ಶನಿವಾರ, ಮೇ 8, 2021
24 °C

ಹೊನ್ನಾಳಿಯ ಹಿರೇಕಲ್ಮಠ

ಚನ್ನೇಶ ಬಿ. ಇದರಮನಿ Updated:

ಅಕ್ಷರ ಗಾತ್ರ : | |

ಹೊನ್ನಾಳಿ ಪಟ್ಟಣದ ಹಿರೇಕಲ್ಮಠದ ಚನ್ನಪ್ಪ ಸ್ವಾಮಿಗಳ ಮಠ. ಅದು ವೀರಶೈವರ ಪ್ರಮುಖ ಧಾರ್ಮಿಕ ಕ್ಷೇತ್ರ. ಈ ಕ್ಷೇತ್ರದಲ್ಲಿ ಶ್ರೀ ಚನ್ನಪ್ಪಸ್ವಾಮಿಗಳ ಕರ್ತೃ ಗದ್ದುಗೆ ಇದೆ.ಹಿರೇಕಲ್ಮಠಕ್ಕೆ 1071 ವರ್ಷಗಳ ಇತಿಹಾಸವಿದೆ. ಶ್ರೀಮಂತ ಗುರು ಪರಂಪರೆ ಇದೆ. ಅನ್ನ-ಜ್ಞಾನದಾಸೋಹದಿಂದ ಮಠ ಜನರ ಗಮನ ಸೆಳೆಯುತ್ತಿದೆ.ವೀರಶೈವ ಪಂಚ ಪೀಠಗಳಲ್ಲಿ ಒಂದಾದ ಶ್ರೀಶೈಲದ ಜಡೆಯಶಂಕರ ಶಿವಾಚಾರ್ಯರು ಕ್ರಿ.ಶ. 940-1000 ಅವಧಿಯಲ್ಲಿ ರಂಭಾಪುರಿ ಪೀಠಕ್ಕೆ ಪ್ರಯಾಣಿಸುತ್ತಿದ್ದ ಸಂದರ್ಭದಲ್ಲಿ ತುಂಬಿ ಹರಿಯುತ್ತಿದ್ದ ತುಂಗಭದ್ರಾ ನದಿ ದಾಟಲು ಸ್ಥಳೀಯ ಅಂಬಿಗರು ಅವರಿಗೆ ನೆರವಾಗಲಿಲ್ಲವಂತೆ. ಆಗ ಅವರು ಕಂಬಳಿಯ ಮೇಲೆ ಕುಳಿತು ತಮ್ಮ ಕೈಯಲ್ಲಿದ್ದ ಯೋಗದಂಡದಿಂದ  ಹುಟ್ಟು ಹಾಕಿಕೊಂಡು ಶಿಷ್ಯರೊಂದಿಗೆ ನದಿ ದಾಟಿದರು. ನಂತರ ಬಿದಿರಹಳ್ಳಿ ಬಳಿ ಒಣಗಿದ ಅರಳಿಮರದ ಕೆಳಗೆ ವಿಶ್ರಾಂತಿಗಾಗಿ ತಂಗಿದರು. ಅವರು ಕಂಬಳಿ ಮೇಲೆ ಕುಳಿತು ನದಿ ದಾಟಿದ ವಿಚಾರ ತಿಳಿದ ಜನರು ಅವರ ದರ್ಶನ ಪಡೆದರು.ಕೆಲವರು ಕಿಡಿಗೇಡಿಗಳು ಅವರ ಪವಾಡದ ಬಗ್ಗೆ ಅನುಮಾನ ವ್ಯಕ್ತಪಡಿಸಿದರು. ಅವರು ಪವಾಡ ಪುರುಷರಾಗಿದ್ದರೆ ಒಣಗಿರುವ ಅರಳಿ ಮರವನ್ನು ಚಿಗುರಿಸಲಿ ಎಂದು ಸವಾಲು ಹಾಕಿದರಂತೆ. ಆಗ ಜಡೆಶಂಕರರು ಒಣಗಿದ ಅರಳಿಮರ ಚಿಗುರಿಸಿ ಅದರಿಂದ ಹೊನ್ನಿನ ಮಳೆ ಸುರಿಸಿದರು. ಅಂದಿನಿಂದ ಬಿದಿರಹಳ್ಳಿಯು ಬಿದಿರ ಹೊನ್ನಹಳ್ಳಿಯಾಗಿ ನಂತರ ಹೊನ್ನಾಳಿ ಎಂದಾಯಿತು.ಭಕ್ತರು ಜಡೆಶಂಕರರಿಗಾಗಿ ನದಿ ದಡದಲ್ಲಿ ಚಿಕ್ಕ ಕುಟೀರ ನಿರ್ಮಿಸಿದರು. ಜಡೆಯಶಂಕರರು ಇಲ್ಲಿಯೇ ಲಿಂಗೈಕ್ಯರಾದ ನಂತರ ಅವರ ಶಿಷ್ಯ ಚನ್ನಮಲ್ಲಿಕಾರ್ಜನ ಸ್ವಾಮಿಗಳು ಗದ್ದುಗೆ ಹಾಗೂ ಮಠ ಕಟ್ಟಿಸಿದರು. ಚನ್ನಮಲ್ಲಿಕಾರ್ಜುನ ಸ್ವಾಮಿಯವರು ಮಠ ಕಟ್ಟಿದ್ದರಿಂದ ಅದಕ್ಕೆ ಅವರ ಹೆಸರು ಬಂತು. ಮಠದಲ್ಲಿ ಜಡೆಯಶಂಕರರ ಕರ್ತೃ ಗದ್ದುಗೆ ಇದೆ.ಚನ್ನಪ್ಪಸ್ವಾಮಿ ಹಾಗೂ ಗುರುಬಸವ ಸ್ವಾಮಿಗಳ ಕರ್ತೃ ಗದ್ದುಗೆಗಳಿವೆ.

ಶ್ರಾವಣ ಮಾಸದಲ್ಲಿ ನಿತ್ಯ ಮೂರೂ ಗದ್ದುಗೆಗಳಿಗೆ ಅಭಿಷೇಕ, ಬಿಲ್ವಾರ್ಚನೆ, ದೀಪೋತ್ಸವ ನಡೆಯುತ್ತದೆ. ಮಠದ ಶಿವಾನುಭವ ಮಂಟಪದಲ್ಲಿ ಪ್ರವಚನಗಳು ನಡೆಯುತ್ತವೆ.ಶ್ರಾವಣದ ಪುನರ್ವಸು ನಕ್ಷತ್ರದಂದು ಶ್ರೀ ವೀರಭದ್ರ ದೇವರ ಕೆಂಡದರ್ಚನೆ ಮತ್ತು ಚನ್ನಪ್ಪಸ್ವಾಮಿ ರಥೋತ್ಸವ ನಡೆಯುತ್ತವೆ. ಹಿರೇಕಲ್ಮಠ ಕ್ಷೇತ್ರಕ್ಕೆ ಬರುವ ಯಾತ್ರಿಗಳಿಗೆ ಉಳಿದುಕೊಳ್ಳಲು ವಸತಿ ಸೌಕರ್ಯವಿದೆ. ಭಕ್ತರಿಗೆ ಉಚಿತ ಊಟೋಪಚಾರದ ವ್ಯವಸ್ಥೆ ಇದೆ. ದಾವಣಗೆರೆಯಿಂದ ಹರಿಹರದ ಮೂಲಕ ಹೊನ್ನಾಳಿಗೆ ಬರಲು ರಾಜ್ಯ ಸಾರಿಗೆ ಸಂಸ್ಥೆ ಬಸ್‌ಗಳಿವೆ. ಶಿವಮೊಗ್ಗ, ಭದ್ರಾವತಿ, ರಾಣಿಬೆನ್ನೂರು, ಹಿರೇಕೆರೂರು, ಶಿಕಾರಿಪುರಗಳಿಂದಲೂ ನೇರ ಬಸ್‌ಗಳಿವೆ. ಹೆಚ್ಚಿನ ವಿವರಗಳಿಗೆ ಸಂಪರ್ಕಿಸಬೇಕಾದ ದೂರವಾಣಿ ನಂಬರ್‌ಗಳು: 08188-251747, 99163-22247.ಸೇವಾ ವಿವರ

* ನಿತ್ಯ ರುದ್ರಾಭಿಷೇಕ 1008 ರೂ

* ಪ್ರಸಾದ ವಿನಿಯೋಗ ಸೇವೆ  10000 ರೂ

* ದಸರಾ ಪೂಜೆ ( 1ದಿನಕ್ಕೆ) 5000 ರೂ

* ಹೋಮ, ಪ್ರಸಾದ ಸೇವೆ (1ದಿನಕ್ಕೆ) 5000ರೂ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.