ಭಾನುವಾರ, ಏಪ್ರಿಲ್ 11, 2021
23 °C

ಹೊಸಹುಡ್ಯ ರಕ್ಷಣೆಗೆ ಪ್ಲೇಗ್ ಮಾರಮ್ಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದೇಶಾದ್ಯಂತ ವ್ಯಾಪಿಸಿದ್ದ ಪ್ಲೇಗ್ ಎಂಬ ಭಯಾನಕ ಸಾಂಕ್ರಾಮಿಕ ಕಾಯಿಲೆಗೆ 18ನೇ ಶತಮಾನದ ಕೊನೆ ಮತ್ತು 19ನೇ ಶತಮಾನದ ಆರಂಭದ ಕಾಲಘಟ್ಟದಲ್ಲಿ ಅಪಾರ ಸಂಖ್ಯೆಯ ಜನರು ಬಲಿಯಾಗಿದ್ದರು. ಸೂಕ್ತ ರೀತಿಯ ಚಿಕಿತ್ಸೆಯಿಲ್ಲದೇ ಮತ್ತು ಗುಣಮುಖರಾಗದೇ ಮಕ್ಕಳು ಮತ್ತು ವೃದ್ಧರು ಹೆಚ್ಚಿನ ಸಂಖ್ಯೆಯಲ್ಲಿ ಮೃತಪಟ್ಟಿದ್ದರು. ಕಾಯಿಲೆಯು ತನ್ನ ಕರಾಳಹಸ್ತವನ್ನು ಉತ್ತರಭಾರತಕ್ಕೆ ಮಾತ್ರವಲ್ಲ, ದಕ್ಷಿಣ ಭಾರತದ ಕಡೆಗೂ ಚಾಚಿತ್ತು. ಚಿಕ್ಕಬಳ್ಳಾಪುರ ತಾಲ್ಲೂಕಿನ ಹೊಸಹುಡ್ಯ ಗ್ರಾಮವೂ ಕೂಡ ಮಾರಕ ಪ್ಲೇಗ್ ದಾಳಿಗೆ ತುತ್ತಾಗಿತ್ತು. ಬಹುತೇಕ ಗ್ರಾಮಸ್ಥರು ತಮ್ಮ ಆಪ್ತರನ್ನು ಕಳೆದುಕೊಳ್ಳಬೇಕಾಯಿತು.ಪ್ಲೇಗ್‌ನ ಪ್ರಭಾವ ಸಂಪೂರ್ಣವಾಗಿ ನಶಿಸಿ ಹಲವು ವರ್ಷಗಳೇ ಗತಿಸಿದ್ದರೂ ಕಾಯಿಲೆಯ ಸ್ವರೂಪ ಮತ್ತು ಭಯದ ವಾತಾವರಣವನ್ನು ತಿಳಿಪಡಿಸುವ ಹಿರಿಯರು ಈಗಲೂ ಹೊಸಹುಡ್ಯ ಗ್ರಾಮದಲ್ಲಿ ಕಾಣಸಿಗುತ್ತಾರೆ. ಪ್ಲೇಗ್ ಬಗ್ಗೆ ವಿಷಯ ಪ್ರಸ್ತಾಪಿಸಿದರೆ ಸಾಕು, `ಆ ದಿನಗಳನ್ನು ನೆನಪಿಸಿಕೊಳ್ಳದಿದ್ದರೆ ಒಳಿತು. ಅವು ಅತ್ಯಂತ ಭಯಾನಕ ದಿನಗಳು. ಯಾವಾಗ ಏನು ಆಗುತ್ತಿತ್ತೋ ಗೊತ್ತಾಗುತ್ತಿರಲಿಲ್ಲ. ಬೆಳಿಗ್ಗೆ ಚೆನ್ನಾಗಿ ಓಡಾಡಿಕೊಂಡು ಇದ್ದವರು ಸಂಜೆಯ ವೇಳೆಗೆ ಅಸ್ವಸ್ಥಗೊಂಡ ಸಾವನ್ನಪ್ಪುತ್ತಿದ್ದರು~ ಎಂದು ಹಳೆಯ ದಿನಗಳನ್ನು ನೆನಪಿಸಿಕೊಳ್ಳುತ್ತಾರೆ.`ಪ್ಲೇಗ್ ಕಾಯಿಲೆಯು ಎಲ್ಲೆಡೆ ಹರಡಿ ಒಬ್ಬೊಬ್ಬರನ್ನೇ ಬಲಿ ತೆಗೆದುಕೊಳ್ಳುತ್ತಿರುವುದು ಕಂಡು ಗ್ರಾಮದವರೆಲ್ಲ ಗ್ರಾಮವನ್ನೇ ತೊರೆದುಬಿಟ್ಟಿದ್ದರು. ಕಾಯಿಲೆಯಿಂದ ಪಾರಾದರೆ ಸಾಕೆಂದು ನಮ್ಮ ಪೂರ್ವಜರು ದೂರದೂರಕ್ಕೆ ಹೋಗಿಬಿಡುತ್ತಿದ್ದರು. ಮೂರು-ನಾಲ್ಕು ತಿಂಗಳು ಬಳಿಕ ಬರುತ್ತಿದ್ದ ಅವರು ಆತಂಕ ಮತ್ತು ಭಯದಲ್ಲೇ ಜೀವನ ನಡೆಸುತ್ತಿದ್ದರು. ಕಾಯಿಲೆಯ ಪ್ರಭಾವ ಕಡಿಮೆಯಾಗಿದೆ ಎಂಬ ನಂಬಿಕೆಯಲ್ಲಿ ಮತ್ತೆ ತಮ್ಮ ಬದುಕನ್ನು ಕಟ್ಟಿಕೊಳ್ಳುತ್ತಿದ್ದರು. ನಮ್ಮ ಪೂರ್ವಜರು ಪಡಬಾರದ ಪಡಿಪಾಟಲು ಪಟ್ಟರು~ ಎನ್ನುತ್ತಾರೆ ಗ್ರಾಮದ ಹಿರಿಯರು.`ಬೇರೆಲ್ಲ ಗ್ರಾಮಗಳಿಗಿಂತ ನಮ್ಮ ಗ್ರಾಮದಲ್ಲೂ ಪ್ಲೇಗ್‌ನ ಪ್ರಭಾವ ಹೆಚ್ಚಿತ್ತು. ಸೂಕ್ತ ಚಿಕಿತ್ಸೆ ಸಿಗದ ಕಾರಣ ಕಂಗಾಲಾಗಿದ್ದ ಗ್ರಾಮಸ್ಥರು ಎಲ್ಲವನ್ನೂ ದೇವರ ಇಚ್ಛೆಗೆ ಬಿಟ್ಟಿದ್ದರು. ಗ್ರಾಮದಲ್ಲಿನ ಮಾರಮ್ಮದೇವಿಯ ಪುರಾತನ ಕಾಲದ ದೇವಾಲಯದ ಮೇಲೆ ಗ್ರಾಮಸ್ಥರಿಗೆ ನಿಧಾನವಾಗಿ ನಂಬಿಕೆ ಮೂಡಲಾರಂಭಿಸಿತ್ತು. ಕೆಲವಷ್ಟು ಜನರು ಗ್ರಾಮವನ್ನು ತೊರೆದು ದೂರದೂರಕ್ಕೆ ಹೋಗುತ್ತಿದ್ದರೆ, ಇನ್ನೂ ಕೆಲವಷ್ಟು ಜನರು ಗ್ರಾಮದಲ್ಲೇ ಉಳಿದುಕೊಂಡು ದೇವಿಯನ್ನು ಪೂಜಿಸತೊಡಗಿದರು. ರಕ್ಷಣೆಗೆ ಮೊರೆಯಿಟ್ಟರು~ ಎಂದು ಗ್ರಾಮದ ಸುಬ್ಬರಾಯಪ್ಪ `ಪ್ರಜಾವಾಣಿ~ಗೆ ತಿಳಿಸಿದರು.`ದೇವಿಯ ಶಕ್ತಿಯೋ ಅಥವಾ ಆ ಕಾಲಘಟ್ಟದ ಬದಲಾವಣೆಗಳೋ ಗೊತ್ತಿಲ್ಲ. ದಿನಗಳು, ತಿಂಗಳು ಮತ್ತು ವರ್ಷಗಳು ಕಳೆದಂತೆ ಪ್ಲೇಗ್‌ನ ಪ್ರಭಾವ ನಶಿಸತೊಡಗಿತು.ಅನಾರೋಗ್ಯಪೀಡಿತರ ಸಾವಿನ ಪ್ರಮಾಣವೂ ಕಡಿಮೆಯಾಯಿತು. ಅನಾರೋಗ್ಯಕ್ಕೀಡಾಗದೇ ಗ್ರಾಮಸ್ಥರು ನೆಮ್ಮದಿಯಿಂದ ಬಾಳತೊಡಗಿದರು. ಇದೆಲ್ಲ ಸಾಧ್ಯವಾಗಿದ್ದು, ಮಾರಮ್ಮದೇವಿಯಿಂದ ಎಂಬ ನಂಬಿಕೆ ಗ್ರಾಮಸ್ಥರಲ್ಲಿ ಮೂಡಿತು. ಈ ಕಾರಣದಿಂದಲೇ ದೇವಿಯನ್ನು ಗ್ರಾಮಸ್ಥರು `ಪ್ಲೇಗ್ ಮಾರಮ್ಮ~ ಎಂದು ಕರೆಯತೊಡಗಿದರು~ ಎಂದು ಅವರು ಹೇಳಿದರು.ಹೊಸಹುಡ್ಯ ಗ್ರಾಮದಲ್ಲಿ ಪುರಾತನ ದೇವಾಲಯದ ಸ್ಥಳದಲ್ಲಿ ಬೃಹತ್ ಗೋಪುರವುಳ್ಳ ದೇವಾಲಯವಿದೆ. ಅದರ ಪಕ್ಕದಲ್ಲೇ `ಪ್ಲೇಗ್ ಮಾರಮ್ಮ~ ಕಲ್ಯಾಣ ಮಂಟಪವೂ ಇದೆ. 1993ರ ಫೆಬ್ರುವರಿ 18ರಂದು ಉದ್ಘಾಟನೆಗೊಂಡ ಕಲ್ಯಾಣಮಂಟಪದಲ್ಲಿ ಮದುವೆಗಳು ಮತ್ತು ಇತರ ಕಾರ್ಯಕ್ರಮಗಳು ನಡೆಯುತ್ತವೆ. ಅಚ್ಚರಿಯ ಸಂಗತಿಯೆಂದರೆ, ರಾಜ್ಯ ಮತ್ತು ದೇಶದ ಯಾವುದೇ ಭಾಗದಲ್ಲಿ ಕಾಣಸಿಗದ `ಪ್ಲೇಗ್ ಮಾರಮ್ಮ~ ದೇವಿಯ ದೇವಾಲಯ ಮತ್ತು ಕಲ್ಯಾಣಮಂಟಪ ಹೊಸಹುಡ್ಯದಲ್ಲಿದೆ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.