ಶುಕ್ರವಾರ, ಫೆಬ್ರವರಿ 26, 2021
22 °C
ಜಲಾವೃತಗೊಂಡ ಅಶ್ವತ್ಥನಾರಾಯಣ ಬಡಾವಣೆ * ಸಾರಕ್ಕಿ ಕೆರೆಯ ತೂಬಿಗಾಗಿ ಹುಡುಕಾಟ

ಹೊರ ಹೋಗದ ನೀರು; ತಪ್ಪದ ಪರದಾಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೊರ ಹೋಗದ ನೀರು; ತಪ್ಪದ ಪರದಾಟ

ಬೆಂಗಳೂರು: ಊರಿಗೆ ಬೆಂಕಿ ಬಿದ್ದ ಮೇಲೆ ಬಾವಿ ತೋಡಿದರು ಎನ್ನುವ ಮಾತು ಬಿಬಿಎಂಪಿಗೆ ಅಕ್ಷರಶಃ ಅನ್ವಯವಾಗುತ್ತದೆ. ಸಾರಕ್ಕಿ ಕೆರೆ ಉಕ್ಕಿ ಹರಿದು ಆಸುಪಾಸಿನ  ಜರಗನಹಳ್ಳಿ, ಚಿಕ್ಕಸ್ವಾಮಿ ಬಡಾವಣೆ, ಶಾರದಾ ನಗರ, ಅಶ್ವತ್ಥನಾರಾಯಣ ಬಡಾವಣೆಗಳು ಜಲಾವೃತಗೊಂಡ ಬಳಿಕ ಎಚ್ಚೆತ್ತಿರುವ ಬಿಬಿಎಂಪಿ, ಕೆರೆಯ ತೂಬುಗಳ ಮೂಲಕ ನೀರನ್ನು ಹೊರ ಹಾಕಲು ಮುಂದಾಗಿದೆ. ಆದರೆ, ತೂಬುಗಳು ಎಲ್ಲಿವೆ ಎಂಬುದು ತಿಳಿಯದೆ ಅಧಿಕಾರಿಗಳು ಪರದಾಡಿದ ಘಟನೆ ಸೋಮವಾರ ನಡೆಯಿತು.ಸಾರಕ್ಕಿ ಕೆರೆಗೆ ಮೂರು ತೂಬುಗಳಿವೆ. ಆದರೆ, ಪುಟ್ಟೇನಹಳ್ಳಿ ಈಶ್ವರ ದೇವಸ್ಥಾನದ ಬಳಿ ಹಾಗೂ ಸತ್ಯಗಣಪತಿ ದೇವಸ್ಥಾನದ ಬಳಿ ಇರುವ ಎರಡು ತೂಬುಗಳು ಮುಚ್ಚಿಕೊಂಡಿವೆ. ಸತ್ಯ ಗಣಪತಿ ದೇವಸ್ಥಾನದ ಬಳಿ ಇರುವ ತೂಬನ್ನು ಸೋಮವಾರ ತೆರವುಗೊಳಿಸಲಾಯಿತು. ಆದರೆ, ನೀರು ಮಾತ್ರ ಹರಿದು ಹೋಗಲಿಲ್ಲ.ಜಲಮಂಡಳಿಯು ಜೆಟ್ಟಿಂಗ್‌, ಸಕ್ಕಿಂಗ್ ಯಂತ್ರಗಳ ಮೂಲಕ ಬ್ಲಾಕ್‌ಗಳನ್ನು ತೆರವುಗೊಳಿಸಲು ಪ್ರಯತ್ನಿಸಿದರೂ ಪ್ರಯೋಜನವಾಗಲಿಲ್ಲ. ಪುಟ್ಟೇನಹಳ್ಳಿ ಈಶ್ವರ ದೇವಸ್ಥಾನದ ಬಳಿ ತೂಬು ಎಲ್ಲಿದೆ ಎಂಬುದನ್ನು ಪತ್ತೆ ಹಚ್ಚಲು ಬಿಬಿಎಂಪಿ ಅಧಿಕಾರಿಗಳು ಮುಂದಾದರು. ಜೆಸಿಬಿ ಯಂತ್ರದ ಸಹಾಯದಿಂದ ತೂಬನ್ನು ಗುರುತಿಸಲಾಯಿತು. ತೂಬಿನ ಸುತ್ತ ಇದ್ದ ಮಣ್ಣನ್ನು ತೆರವುಗೊಳಿಸಿದರೂ ನೀರು ಮಾತ್ರ ಹರಿದು ಹೋಗಲಿಲ್ಲ.ತೂಬು ಸಿಕ್ಕರೂ ಅದಕ್ಕೆ ಅಳವಡಿಸಿರುವ ಪೈಪ್‌ಲೈನ್‌ ಯಾವ ಮಾರ್ಗದಲ್ಲಿ ಹಾದು ಹೋಗಿದೆ ಎಂಬುದನ್ನು ಪತ್ತೆ ಹಚ್ಚಲು ಮುಂದಾದ ಅಧಿಕಾರಿಗಳು, ಈಶ್ವರ ದೇವಸ್ಥಾನದ ಬಳಿ ಇದ್ದ ಒಳಚರಂಡಿಯನ್ನು ಅಗೆದರು. ಆದರೆ, ಪೈಪ್‌ಲೈನ್‌ ಮಾತ್ರ ಸಿಗಲಿಲ್ಲ.‘ಪೈಪ್‌ಲೈನ್‌ ಯಾವ ಮಾರ್ಗದಲ್ಲಿ ಹಾದು ಹೋಗಿದೆ ಎಂಬುದನ್ನು ನೆನಪು ಮಾಡಿಕೊಂಡು ಹೇಳಿ’ ಎಂದು ಬಿಬಿಎಂಪಿ ಸದಸ್ಯೆ ಶಶಿರೇಖಾ ಅವರ ಪತಿ ಜಯರಾಂ ಸ್ಥಳೀಯ ನಿವಾಸಿಗಳನ್ನು ಕೇಳುತ್ತಿದ್ದರು.‘ದೇವಸ್ಥಾನ, ಆಟದ ಮೈದಾನದ ನಿರ್ಮಾಣದಿಂದಾಗಿ ಪೈಪ್‌ಲೈನ್‌ ಮುಚ್ಚಿ ಹೋಗಿದೆ. ಆದರೆ, ಎಲ್ಲಿ ಹಾದು ಹೋಗಿದೆ ಎಂಬುದನ್ನು ನಿಖರವಾಗಿ ಹೇಳಲು ಆಗುತ್ತಿಲ್ಲ’ ಎಂದು ಸ್ಥಳೀಯ ನಿವಾಸಿಗಳು ಉತ್ತರಿಸಿದರು.ಇದರಿಂದ ಈಶ್ವರ ದೇವಸ್ಥಾನದ ಹಿಂಭಾಗದಲ್ಲಿರುವ ಆಟದ ಮೈದಾನದಲ್ಲಿ ಜೆಸಿಬಿ ಯಂತ್ರದ ಮೂಲಕ ಅಗೆಯುವ ಕಾರ್ಯಾಚರಣೆಗೆ ಅಧಿಕಾರಿಗಳು ಮುಂದಾದರು. ಎರಡು ಮೂರು ಕಡೆ ಅಗೆದರೂ ಪೈಪ್‌ಲೈನ್‌ ಮಾತ್ರ ಸಿಗಲಿಲ್ಲ.ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿಯನ್ನು ಕರೆಸಿಕೊಳ್ಳಲಾಗಿತ್ತು. ಅವರಿಗೆ, ಕೆರೆಯ ನೀರನ್ನು ಹೊರ ಹಾಕುವಂತೆ ಅಧಿಕಾರಿಗಳು ಸೂಚಿಸಿದ್ದಾರೆ. ‘ಜಲಾವೃತಗೊಂಡ ಬಡಾವಣೆಯ ನೀರನ್ನು ಹೊರಹಾಕಬಹುದು. ಆದರೆ, ಕೆರೆಯ ನೀರನ್ನು ಹೊರ ಹಾಕಲು ಸಾಧ್ಯವೇ’ ಎಂದು ಸಿಬ್ಬಂದಿಯೊಬ್ಬರು ಬೇಸರ ವ್ಯಕ್ತಪಡಿಸಿದರು.ರಾಜಕಾಲುವೆ ಬದಲು ಪೈಪ್‌ಲೈನ್‌: ‘ಬಿಡಿಎ ವ್ಯಾಪ್ತಿಯಲ್ಲಿದ್ದ ಸಾರಕ್ಕಿ ಕೆರೆಯನ್ನು ಎರಡು ತಿಂಗಳ ಹಿಂದೆ ಬಿಬಿಎಂಪಿಗೆ ವಹಿಸಲಾಗಿದೆ. ಇದಕ್ಕೂ ಮೊದಲು ಕೆರೆ ಅರಣ್ಯ ಇಲಾಖೆಯ ವ್ಯಾಪ್ತಿಯಲ್ಲಿತ್ತು. ಕೆರೆಯ ನೀರು ಹರಿದು ಹೋಗಲೆಂದು ರಾಜಕಾಲುವೆ ನಿರ್ಮಾಣ ಮಾಡಲು ಅರಣ್ಯ ಇಲಾಖೆ 2002ರಲ್ಲಿ ಮುಂದಾಗಿತ್ತು. ಆದರೆ, ಕೋಡಿ ಬೀಳುವ ಜಾಗದಲ್ಲಿ ಸತ್ಯಗಣಪತಿ ದೇವಸ್ಥಾನ ಹಾಗೂ ಈಶ್ವರ ದೇವಸ್ಥಾನ ಇದ್ದಿದ್ದರಿಂದ ಪೈಪ್‌ಲೈನ್‌ ಅಳವಡಿಸಿ ನೀರು ಹೋಗಲು ವ್ಯವಸ್ಥೆ ಮಾಡಲಾಗಿತ್ತು’ ಎಂದು ಬಿಬಿಎಂಪಿ ಕೆರೆ ವಿಭಾಗದ ಮುಖ್ಯ ಎಂಜಿನಿಯರ್‌ ಬಿ.ವಿ. ಸತೀಶ್‌ ‘ಪ್ರಜಾವಾಣಿ’ಗೆ ತಿಳಿಸಿದರು.ನೀರು ಹೊರಹೋಗುತ್ತಿಲ್ಲ: ಜಲಾವೃತಗೊಂಡಿದ್ದ ಅಶ್ವತ್ಥ ನಾರಾಯಣ ಬಡಾವಣೆಯ ನೀರು ಹೊರಹೋಗುತ್ತಿಲ್ಲ. ಹಾಸ್‌ಮ್ಯಾಟ್‌ ಆಸ್ಪತ್ರೆಯಲ್ಲಿ ಮಾರ್ಕೆಟಿಂಗ್‌ ಹಾಗೂ ಸ್ಟೋರ್‌ ಮ್ಯಾನೇಜರ್‌ ಆಗಿರುವ ಕಿಶೋರ್‌ ಅವರು ಮೂರು ದಿನಗಳಿಂದ ಕೆಲಸಕ್ಕೆ ರಜೆ ಹಾಕಿ ಮನೆಯಲ್ಲಿದ್ದಾರೆ. ಮನೆ ಸಂಪೂರ್ಣ ಜಲಾವೃತವಾಗಿದ್ದು, ಅವರ ಪತ್ನಿ ಹಾಗೂ ಮಕ್ಕಳು ಬೇರೆ ಮನೆಗೆ ಸ್ಥಳಾಂತರಗೊಂಡಿದ್ದಾರೆ. ಜಲಾವೃತಗೊಂಡ ಮನೆಯಲ್ಲಿರುವ ವಸ್ತುಗಳಿಗೆ ಅವರು ಕಾವಲಿದ್ದಾರೆ.‘ಸಾರಕ್ಕಿ ಕೆರೆಗೆ ಕಸ, ಕಟ್ಟಡದ ಅವಶೇಷಗಳನ್ನು ಸುರಿಯಲಾಗುತ್ತದೆ. ಇದರಿಂದ ತೂಬುಗಳು ಮುಚ್ಚಿಕೊಂಡಿವೆ. ಅವುಗಳನ್ನು ಆದಷ್ಟು ಬೇಗ ತೆರವುಗೊಳಿಸಬೇಕು’ ಎಂದು ಅವರು ಆಗ್ರಹಿಸಿದರು.ಅಶ್ವತ್ಥನಾರಾಯಣ ಬಡಾವಣೆ ನಿವಾಸಿ ಹರೀಶ್‌ ಅವರು, ‘ನಮ್ಮ ತಂದೆಗೆ ಬಿಪಿ ಕಡಿಮೆಯಾಗಿದ್ದರಿಂದ ಆಸ್ಪತ್ರೆಗೆ ಸೇರಿಸಬೇಕಿತ್ತು. ಆದರೆ, ಮನೆಗೆ ನೀರು ನುಗ್ಗಿದ್ದರಿಂದ ಸಮಸ್ಯೆ ಎದುರಿಸಬೇಕಾಯಿತು. ನನಗೆ ಕಾಲು ನೋವಿದೆ. ಈ ಎಲ್ಲ ಸಮಸ್ಯೆಗಳ ನಡುವೆ ತಂದೆಯ ಆರೋಗ್ಯದ ಕಡೆಗೆ ಗಮನ ಹರಿಸಬೇಕಿದೆ’ ಎಂದು ಅಳಲು ತೋಡಿಕೊಂಡರು.ನಿವೃತ್ತ ಶಿಕ್ಷಕ ನರಸಿಂಹಮೂರ್ತಿ ಅವರು, ‘ನಾನು 30 ವರ್ಷಗಳಿಂದ ಇಲ್ಲಿ ನೆಲೆಸಿದ್ದೇನೆ. ಯಾವ ವರ್ಷವೂ ಹೀಗೆ ಆಗಿರಲಿಲ್ಲ. ಕೊಳಚೆ ನೀರು ಮನೆಗಳಿಗೆ ನುಗ್ಗಿದ್ದು, ವಾಸನೆಯಿಂದ ವಾಸ ಮಾಡಲು ಸಾಧ್ಯವಾಗುತ್ತಿಲ್ಲ’ ಎಂದರು.ಅಪಾರ್ಟ್‌ಮೆಂಟ್‌ನ ಭದ್ರತಾ ಸಿಬ್ಬಂದಿಯೊಬ್ಬರ ಪತ್ನಿ ಲಲಿತಾ ಅವರು, ‘ಮಳೆ ನೀರು ನುಗ್ಗಿದ್ದರಿಂದ ಮನೆಯಲ್ಲಿದ್ದ ಕೆಲ ವಸ್ತುಗಳೆಲ್ಲ ಕೊಚ್ಚಿಕೊಂಡು ಹೋಗಿವೆ. ಅಡುಗೆಯ ಪಾತ್ರೆಗಳು ನೀರಿನಲ್ಲಿ ತೇಲುತ್ತಿವೆ. ಬಟ್ಟೆ, ಹಾಸಿಗೆ, ದಿಂಬು, ಹೊದಿಗೆಗಳು ಒದ್ದೆಯಾಗಿವೆ’ ಎಂದು ಅಳಲು ತೋಡಿಕೊಂಡರು.ಗಾಯತ್ರಿ ಅವರು, ‘ಸಾಲ ಮಾಡಿ ಮನೆ ಕಟ್ಟಿದ್ದೇವೆ. ಈಗ ಮನೆಗೆ ನೀರು ನುಗ್ಗಿದೆ. ಮಳೆ ಬಂದರೆ ಮತ್ತೆ ಮನೆಗೆ ನೀರು ನುಗ್ಗುವ ಭಯ ಕಾಡುತ್ತಿದೆ’ ಎಂದರು. ಅಶ್ವತ್ಥನಾರಾಯಣ ಬಡಾವಣೆಯ ನಿವಾಸಿ ಮಹೇಶ್‌ ಅವರು, ‘ಸಾರಕ್ಕಿ ಕೆರೆಯಿಂದ ಹಾದು ಹೋಗಿರುವ ಪೈಪ್‌ಲೈನ್‌ ಹುಡುಕಲು ಬಿಬಿಎಂಪಿ ಅಧಿಕಾರಿಗಳಿಗೆ ಸಾಧ್ಯವಾಗಿಲ್ಲ.   ಈ ಕೆರೆಗೆ ಮೂರು ಕೆರೆಗಳ ನೀರು ಬರುತ್ತದೆ. ಆದರೆ, ಇಲ್ಲಿಂದ ಹೊರಹೋಗುವುದಕ್ಕೆ ಸರಿಯಾದ ರಾಜಕಾಲುವೆ ಇಲ್ಲ. ಇಂದಿನ ಪರಿಸ್ಥಿತಿಗೆ ಇದೇ ಕಾರಣ’ ಎಂದು ದೂರಿದರು.₹ 6 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ

‘ಸಾರಕ್ಕಿ ಕೆರೆಯನ್ನು ಅಭಿವೃದ್ಧಿ ಪಡಿಸಲು ₹ 6 ಕೋಟಿ ಬಿಡುಗಡೆ ಮಾಡಲಾಗಿದೆ. ಶೀಘ್ರದಲ್ಲೇ ಟೆಂಡರ್‌ ಕರೆಯಲಾಗುತ್ತದೆ’ ಎಂದು ಬಿಬಿಎಂಪಿ ಸದಸ್ಯೆ ಶಶಿರೇಖಾ ಜಯರಾಂ ತಿಳಿಸಿದರು.

‘ಕೆರೆಯ ನೀರು ಹೊರಗೆ ಹರಿದು ಹೋದರೆ ಸಮಸ್ಯೆ ಬಗೆಹರಿಯಲಿದೆ. ಕೆರೆಯ ತೂಬುಗಳನ್ನು ಗುರುತಿಸಲಾಗಿದೆ. ಆದರೆ, ಪೈಪ್‌ಲೈನ್‌ ಹಾದುಹೋಗಿರುವ ಮಾರ್ಗ ಇನ್ನೂ ಪತ್ತೆಯಾಗಿಲ್ಲ’ ಎಂದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.