು ಮದುವೆ ಮಾಡುವ ಅತ್ತೆಯನ್ನು ಕ್ಷಮಿಸಿ, ಸೊಸೆಯ ಹೊಣೆಗಾರಿಕೆಯನ್ನು ಮೆರೆಯುತ್ತಾಳೆ. ಹೆಣ್ಣೊಬ್ಬಳ ಮಾನವ ಸಹಜ ಆಸೆ–ಆಕಾಂಕ್ಷೆಗಳ ಸಮಾಧಿಯ ಮೇಲೆ ರೂಪಿತಗೊಂಡ ‘ಸ್ತ್ರೀ ಧರ್ಮ’ ಅವಳ  ತ್ಯಾಗ ಹಾಗೂ ಸಂಯಮವನ್ನೇ ವ್ಯಂಗ್ಯಮಾಡುತ್ತದೆ. ಈ ವ್ಯಂಗ್ಯವು ವಾಸ್ತವಕ್ಕೆ ತೀರಾ ಹತ್ತಿರವೆನಿಸುವ ಮೂಲಕ ನಾಟಕದ ಪ್ರಸ್ತುತತೆ ಪ್ರಕಟಗೊಳ್ಳುತ್ತದೆ.ಕೊನೆಗೂ ಹೃದಯಾಘಾತಕ್ಕೆ ಒಳಗಾದ ಗಂಡನಿಗೆ ಕಚೇರಿಯಿಂದ ದೊರೆಯುವ ವೈದ್ಯಕೀಯ ಸೌಲಭ್ಯಗಳನ್ನು ಕೊಡಿಸುತ್ತಾಳೆ. ಆಸ್ಪತ್ರೆಯಿಂದ ಮನೆಗೆ ಬಂದ ನಂತರ ಆತನ ಚಾಕರಿ ಮಾಡುವುದಕ್ಕೂ ಒಪ್ಪುತ್ತಾಳೆ.

‘ಸ್ತ್ರೀಧರ್ಮ’ವನ್ನೇ ಪ್ರಶ್ನೆಗೆ ಒಡ್ಡುವ ಹಾಗೂ ಪ್ರಶ್ನಿಸುತ್ತಲೇ  ಅದೊಂದು ‘ಅನಿವಾರ್ಯ’ ಎಂದು ಅಪ್ಪಿಕೊಳ್ಳುವ ಈ ನೆಲದ ಹೆಣ್ಣುಮಗಳ  ಕಥನವಾದ್ದರಿಂದ ನಾಟಕ ಹೆಚ್ಚು ಆಪ್ತವಾಗುತ್ತದೆ.ಪತ್ನಿಯ ಧಾರಣಾ ಶಕ್ತಿಯನ್ನೇ ಆಕೆಯ ದೌರ್ಬಲ್ಯವೆಂದು, ಅದು ಅವಳಿಗೆ ಅನಿವಾರ್ಯ ಎಂದು ಭಾವಿಸಿ, ಬದುಕನ್ನು ಹಾಳುಮಾಡಿಕೊಳ್ಳುವ ಗಂಡನ  ಪಾತ್ರವೂ ಕೂಡ ವಾಸ್ತವದ ನೆಲೆಯಲ್ಲಿ ಮಾತನಾಡುವುದರಿಂದ ಪ್ರೇಕ್ಷಕನಿಗೆ ಅಸಹಜ ಎನಿಸುವುದಿಲ್ಲ.ನಿರ್ದೇಶಕರು ಬೇಜವಾಬ್ದಾರಿ ಪತಿಯನ್ನು ಆರೋಪಿಯನ್ನಾಗಿ ಚಿತ್ರಿಸದೇ, ಆತನಿಗೂ ಮಾತನಾಡುವ ಅವಕಾಶ ನೀಡುತ್ತಾರೆ. ಆ ಪಾತ್ರ  ಪತ್ನಿ ತಪ್ಪುಗಳನ್ನೆಲ್ಲ ಸಹಿಸಿದ್ದರಿಂದಲೇ ತಪ್ಪು ಮಾಡುತ್ತಾ ಹೋದೆ ಎಂಬ ನಿರೀಕ್ಷಿತ  ನೆಪವನ್ನೇ ಹೃದಯ ತಜ್ಞನ ಮುಂದೆ ಇಡುತ್ತದೆ. ಮತ್ತು ತನ್ನೆಲ್ಲ ಕುಕೃತ್ಯಗಳನ್ನು ಮುಂದುವರಿಸುವುದಾಗಿಯೂ ಹೇಳುತ್ತದೆ. ಹಾಗೇ ಹೇಳುತ್ತಲೇ ಆಸ್ಪತ್ರೆಯಲ್ಲಿ ಮತ್ತೊಮ್ಮೆ ಹೃದಯಾಘಾತಕ್ಕೆ ಒಳಗಾಗುತ್ತದೆ.ಹೃದಯವೇ ಇಲ್ಲದ ಜೀವವನ್ನು ಉಳಿಸುವುದರಲ್ಲಿ ಅರ್ಥವಿಲ್ಲ. ಈಗಲಾದರೂ ನಾನು ‘ವೈದ್ಯ’ನಾಗಬೇಕು ಎಂಬ ಹಠಕ್ಕೆ ಬೀಳುವ ಹೃದಯತಜ್ಞ, ಚಿಕಿತ್ಸೆ ನೀಡದೇ ರೋಗಿಯ ಸಾವಿಗೆ ಕಾರಣನಾಗುತ್ತಾನೆ. ನಿಜ ಅರ್ಥದಲ್ಲಿ ‘ಹೃದಯ’ ತಜ್ಞನೂ ಆಗುತ್ತಾನೆ. ಆದರೆ, ಪತಿಯ ಸಾವಿನಿಂದ ಪತ್ನಿಗೆ ಬಿಡುಗಡೆ ದೊರಕಿಸಿಕೊಟ್ಟೆ ಎಂಬ ಭ್ರಮೆಗೆ ಬೀಳುವ  ಮೂಲಕ  ನಾಟಕೀಯ ನೆಲೆಯಲ್ಲಿ ಕಥನ ಮುಕ್ತಾಯಗೊಳ್ಳುತ್ತದೆ.‘ಹೃದಯ’ವೇ ಇಲ್ಲದವರಿಗೆ ಬದುಕುವ ಅರ್ಹತೆಯಿಲ್ಲ ಎಂಬುದು ಹೌದಾದರೂ ಇದನ್ನು ವಾಸ್ತವದಲ್ಲಿ ನಿಜವಾಗಿಸುವುದು ಕಷ್ಟಸಾಧ್ಯ. ಈ ಮಾತನ್ನು ಪ್ರೇಕ್ಷಕ ರಂಗದ ಮೇಲೆ ನೋಡಿ ತಣಿಯಬಹುದಷ್ಟೆ. ಕೊನೆಯ ದೃಶ್ಯ ನಾಟಕದ ಸಾಧ್ಯತೆಯನ್ನು ಸಂಕುಚಿತಗೊಳಿಸಿದೆ. ಯಾರನ್ನೂ ದೂರದೇ, ಒಟ್ಟು ಸಂಬಂಧದಲ್ಲಿರುವ ಸಂಕೀರ್ಣತೆಯನ್ನು ಸಶಕ್ತವಾಗಿ ನಿರೂಪಿಸುವ ಜವಾಬ್ದಾರಿಯನ್ನು ಎಸ್‌.ಎನ್‌.ಸೇತುರಾಂ  ಯಶಸ್ವಿಯಾಗಿ ನಿರ್ವಹಿಸಿದ್ದಾರೆ. ಸಿಹಿಕಹಿ ಚಂದ್ರು, ದೀಪಾ ಅವರಂತಹ ಪ್ರಬುದ್ಧ ನಟ–ನಟಿರೂ ಜತೆಯಾಗಿದ್ದಾರೆ. ಈ ನಾಟಕದ ತಿರುಳು ಮತ್ತು  ಮೊನಚಾದ ಸಂಭಾಷಣೆಯು ನಮ್ಮದೇ ಗಲ್ಲಿಯ ಕೊನೆಯ ಮನೆಯ ಕತೆಯಷ್ಟೆ ಆಪ್ತವಾಗಿ ಮನದಲ್ಲಿ ನಿಲ್ಲುತ್ತದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.