ಬುಧವಾರ, ಜೂನ್ 16, 2021
21 °C

ಹೈಟೆಕ್ ಬಸ್‌ನಿಲ್ದಾಣ ಭಣಭಣ

ರಮೇಶ ಕೆ. Updated:

ಅಕ್ಷರ ಗಾತ್ರ : | |

ಒಂದನೇ ಮಹಡಿಯಿಂದ ಮೆಟ್ಟಿಲುಗಳ ಮೂಲಕ ಇಳಿಯುತ್ತಿದ್ದ ಆ ವ್ಯಕ್ತಿ ನೆಲಮಹಡಿಗೆ ಬರುವಷ್ಟರಲ್ಲಿ ನಿಟ್ಟುಸಿರು ಬಿಡುತ್ತಿದ್ದ. ಆತನ ಬಲಗಾಲು ಸ್ವಾಧೀನದಲ್ಲಿ ಇರಲಿಲ್ಲ. `ಕೋಟಿಗಟ್ಟಲೆ ಹಣ ವ್ಯಯಿಸಿ ಬಸ್‌ನಿಲ್ದಾಣ ಕಟ್ಟಿಸಿದ್ದಾರೆ. ನಮ್ಮಂಥವರಿಗೆ ಅನುಕೂಲವಾಗಲೆಂದು ಇರುವ ಲಿಫ್ಟ್‌ಗಳು ಇಲ್ಲಿ ಕೆಲಸ ನಿರ್ವಹಿಸುತ್ತಿಲ್ಲ~ ಎಂದು ಹಿಡಿಶಾಪ ಹಾಕುತ್ತಿದ್ದರು.

 

ಸ್ಥಳ: ಯಶವಂತಪುರ ಬಸ್ ನಿಲ್ದಾಣ. ಕೆಲವೇ ತಿಂಗಳ ಹಿಂದೆ ಪ್ರಯಾಣಿಕರ ಸೇವೆಗೆ ತೆರೆದುಕೊಂಡ  ಹೈಟೆಕ್ ಬಸ್ ನಿಲ್ದಾಣದಲ್ಲಿ ನೆಲಮಂಗಲದಿಂದ ರಾಜಾಜಿನಗರಕ್ಕೆ ಹೋಗಲು ಬಂದಿದ್ದ ಸುಬ್ರಹ್ಮಣ್ಯ ಅವರು ನಿಲ್ದಾಣದ ಲಿಫ್ಟ್‌ಗಳು ಕಾರ್ಯನಿರ್ವಹಿಸದೇ ಇದ್ದ ಕಾರಣ ಮೆಟ್ಟಿಲುಗಳನ್ನು ಅವಲಂಬಿಸಬೇಕಾಯಿತು.ಬಸ್‌ಗಾಗಿ ಕಾಯುತ್ತಿದ್ದ ಸುಬ್ರಹ್ಮಣ್ಯ `ಮೆಟ್ರೊ~ ಜೊತೆ ಮಾತಿಗಿಳಿದರು... ನೆಲಮಂಗಲದಿಂದ ಪ್ರತಿದಿನ ನಗರದ ನಾನಾ ಕಡೆ ಓಡಾಡುತ್ತೇನೆ. `ನಾನು ಖಾಸಗಿ ಟ್ರಾನ್ಸ್‌ಫೋರ್ಟ್ ಕಂಪೆನಿಯಲ್ಲಿ ಕೆಲಸ ಮಾಡುತ್ತೇನೆ. ಕೆಲಸದ ನಿಮಿತ್ತ ನಗರದ ಅನೇಕ ಕಡೆ ಬಿಎಂಟಿಸಿ ಬಸ್‌ಗಳಲ್ಲಿ ಸಂಚರಿಸುತ್ತೇನೆ. ಬಲಗಾಲು ಸ್ವಾಧೀನದಲ್ಲಿ ಇಲ್ಲ. ಹಾಗಾಗಿ ನಡೆಯಲು ಕಷ್ಟವಾಗುತ್ತದೆ~ ಎನ್ನುತ್ತಾರೆ.ಯಶವಂತಪುರ ಹೈಟೆಕ್ ಬಸ್ ನಿಲ್ದಾಣದಲ್ಲಿ ಎಲ್ಲವೂ ಸರಿಯಿದ್ದರೂ ಸಮಸ್ಯೆಗಳು ಕೂಡ ಉಂಟು. ಆಕರ್ಷಕ, ಸುಂದರ ಬಹುಮಹಡಿ ಬಸ್‌ನಿಲ್ದಾಣವಿದ್ದರೂ ಪ್ರಯಾಣಿಕರು ಸರ್ಕಲ್ ಬಳಿಯ ಸಿಗ್ನಲ್‌ನಲ್ಲಿ ಬಸ್‌ಗಾಗಿ ಕಾಯುತ್ತಾರೆ. ರಾತ್ರಿ 8ರ ನಂತರ ನಿಲ್ದಾಣ ಬಿಕೋ ಎನ್ನುತ್ತಿರುತ್ತದೆ.

 

ಹಳ್ಳಿಗಳಿಂದ ಬಂದ ಪ್ರಯಾಣಿಕರು ಲಗೇಜನ್ನು ಹೆಗಲ ಮೇಲೆ ಹೊತ್ತುಕೊಂಡು ನೆಲಮಹಡಿಯ ನಿಲ್ದಾಣದಿಂದ ಒಂದನೇ ಮಹಡಿ ನಿಲ್ದಾಣಕ್ಕೆ ಮೆಟ್ಟಿಲುಗಳ ಮೂಲಕ ಕಷ್ಟಪಟ್ಟು ಏರುತ್ತಾರೆ. ಇದು ಯಶವಂತಪುರ ಬಸ್‌ನಿಲ್ದಾಣದಲ್ಲಿ ನಿತ್ಯದ ಸನ್ನಿವೇಶಗಳು.ಈ ನಿಲ್ದಾಣದಲ್ಲಿ ಯಲಹಂಕ, ಹೆಬ್ಬಾಳ, ಶಿವಾಜಿನಗರ, ಮೆಜೆಸ್ಟಿಕ್, ಕೆ.ಆರ್.ಮಾರುಕಟ್ಟೆ ಮಾರ್ಗವಾಗಿ ಹೋಗುವ ಬಸ್‌ಗಳು ಒಂದನೇ ಮಹಡಿಯಿಂದ ಸಂಚರಿಸುತ್ತವೆ. ಇನ್ನು ವಿಜಯನಗರ, ಹಂಪಿನಗರ, ಕೆಂಗೇರಿ, ಗೊರಗುಂಟೆಪಾಳ್ಯ, ಜಾಲಹಳ್ಳಿಕ್ರಾಸ್, ನೆಲಮಂಗಲಕ್ಕೆ ಹೋಗುವ ಬಸ್‌ಗಳು ನೆಲಮಹಡಿಯಿಂದ ಹೊರಡುತ್ತವೆ.`ನೆಲಮಂಗಲದಿಂದ ವಿಜಯನಗರಕ್ಕೆ ಹೋಗುವ ಪ್ರಯಾಣಿಕರು ಯಶವಂತಪುರ ಬಸ್‌ನಿಲ್ದಾಣದ ಒಂದನೇ ಮಹಡಿಯಿಂದ ನೆಲಮಹಡಿ ನಿಲ್ದಾಣಕ್ಕೆ ಬರಬೇಕು. ಅಂಗವಿಕಲರು, ವಯಸ್ಸಾದವರು ಹಾಗೂ ಲಗೇಜ್ ಹಿಡಿದುಕೊಂಡ ಪ್ರಯಾಣಿಕರು ಬಸ್ ಬದಲಾಯಿಸಲು ಹರಸಾಹಸ ಪಡಬೇಕು~ ಎಂದು ಸುಬ್ರಹ್ಮಣ್ಯ ತಮ್ಮ ಕಷ್ಟವನ್ನು ತೋಡಿಕೊಳ್ಳುತ್ತಾರೆ.ಕೋಟ್ಯಂತರ ರೂಪಾಯಿ ಹಣ ವೆಚ್ಚ ಮಾಡಿ ಕಟ್ಟಿಸಿರುವ ಹೈಟೆಕ್ ಬಸ್ ನಿಲ್ದಾಣದಲ್ಲಿ ರಾತ್ರಿ 8 ಗಂಟೆಯಾಗುತ್ತಿದ್ದಂತೆ ಪ್ರಯಾಣಿಕರ ಸಂಖ್ಯೆ ಬೆರಳೆಣಿಕೆಯಷ್ಟಾಗುತ್ತದೆ. ಕಾರಣ ಬಸ್‌ನಿಲ್ದಾಣದಿಂದ ಸ್ವಲ್ಪವೇ ದೂರದಲ್ಲಿ ಯಶವಂತಪುರ ಸರ್ಕಲ್ ಇದೆ.ಸರ್ಕಾರಿ ಕಚೇರಿಗಳು, ಖಾಸಗಿ ಕಂಪೆನಿಗಳ ನೌಕರರು ಯಶವಂತಪುರ ಸರ್ಕಲ್‌ನ ಸಿಗ್ನಲ್‌ನಲ್ಲೇ ಬಸ್‌ಹತ್ತಿ ಹೋಗುತ್ತಾರೆ. ಹಾಗಾಗಿ ಬಸ್ ನಿಲ್ದಾಣಕ್ಕೆ ರಾತ್ರಿ 8 ಗಂಟೆಯ ನಂತರ ಬರುವ ಪ್ರಯಾಣಿಕರ ಸಂಖ್ಯೆ ಕಡಿಮೆಯಾಗುತ್ತದೆ. ಹೋಟೆಲ್, ಅಂಗಡಿಗಳು ಕೂಡ ಸರ್ಕಲ್‌ನಲ್ಲೇ ಇರುವುದರಿಂದ ಪ್ರಯಾಣಿಕರಿಗೆ ಬಸ್ ನಿಲ್ದಾಣ ದೂರ ಎಂಬ ಭಾವನೆ ಇದೆ.`ನಾನು ಪ್ರತಿದಿನ ಮೆಜೆಸ್ಟಿಕ್‌ನಿಂದ ಯಶವಂತಪುರಕ್ಕೆ ಪ್ರಯಾಣಿಸುತ್ತೇನೆ. ಇಲ್ಲಿನ ಖಾಸಗಿ ಕಂಪೆನಿಯಲ್ಲಿ ಕೆಲಸ ನಿರ್ವಹಿಸುತ್ತೇನೆ. ದಿನವೆಲ್ಲ ಕೆಲಸ ಮಾಡಿ ಹೈರಾಣಗಿರುತ್ತದೆ. ಮತ್ತೆ ಸರ್ಕಲ್‌ನಿಂದ ಬಸ್ ನಿಲ್ದಾಣಕ್ಕೆ ಹೋಗೋಕೆ ಸಾಕುಸಾಕಾಗುತ್ತದೆ~ ಎನ್ನುತ್ತಾರೆ ಮೀನಾಕ್ಷಿ. ರಾತ್ರಿ 8 ಗಂಟೆಯ ನಂತರ ಸಿಗ್ನಲ್‌ನಲ್ಲೇ ಕೆಲ ಬಸ್‌ಗಳು ನಿಲ್ಲುತ್ತವೆ. ಹಾಗಾಗಿ ನಿಲ್ದಾಣಕ್ಕೆ ಯಾಕೆ ಹೋಗೋದು~ ಎಂದು ಪ್ರಶ್ನೆ ಮಾಡುತ್ತಾರೆ ಅವರು.`ನಾನು ಪ್ರತಿ ದಿನ ಬಿಎಂಟಿಸಿ ಬಸ್‌ನಲ್ಲೇ ಸಂಚರಿಸುತ್ತೇನೆ. ಶಿವಾಜಿನಗರದಲ್ಲಿ ನನ್ನ ಮನೆ. ಬಟ್ಟೆ ಮಾರುವುದು ನನ್ನ ಕಸುಬು. ಮನೆ ತಲುಪುವಷ್ಟರಲ್ಲಿ ರಾತ್ರಿ ಹನ್ನೊಂದಾಗಿರುತ್ತದೆ. ಬಟ್ಟೆಗಳನ್ನೆಲ್ಲಾ ಮಾರಿಕೊಂಡು ಬಂದರೆ ಮಾತ್ರ ಅಂದಿನ ಜೀವನ ನಡೆಯೋದು. ಗೊರಗುಂಟೆಪಾಳ್ಯ, ಪೀಣ್ಯದ ಕಡೆ ವ್ಯಾಪಾರಕ್ಕಾಗಿ ಬರುತ್ತೇನೆ.ವ್ಯಾಪಾರ ಮುಗಿಸಿಕೊಂಡು ಯಶವಂತಪುರ ನಿಲ್ದಾಣಕ್ಕೆ ಬರುವಷ್ಟರಲ್ಲಿ ರಾತ್ರಿ ಹತ್ತಾಗಿರುತ್ತೆ. ನಿಲ್ದಾಣದಲ್ಲಿ ಕಾದು ಕಾದು ಸಾಕಾಗುತ್ತೆ. ಶಿವಾಜಿನಗರಕ್ಕೆ ಹೋಗುವ ಒಂದೆರಡು ಬಸ್‌ಗಳು ಮೇಲ್ಸೆತುವೆ ಮುಖಾಂತರ ಹೋಗುತ್ತವೆ. ಹಾಗಾಗಿ ನಮಗೆ ತೊಂದರೆಯಾಗುತ್ತಿದೆ. ನಿಲ್ದಾಣಕ್ಕೆ ಬಂದರೆ ನಮ್ಮ ತೊಂದರೆ ತಪ್ಪುತ್ತದೆ~ ಎಂಬುದು ಜಾಫರ್‌ಖಾನ್ ದೂರು.ಯಲಹಂಕದಿಂದ ರಾಜಾಜಿನಗರಕ್ಕೆ ಪ್ರತಿದಿನ ಸಂಚರಿಸುವ ನಾಗರಾಜ್ ಖಾಸಗಿ ಕಂಪೆನಿಯಲ್ಲಿ ಚಾರ್ಟೆಡ್ ಅಕೌಂಟೆಂಡ್ ಆಗಿ ಕೆಲಸ ನಿರ್ವಹಿಸುತ್ತಾರೆ. ನಿತ್ಯ ಯಶವಂತಪುರ ಬಸ್‌ನಿಲ್ದಾಣಕ್ಕೆ ಬಂದು ರಾಜಾಜಿನಗರಕ್ಕೆ ಹೋಗುತ್ತಾರೆ. `ಕಳೆದ ಐದು ವರ್ಷಗಳಿಂದ ಯಶವಂತಪುರ ಬಸ್‌ನಿಲ್ದಾಣಕ್ಕೆ ಬಂದು ರಾಜಾಜಿನಗರಕ್ಕೆ ಹೋಗ್ತೀನಿ.ಈ ಹೊಸ ಬಸ್‌ನಿಲ್ದಾಣ ಆಗುವ ಮುಂಚೆ ಹಳೆ ಬಸ್‌ನಿಲ್ದಾಣದಲ್ಲಿ ಮೂರ‌್ನಾಲ್ಕು ಬಸ್‌ಗಳು ಮಾತ್ರ ನಿಲ್ದಾಣದಲ್ಲಿ ನಿಲ್ಲುತ್ತಿದ್ದವು. ಬರೀ ದೂಳು, ಕೂರಲು ಜಾಗವಿರಲಿಲ್ಲ. ಯಲಹಂಕದಿಂದ ಬಂದು ಯಶವಂತಪುರ ಟೋಲ್‌ಗೇಟ್ ಬಸ್‌ನಿಲ್ದಾಣದಲ್ಲಿ ಇಳಿದು, ಅಲ್ಲಿಂದ ರಾಜಾಜಿನಗರಕ್ಕೆ ಹೋಗಬೇಕಾದ ಅನಿವಾರ್ಯತೆ ಇತ್ತು. ಈಗ ಹೈಟೆಕ್ ಬಸ್‌ನಿಲ್ದಾಣವಾಗಿ ನಮಗೆ ಅನುಕೂಲವಾಗಿದೆ~ ಎಂದು ನಿಲ್ದಾಣದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ ನಾಗರಾಜ್.ಅದೇನೆ ಇರಲಿ ಪ್ರಯಾಣಿಕರ ಅನುಕೂಲಕ್ಕಾಗಿ ಸರ್ಕಾರ ಕೋಟಿಗಟ್ಟಲೆ ಹಣ ವ್ಯಯಿಸಿ ನಿರ್ಮಿಸಿದ ಹೈಟೆಕ್ ಬಸ್‌ನಿಲ್ದಾಣಕ್ಕೆ ಪ್ರಯಾಣಿಕರು ಬರಬೇಕು. ಆ ಮೂಲಕ ಸಾರ್ವಜನಿಕ ಆಸ್ತಿಯ ಉಪಯೋಗ ಪಡೆದುಕೊಳ್ಳಬೇಕಿದೆ. ಇನ್ನು ಅಂಗವಿಕಲರು, ವಯಸ್ಸಾದವರ ಅನುಕೂಲಕ್ಕಾಗಿ ಗಾಲಿಕುರ್ಚಿಗಳನ್ನೋ ಅಥವಾ ರಾತ್ರಿ ವೇಳೆ ಲಿಫ್ಟ್‌ನ ವ್ಯವಸ್ಥೆಯನ್ನು ಮಾಡಬೇಕಾದ ಅನಿವಾರ್ಯತೆ ಬಸ್‌ನಿಲ್ದಾಣದ ವ್ಯವಸ್ಥಾಪಕರದ್ದಾಗಿದೆ.ಪಾದಚಾರಿ ಮಾರ್ಗ ಬಳಸಿಯಶವಂತಪುರ ಬಸ್‌ನಿಲ್ದಾಣದಿಂದ ಸರ್ಕಲ್‌ಗೆ ಬರುವ ಕೆಲವು ಪಾದಚಾರಿಗಳು ಮೇಲ್ಸೆತುವೆ ಮೂಲಕ ಬರುತ್ತಾರೆ. ಪಾದಚಾರಿಗಳ ಅನುಕೂಲಕ್ಕಾಗಿ ನಿಲ್ದಾಣದ ನೆಲಮಹಡಿಯ ಬಳಿ ಪಾದಚಾರಿ ಮಾರ್ಗವನ್ನು ತೆರೆಯಲಾಗಿದ್ದರೂ ಮೇಲ್ಸೇತುವೆ ಮೂಲಕ ಹೋಗುತ್ತಾರೆ. ಅಪಘಾತವಾಗುವ ಸಂಭವವಿದ್ದರೂ ಲೆಕ್ಕಿಸದೇ ಈ ರೀತಿ ಅನ್ಯ ಮಾರ್ಗದಲ್ಲಿ ಹೋಗುವುದನ್ನು ಸಾರ್ವಜನಿಕರು ತಪ್ಪಿಸಬೇಕಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.