ಮಂಗಳವಾರ, ಮೇ 11, 2021
21 °C
ನೆಲ್ಯಾಡಿ ಬಳಿ ಟ್ಯಾಂಕರ್ ಪಲ್ಟಿ; ಅನಿಲ ಸೋರಿಕೆ

ಹೆದ್ದಾರಿ ಸಂಚಾರಕ್ಕೆ 15 ಗಂಟೆ ಅಡ್ಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೆದ್ದಾರಿ ಸಂಚಾರಕ್ಕೆ 15 ಗಂಟೆ ಅಡ್ಡಿ

ಉಪ್ಪಿನಂಗಡಿ: ಪೆರ್ನೆ ಗ್ಯಾಸ್ ಟ್ಯಾಂಕರ್ ದುರಂತದ ಕರಾಳ ನೆನಪು ಮರೆಯಾಗುವುದಕ್ಕೆ ಮೊದಲೇ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ನೆಲ್ಯಾಡಿ ಸಮೀಪ ಮಣ್ಣಗುಂಡಿ ಬಳಿ ತಿರುವಿನಲ್ಲಿ ಶನಿವಾರ ಬೆಳಿಗ್ಗೆ ಮತ್ತೊಂದು ಬುಲೆಟ್ ಟ್ಯಾಂಕರ್ ಉರುಳಿ ಬಿದ್ದಿದೆ. ಅನಿಲ ಸೋರಿಕೆಯೂ ಆರಂಭವಾಗಿದ್ದು, ಸಂಭಾವ್ಯ ಅಪಾಯ ತಪ್ಪಿಸಲು 15 ಗಂಟೆಗೂ ಹೆಚ್ಚು ಸಮಯ ಬೆಂಗಳೂರು-ಮಂಗಳೂರು ಹೆದ್ದಾರಿಯಲ್ಲಿ ವಾಹನ ಸಂಚಾರವನ್ನು ಸ್ಥಗಿತಗೊಳಿಸಲಾಯಿತು.ಎಚ್‌ಪಿ ಕಂಪೆನಿಗೆ ಸೇರಿದ ಈ ಟ್ಯಾಂಕರ್ ಮಂಗಳೂರಿನಿಂದ ಬೆಂಗಳೂರು ಕಡೆಗೆ ಗ್ಯಾಸ್ ಸಾಗುತ್ತಿತ್ತು. ಬೆಂಗಳೂರು ಕಡೆಯಿಂದ ಮಂಗಳೂರು ಕಡೆ ಬರುತ್ತಿದ್ದ ಬಸ್ಸೊಂದು ಇನ್ನೊಂದು ವಾಹನವನ್ನು ಹಿಂದಿಕ್ಕುವ ಭರದಲ್ಲಿ ಟ್ಯಾಂಕರ್‌ಗೆ ಡಿಕ್ಕಿಯಾಗುವ ರೀತಿಯಲ್ಲಿ ಬಂತು. ಮುಖಾಮುಖಿ ಡಿಕ್ಕಿಯಾಗುವುದನ್ನು ತಪ್ಪಿಸುವ ಯತ್ನದಲ್ಲಿ ಟ್ಯಾಂಕರ್ ಚಾಲಕ ವಾಹನವನ್ನು ರಸ್ತೆ ಬದಿಗೆ ಇಳಿಸಿದಾಗ ಅದು ನಿಯಂತ್ರಣ ಕಳೆದುಕೊಂಡು ಕಮರಿಗೆ ಉರುಳಿಬಿತ್ತು.ಟ್ಯಾಂಕರ್ ಚಾಲಕ ಶಂಕರ್ ಮತ್ತು ಕ್ಲೀನರ್ ವರದರಾಜು ಅವರ ಕಾಲಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ನೆಲ್ಯಾಡಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಉರುಳಿ ಬಿದ್ದ ಟ್ಯಾಂಕರ್‌ನಲ್ಲಿ ಅನಿಲ ಸೋರಿಕೆ ಆರಂಭವಾಗುತ್ತಿದ್ದಂತೆಯೇ ಅಪಾಯದ ಕರೆಗಂಟೆ ಮೊಳಗಿತು. ಹೀಗಾಗಿ ಹೆದ್ದಾರಿಯಲ್ಲಿ ವಾಹನ ಸಂಚಾರವನ್ನು ಸಂಪೂರ್ಣ ಸ್ಥಗಿತಗೊಳಿಸಲಾಯಿತು.

ಮಂಗಳೂರು ಕಡೆಯಿಂದ ಬೆಂಗಳೂರು ಕಡೆಗೆ ಹೋಗುವ ವಾಹನಗಳನ್ನು ಗೋಳಿತೊಟ್ಟು ಹಾಗೂ ಕಡಬ ರಸ್ತೆಯಾಗಿ ಸಾಗಲು ಹಾಗೂ ಬೆಂಗಳೂರು ಕಡೆಯಿಂದ ಮಂಗಳೂರು ಕಡೆಗೆ ಹೋಗುವ ವಾಹನಗಳನ್ನು ಗುಂಡ್ಯ ಮತ್ತು ಪೆರಿಯಶಾಂತಿ ಮೂಲಕ ಸಾಗುವಂತೆ ಪರ್ಯಾಯ ವ್ಯವಸ್ಥೆ ಮಾಡಲಾಯಿತು.ಬಳಿಕ ಮಂಗಳೂರಿನಿಂದ ತುರ್ತು ನಿಯಂತ್ರಣಾ ಘಟಕ ಮತ್ತು ಗ್ಯಾಸ್ ಸ್ಥಳಾಂತರಕ್ಕೆ  ಬೇಕಾದ ಬೇರೆ ಟ್ಯಾಂಕರ್ ತರಿಸಿ ಸ್ಥಳಾಂತರ ಕಾರ್ಯ ಆರಂಭಿಸಲಾಯಿತು. ಶನಿವಾರ ಮಧ್ಯರಾತ್ರಿವರೆಗೂ ಈ ಕಾರ್ಯ ಮುಂದುವರಿಯಲಿದೆ. ಅಲ್ಲಿಯವರೆಗೂ ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೆ ಸಂಪೂರ್ಣ ತಡೆ ಒಡ್ಡಲಾಗಿದೆ.ಅಧಿಕಾರಿಗಳಿಗೆ ತರಾಟೆ: ಈಚೆಗೆ ಪೆರ್ನೆಯಲ್ಲಿ ಸಂಭವಿಸಿದ ಗ್ಯಾಸ್ ಟ್ಯಾಂಕರ್ ದುರಂತದ ಬಳಿಕ ಹೆದ್ದಾರಿಯಲ್ಲಿ ಸಂಭವಿಸುವ ಗ್ಯಾಸ್ ಟ್ಯಾಂಕರ್‌ಗಳ ನಿರ್ವಹಣೆಗಾಗಿ ತುರ್ತು ಸಂಚಾರಿ ಘಟಕ ಕಾರ್ಯಾಚರಿಸುತ್ತಿದೆ ಎಂದು ಹೇಳಲಾಗುತ್ತಿದ್ದರೂ ಇಂತಹ ಸಂದರ್ಭಗಳಲ್ಲಿ ಮಂಗಳೂರಿನಿಂದ ತಕ್ಷಣ ಸ್ಥಳಕ್ಕೆ ಆಗಮಿಸಿ ರಕ್ಷಣಾ ಕಾರ್ಯಾಚರಣೆಯ ನೇತೃತ್ವ ವಹಿಸಬೇಕಾದ ರಕ್ಷಣಾ ಅಧಿಕಾರಿ ಸ್ಥಳಕ್ಕೆ ಮೂರು ಗಂಟೆ ತಡವಾಗಿ ಆಗಮಿಸಿದ್ದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಯಿತು.ಜಿ.ಪಂ. ಸದಸ್ಯ ಬಾಲಕೃಷ್ಣ ಬಾಣಜಾಲು, ಸ್ಥಳೀಯರಾದ ಲೋಕೇಶ್, ಕೆ.ಇ. ಅಬೂಬಕ್ಕರ್ ಮೊದಲಾದರವರು ಟ್ಯಾಂಕರ್ ಬಿದ್ದ ಸ್ಥಳಕ್ಕೆ ಧಾವಿಸಿ ಸೋರಿಕೆಯಾಗುತ್ತಿರುವುದನ್ನು ತಾತ್ಕಾಲಿಕವಾಗಿ ನಿಯಂತ್ರಿಸಲು ಮುಂದಾದರು. ತಡವಾಗಿ ಬಂದ ಎಂಆರ್‌ಪಿಎಲ್‌ನ ರಕ್ಷಣಾ ಅಧಿಕಾರಿಯನ್ನು ಗ್ರಾಮಸ್ಥರು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.