ಶುಕ್ರವಾರ, ಜೂನ್ 5, 2020
27 °C

ಹೆಣ್ಮಕ್ಕಳ ಅಭಿವೃದ್ಧಿಗೆ ಬಾಲವಿಕಾಸ ಅಕಾಡೆಮಿ ರಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಡಿಕೇರಿ: ರಾಜ್ಯ ಸರ್ಕಾರದ ನಿರ್ದೇಶನದ ಮೇರೆಗೆ ಕೊಡಗು ಜಿಲ್ಲೆಯಲ್ಲಿ ಬಾಲವಿಕಾಸ ಅಕಾಡೆಮಿಯನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಡಿ ಪ್ರಾರಂಭಿಸಲಾಗುತ್ತಿದೆ. ಹೆಣ್ಣು ಮಕ್ಕಳಿಗೆ ಉತ್ತಮ ಶಿಕ್ಷಣ, ಆರೋಗ್ಯ ಕಲ್ಪಿಸುವುದು, ವೃತ್ತಿ ತರಬೇತಿ ಮತ್ತಿತರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಹೆಣ್ಣು ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುವುದು ಇದರ ಉದ್ದೇಶ ಎಂದು ಜಿ.ಪಂ.ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎನ್.ಕೃಷ್ಣಪ್ಪ ತಿಳಿಸಿದ್ದಾರೆ.ಕರ್ನಾಟಕ ಬಾಲ ವಿಕಾಸ ಅಕಾಡೆಮಿಯ ಜಿಲ್ಲಾ ಕಾರ್ಯಕ್ರಮಗಳ ಅನುಷ್ಠಾನ ಕುರಿತು ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಹೆಣ್ಣು ಮಕ್ಕಳಿಗೆ ಶಿಕ್ಷಣ, ಸಾಹಿತ್ಯ, ಸಂಗೀತ, ಕಲೆ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಆಸಕ್ತಿ ಇರುವುದನ್ನು ಗುರುತಿಸಿ ಬೆಳಕಿಗೆ ತರುವುದು. ಬಾಲ ವಿಕಾಸ ಅಕಾಡೆಮಿಯ ಪ್ರಮುಖ ಉದ್ದೇಶವಾಗಿದೆ. ಎಂದು ಅವರು ಹೇಳಿದರು.16 ರಿಂದ 18 ವರ್ಷದ ಹೆಣ್ಣು ಮಕ್ಕಳಿಗೆ ವೃತ್ತಿ ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದು, ಆರೋಗ್ಯ ಶಿಕ್ಷಣ, ಕಾರ್ಮಿಕ ಇಲಾಖೆಯ ಸಹಕಾರದೊಂದಿಗೆ  ನಿರ್ವಹಿಸಲಾಗುವುದು ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಮಕ್ಕಳ ಗ್ರಾಮ ಸಭೆಯನ್ನು ಜುಲೈ ಅಥವಾ ಆಗಸ್ಟ್ ತಿಂಗಳಲ್ಲಿ ನಡೆಸಲಾಗುವುದು.

 

ಮಡಿಕೇರಿ ತಾಲ್ಲೂಕಿನ ಮಕ್ಕಂದೂರು ಅಥವಾ ಹಾಕತ್ತೂರು, ವಿರಾಜಪೇಟೆ ತಾಲ್ಲೂಕಿನ ಬೇಟೋಳಿ, ಸೋಮವಾರಪೇಟೆ ತಾಲ್ಲೂಕಿನ ಆಲೂರು ಸಿದ್ದಾಪುರ ಅಥವಾ ಕೊಡ್ಲಿಪೇಟೆಯಲ್ಲಿ ಮಕ್ಕಳ ಗ್ರಾಮ ಸಭೆಯನ್ನು ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು.   ಕರ್ನಾಟಕ ಬಾಲ ವಿಕಾಸ ಅಕಾಡೆಮಿಯ ಜಿಲ್ಲಾ ಕಾರ್ಯಕ್ರಮ ಅನುಷ್ಠಾನ ಸಮಿತಿಯಲ್ಲಿ ಜಿ.ಪಂ. ಮುಖ್ಯಕಾರ್ಯನಿರ್ವಹಣಾಧಿಕಾರಿ ಅಧ್ಯಕ್ಷರಾಗಿದ್ದು, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರು ಉಪಾಧ್ಯಕ್ಷರಾಗಿ ಕಾರ್ಯ ನಿರ್ವಹಿಸಲಿದ್ದಾರೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರು ಕಾರ್ಯದರ್ಶಿಯಾಗಿ, ಅಕಾಡೆಮಿ ಸೂಚಿಸಿದ ಮೂವರು ಸದಸ್ಯರು, ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷರು ಅಲ್ಲದೆ, 9ನೇ ತರಗತಿ ಅಥವಾ ಪಿಯುಸಿ ಮೊದಲ ವರ್ಷದಲ್ಲಿ ಓದುತ್ತಿರುವ ಇಬ್ಬರು ವಿದ್ಯಾರ್ಥಿಗಳನ್ನು ಸದಸ್ಯರನ್ನಾಗಿ ನೇಮಿಸಲಾಗುವುದು. ಸಂದರ್ಭನುಸಾರ ವಿವಿಧ ಇಲಾಖೆಗಳ ಜಿಲ್ಲಾ ಅಧಿಕಾರಿಗಳು ವಿಶೇಷ ಆಹ್ವಾನಿತ ಸದಸ್ಯರಾಗಿರುತ್ತಾರೆ ಎಂದು ವಿವರಣೆ ನೀಡಿದರು.ಜಿ.ಪಂ. ಉಪ ಕಾರ್ಯದರ್ಶಿ ವೈ.ಎಸ್.ಬಸವರಾಜಪ್ಪ ಮಾತನಾಡಿ, ಹೆಣ್ಣು ಮಕ್ಕಳು ಯಾವುದೇ ಕಾರಣಕ್ಕೂ ಶಾಲೆಯಿಂದ ಹೊರಗುಳಿಯಬಾರದು ಎಂಬ ಉದ್ದೇಶದಿಂದ ಸರ್ಕಾರ ಹಲವಾರು ಕಾರ್ಯಕ್ರಮಗಳನ್ನು ಜಾರಿಗೊಳಿಸಿದೆ. ಅಂತಹವುಗಳಲ್ಲಿ ಬಾಲ ವಿಕಾಸ ಅಕಾಡೆಮಿಯಿಂದಲೂ ಸಹ ಹೆಣ್ಣು ಮಕ್ಕಳ ಬೆಳವಣಿಗೆಗೆ ಶ್ರಮಿಸಲು ನಿರ್ಧರಿಸಲಾಗಿದೆ ಎಂದರು.ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ರಾಮಸ್ವಾಮಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ  ಅಧಿಕಾರಿ(ಪ್ರಭಾರ) ಮಹದೇವಯ್ಯ, ಜಿಲ್ಲಾ ಉದ್ಯೋಗ ವಿನಿಮಯ ಅಧಿಕಾರಿ ಜಗನ್ನಾಥ ಮಾತನಾಡಿ, ಬಾಲ ವಿಕಾಸ ಅಕಾಡೆಮಿಯಿಂದ ಹಮ್ಮಿಕೊಳ್ಳುವ ಕಾರ್ಯಕ್ರಮಗಳಿಗೆ ಎಲ್ಲಾ ರೀತಿಯ ಸಹಕಾರ ನೀಡಲಾಗುವುದು ಎಂದರು.ಜಿಲ್ಲಾ ಕಾರ್ಯಕ್ರಮ ಅನುಷ್ಠಾನ ಅಧಿಕಾರಿ ಲಿಂಗರಾಜು, ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷ ಡಾ. ಎಸ್.ಎಂ. ಕಾವೇರಪ್ಪ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ನಿರೂಪಣಾಧಿಕಾರಿ ಜಯರಾಂ, ಆರೋಗ್ಯ ಇಲಾಖೆಯ ಶಿಕ್ಷಣ ಅಧಿಕಾರಿ ಕಾಂಬ್ಳಿ, ಶಿಕ್ಷಕರಾದ ಅಬ್ದುಲ್ ಲತೀಫ್ ಮತ್ತಿತರರು ಹಲವು ಸಲಹೆಗಳನ್ನು ನೀಡಿದರು. ಶಿಶು ಅಭಿವೃದ್ಧಿ ಕಲ್ಯಾಣ ಅಧಿಕಾರಿಗಳಾದ ಬಲರಾಂ, ಶೇಷಾದ್ರಿ ಅವರು ಕರ್ನಾಟಕ ಬಾಲ ವಿಕಾಸ ಅಕಾಡೆಮಿಯ ಜಿಲ್ಲಾ ಕಾರ್ಯಕ್ರಮಗಳ ಅನುಷ್ಠಾನ ಕುರಿತು ಹಲವು ಮಾಹಿತಿ ನೀಡಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.