ಶುಕ್ರವಾರ, ಮಾರ್ಚ್ 5, 2021
24 °C
ವನ್ಯಜೀವಿಗಳ ಜೀವಕ್ಕೆ ಕುತ್ತು ತರುತ್ತಿರುವ ಅಪಘಾತಗಳು

ಹೆದ್ದಾರಿ ವಾಹನ ಸಂಚಾರ ನಿಷೇಧಕ್ಕೆ ಆಗ್ರಹ

ಪ್ರಜಾವಾಣಿ ವಾರ್ತೆ/ಪ್ರಸನ್ನ ಕುಲಕರ್ಣಿ Updated:

ಅಕ್ಷರ ಗಾತ್ರ : | |

ಹೆದ್ದಾರಿ ವಾಹನ ಸಂಚಾರ ನಿಷೇಧಕ್ಕೆ ಆಗ್ರಹ

ಖಾನಾಪುರ: ಉತ್ತರ ಕರ್ನಾಟಕದ ಬೆಳಗಾವಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ವ್ಯಾಪಿಸಿರುವ ಪಶ್ಚಿಮ ಘಟ್ಟ ಪ್ರದೇಶ ಅಪರೂಪದ ಸಸ್ಯಸಂಪತ್ತು ಮತ್ತು ಜೀವ ಸಂಕುಲವನ್ನು ಹೊಂದಿದ್ದು, ಇಲ್ಲಿ ವಾಹನ ಸಂಚಾರವನ್ನು ನಿಷೇಧಿಸ ಬೇಕೆಂದು ಪರಿಸರವಾದಿಗಳು ಆಗ್ರಹಿಸಿದ್ದಾರೆ.



ಸಾವಿರಾರು ಹೆಕ್ಟೇರ್ ಅರಣ್ಯ ಪ್ರದೇಶದಲ್ಲಿ ವ್ಯಾಪಿಸುವ ಮೂಲಕ ಅಸಂಖ್ಯಾತ ಮತ್ತು ವಿರಳವಾದ ಪ್ರಾಣಿಗಳು ಪಕ್ಷಿಗಳು ಹಾಗೂ ಸರಿಸೃಪಗಳ ಆವಾಸಸ್ಥಾನವಾಗಿದೆ. ಪಶ್ಚಿಮ ಘಟ್ಟವನ್ನು ಸೀಳಿಕೊಂಡು ಹಲವು ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳು ಹಾದುಹೋಗಿದ್ದು, ಅರಣ್ಯದಲ್ಲಿ ಹಾಯುವ ಹೆದ್ದಾರಿಗಳ ಮೂಲಕ ಸಂಚರಿಸುವ ವಾಹನಗಳು ಕಾಡಿನಲ್ಲಿ ಸ್ವಚ್ಛಂದವಾಗಿ ಜೀವಿಸುವ ವನ್ಯಮೃಗಗಳ ಜೀವಕ್ಕೆ ಕುತ್ತು ತಂದಿವೆ ಎಂದು ಅವರು ತಿಳಿಸಿದ್ದಾರೆ.



ಹಗಲು ರಾತ್ರಿಯೆನ್ನದೇ ದಿನದ 24 ಗಂಟೆಗಳೂ ನಿರ್ಜನ ಅರಣ್ಯದ ಮತ್ತು ಅರಣ್ಯವಾಸಿಗಳ ಶಾಂತತೆಗೆ ಭಂಗ ತರುವ ರೀತಿ ಸಾಗುವ ವಾಹನಗಳು ಹೆದ್ದಾರಿಗಳಲ್ಲಿ ಆಹಾರ ಹಾಗೂ ನೀರನ್ನು ಅರಸಿ ರಸ್ತೆ ದಾಟುವ ಅಸಂಖ್ಯಾತ ಅಮಾಯಕ ಪ್ರಾಣಿಗಳ ಬಲಿ ಪಡೆದಿವೆ ಎಂದು ಅವರು ವಿವರಿಸಿದ್ದಾರೆ.



ಈಗಾಗಲೇ ಮನುಷ್ಯನ ಅಟ್ಟಹಾಸ, ಅರಣ್ಯನಾಶ, ಬೇಟೆಗಾರರ ಹಾವಳಿ ಮತ್ತಿತರ ಕಾರಣಗಳಿಂದ ನಶಿಸುತ್ತಿರುವ ವನ್ಯಜೀವಿಗಳ ಸಂತತಿಯನ್ನು ಉಳಿಸುವ ನಿಟ್ಟಿನಲ್ಲಿ ಒಂದೆಡೆ ಪರಿಸರವಾದಿಗಳು ಹೋರಾಟ ನಡೆಸುತ್ತಿದ್ದರೆ ಮತ್ತೊಂದೆಡೆ ಸರ್ಕಾರವೇ ಕಾಡಿನ ನಡುವೆ ಹಾದು ಹೋಗುವ ರಸ್ತೆಗಳನ್ನು ಅಭಿವೃದ್ಧಿಪಡಿಸಿ ಪ್ರಾಣಿ ಪಕ್ಷಿಗಳ ಜೀವದ ಜೊತೆ ಚೆಲ್ಲಾಟದಲ್ಲಿ ತೊಡಗಿದೆ.



ಪರಿಣಾಮ ಕಾಡಿನ ನಡುವೆ ರಸ್ತೆಗಳ ಮೂಲಕ ಹಾದುಹೋಗುವ ವಾಹನಗಳ ಸದ್ದು ಮತ್ತು ಭರಾಟೆಯಿಂದ ತಮ್ಮ ಪಾಡಿಗೆ ತಾವು ಜೀವಿಸುವ ಮೂಲಕ ಪರರಿಗೆ ಉಪದ್ರವ ನೀಡದ ವನ್ಯಜೀವಿಗಳ ಶಾಂತಿ ಹಾಗೂ ನೆಮ್ಮದಿ ಹಾಳಾಗಿದೆ ಎಂದು ತಾಲ್ಲೂಕಿನ ವನ್ಯಜೀವಿ ತಜ್ಞರು ಮತ್ತು ಪರಿಸರವಾದಿಗಳು ಆರೋಪಿಸಿದ್ದಾರೆ.

ಪಶ್ಚಿಮ ಘಟ್ಟದ ಅರಣ್ಯದ ಮೂಲಕ ಬೆಳಗಾವಿ ಪಣಜಿ ರಾಷ್ಟ್ರೀಯ ಹೆದ್ದಾರಿ, ಬೆಳಗಾವಿ ತಾಳಗುಪ್ಪ, ಔರಾದ ಸದಾಶಿವಗಡ, ಸಿಂಧನೂರು ಹೆಮ್ಮಡಗಾ, ಜಾಂಬೋಟಿ ಜತ್ತ, ಬೆಳಗಾವಿ ಚೋರ್ಲಾ, ರಾಮನಗರ ಧಾರವಾಡ ರಾಜ್ಯ ಹೆದ್ದಾರಿಗಳು ಹಾದು ಹೋಗುತ್ತವೆ.



ಖಾನಾಪುರ ತಾಲ್ಲೂಕಿನ ಗೋಲಿಹಳ್ಳಿ, ಲೋಂಡಾ, ನಾಗರಗಾಳಿ, ಖಾನಾಪುರ, ಕಣಕುಂಬಿ, ಭೀಮಗಡ ಮತ್ತು ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ, ದಾಂಡೇಲಿ, ಅಣಶಿ, ಕ್ಯಾಸಲ್‌ ರಾಕ್ ಅರಣ್ಯ ವಲಯಗಳಲ್ಲಿ ಕಳೆದ ಐದು ವರ್ಷಗಳಲ್ಲಿ ರಸ್ತೆ ಅಪಘಾತದಿಂದ 12 ಕಾಡುಕೋಣಗಳು, 8 ಜಿಂಕೆಗಳು, 3 ಕರಡಿ, 5 ನವಿಲು, 3 ನರಿ, 1 ಕಾಡಾನೆ ಸೇರಿದಂತೆ ಅನೇಕ ಸಣ್ಣ ಪುಟ್ಟ ಪ್ರಾಣಿಗಳು, ಹಾವುಗಳು, ಪಕ್ಷಿಗಳು ಮೃತಪಟ್ಟಿವೆ.



ಬಹುತೇಕ ಘಟನೆಗಳು ನಡು ರಾತ್ರಿಯ ಕತ್ತಲಲ್ಲಿ ಸಂಭವಿಸಿವೆ ಎಂದು ಅರಣ್ಯ ಇಲಾಖೆಯ ದಾಖಲೆಗಳು ದೃಢಪಡಿಸಿವೆ. ಈಗಾಗಲೇ ಸರ್ಕಾರ ಖಾನಾಪುರ ತಾಲ್ಲೂಕಿನ ಭೀಮಗಡ ರಕ್ಷಿತ ವನ್ಯ ಧಾಮದ ಮೂಲಕ ಹಾದುಹೋಗುವ ಸಿಂಧನೂರು ಹೆಮ್ಮಡಗಾ ರಾಜ್ಯ ಹೆದ್ದಾರಿಯಲ್ಲಿ ಪ್ರತಿದಿನ ಸಂಜೆ 6 ಗಂಟೆಯಿಂದ ಮುಂಜಾನೆ 6 ಗಂಟೆ ವರೆಗೆ ವಾಹನಗಳ ಸಂಚಾರವನ್ನು ಸಂಪೂರ್ಣ ನಿಷೇಧಿಸಿ ಆದೇಶಿಸಿದೆ. ಕಳೆದ 2015ರ ನ.9ರಿಂದ ಈ ಆದೇಶ ಸಮರ್ಪಕವಾಗಿ ಅನುಷ್ಠಾನಗೊಂಡಿದೆ. ವನ್ಯಜೀವಿಗಳ ಹಿತಾಸಕ್ತಿ ಕಾಪಾಡುವ ನಿಟ್ಟಿನಲ್ಲಿ ಸರ್ಕಾರದ ಈ ಕ್ರಮವನ್ನು ಪರಿಸರವಾದಿಗಳು ಸ್ವಾಗತಿಸಿದ್ದಾರೆ.



ಇದೇ ಮಾದರಿಯಲ್ಲಿ ಅರಣ್ಯದ ಮೂಲಕ ಹಾದುಹೋಗುವ ಎಲ್ಲ ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿ ಗಳಲ್ಲಿಯೂ ರಾತ್ರಿಯ ವೇಳೆ ವಾಹನಗಳ ಸಂಚಾರವನ್ನು ಸಂಪೂರ್ಣ ನಿಷೇಧಿಸ ಬೇಕು. ಇದು ನೆರವೇರಿದರೆ ರಸ್ತೆ ಅಪಘಾತದಿಂದ ಜೀವ ತ್ಯಜಿಸುವ ವನ್ಯಜೀವಿಗಳ ಸಂಖ್ಯೆ ಸ್ವಲ್ಪವಾದರೂ ತಗ್ಗಲಿದೆ. ಜೊತೆಗೆ ಕಾಡಿನಲ್ಲಿ ನಡೆಯುವ ಅಕ್ರಮ ಮರಳು ಸಾಗಣೆ, ಪ್ರಾಣಿಗಳ ಬೇಟೆ, ಕಾಡುಗಳ್ಳರ ಹಾವಳಿ ಮತ್ತಿತರ ಅಕ್ರಮಗಳಿಗೆ ಕಡಿವಾಣವೂ ಬೀಳುವ ಸಾಧ್ಯತೆಯಿದೆ.



ಈ ನಿಟ್ಟಿನಲ್ಲಿ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಪರಿಸರವಾದಿಗಳಾದ ಮನೋಹರ ಕುಲಕರ್ಣಿ, ಜಯಪ್ರಕಾಶ ಬಾಳಕಟ್ಟಿ, ಧರಣೇಂದ್ರಕುಮಾರ, ಶಿವಾನಂದ ವಿಭೂತಿಮಠ, ಮಹಾಂತೇಶ ರಾಹುತ, ಅಮೃತ ಚರಂತಿಮಠ, ಅಶೋಕ ಚಂದರಗಿ ಹಾಗೂ ಇತರರು ಆಗ್ರಹಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.