ಸೋಮವಾರ, ಜೂನ್ 14, 2021
27 °C
ಕರ್ನಾಟಕ: ಕಾಂಗ್ರೆಸ್‌ 14, ಬಿಜೆಪಿ 20 ಹೆಸರು ಪ್ರಕಟ

ಹೊರಬಿತ್ತು ಮೊದಲ ಪಟ್ಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಜ್ಯದಿಂದ ಲೋಕಸಭೆಗೆ ಸ್ಪರ್ಧಿಸುವ ಕಾಂಗ್ರೆಸ್‌ ಮತ್ತು ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಶನಿವಾರ ಹೊರಬಿದ್ದಿದೆ.ದೆಹಲಿಯಲ್ಲಿ ಪ್ರಕಟಿಸಿದ ಕಾಂಗ್ರೆಸ್‌ ಪಟ್ಟಿಯಲ್ಲಿ 14 ಮತ್ತು ಬಿಜೆಪಿ ಪಟ್ಟಿಯಲ್ಲಿ 20 ಹೆಸರುಗಳಿವೆ.ಪೆಟ್ರೋಲಿಯಂ ಸಚಿವ ಎಂ. ವೀರಪ್ಪ ಮೊಯಿಲಿ ಪ್ರತಿ­ನಿಧಿಸುವ ಚಿಕ್ಕಬಳ್ಳಾಪುರ ಸೇರಿ ಇನ್ನೂ 14 ಕ್ಷೇತ್ರ­ಗಳ ಅಭ್ಯರ್ಥಿಗಳ ಘೋಷಣೆಯನ್ನು ಕಾಂಗ್ರೆಸ್‌ ಬಾಕಿ ಉಳಿಸಿಕೊಂಡಿದೆ. ಉಳಿದಂತೆ ಪಕ್ಷದ ಎಲ್ಲ 8 ಹಾಲಿ ಸಂಸದ­ರಿಗೆ ಟಿಕೆಟ್‌ ನೀಡಿದೆ. ದಕ್ಷಿಣ ಕನ್ನಡ ಮತ್ತು ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ­ಗಳ ಆಯ್ಕೆಯನ್ನು ಪ್ರಾಥಮಿಕ ಚುನಾವಣೆ ಮೂಲಕ ನಡೆಸುತ್ತಿದೆ.ಬಿಜೆಪಿ ಪಟ್ಟಿಯಲ್ಲಿ ನಾಲ್ವರು ಹಾಲಿ ಸಂಸದರ ಹೆಸ­ರಿಲ್ಲ. ಈ ಪೈಕಿ ಶಿವಮೊಗ್ಗದಲ್ಲಿ ಬಿ.ವೈ. ರಾಘವೇಂದ್ರ  ಬದಲು ಅವರ ತಂದೆ ಬಿ.ಎಸ್‌. ಯಡಿಯೂರಪ್ಪ ಸ್ಪರ್ಧಿಸಲಿದ್ದಾರೆ.ಕಾಂಗ್ರೆಸ್‌ನಲ್ಲಿ ಮೊಯಿಲಿ ಅವರ ಹೆಸರು ಮೊದಲ ಪಟ್ಟಿಯಲ್ಲಿ ಇಲ್ಲದಿರುವುದು ಅಚ್ಚರಿಗೆ ಕಾರಣವಾಗಿದೆ.ಪಕ್ಷದ ಮೂಲಗಳ ಪ್ರಕಾರ, ಚಿಕ್ಕಬಳ್ಳಾಪುರ ಕ್ಷೇತ್ರದ ಅಭ್ಯರ್ಥಿಬಗ್ಗೆ  ಕೇಂದ್ರ ಚುನಾವಣಾ ಸಮಿತಿ ಇನ್ನೂ ಅಂತಿಮ ನಿರ್ಧಾರ ಕೈಗೊಂಡಿಲ್ಲ.ಪಕ್ಷ ಸೇರುವ ಮೊದಲೇ ಟಿಕೆಟ್‌: ರಾಷ್ಟ್ರೀಯ ವಿಶಿಷ್ಟ ಗುರುತಿನ ಸಂಖ್ಯೆ ಪ್ರಾಧಿಕಾರದ (ಆಧಾರ್‌) ಅಧ್ಯಕ್ಷ ನಂದನ್‌ ನಿಲೇಕಣಿ ಅವರು ಅಧಿಕೃತವಾಗಿ ಕಾಂಗ್ರೆಸ್‌ ಪಕ್ಷ ಸೇರುವ ಮುನ್ನವೇ ಬೆಂಗಳೂರು ದಕ್ಷಿಣ ಲೋಕ­ಸಭಾ ಕ್ಷೇತ್ರದ ಟಿಕೆಟ್‌ ನೀಡಲಾಗಿದೆ. ಅವರು ಭಾನು­ವಾರ ಬೆಳಿಗ್ಗೆ ಕಾಂಗ್ರೆಸ್‌ ಸೇರುತ್ತಿದ್ದಾರೆ.ಹಾಸನ ಲೋಕಸಭಾ ಕ್ಷೇತ್ರದಲ್ಲಿ ಜೆಡಿಎಸ್‌ ವರಿಷ್ಠ ಎಚ್‌.ಡಿ. ದೇವೇಗೌಡರ ಎದುರು ಅಭ್ಯರ್ಥಿಯನ್ನು ಕಣಕ್ಕಿಳಿಸ­ದಂತೆ ಕೇಂದ್ರದ ಮಾಜಿ ಸಚಿವ ಸಿ.ಕೆ.­ಜಾಫರ್‌ ಷರೀಫ್‌ ಅವರು ಕಾಂಗ್ರೆಸ್‌ ವರಿಷ್ಠರಿಗೆ ಪತ್ರ ಬರೆದಿದ್ದರು. ಆದರೆ, ಅವರ ಕೋರಿಕೆ ತಳ್ಳಿಹಾಕಿರುವ ಹೈಕಮಾಂಡ್‌, ಅರಕಲಗೂಡು ಶಾಸಕ ಎ.ಮಂಜು ಅವರನ್ನು ಕಣಕ್ಕಿಳಿಸುವ ತೀರ್ಮಾನ ಪ್ರಕಟಿಸಿದೆ. ಆ ಮೂಲಕ ಗೌಡರ ವಿರುದ್ಧ ಪ್ರಬಲ ಸ್ಪರ್ಧೆ ನೀಡುವ ಇಂಗಿತ ಹೊರಹಾಕಿದೆ.ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್‌ ತೊರೆದು ಕಾಂಗ್ರೆಸ್‌ ಸೇರಿದ್ದ ಎಸ್‌.ಪಿ. ಮುದ್ದ­ಹನುಮೇಗೌಡ ಅವರನ್ನು ತುಮಕೂರು ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಸಲಾಗುತ್ತಿದೆ.ಕಳೆದ ಲೋಕಸಭಾ ಚುನಾವಣೆಯಲ್ಲಿ ಬಳ್ಳಾರಿ ಕ್ಷೇತ್ರದಲ್ಲಿ ಬಿಜೆಪಿಯ ಜೆ. ಶಾಂತಾ ಅವರ ಎದುರು ಅತ್ಯಲ್ಪ ಮತಗಳ ಅಂತರದಲ್ಲಿ ಸೋಲು ಕಂಡಿದ್ದ ಎನ್‌.ವೈ.­ಹನುಮಂತಪ್ಪ ಅವರಿಗೆ ಮತ್ತೆ ಟಿಕೆಟ್‌ ನೀಡಲಾಗಿದೆ.ಮನವೊಲಿಕೆ ಯತ್ನ: ಚಿತ್ರದುರ್ಗ ಲೋಕಸಭಾ ಕ್ಷೇತ್ರ­ದಲ್ಲಿ ಸಮಾಜ ಕಲ್ಯಾಣ ಸಚಿವ ಎಚ್‌.ಆಂಜನೇಯ ಅವರನ್ನು ಮತ್ತು ಚಿಕ್ಕೋಡಿ ಕ್ಷೇತ್ರದಲ್ಲಿ ಸಕ್ಕರೆ ಸಚಿವ ಪ್ರಕಾಶ್‌ ಬಿ.ಹುಕ್ಕೇರಿ ಅವರನ್ನು ಕಣಕ್ಕಿಳಿಸಲು ಮುಖ್ಯ­ಮಂತ್ರಿ ಆಸಕ್ತಿ ತೋರುತ್ತಿದ್ದಾರೆ.ಆದರೆ, ಆಂಜನೇಯ ಅವರು ಸ್ಪರ್ಧೆಗೆ ನಿರಾಕರಿಸುತ್ತಿದ್ದರೆ, ಪ್ರಕಾಶ್‌ ಹುಕ್ಕೇರಿ ಅವರು ಪುತ್ರ ಗಣೇಶ್‌ ಹುಕ್ಕೇರಿ ಅವರಿಗೆ ಟಿಕೆಟ್‌ ಕೇಳುತ್ತಿದ್ದಾರೆ.  ಇಬ್ಬರನ್ನೂ  ಕಣಕ್ಕಿಳಿಸಲು ಮನವೊಲಿಕೆ ನಡೆಯುತ್ತಿದೆ.ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ವಿಧಾನಸಭೆ ಅಧ್ಯಕ್ಷ ಕಾಗೋಡು ತಿಮ್ಮಪ್ಪ ಅಥವಾ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ ಅವರನ್ನು ಕಣಕ್ಕಿಳಿಸುವ ಯೋಚನೆ ಕಾಂಗ್ರೆಸ್‌ ವರಿಷ್ಠರಲ್ಲಿತ್ತು. ಆದರೆ, ಇಬ್ಬರೂ ಸ್ಪರ್ಧೆಗೆ ನಿರಾಸಕ್ತಿ ತೋರಿದ್ದು, ಪ್ರಯತ್ನ ಕೈಗೂಡುವ ಸಾಧ್ಯತೆಗಳಿಲ್ಲ. ಜಾತಿ ಸಮೀಕರಣದ ಲೆಕ್ಕಾಚಾರದಲ್ಲಿ ಮಾಜಿ ಸಚಿವ ಕುಮಾರ್‌ ಬಂಗಾರಪ್ಪ ಅವರನ್ನೇ ಕಣಕ್ಕಿಳಿಸಲು ಮುಖಂಡರಲ್ಲಿ ಹೆಚ್ಚು ಒಲವು ವ್ಯಕ್ತವಾಗಿದ್ದು, ಇನ್ನೂ ಗೊಂದಲ ಮುಂದು­ವರಿದಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.12 ಹಾಲಿ ಸಂಸದರಿಗೆ ಟಿಕೆಟ್‌: ಬಿಜೆಪಿ ಪಟ್ಟಿಯಲ್ಲಿ 12  ಹಾಲಿ ಸಂಸದರು ಮತ್ತು ಇಬ್ಬರು ಮಾಜಿ ಮುಖ್ಯಮಂತ್ರಿಗಳು ಸ್ಥಾನ ಪಡೆದಿದ್ದಾರೆ. ಗೊಂದಲ ಇರುವ ಕಾರಣಕ್ಕೆ ಎಂಟು ಕ್ಷೇತ್ರಗಳ ಪಟ್ಟಿಯನ್ನು ಇನ್ನೂ ಅಂತಿಮಗೊಳಿಸಿಲ್ಲ.ಬೆಂಗಳೂರು ಉತ್ತರ ಕ್ಷೇತ್ರದಿಂದ ಹಾಲಿ ಸಂಸದ ಡಿ.ಬಿ.ಚಂದ್ರೇಗೌಡ ಅವರಿಗೆ ಟಿಕೆಟ್‌ ಕೈತಪ್ಪಿದ್ದು, ನಿರೀಕ್ಷೆಯಂತೆ ಅದು ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಅವರ ಪಾಲಾಗಿದೆ. ಕೊಪ್ಪಳದಿಂದ ಹಾಲಿ ಸಂಸದ ಶಿವರಾಮಗೌಡ ಅವರ ಬದಲಿಗೆ, ಮಾಜಿ ಶಾಸಕ ಕರಡಿ ಸಂಗಣ್ಣ ಅವರಿಗೆ ಟಿಕೆಟ್‌ ನೀಡಲಾಗಿದೆ. ಪಕ್ಷದ ಈ ತೀರ್ಮಾನದಿಂದ ಶಿವರಾಮಗೌಡ ಅಸಮಾಧಾನಗೊಂಡಿದ್ದು, ಬಂಡಾಯದ ಬಾವುಟ ಹಾರಿಸುವ ಸೂಚನೆ ಇದೆ.ಬಿಎಸ್‌ಆರ್‌ ಕಾಂಗ್ರೆಸ್‌ ಜತೆ ಗುರುತಿಸಿಕೊಂಡಿದ್ದ ರಾಯಚೂರು ಸಂಸದ ಸಣ್ಣ ಫಕೀರಪ್ಪ ಅವರಿಗೂ ಟಿಕೆಟ್‌ ನಿರಾಕರಿಸಲಾಗಿದೆ. ಅವರ ಬದಲಿಗೆ, ಮಾಜಿ ಸಚಿವ ಕೆ.­ಶಿವನಗೌಡ ನಾಯಕ ಅವರನ್ನು ಕಣಕ್ಕೆ ಇಳಿಸುವ ತೀರ್ಮಾನವನ್ನು ಬಿಜೆಪಿ ಪ್ರಕಟಿಸಿದೆ.ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಪಿ.ಮುನಿರಾಜ ಗೌಡ ಅವರನ್ನು ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ, ಮಾಜಿ ಸಚಿವ ಬಿ.ಎನ್‌.ಬಚ್ಚೇಗೌಡ ಅವರನ್ನು ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಕಣಕ್ಕೆ ಇಳಿಸಲಾಗುತ್ತಿದೆ.ಕಳೆದ ಲೋಕಸಭಾ ಚುನಾವಣೆಯಲ್ಲಿ ಸೋತಿದ್ದ ಎ.ಆರ್‌.ಕೃಷ್ಣಮೂರ್ತಿ ಅವರಿಗೆ ಈ ಬಾರಿಯೂ ಚಾಮರಾಜನಗರ ಕ್ಷೇತ್ರದ ಟಿಕೆಟ್‌ ನೀಡಲಾಗಿದೆ.ಬಿಎಸ್‌ಆರ್‌ ಕಾಂಗ್ರೆಸ್‌ನ ಶ್ರೀರಾಮುಲು ಅವರು ಬಿಜೆಪಿಗೆ ಸೇರಿದ ನಂತರ ಅವರಿಗೆ ಬಳ್ಳಾರಿ ಕ್ಷೇತ್ರದ ಟಿಕೆಟ್‌ ನೀಡುವ ಸಾಧ್ಯತೆ ಇದೆ.ತುಮಕೂರು ಕ್ಷೇತ್ರದಿಂದ ಹಾಲಿ ಸಂಸದ ಜಿ.ಎಸ್‌.ಬಸವರಾಜು ಅವರಿಗೇ ಟಿಕೆಟ್‌ ನೀಡಬೇಕು ಎಂದು ಯಡಿಯೂರಪ್ಪ ಪಟ್ಟುಹಿಡಿದಿರುವ ಕಾರಣ ಅದು ಇನ್ನೂ ಇತ್ಯರ್ಥವಾಗಿಲ್ಲ. ಬಸವರಾಜು ಅವರು ಪಕ್ಷದ ವರಿಷ್ಠರ ವಿರುದ್ಧ ಟೀಕೆ ಮಾಡಿರುವ ಕಾರಣ ಅವರಿಗೆ ಟಿಕೆಟ್‌ ನೀಡಬಾರದು ಎನ್ನುವ ಅಭಿಪ್ರಾಯ ರಾಜ್ಯ ಮುಖಂಡರಲ್ಲಿ ಇದೆ. ಈ ಕಾರಣಕ್ಕೆ ಈ ಕ್ಷೇತ್ರದ ಅಭ್ಯರ್ಥಿಯ ಹೆಸರನ್ನು ಅಂತಿಮಗೊಳಿಸಲು ಸಾಧ್ಯವಾಗಿಲ್ಲ ಎನ್ನಲಾಗಿದೆ.ಶೋಭಾ ಕರಂದ್ಲಾಜೆ ಅವರಿಗೆ ಮೈಸೂರಿನ ಟಿಕೆಟ್ ನೀಡಲು ಪಕ್ಷ ಚಿಂತನೆ ನಡೆಸಿದ್ದರೂ ಅದಕ್ಕೆ ಅವರು ಒಪ್ಪುತ್ತಿಲ್ಲ ಎನ್ನಲಾಗಿದೆ. ಅವರು ಉಡುಪಿ–ಚಿಕ್ಕಮಗಳೂರು ಕ್ಷೇತ್ರದ ಟಿಕೆಟ್‌ಗೆ ಪಟ್ಟು ಹಿಡಿದಿದ್ದಾರೆ. ಹೀಗಾಗಿ ಗೊಂದಲ ಮುಂದುವರಿದಿದೆ ಎಂದು ಮೂಲಗಳು ತಿಳಿಸಿವೆ. 

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.