ಮಂಗಳವಾರ, ಜೂನ್ 15, 2021
22 °C

ಹೆಣ್ಣಿಲ್ಲಿ ಬಂಗಾರ!

ಡಿ.ಕೆ.ರಮೇಶ್ Updated:

ಅಕ್ಷರ ಗಾತ್ರ : | |

ಒಂದು ಕಾಲವಿತ್ತು. ದಿನಕ್ಕೆ ಏಕಮಾತ್ರ ಮೆಗಾ ಧಾರಾವಾಹಿ ಪ್ರಸಾರವಾಗುತ್ತಿದ್ದ ಕಾಲ. ಈಗ ಅವುಗಳ ಸಂಖ್ಯೆ ಐವತ್ತು ದಾಟಿದೆ. ಕನ್ನಡದ ಮೊಟ್ಟಮೊದಲ ಜನಪ್ರಿಯ ಮೆಗಾ ಧಾರಾವಾಹಿ `ಮನೆತನ~ದಿಂದ ಹಿಡಿದು ಇನ್ನೇನು ಕಿರುತೆರೆಗೆ ಕಾಲಿಡಲು ಸಜ್ಜಾಗಿರುವ `ಸೊಸೆ~ವರೆಗೆ ಎಂದೆಂದಿಗೂ ಧಾರಾವಾಹಿಗಳನ್ನು ಆಳಿದ್ದು ನಾರಿಯರೇ. ಅದು ಪಾತ್ರವರ್ಗವಾಗಿರಬಹುದು, ವೀಕ್ಷಕವರ್ಗವಾಗಿರಬಹುದು ಎಲ್ಲದರಲ್ಲೂ ಮಹಿಳೆಯರ ಮೇಲುಗೈ.

ಮನೆಯ ಸದಸ್ಯರು ಶಾಲೆಗೋ ಕಚೇರಿಗೋ ಹೊರಟಾಗ ಟಿವಿ ಗೆಳತಿಯಾಯಿತು. ಧಾರಾವಾಹಿ ಅಪ್ಯಾಯಮಾನವಾಯಿತು. ಮಹಿಳೆ ಎಂದರೆ ಧಾರಾವಾಹಿ, ಧಾರಾವಾಹಿ ಎಂದರೆ ಮಹಿಳೆ ಎನ್ನುವಂತಾಯಿತು. ಬಾಯಿಂದ ಬಾಯಿಗೆ ಹರಡಿಕೊಳ್ಳುತ್ತಿದ್ದ ಮಾತುಗಳೇ ಕತೆಯಾದವು. ಸುತ್ತಲಿನ ಜನರೇ, ಕುಟುಂಬದ ಸದಸ್ಯರೇ ಪಾತ್ರಗಳಾಗಿ ಮೂಡಿಬಂದರು. ಎಲ್ಲರ ಬದುಕಿನಲ್ಲಿ ನಡೆಯುತ್ತಿದ್ದ ವಿಧಿ ವಿಲಾಸವೇ ಧಾರಾವಾಹಿಗಳಲ್ಲಿ ಘಟಿಸಲು ಆರಂಭವಾಯಿತು. ತಾಯಿ, ಮಗಳು, ಪ್ರೇಯಸಿ, ಪತ್ನಿ, ಸ್ವಾವಲಂಬಿ ನಾರಿ ಹೀಗೆ ಹೆಣ್ಣು ವಿಶ್ವರೂಪಿಯಾದಳು.

`ಚಾಲಕರು, ಮಾಣಿಗಳು ಸಿನಿಮಾ ನೋಡುತ್ತಾರೆ ಹಾಗಾಗಿ ಅಂತಹುದೇ ಪಾತ್ರಗಳು ಹಿರಿತೆರೆಯಲ್ಲಿ ವಿಜೃಂಭಿಸುತ್ತವೆ. ಇದೇ ಸೂತ್ರ ಧಾರಾವಾಹಿಗಳಲ್ಲೂ ಇದೆ. ಮಹಿಳೆಯರೇ ಹೆಚ್ಚು ಧಾರಾವಾಹಿ ನೋಡುತ್ತಾರೆ. ಹಾಗಾಗಿ ಅಲ್ಲಿ ಸ್ತ್ರೀ ಪಾತ್ರಗಳೇ ಪ್ರಧಾನ. ಧಾರಾವಾಹಿಗಳ ಮೇಲೆ ಹೆಚ್ಚು ಸಮಯ ವಿನಿಯೋಗಿಸಬಲ್ಲಾಕೆ ಹೆಣ್ಣು. ಆಕೆಯೇ ಮುಖ್ಯ ಗ್ರಾಹಕಿ. ಹಾಗೆ ವೀಕ್ಷಿಸುವಾಗ ಪಾತ್ರವೊಂದರಲ್ಲಿ ತನ್ನನ್ನು ಗುರುತಿಸಿಕೊಳ್ಳುತ್ತಿರುತ್ತಾಳೆ. ಹೀಗಾಗಿ ಹೆಣ್ಣಿನ ಸುತ್ತಲೇ ಕತೆ ಹೆಣೆಯುವುದು ಸಹಜ~ ಎನ್ನುತ್ತಾರೆ ಝೀ ಕನ್ನಡದ ಮುಖ್ಯಸ್ಥ ಪರಮೇಶ್ವರ್ ಗುಂಡ್ಕಲ್.

ಧಾರಾವಾಹಿಗಳ ಜನಪ್ರಿಯತೆಯ ಮಾದರಿಗಳಾವುವು? ಅತ್ತೆ ಸೊಸೆ ಜಗಳ, ವಿವಾಹೇತರ ಸಂಬಂಧ, ವರದಕ್ಷಿಣೆ ಕಿರುಕುಳ, ಪ್ರೇಮ ವಂಚನೆ ಇತ್ಯಾದಿ ಇವುಗಳ ಸಾರ ಒಂದೇ ಅದು ಕಣ್ಣೀರ ಧಾರೆ! ಕುಟುಂಬಗಳಲ್ಲಿ ನಿಜಕ್ಕೂ ಈ ಸ್ಥಿತಿ ಇದೆಯೇ? ಹೆಣ್ಣು ಕಣ್ಣೀರಿನಲ್ಲೇ ಕೈ ತೊಳೆಯುತ್ತಿದ್ದಾಳೆಯೇ?

ಈಟಿವಿ ಕನ್ನಡ ವಾಹಿನಿಯ ಮನರಂಜನಾ ವಿಭಾಗದ ಮುಖ್ಯಸ್ಥ ಎಸ್.ಸುರೇಂದ್ರನಾಥ್ (ಸೂರಿ) ಅವರ ಪ್ರಕಾರ `ಮುಂದು ಮುಂದಕ್ಕೆ ಹೆಜ್ಜೆ ಇಡುವ ಬದಲು ಧಾರಾವಾಹಿ ಲೋಕ ಹಿಂದು ಹಿಂದಕ್ಕೆ ಚಲಿಸುತ್ತಿದೆ. ಕನ್ನಡ ಮಾತ್ರವಲ್ಲ ಎಲ್ಲಾ ಭಾಷೆಯ ಬಹುತೇಕ ಧಾರವಾಹಿಗಳು ಅಳುಮುಂಜಿಯರನ್ನೇ ಚಿತ್ರಿಸುತ್ತಿವೆ. ಉತ್ತಮ ಅಭಿರುಚಿಯುಳ್ಳ ಧಾರಾವಾಹಿಗಳಿಗೆ ಟಿಆರ್‌ಪಿ ಇರದು. ಟಿಆರ್‌ಪಿ ಇರುವ ಧಾರಾವಾಹಿಗಳಿಗೆ ಉತ್ತಮವಾದುದನ್ನು ಹೇಳುವ ವ್ಯವಧಾನ ಇರದು...~

`ಗೃಹಭಂಗದಂತಹ ಅತ್ಯುತ್ತಮ ಧಾರಾವಾಹಿಯೂ ಮುಗ್ಗರಿಸುತ್ತದೆ ಎಂದರೆ ವೀಕ್ಷಕ ಸಮೂಹದ ಬಗ್ಗೆಯೇ ಸಂದೇಹ ಮೂಡುತ್ತದೆ. ಯಶಸ್ಸನ್ನು ನಿಷ್ಕರ್ಷಿಸುವುದೇ ಕಷ್ಟವಾಗುತ್ತದೆ. ಈಗಂತೂ ಚಾನೆಲ್‌ಗಳ ಪೈಪೋಟಿ ಹೆಚ್ಚಿದೆ. ಅದಕ್ಕೆ ಅನುಗುಣವಾಗಿ ವೀಕ್ಷಕರ ಸಂಖ್ಯೆಯನ್ನು ಹಿಗ್ಗಿಸಿಕೊಳ್ಳುವುದು ಸಾಧ್ಯವಿಲ್ಲ. ಎಲ್ಲವೂ ಚಿಟಿಕೆ ಹೊಡೆದಷ್ಟೇ ಸಲೀಸಾಗಿ ತಯಾರಾಗಬೇಕು. ರಂಗಭೂಮಿ, ಸಿನಿಮಾ ಬೆಳೆದಷ್ಟು ನಿಧಾನಗತಿಯಲ್ಲಿ ಕಿರುತೆರೆ ಬೆಳೆಯದೇ ಹೋದದ್ದೆೀ ಅದರ ಸಮಸ್ಯೆ ಇರಬಹುದೇ?~ ಎಂದು ಪ್ರಶ್ನಿಸುತ್ತಾರೆ ಅವರು.

ಆದರೆ ಇದಕ್ಕೆ ತದ್ವಿರುದ್ಧವಾದ ವಾದ `ಚಿ.ಸೌ.ಸಾವಿತ್ರಿ~ ಧಾರಾವಾಹಿಯ ನಿರ್ದೇಶಕಿ ಶ್ರುತಿ ನಾಯ್ಡು ಅವರದ್ದು. `ವಾಸ್ತವವನ್ನು ತೋರಿಸಲು ಸುದ್ದಿ ವಾಹಿನಿಗಳಿವೆ. ನಮಗೇಕೆ ಅದರ ಗೊಡವೆ? ನಾನು ಧಾರಾವಾಹಿ ಮಾಡುತ್ತಿರುವುದು ರಂಜನೆಗಾಗಿ. ಧಾರಾವಾಹಿಗಳಿಂದ ಸಮಾಜ ಬದಲಾಗುತ್ತದೆ ಎನ್ನುವುದು ದೊಡ್ಡ ಸುಳ್ಳು. ನಿಜ ಜೀವನದಲ್ಲಿ ಕಾಣಲಾಗದ ಲೋಕ ಧಾರವಾಹಿಯಲ್ಲಿ ಕಂಡರೇನು ತಪ್ಪು?...~

`ಮನೆಯೊಂದು ಮೂರು ಬಾಗಿಲು~ ಧಾರಾವಾಹಿಯ ನಿರ್ದೇಶಕ ಮೋಹನ್ ಸಿಂಗ್ ಅವರದು ಬೇರೆಯದೇ ನಿಲುವು. `ವ್ಯವಸ್ಥೆಯನ್ನು ಒಪ್ಪಿಕೊಳ್ಳುತ್ತಲೇ ಅದನ್ನು ವಿರೋಧಿಸಿದ ಅನೇಕ ಧಾರಾವಾಹಿಗಳು ಬಂದಿವೆ. ಹಿಂದಿಯ `ಕಲರ್ಸ್‌~ ವಾಹಿನಿಯ `ಬಾಲಿಕಾ ವಧು~ ಅದಕ್ಕೆ ಅತ್ಯುತ್ತಮ ಉದಾಹರಣೆ. ಬಾಲ್ಯವಿವಾಹವಾದ ಹುಡುಗಿಯೊಬ್ಬಳ ಕತೆ ಅದು. ವಿವಾಹವನ್ನು ತಿರಸ್ಕರಿಸದೆಯೂ ಆಕೆ ಗೆಲ್ಲುತ್ತಾಳ್ಲ್ಲಲಾ ಅಲ್ಲಿ ಅದರ ಯಶಸ್ಸು ಅಡಗಿದೆ. ಆರೇಳು ವರ್ಷ ಕಳೆದರೂ ಅದರ ಜನಪ್ರಿಯತೆ ಕುಂದಲಿಲ್ಲ. ಹೀಗೆ ಪ್ರಯೋಗಗಳನ್ನು ಪರೋಕ್ಷವಾಗಿ ನಡೆಸಿದರೆ ಗೆಲುವು ಒಲಿದು ಬರುತ್ತದೆ~ ಎನ್ನುತ್ತ ಧಾರಾವಾಹಿಗಳಿಗೆ ಹೊಸದೊಂದು ಸಾಧ್ಯತೆಯನ್ನು ಅವರು ತೆರೆದಿಡುತ್ತಾರೆ.

ಜನವಾದಿ ಮಹಿಳಾ ಸಂಘಟನೆಯ ರಾಜ್ಯ ಘಟಕದ ಉಪಾಧ್ಯಕ್ಷೆ ಕೆ.ಎಸ್.ವಿಮಲಾ ಧಾರಾವಾಹಿಗಳನ್ನು `ಏಕತಾ ಕಪೂರಿಸಂ~ ಎಂದು ಬಣ್ಣಿಸಿದರು. `ವಿಧವೆಯರೇ ಮುನ್ನಡೆಸುತ್ತಿರುವ ಕುಟುಂಬಗಳು ಸಂಕಷ್ಟದಲ್ಲಿರುವುದು ಸಮೀಕ್ಷೆಗಳ ಮೂಲಕ ಮನನವಾಗಿದೆ. ಆದರೆ ಇಂತಹ ಕುಟುಂಬಗಳ ಚಿತ್ರಣ ಧಾರಾವಾಹಿಗಳಲ್ಲಿ ಬೇರೆಯ ರೀತಿಯಲ್ಲಿದೆ! ವಿಧವೆಯನ್ನು ಕಪ್ಪು ಬಿಳುಪು ಪಾತ್ರದಂತೆ ಚಿತ್ರಿಸಲಾಗುತ್ತಿದೆ. ಹೆಣ್ಣಿಗೆ ಅಧಿಕಾರ ಕೊಟ್ಟರೆ ಅನಾಹುತವಾಗಿ ಬಿಡಬಲ್ಲದು ಎಂಬಂತೆ ಚಿತ್ರಿಸಲಾಗುತ್ತಿದೆ. ರಾತ್ರಿ ವೇಳೆಯೂ ಜರತಾರಿ ಸೀರೆಯುಟ್ಟು ಮಲಗುವ ಮಹಿಳೆಯರನ್ನು ಧಾರಾವಾಹಿಗಳಲ್ಲಿ ಮಾತ್ರ ಕಾಣಲು ಸಾಧ್ಯ! ಜನಕ್ಕೆ ಹೀಗೆ ಬಣ್ಣದ ಕನಸುಗಳನ್ನು ಬಿತ್ತುವವರು ಧಾರಾವಾಹಿ ನಿರ್ಮಿಸುವವರೇ, ಆ ನಂತರ ಜನ ಕೇಳಿದ್ದನ್ನು ಕೊಡುತ್ತೇವೆ ಎನ್ನುವವರೂ ಇವರೇ~ ಎಂಬ ಅಸಮಾಧಾನ ಅವರದು.

`ಉತ್ತಮ ಸರಕಿದು ಅತಿ ಲಾಭ ತರುವಂಥ...~ ಎಂಬ ದಾಸರ ಪದದೊಂದಿಗೆ ಮಾತು ಆರಂಭಿಸಿದರು ವಿಮರ್ಶಕಿ ಡಾ.ಎಂ.ಎಸ್.ಆಶಾದೇವಿ. ಅವರಾಡಿದ ವಿಷಾದದ ಮಾತಿಗೆ ದೊಡ್ಡ ಹಿನ್ನೆಲೆ ಇತ್ತು. ಧಾರಾವಾಹಿಯ ಮೂಲ ಕಲ್ಪನೆ ಹುಟ್ಟಿದ್ದು ಸೋಪ್ ಒಪೇರಾದಿಂದ. ಟಿವಿ `ಒಪೇರಾ~ಗಳ ಮಧ್ಯೆ ಸಾಬೂನಿನ ಜಾಹೀರಾತು ಬಂದಾಗ ಧಾರಾವಾಹಿ `ಸೋಪ್ ಒಪೇರಾ~ ಆಗಿದ್ದು ಅನೇಕರಿಗೆ ತಿಳಿದ ಸಂಗತಿ. ವಾಹಿನಿಗಳ ಮಾರುಕಟ್ಟೆ ವಿಭಾಗ ಹಾಗೂ ಜಾಹೀರಾತು ಕಂಪೆನಿಗಳ ಪಾಲಿಗೆ ಸ್ತ್ರೀ ಹಣ ತಂದುಕೊಡುವ ಸಬಲೆ! ಹೆಚ್ಚು ಜಾಹೀರಾತು ಬರಬೇಕಾದರೆ ವಾಹಿನಿ ಜನಪ್ರಿಯ ಸೂತ್ರವನ್ನು ಕಂಡುಕೊಳ್ಳಬೇಕು. ಜನಪ್ರಿಯ ಸೂತ್ರ ಎಂದರೆ ಓಡುವ ಕುದುರೆ. ಅಲ್ಲಿ ಪ್ರಯೋಗಕ್ಕೆ ಅವಕಾಶವಿಲ್ಲ. ಹಾಗೊಂದು ವೇಳೆ ಪ್ರಯೋಗಕ್ಕಿಳಿದರೂ ಕುದುರೆ ಮುಗ್ಗರಿಸುವಂತಿಲ್ಲ. ಮುಗ್ಗರಿಸಿತೋ ಧಾರವಾಹಿಯ ಕತೆ ಮುಗಿಯುತ್ತದೆ. ಮಕ್ಕಳ ಬುದ್ದಿಮತ್ತೆ ಮಾರ್ಕ್ಸ್‌ಕಾರ್ಡ್‌ನಲ್ಲಿ ಅಡಗಿರುವಂತೆ ಧಾರಾವಾಹಿಯ ಹಣೆಬರಹ ಟಿಆರ್‌ಪಿಯ ಅಂಕಿ ಸಂಖ್ಯೆಗಳಲ್ಲಿ. ಹೀಗಾಗಿ ರೀಮೇಕ್ ಗೀಳು ಧಾರಾವಾಹಿಗಳಿಗೂ ಅಂಟಿದೆ. ಕನ್ನಡ ಕಿರುತೆರೆ ಉದ್ಯಮದ ಪಾಲಿಗೆ ತಮಿಳು ಧಾರಾವಾಹಿಗಳು ಭಗವದ್ಗೀತೆಯಂತೆ. ಅಲ್ಲೇನು ಬರುತ್ತದೋ ಇಲ್ಲೂ ಅದೆ. ವೇಷ ಬೇರೆ, ಭಾಷೆ ಬೇರೆ ಭಾವ ಮಾತ್ರ ಒಂದೇ!

`ಕ್ಷುದ್ರ ವಿಚಾರಗಳನ್ನೇ, ಹುಸಿ ಭಾವುಕತೆಯ ಅತಿರೇಕಗಳನ್ನೇ ಪುರುಷ ಪ್ರಧಾನ ವ್ಯವಸ್ಥೆ ಬಂಡವಾಳ ಮಾಡಿಕೊಂಡು ಧಾರಾವಾಹಿಗಳನ್ನು ಬಿತ್ತರಿಸುತ್ತಿದೆ. ಅದು ಮತ್ತೆ ಮತ್ತೆ ಹೆಣ್ಣನ್ನು ಚೌಕಟ್ಟಿನೊಳಗಿಡುವ ಹುನ್ನಾರ ನಡೆಸುತ್ತಿದೆ. ಇದು ನಿನ್ನ ಪ್ರದೇಶ ಇಷ್ಟರಲ್ಲೇ ಅಲ್ಲಿಂದ ಆಚೆಗೆ ಬರದಿರು ಎಂದು ಪ್ರಜ್ಞಾಪೂರ್ವಕವಾಗಿಯೋ ಅಪ್ರಜ್ಞಾಪೂರ್ವಕವಾಗಿಯೋ ಹೇಳಲಾಗುತ್ತಿದೆ. ಹೆಣ್ಣು ಮಕ್ಕಳು ಮಾತ್ರವೇ ಧಾರಾವಾಹಿ ನೋಡುತ್ತಾರೆ ಎನ್ನುವುದು ಒಂದು ಮಿಥ್ಯೆ ಅಷ್ಟೇ. ಹೆಣ್ಣಿನಲ್ಲಿ ಜಾಗೃತಿ, ಘನತೆ ಮೂಡಿಸುವಂತಹ ಪ್ರಯತ್ನಗಳು ನಡೆಯುತ್ತಿಲ್ಲ. ಹೆಣ್ಣಿಗೆ ದೇಹವೇ ಸರ್ವಸ್ವ ಎಂದು ಬಿಂಬಿಸಲಾಗುತ್ತಿದೆ. ಇದೆಲ್ಲವೂ ತಪ್ಪಿದಾಗ ಧಾರಾವಾಹಿ ಸುಧಾರಿಸಬಲ್ಲದು~ ಎಂಬ ಆಶಾವಾದ ಅವರದು.

ಪಾತ್ರವರ್ಗಕ್ಕೆ ಸಂಬಂಧಿಸಿದಂತೆ ಕಳೆದ ಎರಡು ದಶಕಗಳಲ್ಲಿ ಅನೇಕ ಬದಲಾವಣೆಗಳಾಗಿವೆ ಎನ್ನುವುದು ಗಮನಾರ್ಹ. ಅನೇಕ ಹೆಣ್ಣುಮಕ್ಕಳಿಗೆ ಧಾರಾವಾಹಿ ಉದ್ಯೋಗ ಒದಗಿಸಿದೆ. ಸಿನಿಮಾಕ್ಕೆ ಹೋಲಿಸಿದರೆ ಕಿರುತೆರೆ ಸ್ತ್ರೀಯರಿಗೆ ಉತ್ತಮ ವಾತಾವರಣ ಸೃಷ್ಟಿಸಿಕೊಟ್ಟಿದೆ ಎನ್ನುವುದು ಅನೇಕ ಕಲಾವಿದೆಯರು ಪ್ರತಿಪಾದಿಸುವ ವಿಚಾರ. ತೆರೆಯ ಮುಂದೆ ಮೆರೆದ ಹೆಣ್ಣು ತೆರೆಯ ಹಿಂದೆ ಮಿಂಚಿದ್ದಾಳೆಯೇ? ಧಾರಾವಾಹಿಗಳ ಮರ್ಮ ಬಲ್ಲವರು ಹೇಳುವುದು ತಾಂತ್ರಿಕ ವರ್ಗದಲ್ಲಿ ಮಹಿಳೆಯ ಪಾತ್ರ ವಿರಳ ಎಂದೇ. ನಿರ್ದೇಶಕರಾಗಿ, ಛಾಯಾಗ್ರಾಹಕರಾಗಿ, ಸಂಕಲನಕಾರರಾಗಿ ದುಡಿಯಲು ಉತ್ತಮ ಅವಕಾಶಗಳಿದ್ದರೂ ಮಹಿಳೆಯರು ಇದನ್ನು ಬಳಸಿಕೊಳ್ಳುತ್ತಿಲ್ಲ. ಮುಂಬೈನಲ್ಲಿ ಇಂಥದ್ದೊಂದು ವಾತಾವರಣವಿದೆ. ಬೆಂಗಳೂರಿನ ಪರಿಸರವೂ ಇದಕ್ಕೆ ಕಾರಣ ಇರಬಹುದು ಎಂಬುದು ವಾಹಿನಿಗಳ ಮುಖ್ಯಸ್ಥರು, ಧಾರಾವಾಹಿಯಲ್ಲಿ ತೊಡಗಿಕೊಂಡವರ ಅನಿಸಿಕೆ.

ಹಾಗಾದರೆ ಧಾರಾವಾಹಿಗಳಲ್ಲಿ ಎಂಥ ಬದಲಾವಣೆ ಬೇಕು? `ಕನ್ನಡದ ಲೇಖಕರು ಧಾರಾವಾಹಿಗಳಿಗಾಗಿಯೇ ಬರೆಯುವಂತಾಗಬೇಕು. ಬರೆದ ಕತೆಗಳನ್ನು ಕಿರುತೆರೆಗೆ ಅಳವಡಿಸಿಕೊಳ್ಳುವುದಕ್ಕಿಂತ ಇದು ಬೇರೆಯದೇ ಆದ ಪ್ರಕ್ರಿಯೆ... ಕಲಾವಿದೆಯರು ಪ್ರಜ್ಞಾವಂತರಾದರೆ ಅವರ ಆಲೋಚನಾ ಕ್ರಮ ಬದಲಾದರೆ ಸುಧಾರಣೆ ಸಾಧ್ಯ~ ಎಂಬ ಮಾತಿದೆ.

ಅಲ್ಲದೆ `ಬೌದ್ಧಿಕ ವಲಯದಲ್ಲಿ ಧಾರಾವಾಹಿಗಳ ಕುರಿತು ಚರ್ಚೆಯೇ ನಡೆದಿಲ್ಲ. ಜನಪ್ರಿಯ ಸಂಸ್ಕೃತಿಗೆ ಒದಗಿರುವ ಅವಜ್ಞೆಯೇ ಧಾರಾವಾಹಿಗೂ ಒದಗಿದೆ. ಒಮ್ಮೆ ಇಂತಹ ಚರ್ಚೆ ಆರಂಭವಾದರೆ  ಧಾರಾವಾಹಿಗಳು ಒಳ ಹೊರಗು ಬದಲಾಗಲು ಸಾಧ್ಯ~ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.