ಗುರುವಾರ , ಮೇ 26, 2022
30 °C

ಹೈನುಗಾರಿಕೆಯ ಪ್ರೀತಿ

ಸುಧಾ ಜಯಪ್ರಕಾಶ, ತಲವಾಟ Updated:

ಅಕ್ಷರ ಗಾತ್ರ : | |

ಹೈನುಗಾರಿಕೆಯ ಪ್ರೀತಿ

ಪ್ರಸ್ತುತ ವಿದ್ಯಮಾನದಲ್ಲಿ ಜಾನುವಾರು ಸಾಕಣೆಯ ಜೊತೆಗೆ ಹೈನುಗಾರಿಕೆ ಸುಲಭದ ಸಂಗತಿಯಲ್ಲ. ಗಗನ ಮುಖಿಯಾಗಿರುವ ಪಶು ಆಹಾರ, ಹುಲ್ಲು, ಮತ್ತಿತರೆ ಖರ್ಚುಗಳಿಗೆ ಬೇಸತ್ತು ಈ ಕಸುಬಿನಿಂದ ಬಹಳಷ್ಟು ಮಂದಿ ದೂರ ಸರಿದಿದ್ದಾರೆ.ಈ ನಿಟ್ಟಿನಲ್ಲಿ ಸಮಯವನ್ನು ಸದುಪಯೋಗಪಡಿಸಿಕೊಂಡು ಹೈನುಗಾರಿಕೆಯಲ್ಲಿ ಸ್ವಾವಲಂಬಿಯಾಗಿ ಪರಿಶ್ರಮ ವಹಿಸಿ, ಆರ್ಥಿಕವಾಗಿ ಸಬಲರಾಗಿರುವ ಶಿವಮೊಗ್ಗ ಜಿಲ್ಲೆಯ ಸಾಗರದ ಜೋಗ ರಸ್ತೆಯಲ್ಲಿರುವ `ಶ್ರಿಧರ ಮಂದಿರ~ದ ಭಾನುಮತಿ ಯಶಸ್ವಿ ಮಹಿಳೆಯರ ಸಾಲಿಗೆ ಸೇರುತ್ತಾರೆ. ಹೀಗಿದೆ ಇವರ ದಿನಚರಿ

ಪ್ರತಿನಿತ್ಯ ಬೆಳಗಿನ ಜಾವ ಐದು ಗಂಟೆಗೆ ಏಳುತ್ತಾರೆ. ಬಚ್ಚಲಿನ ನೀರು ತುಂಬಿದ ದೊಡ್ಡ ಹಂಡೆಗೆ ಅಡಿಕೆ ಹಾಳೆ, ಸಿಪ್ಪೆ, ತೆಂಗಿನ ಕಸ ಕಡ್ಡಿಗಳನ್ನು ಒಟ್ಟು ಸೇರಿಸಿ ಹೊತ್ತಿಸುತ್ತಾರೆ. ನೀರು ಕಾಯುವ ತನಕ ಕೊಟ್ಟಿಗೆಯಲ್ಲಿ ಜಾನುವಾರುಗಳ ಕಾಲುಗಳಡಿ ಬಿದ್ದ ಸಗಣಿ, ಹುಲ್ಲು ಗುಡಿಸಿ ನೆಲವನ್ನು ನಲ್ಲಿ ನೀರಿನಿಂದ ತೊಳೆದು ಸ್ವಚ್ಛ ಮಾಡುತ್ತಾರೆ. ಅಷ್ಟರಲ್ಲಿ ಹಂಡೆಯಲ್ಲಿ ಬಿಸಿನೀರು ತಯಾರಾಗಿರುತ್ತದೆ. ಬಕೇಟಿನಲ್ಲಿ ಬಿಸಿ ನೀರು ತುಂಬಿಸಿ ಕೊಟ್ಟಿಗೆಯಲ್ಲಿರುವ ದನ ಕರು ಎಮ್ಮೆಗಳಿಗೆ ನೀರು ಕುಡಿಸುತ್ತಾರೆ.

ಅಲ್ಲದೇ ಮ್ಯೋಷ್ ಪುಡಿ, ಹತ್ತಿ ಕಾಳು, ಹತ್ತಿ ಹಿಂಡಿ, ಬಹುತರಿ ಪುಡಿ (ಹುರುಳಿ, ಕಡಲೆ, ಜೋಳ ಇತ್ಯಾದಿ ಧಾನ್ಯಗಳ ಪುಡಿ) ಗಳ ನೆನೆದ ಮಿಶ್ರಣಗಳನ್ನು ಅಗತ್ಯ ಪ್ರಮಾಣಗಳಲ್ಲಿ ಬಕೇಟುಗಳಲ್ಲಿ ಹಾಕಿ ತಿನ್ನಲು ನೀಡುತ್ತಾರೆ.ನಂತರ ಎಮ್ಮೆ ದನಗಳ ಹಾಲು ಹಿಂಡಿ ಕ್ಯಾನುಗಳಲ್ಲಿ ತುಂಬಿಸಿಡುತ್ತಾರೆ. ಆಗಲೇ  ಬೆಳಗಾಗಿರುತ್ತದೆ. ಹಾಲು ಒಯ್ಯುವ ನಿತ್ಯದ ಗಿರಾಕಿಗಳು ಬರಲಾರಂಭಿಸುತ್ತಾರೆ.

 

ಅವರಿಗೆಲ್ಲ ಅಳತೆ ಪ್ರಕಾರ ಸರಿಯಾಗಿ ಹಾಲು ಹಂಚಿ ಕ್ಯಾನುಗಳನ್ನು ಬಿಸಿನೀರಿನಲ್ಲಿ ತೊಳೆದಿಡುವ ಹೊತ್ತಿಗೆ ಅಡುಗೆ ಮನೆ ಇವರನ್ನು ಕಾಯುತ್ತಿರುತ್ತದೆ. ಮತ್ತೆ ಸಂಜೆ 5ರ ವೇಳೆಗೆ ಕೊಟ್ಟಿಗೆ ಕೆಲಸ ಪ್ರಾರಂಭ. ಕೊಟ್ಟಿಗೆಯನ್ನು ಮತ್ತೆ ಗುಡಿಸಿ ಸ್ವಚ್ಛ ಮಾಡಿ ಹಾಲು ಹಿಂಡಿ ಗಿರಾಕಿಗಳಿಗೆ ಕೊಡುವ ವೇಳೆಗೆ ಸಂಜೆಯಾಗಿರುತ್ತದೆ.ಈ ಕೆಲಸದಲ್ಲಿ ಸ್ವಲ್ಪವೂ ಬೇಸರಿಸದೆ, ತಾಳ್ಮೆ ಕಳೆದುಕೊಳ್ಳದೆ, ಆಳುಗಳ ಸಹಾಯವಿಲ್ಲದೆ, ಕೊಟ್ಟಿಗೆಯ ಎಲ್ಲಾ ಜಾನುವಾರುಗಳನ್ನು ಪ್ರೀತಿಯಿಂದ ಆರೈಕೆ ಮಾಡಿ `ಗೋ ಸೇವೆಯೇ ಗೋವಿಂದನ ಸೇವೆ~ ಎಂಬ ಮಾತಿನಲ್ಲಿ ಪೂರ್ತಿ ನಂಬಿಕೆ ಇಟ್ಟಿರುವ ಭಾನುಮತಿ, ಕಳೆದ 22 ವರ್ಷಗಳಿಂದ ಹೈನುಗಾರಿಕೆ ನಡೆಸುತ್ತಿದ್ದಾರೆ. ಇವರ ಪತಿ ದತ್ತಾತ್ರೇಯ ಮಡದಿಗೆ ಈ ಕಾರ್ಯದಲ್ಲಿ ಸಂಪೂರ್ಣ ಸಹಕಾರ ನೀಡುತ್ತಿದ್ದಾರೆ.

 

ಹೈಸ್ಕೂಲ್ ವಿದ್ಯಾರ್ಥಿನಿಯಾಗಿದ್ದಾಗಲೇ ಈಕೆ ತಮ್ಮ ತವರು ಮನೆ ನಂದಿತಳೆಯಲ್ಲಿ ತಮ್ಮ ತಾಯಿ ತಂದೆಯೊಂದಿಗೆ ಕೊಟ್ಟಿಗೆ ಕೆಲಸ, ದನಕರುಗಳ ನಂಟು ಬೆಳೆಸಿಕೊಂಡವರು. ಆ ವಯಸ್ಸಿನಲ್ಲಿ ಸಗಣಿ-ಗಂಜಲವೆಂದರೆ ಹೇಸಿಗೆ ಪಡದೆ ಎಮ್ಮೆ, ಹಸುಗಳ ಹಾಲು ಕರೆಯುವ ಕೆಲಸವನ್ನು ರೂಢಿಸಿಕೊಂಡವರು.ಇವರು ಪ್ರತಿದಿನ ಎರಡು ಹೊತ್ತು ಸುಮಾರು 26 ಲೀಟರ್‌ಗಳಷ್ಟು ಹಾಲು ಮಾರುತ್ತಾರೆ. ಸಾಗರದ ಪೇಟೆಯ ಹಲವು ಮನೆಗಳಿಗೆ ಮತ್ತು ಸಾಗರದ ಲಾಲ್ ಬಹದ್ದೂರ್ ಶಾಸ್ತ್ರಿ ಕಾಲೇಜಿನ ಹತ್ತಿರದ ವಿದ್ಯಾರ್ಥಿನಿ ನಿಲಯಕ್ಕೆ ಹಾಲು ಸರಬರಾಜು ಮಾಡುತ್ತಾರೆ. ಜಾನುವಾರುಗಳ ಆಹಾರ- ಹುಲ್ಲುಗಳ ಎಲ್ಲಾ ಖರ್ಚು ಕಳೆದು ಇವರಿಗೆ ಸಾಕಷ್ಟು ಹಣ ಕೂಡ ಉಳಿತಾಯವಾಗುತ್ತದೆ.ಕೊಟ್ಟಿಗೆಯಲ್ಲೇ ಹುಟ್ಟಿದ ಕರುಗಳನ್ನು ಚೆನ್ನಾಗಿ ಪಾಲನೆ ಪೋಷಣೆ ಮಾಡಿ ಅವು ದೊಡ್ಡದಾದ ನಂತರ ಕೃತಕ ಗರ್ಭಧಾರಣೆಯ ಚಿಕಿತ್ಸೆ ಕೊಡಿಸುತ್ತಾರೆ. ಹೀಗೆ ಪೀಳಿಗೆ ಮುಂದುವರೆಯುತ್ತದೆ.ಹಸು ಎಮ್ಮೆಗಳ ಆರೋಗ್ಯ ತಪಾಸಣೆಗೆ, ಕೃತಕ ಗರ್ಭಧಾರಣೆಯ ಚಿಕಿತ್ಸೆಗೆ ಪಶು ದ್ಯರಾದ ಡಾ.ಶ್ರಿಪಾದ ರಾವ್ ಸಕಾಲಕ್ಕೆ ಬಂದು ಭೇಟಿ ಕೊಡುತ್ತಾರೆ. ಕೊಟ್ಟಿಗೆಯಲ್ಲೇ ಈ ಜಾನುವಾರುಗಳು ಹುಟ್ಟಿದ್ದವ್ದ್ದಾದರಿಂದ ಇವುಗಳಿಗೆ ರೋಗ ರುಜಿನಗಳು ಕಡಿಮೆ.ಕೊಟ್ಟಿಗೆಯಲ್ಲಿ ಸಂಗ್ರಹವಾಗುವ ಸಗಣಿಯ ಗೊಬ್ಬರವನ್ನು ಭಾನುಮತಿ ಮಾರುವುದಿಲ್ಲ. ಈ ಗೊಬ್ಬರ ಇವರ ಎರಡೂವರೆ ಎಕರೆ ಅಡಿಕೆ ತೋಟ, ನೂರು ತೆಂಗಿನ ಮರ, ಸುಮಾರು ಒಂದು ನೂರು ಸಪೋಟಾ ಮರಗಳಿಗೆ ಉಪಯೋಗಿಸಲ್ಪಡುತ್ತಿದೆ.

ಅಧಿಕ ಪೌಷ್ಟಿಕಾಂಶ ತುಂಬಿರುವ ಕೋ-3 ಎಂಬ ಮೇವಿನ ಹುಲ್ಲನ್ನು ತಮ್ಮ ಹನ್ನೆರಡು ಎಕರೆ ಜಮೀನಿನಲ್ಲಿ ಬೆಳೆಸಿದ್ದಾರೆ. ಅಲ್ಲದೇ ಒಣ ಹುಲ್ಲನ್ನು ಒಂದು ಹೊರೆಗೆ 25 ರೂಪಾಯಿಯಂತೆ ಸುಮಾರು 500 ಹುಲ್ಲು ಹೊರೆಗಳನ್ನು ಬೇರೆ ಕಡೆಯಿಂದ ಖರೀದಿಸುತ್ತಾರೆ.ಬೆಂಗಳೂರಿನ ಪ್ರತಿಷ್ಠಿತ ಕಂಪೆನಿಗಳಲ್ಲಿ ಉದ್ಯೋಗಿಗಳಾಗಿರುವ ಇವರ ಇಬ್ಬರು ಪುತ್ರರು ಹೆತ್ತವರ ಹೈನುಗಾರಿಕೆಯ ವೃತ್ತಿಗೆ ವಿಶೇಷ ಒಲವು ಹಾಗೂ ಬೆಂಬಲ ಕೊಡುತ್ತಿದ್ದಾರೆ. `ನೌಕರಿಯನ್ನಾದರೂ ಬಿಟ್ಟೇವು, ಈ ಕಸುಬನ್ನು ಬಿಡುವುದಿಲ್ಲ~ ಎಂದು ಅವರು ಹೇಳುತ್ತಾರೆ. ವಾರಾಂತ್ಯದಲ್ಲಿ ಊರಿಗೆ ಬರುವ ಅವರಿಬ್ಬರು ಮೊದಲು ಧಾವಿಸುವುದು ಕೊಟ್ಟಿಗೆಗೇ!

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.