ಗುರುವಾರ , ಜೂನ್ 17, 2021
27 °C

ಹೊಳಲ್ಕೆರೆ: ಹೊಸಹಟ್ಟಿ ಜನರಿಗೆ ಬಾವಿ ನೀರು ಆಸರೆ!

ಪ್ರಜಾವಾಣಿ ವಾರ್ತೆ/ ಸಾಂತೇನಹಳ್ಳಿ ಕಾಂತರಾಜ್ Updated:

ಅಕ್ಷರ ಗಾತ್ರ : | |

ಹೊಳಲ್ಕೆರೆ: ತಾಲ್ಲೂಕಿನಲ್ಲಿ ಅನೇಕ ಕಡೆ ಅಂತರ್ಜಲ ಕೊರತೆ ಕಾಡುತ್ತಿದೆ. ತೆರದ ಬಾವಿಗಳೆಲ್ಲ ಪಾಳು ಬಿದ್ದು, ಕುಡಿಯುವ ನೀರಿಗಾಗಿ ಕೊಳವೆ ಬಾವಿಗೆ ಮೊರೆ ಹೋದ ಉದಾಹರಣೆಗಳಿವೆ. ಇಂಥ ಪರಿಸ್ಥಿತಿಯಲ್ಲಿ ಇಲ್ಲೊಂದು ಗ್ರಾಮದಲ್ಲಿ ಕುಡಿಯುವ ನೀರಿಗಾಗಿ ಜನರು ತೆರೆದ ಬಾವಿಯನ್ನೇ ನಂಬಿಕೊಂಡಿದ್ದಾರೆ. ಈ ಬಾವಿಯಿಂದ ನೀರು ಸೇದಿಕೊಂಡೇ ಕುಡಿಯುತ್ತಾರೆ..!ತಾಲ್ಲೂಕಿನ ಹೊಸಹಟ್ಟಿಯ ಜನರು ಈಗಲೂ ಕುಡಿಯುವ ನೀರಿಗಾಗಿ ತೆರೆದ ಬಾವಿಯನ್ನೇ ಆಶ್ರಯಿಸುತ್ತಿದ್ದಾರೆ.  ಈ ಬಾವಿಯ ನೀರು ಗ್ರಾಮದಲ್ಲಿರುವವರಿಗೆ ಜೀವಸೆಲೆಯಾಗಿದೆ. ಬಾವಿ ಬಹಳ ಆಳದಲ್ಲಿಲ್ಲ. ನೀರು ಕೂಡ 30 ಅಡಿಗೆ ಸಿಕ್ಕಿದೆ. ಅಚ್ಚರಿಯ ಸಂಗತಿ ಎಂದರೆ, ಈ ತೆರೆದ ಬಾವಿಯಲ್ಲಿ ನೀರು ಖಾಲಿ ಆಗಿಲ್ಲ. ಇದು ಇಂದು ನಿನ್ನೆಯ ಕಥೆಯಲ್ಲ. ತಲೆಮಾರುಗಳ ಕಥೆ.ಎಲ್ಲರಿಗೂ ಗೊತ್ತಿರುವ ಹಾಗೆ ಇವತ್ತು ಯಾವುದೇ ಗ್ರಾಮದಲ್ಲಿ ಕೊಳವೆ ಬಾವಿಗಳನ್ನು ಸಾವಿರ ಅಡಿಗಳವರೆಗೆ ಕೊರೆದರೂ ನೀರು ಸಿಗುತ್ತಿಲ್ಲ. ಆದರೆ, ಈ ಊರಿನ ತೆರೆದ ಬಾವಿಯಲ್ಲಿ ನೀರು ಬತ್ತಿಹೋಗದೆ ಇರುವುದು ಎಲ್ಲರಲ್ಲಿ ಅಚ್ಚರಿ ಮೂಡಿಸಿದೆ. ಗ್ರಾಮದಲ್ಲಿ ಕೊಳವೆ ಬಾವಿ ಇದ್ದರೂ ಇಲ್ಲಿನ ಜನ ಕುಡಿಯಲು ಮಾತ್ರ ಈ ಬಾವಿಯ ನೀರನ್ನೇ ಬಳಸುತ್ತಿದ್ದಾರೆ. ಹಗ್ಗದಿಂದ ಕೊಡಗಳನ್ನು ಇಳಿಬಿಟ್ಟು ನೀರು ಸೇದುವ ಜನ ಬಾವಿಯ ಸಿಹಿನೀರಿಗೆ ಒಗ್ಗಿಕೊಂಡಿದ್ದಾರೆ.‘ನಮ್ಮ ಊರು ಹುಟ್ಟಿದಾಗಲೇ ಈ ಬಾವಿ ತೋಡಲಾಗಿದೆ. ನಮ್ಮ ಹಿರಿಯರು ಇದೇ ಬಾವಿಯ ನೀರು ಕುಡಿಯುತ್ತಿದ್ದರು. ಇದರ ನೀರು ಫ್ಲೋರೈಡ್ ಮುಕ್ತವಾಗಿದ್ದು, ಸಾಂಬಾರಿನ ಬೇಳೆ, ಕಾಳು, ತರಕಾರಿಗಳು ಬೇಗ ಬೇಯುತ್ತವೆ. ಈಗ ಮಳೆಗಾಲ ಕಡಿಮೆಯಾಗಿದ್ದು, ಎಲ್ಲಾ ಕಡೆ ಅಂತರ್ಜಲ ಕುಸಿದಿದ್ದರೂ, ನಮ್ಮ ಬಾವಿಯಲ್ಲಿ ಮಾತ್ರ ನೀರು ಬತ್ತಿಲ್ಲ. ಮಳೆಗಾಲದಲ್ಲಿ ಬಾವಿಯಲ್ಲಿ ಹೆಚ್ಚು ನೀರು ಇರುತ್ತದೆ.

ಬೇಸಿಗೆಯಲ್ಲಿ ನಾಲ್ಕೈದು ಅಡಿ ಶುದ್ಧ ನೀರು ಇರುತ್ತದೆ. ಪ್ರತೀ ದಿನ ಗ್ರಾಮದ ಎಲ್ಲ ಮನೆಯವರೂ ನೀರು ಸೇದುತ್ತಾರೆ. ಆಗ ಬಾವಿಯಲ್ಲಿ ನೀರು ಕಡಿಮೆಯಾದರೂ, ಸಂಜೆ ವೇಳೆಗೆ ಮತ್ತೆ ಅಷ್ಟೇ ನೀರು ಸಂಗ್ರಹವಾಗುತ್ತದೆ. ಇದು ಯಾವ ಪವಾಡವೋ ಗೊತ್ತಿಲ್ಲ ಎನ್ನುತ್ತಾರೆ ಗ್ರಾಮದ ಶಿಕ್ಷಕರಾದ ಉಮೇಶಪ್ಪ ಮತ್ತು ಎಚ್.ಶಿವಮೂರ್ತಿ.೧೫ ವರ್ಷಗಳ ಹಿಂದೆ ಅತಿ ಹೆಚ್ಚು ಮಳೆಗಾಲ ಆದಾಗ ಬಾವಿ ಸಂಪೂರ್ಣ ತುಂಬಿತ್ತು. ಬಾವಿಯ ಮೇಲಿನ ಕಟ್ಟೆಯವರೆಗೆ ನೀರು ತುಂಬಿದ್ದರಿಂದ ಕೈಯಿಂದಲೇ ಕೊಡಗಳಿಂದ ನೀರು ತುಂಬಿ ಕೊಳ್ಳುತ್ತಿದ್ದೆವು. ಈಗ ಎಲ್ಲಾ ಕಡೆ ಮಳೆ ಕಡಿಮೆ ಆಗಿರುವುದರಿಂದ ನೀರು ಕೆಳಗೆ ಹೋಗಿದೆ. ಪಕ್ಕದ ಗೌಡಿಹಳ್ಳಿ ಕೆರೆಯಲ್ಲಿ ನೀರಿದ್ದರೆ ಬಾವಿಯಲ್ಲಿ ಹೆಚ್ಚು ನೀರು ಇರುತ್ತದೆ.ಗೌಡಿಹಳ್ಳಿ ಕೆರೆಗೆ, ನಾಗರಘಟ್ಟ ಹಳ್ಳ ಮತ್ತು ಗೌಡಿಹಳ್ಳಿ ಹಳ್ಳ ಎರಡು ಸೇರುತ್ತವೆ. ಕ್ಯಾಚ್ ಮೆಂಟ್ ಪ್ರದೇಶ ವಿಶಾಲವಾಗಿರುವುದರಿಂದ ಇಲ್ಲಿ ಸುರಿದ ಮಳೆ ನೀರು ಸಂಪೂರ್ಣವಾಗಿ ಗೌಡಿಹಳ್ಳಿ ಕೆರೆ ಸೇರುತ್ತದೆ. ಹೀಗಾಗಿ, ಈ ಕೆರೆ ಎಂದೂ ಬತ್ತಿದ ಉದಾಹರಣೆ ಇಲ್ಲ. ಕೆರೆಯಲ್ಲಿ ಸದಾ ನೀರು ಸಂಗ್ರಹವಾಗುವುದರಿಂದ ಬಾವಿಯಲ್ಲಿ ನೀರು ಸದಾ ಜಿನುಗುತ್ತಿರುತ್ತದೆ.‘ಇದರ ಜೊತೆಗೆ ಎರಡು, ಮೂರು ವರ್ಷಗಳಿಗೆ ಒಮ್ಮೆ ಬಾವಿಯನ್ನು ಗ್ರಾಮಸ್ಥರೇ ಸೇರಿ ಸ್ವಚ್ಛಗೊಳಿಸುತ್ತೇವೆ. ಈ ಸಮುದಾಯ ಶ್ರಮದಾನದಲ್ಲಿ ಬಾವಿಯಲ್ಲಿನ ಕಸ ಕಡ್ಡಿ, ಹೂಳು ತೆಗೆದು ಹೊರಹಾಕುತ್ತೇವೆ. ಇದರಿಂದ ಬಾವಿಯ ತಳದಲ್ಲಿದ್ದ ಜಲದ ಕಣ್ಣುಗಳು ಸ್ವಚ್ಛ ಹಾಗೂ ಶುಭ್ರವಾಗುವುದರಿಂದ, ಜಲದ ಒರತೆ ಹೆಚ್ಚಾಗಿ, ಬಾವಿಯಲ್ಲಿ ನೀರು ಸಂಗ್ರಹ ವಾಗುತ್ತದೆ’ ಎನ್ನುತ್ತಾರೆ ಗ್ರಾಮದ ಮುಖಂಡ ಎಸ್.ಪರಪ್ಪ.  ‘ಮಳೆಗಾಲದಲ್ಲಿ ನೀರು ವ್ಯರ್ಥವಾಗದಂತೆ ತಡೆದು ನಿಲ್ಲಿಸಬೇಕು. ಹೊಲಗಳಲ್ಲಿ ಇಳಿಜಾರಿಗೆ ಅಡ್ಡಲಾಗಿ ಬದು ನಿರ್ಮಾಣ ಮಾಡಬೇಕು. ನೀರು ಹರಿಯುವ ಜಾಗಗಳಲ್ಲಿ ತಡೆ ಒಡ್ಡುಗಳು, ಉದಿ– ಬದುಗಳನ್ನು ನಿರ್ಮಿಸಬೇಕು. ಹಳ್ಳದ ನೀರು ಗ್ರಾಮದ ಕೆರೆಗಳಿಗೆ ಹರಿಯುವಂತೆ ನೋಡಿಕೊಳ್ಳಬೇಕು. ಆಗ ಮಾತ್ರ ಜೀವಜಲ ಉಳಿಸಿಕೊಳ್ಳಲು ಸಾಧ್ಯ ಎನ್ನುವುದು ಇಲ್ಲಿನ ವಿದ್ಯಾವಂತ ಯುವಕರ ಸಲಹೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.