ಸೋಮವಾರ, ಮೇ 17, 2021
22 °C

ಹೈಕೋರ್ಟ್ ಆದೇಶದ ಹಿನ್ನೆಲೆ: ನಿರ್ವಹಣಾ ಭತ್ಯೆ ಇನ್ನು ಸಲೀಸಲ್ಲ...

ಪ್ರಜಾವಾಣಿ ವಾರ್ತೆ, ಸುಚೇತನಾ ನಾಯ್ಕ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬೇರ್ಪಟ್ಟ ಪತಿಯಿಂದ `ನಿರ್ವಹಣಾ ಭತ್ಯೆ~ಗಾಗಿ ಕೌಟುಂಬಿಕ ಕೋರ್ಟ್‌ಗಳಲ್ಲಿ ಅರ್ಜಿ ಸಲ್ಲಿಸಿ ಆದೇಶ ಬೇಗನೆ ಪಡೆದುಕೊಳ್ಳುವುದು ಇನ್ನು ಸುಲಭದ ಮಾತಲ್ಲ. ಭತ್ಯೆಗಾಗಿ ಅರ್ಜಿ ಸಲ್ಲಿಸಿ ಇನ್ನೇನು ತೀರ್ಪು ಹೊರಬೀಳಲಿದೆ ಎಂದು ಕಾಯುತ್ತಿದ್ದ `ಪತ್ನಿ~ಯರಿಗೂ ಈಗ ತಲೆ ಚಚ್ಚಿಕೊಳ್ಳುವ ಪರಿಸ್ಥಿತಿ!-ಕಾರಣ, ಮಹಿಳೆಯೊಬ್ಬರ ಹಿತ ಕಾಪಾಡುವುದಕ್ಕಾಗಿಯೇ ಹೈಕೋರ್ಟ್‌ನಿಂದ ಈಚೆಗೆ ಹೊರಟ ತೀರ್ಪು ಹಾಗೂ ಆ ತೀರ್ಪಿನ ಆಧಾರದ ಮೇಲೆ ಕೌಟುಂಬಿಕ ಕೋರ್ಟ್‌ಗಳು ವಿಚಾರಣೆ ನಡೆಸುತ್ತಿರುವ ರೀತಿ ಹಲವು ಮಹಿಳೆಯರ ಪಾಲಿನ ಬಿಸಿತುಪ್ಪ.`ಸುನಂದ ವರ್ಸಸ್ ಭರತ್~ ಅವರ ಪ್ರಕರಣದಲ್ಲಿ ಹೈಕೋರ್ಟ್ (ಗುಲ್ಬರ್ಗದ ಸಂಚಾರಿ ಪೀಠ) ಜನವರಿಯಲ್ಲಿ ನೀಡಿರುವ ತೀರ್ಪಿನ ಆಧಾರದ ಮೇಲೆ ಈಗಾಗಲೇ ಇತ್ಯರ್ಥಕ್ಕೆ ಬಾಕಿ ಇರುವ ಪ್ರಕರಣಗಳೂ ಸೇರಿದಂತೆ ಜನವರಿ ನಂತರ ದಾಖಲಾದ ಅರ್ಜಿಗಳ ವಿಚಾರಣೆ ನಡೆಸಲಾಗುತ್ತಿದೆ.ನಿರ್ವಹಣಾ ಭತ್ಯೆಗೆ ಕೋರಿ ಮಹಿಳೆಯರು ಅರ್ಜಿ ಸಲ್ಲಿಸಿದ ಸಂದರ್ಭಗಳಲ್ಲಿ ಎರಡೂ ಕಡೆಯವರನ್ನು ಕಟಕಟೆಯಲ್ಲಿ ನಿಲ್ಲಿಸಿ ಸವಾಲು, ಪಾಟಿ ಸವಾಲು ಇತ್ಯಾದಿ ನಡೆಸಿದ ನಂತರವೇ ಆದೇಶ ಹೊರಡಿಸಬೇಕು ಎನ್ನುವುದು ಹೈಕೋರ್ಟ್ ಆದೇಶ.ಇಲ್ಲಿಯವರೆಗೆ ಇದ್ದದ್ದೇನು?: ವಿಚ್ಛೇದಿತ ಮಹಿಳೆಯರು ಅಥವಾ ಪತಿಯಿಂದ ಬೇರ್ಪಟ್ಟವರು ಅನೇಕ ಪ್ರಕರಣಗಳಲ್ಲಿ ನಿರ್ವಹಣಾ ಭತ್ಯೆಗಾಗಿ ಅರ್ಜಿ ಸಲ್ಲಿಸುತ್ತಾರೆ. ಮಹಿಳೆ ಉದ್ಯೋಗರಹಿತವಾಗಿದ್ದಲ್ಲಿ ಅಥವಾ ಮಕ್ಕಳ ಪೋಷಣೆಗೆ ಆಕೆಯ ಸಂಬಳ ಸಾಕಾಗದೇ ಹೋದ ಪಕ್ಷದಲ್ಲಿ ಕೌಟುಂಬಿಕ ಕೋರ್ಟ್‌ಗಳು ಆಕೆಯ ಪತಿಯ ಸಂಬಳವನ್ನು ಪರಿಗಣನೆಗೆ ತೆಗೆದುಕೊಂಡು ನಿರ್ವಹಣಾ ಭತ್ಯೆಯ ಮೊತ್ತ ನಿಗದಿ ಮಾಡುತ್ತವೆ.

 

ಅಪರಾಧ ದಂಡ ಪ್ರಕ್ರಿಯಾ ಸಂಹಿತೆ (ಸಿಆರ್‌ಪಿಸಿ) 126 (2)ನೇ ಕಲಮಿನ ಪ್ರಕಾರ ಎರಡೂ ಕಡೆಯವರು ಕಟಕಟೆಯಲ್ಲಿ ನಿಂತು ಸಾಕ್ಷಿ ಹೇಳುವುದು ಕಡ್ಡಾಯ. ಆದರೆ ಈ ಪ್ರಕ್ರಿಯೆಯಲ್ಲಿ ವಿಳಂಬ ಆಗುವ ಹಿನ್ನೆಲೆಯಲ್ಲಿ ನಾಗರಿಕ ಪ್ರಕ್ರಿಯಾ ಸಂಹಿತೆ (ಸಿಪಿಸಿ) ಅಡಿ ನಿರ್ವಹಣಾ ಭತ್ಯೆಗೆ ಅರ್ಜಿ ಸಲ್ಲಿಸಲು ಅನುಮತಿ ನೀಡಲಾಯಿತು.ಸಿಪಿಸಿಗೆ ತಿದ್ದುಪಡಿ: 2000ನೇ ಇಸವಿಯಲ್ಲಿ ಸಿಪಿಸಿಗೆ ತಿದ್ದುಪಡಿ ಮಾಡಲಾಗಿದೆ. ಈ ತಿದ್ದುಪಡಿ ಅನ್ವಯ ಪತ್ನಿ ಹೇಳಲು ಇಚ್ಛಿಸುವ ಅಂಶಗಳನ್ನು ಅರ್ಜಿಯಲ್ಲಿಯೇ ಉಲ್ಲೇಖಿಸಿ ವಕೀಲರಿಂದ ಪ್ರಮಾಣ ಪತ್ರ (ಸೋರ್ನ್‌ ಅಫಿಡಿವೆಟ್) ಸಲ್ಲಿಸಲಾಗುತ್ತಿತ್ತು. ಕಟಕಟೆಯಲ್ಲಿ ನಿಲ್ಲಿಸಿ ಸವಾಲು, ಪಾಟಿ ಸವಾಲು ಇತ್ಯಾದಿ ಅಗತ್ಯ ಇರಲಿಲ್ಲ. ಅರ್ಜಿಯಲ್ಲಿ ಅಂಶಗಳನ್ನು ಗಮನಿಸಿದ ನ್ಯಾಯಾಧೀಶರು ಪತಿಯ ಅನುಮತಿ ಪಡೆದು ಅದರ ಆಧಾರದ ಮೇಲೆ ನಿರ್ವಹಣಾ ಭತ್ಯೆಯ ಆದೇಶ ಹೊರಡಿಸುತ್ತಿದ್ದರು.ಆದರೆ `ಸುನಂದ~ ಅವರ ಪ್ರಕರಣದ ನಂತರ ಇದು ಬದಲಾಗಿದೆ. ಈ ಪ್ರಕರಣದಲ್ಲಿ ಕೌಟುಂಬಿಕ ಕೋರ್ಟ್ ನಿಗದಿ ಮಾಡಿದ್ದ ನಿರ್ವಹಣಾ ಭತ್ಯೆ ಪ್ರಶ್ನಿಸಿ ಅವರು ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. ಸುನಂದ ಅವರ ಸಾಕ್ಷಿ ಪಡೆಯದೇ ಹೋದ ಹಿನ್ನೆಲೆಯಲ್ಲಿ ಅವರಿಗೆ ಕಡಿಮೆ ಮೊತ್ತ ನೀಡಲಾಗಿದೆ ಎಂದು ಅಭಿಪ್ರಾಯಪಟ್ಟ ಕೋರ್ಟ್, ಎರಡೂ ಕಡೆಯ ಸಾಕ್ಷಿಯನ್ನು ಪಡೆದು ಪುನಃ ಆದೇಶ ಹೊರಡಿಸುವಂತೆ ಕೋರ್ಟ್‌ಗೆ ಸೂಚಿಸಿದೆ. ಇದು ಇತರ ಪ್ರಕರಣಗಳಿಗೂ ಈಗ ಮಾದರಿ.ಅಸಮಾಧಾನ: ಈ ಕುರಿತು `ಪ್ರಜಾವಾಣಿ~ಗೆ ಪ್ರತಿಕ್ರಿಯೆ ನೀಡಿದ ಹೈಕೋರ್ಟ್ ವಕೀಲ ಎ.ವಿ.ಅಮರನಾಥನ್ ಅವರು, `2004ರಲ್ಲಿ ಸಲ್ಲಿಸಲಾದ ಪ್ರಕರಣವೊಂದರಲ್ಲಿಯೂ ಬೆಂಗಳೂರಿನ ಕೌಟುಂಬಿಕ ಕೋರ್ಟ್ ಹೊಸದಾಗಿ ವಿಚಾರಣೆ ಆರಂಭಿಸಿದೆ. ಎರಡೂ ಕಡೆಯವರಿಗೆ ನ್ಯಾಯ ಒದಗಬೇಕು ಎಂದು ಸುನಂದ ಅವರ ಪ್ರಕರಣದಲ್ಲಿ ಹೈಕೋರ್ಟ್ ಆ ಆದೇಶ ಹೊರಡಿಸಿದೆ. ಆದರೆ ಅದೇ ಎಲ್ಲ ಪ್ರಕರಣಗಳಿಗೂ ಮಾದರಿ ಮಾಡಿಕೊಂಡರೆ ಕಷ್ಟ.ನಿರ್ವಹಣಾ ಭತ್ಯೆ ಕೋರಿ ಸಾವಿರಾರು ಪ್ರಕರಣಗಳು ಇತ್ಯರ್ಥಕ್ಕೆ ಬಾಕಿ ಇವೆ. ಒಂದೊಂದು ಪ್ರಕರಣದಲ್ಲಿ ಸವಾಲು, ಪಾಟಿ ಸವಾಲು ಇತ್ಯಾದಿ ನಡೆಸುತ್ತಾ ಹೋದರೆ, ಪ್ರಕರಣ ಮುಗಿಯುವುದು ಯಾವಾಗ? ಮಹಿಳೆಯರು ನಿರ್ವಹಣಾ ಭತ್ಯೆ ಪಡೆಯುವುದು ಯಾವಾಗ ಎಂದು ಪ್ರಶ್ನಿಸಿದರು.ಈ ಕುರಿತು ಅಳಲು ತೋಡಿಕೊಂಡ ಮಹಿಳೆಯೊಬ್ಬರು (ನಿರ್ವಹಣಾ ಭತ್ಯೆಗೆ 3 ವರ್ಷಗಳಿಂದ ಕೋರ್ಟ್ ಅಲೆಯುತ್ತಿದ್ದಾರೆ), `ಕೋರ್ಟ್‌ನಿಂದ ಆದೇಶ ಹೊರಡಿಸಿದ ನಂತರವೂ ನಿರ್ವಹಣಾ ಭತ್ಯೆಯನ್ನು ಪತಿಯಿಂದ ಪಡೆಯಲು ಹರಸಾಹಸ ಪಡಬೇಕಾದ ಸ್ಥಿತಿ ಇದೆ. ಕೋರ್ಟ್ ಆದೇಶ ಪಾಲನೆ ಆಗಿಲ್ಲ ಎಂಬ ಕಾರಣದಿಂದ ಪುನಃ ಕೋರ್ಟ್‌ಗೆ ಅಲೆದಾಟ ನಡೆಸುತ್ತಿರುವ ನನ್ನಂಥ ಎಷ್ಟೋ ಮಂದಿ ಮಹಿಳೆಯರು ಇದ್ದಾರೆ. ಈ ಹೊಸ ಕ್ರಮ ಆಘಾತಕಾರಿಯಾಗಿದೆ~ ಎಂದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.