ಬುಧವಾರ, ಮೇ 12, 2021
23 °C

ಹೇಮಾವತಿ ಆರೋಗ್ಯದಲ್ಲಿ ಸುಧಾರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಾಲ್ಕು ವರ್ಷಗಳ ಗೃಹ ಬಂಧನದಿಂದ ಮುಕ್ತಿ ಪಡೆದು ಎರಡು ದಿನಗಳಿಂದ ನಿಮ್ಹಾನ್ಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಹೇಮಾವತಿ ಅವರ ಆರೋಗ್ಯದಲ್ಲಿ ತೀವ್ರಗತಿಯಲ್ಲಿ ಸುಧಾರಣೆ ಕಂಡುಬಂದಿದೆ.ಗುರುವಾರ ಬೆಳಿಗ್ಗೆ ಆಸ್ಪತ್ರೆಗೆ ಭೇಟಿ ನೀಡಿದ ಆರೋಗ್ಯ ಸಚಿವ ಯು.ಟಿ.ಖಾದರ್ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆ ಉಮಾಶ್ರೀ ಅವರೊಂದಿಗೆ ಹೇಮಾವತಿ ಮಾತನಾಡಿದ್ದು, ಎಲ್ಲ ಪ್ರಶ್ನೆಗಳಿಗೂ ಸೂಕ್ತವಾಗಿ ಸ್ಪಂದಿಸಿದ್ದಾರೆ.ಈ ಬಗ್ಗೆ `ಪ್ರಜಾವಾಣಿ'ಯೊಂದಿಗೆ ಮಾತನಾಡಿದ ಸಚಿವ ಯು.ಟಿ.ಖಾದರ್, `ಮೊದಲಿಗಿಂತ ಲವಲವಿಕೆಯಿಂದ ಇದ್ದಾರೆ. ದಿನಪತ್ರಿಕೆಗಳನ್ನು ಓದುವ ಮಟ್ಟಿಗೆ ಸ್ಪಂದಿಸುತ್ತಿರುವುದು ಖುಷಿ ಎನಿಸಿದೆ. ಆದರೆ, ಕೈ ಕಾಲು ಚಲನೆಗೆ ಸ್ಪಲ್ಪ ಕಷ್ಟ ಪಡುತ್ತಿರುವುದರಿಂದ ವೈದ್ಯರು ಈ ಬಗ್ಗೆ ಹೆಚ್ಚಿನ ನಿಗಾವಹಿಸುತ್ತಿದ್ದಾರೆ' ಎಂದು ತಿಳಿಸಿದರು.ಮೂವತ್ತೆರಡು ವರ್ಷದ ಹೇಮಾವತಿ ಅವರು ಅಪೌಷ್ಟಿಕತೆ, ರಕ್ತಹೀನತೆ, ಮಾನಸಿಕ ಖಿನ್ನತೆ ಮತ್ತು ಮಂಡಿ ನೋವಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ. ದೇಹದ ಆರೋಗ್ಯವನ್ನು ಸುಸ್ಥಿರಕ್ಕೆ ತರುವ ಸಲುವಾಗಿ ಪೌಷ್ಟಿಕಾಂಶವುಳ್ಳ ಆಹಾರವನ್ನೇ ನೀಡಲಾಗುತ್ತಿದೆ ಎಂದು ನಿಮ್ಹಾನ್ಸ್ ವೈದ್ಯಕೀಯ ಅಧೀಕ್ಷಕ ಡಾ.ವಿ.ಎಲ್.ಸತೀಶ್ ತಿಳಿಸಿದರು.`ಎದೆಯ ಎಕ್ಸ್‌ರೇ, ಗರ್ಭಕೋಶದ ಅಲ್ಟ್ರಾಸೌಂಡ್ ಪರೀಕ್ಷೆಗಳನ್ನು ಮಾಡಲಾಗಿದ್ದು, ದೈಹಿಕವಾಗಿ ಯಾವುದೇ ತೊಂದರೆಗಳಿಲ್ಲ ಎಂದು ವರದಿಯಿಂದ ತಿಳಿದುಬಂದಿದೆ. ಮಂಡಿ ನೋವಿನ ಸಮಸ್ಯೆಯಿರುವುದರಿಂದ ಸತತವಾಗಿ ಫಿಸಿಯೋ ಥೆರಪಿ ಮಾಡಿಸಲಾಗುತ್ತದೆ' ಎಂದು ಹೇಳಿದರು.`ಹೇಮಾವತಿ ತಂದೆ ಹಾಗೂ ತಾಯಿಯ ಬಗ್ಗೆ ಎದ್ದಿರುವ ಊಹಾಪೋಹಗಳ ಬಗ್ಗೆ ಹೇಳಲು ಸಾಧ್ಯವಿಲ್ಲ. ಆದರೆ ಆಸ್ಪತ್ರೆಗೆ ದಾಖಲಾದ ದಿನದಿಂದ ಪೋಷಕರು ಮಗಳ ಆರೈಕೆಯಲ್ಲಿ ತೊಡಗಿದ್ದಾರೆ. ಹೇಮಾವತಿ ಹೆಚ್ಚು ಉತ್ಸುಕತೆಯಿಂದ ಸ್ಪಂದಿಸುತ್ತಿದ್ದಾರೆ' ಎಂದು ತಿಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.