ಭಾನುವಾರ, ಮೇ 16, 2021
22 °C

ಹೊಸ ಕಾಲದ ಗ್ರಂಥಾಲಯ

-ರಮೇಶ ಕೆ. Updated:

ಅಕ್ಷರ ಗಾತ್ರ : | |

ಮಲ್ಲೇಶ್ವರದಲ್ಲಿ ಪುಸ್ತಕ ಪಡೆದು ಜೆ.ಪಿ. ನಗರದಲ್ಲಿ ಹಿಂತಿರುಗಿಸುವ, ಗ್ರಂಥಾಲಯಕ್ಕೆ ಹೋಗಿ ಗ್ರಂಥಪಾಲಕರ ಸಹಾಯವಿಲ್ಲದೇ ಓದುಗರೇ ಪುಸ್ತಕ ಪಡೆಯುವ ಹಾಗೂ ಹಿಂತಿರುಗಿಸುವ, ತಡವಾದರೆ ದಂಡ ವಿಧಿಸದ, ಬೇಕೆಂದರೆ ಮನೆಬಾಗಿಲಿಗೆ ಪುಸ್ತಕ ತಲುಪಿಸುವ ವ್ಯವಸ್ಥೆ ನಗರದ `ಜಸ್ಟ್‌ಬುಕ್ಸ್ ಸಿಎಲ್‌ಸಿ' (ಕಮ್ಯುನಿಟಿ ಲೈಬ್ರರಿ ಚೈನ್) ಗ್ರಂಥಾಲಯಗಳಲ್ಲಿದೆ.



ಸರ್ಕಾರದ ಸಾರ್ವಜನಿಕ ಗ್ರಂಥಾಲಯಗಳಲ್ಲಿ ಕೆಲವು ಪುಸ್ತಕಗಳು ದೊರೆಯದಿದ್ದಾಗ ಓದುಗರನ್ನು ಸೆಳೆಯುವುದು ಖಾಸಗಿ ಮಾಲೀಕತ್ವದ ಇಂಥ ಗ್ರಂಥಾಲಯಗಳು. ವೈಟ್‌ಫೀಲ್ಡ್‌ನಲ್ಲಿ 2008ರಲ್ಲಿ ಆರಂಭವಾದ ಜಸ್ಟ್‌ಬುಕ್ಸ್ ಸಿಎಲ್‌ಸಿ ಗ್ರಂಥಾಲಯ ಇಂದು ನಗರದಲ್ಲಿ 35 ಮಳಿಗೆಗಳನ್ನು ಹೊಂದಿದೆ. ಓದುಗರಿಂದ ದೊರೆತ ಪ್ರತಿಕ್ರಿಯೆಯೇ ಇಷ್ಟು ಪ್ರಮಾಣದಲ್ಲಿ ಖಾಸಗಿ ಗ್ರಂಥಾಲಯ ಬೆಳೆಯಲು ಕಾರಣವಾಗಿದೆ.



ಕಿಯೋಸ್ಕ್ ಸೌಕರ್ಯ

ಎಟಿಎಂ ಯಂತ್ರದ ಮಾದರಿಯ `ಸೆಲ್ಫ್  ಸರ್ವೀಸ್ ಕಿಯೋಸ್ಕ್' ವ್ಯವಸ್ಥೆಯ ಮೂಲಕ ಓದುಗರು ನೇರವಾಗಿ ಗ್ರಂಥಾಲಯಕ್ಕೆ ಬಂದು ತಮಗೆ ಬೇಕಾದ ಪುಸ್ತಕಗಳನ್ನು ಆಯ್ಕೆ ಮಾಡಿಕೊಂಡು ತೆಗೆದುಕೊಂಡು ಹೋಗಬಹುದು. ಗ್ರಂಥಾಲಯದ ಸಿಬ್ಬಂದಿ ಇದ್ದರೂ ಅವರ ಸಹಾಯವಿಲ್ಲದೇ ಪುಸ್ತಕ ಹಿಂತಿರುಗಿಸಬಹುದು.



ಬೇಕಾದ ಪುಸ್ತಕಗಳನ್ನು ಹುಡುಕಬಹುದು. ಜಸ್ಟ್‌ಬುಕ್ಸ್‌ನ ಎಲ್ಲಾ ಗ್ರಂಥಾಲಯಗಳ ನಡುವೆ ನೆಟ್‌ವರ್ಕ್ ಇರುತ್ತದೆ. ಅದರ ಸಹಾಯದಿಂದ ಓದುಗರು ಯಾವ ಪುಸ್ತಕ ಯಾವ ಶಾಖೆಗಳಲ್ಲಿದೆ ಎಂಬುದನ್ನು ನೋಡಬಹುದು.



ಬೆಂಗಳೂರು ಅಷ್ಟೇ ಅಲ್ಲದೇ ಚೆನ್ನೈ, ಕೇರಳ, ಹೈದರಾಬಾದ್, ಕೋಲ್ಕತ್ತ, ಪುಣೆ, ಮುಂಬೈಗಳಲ್ಲೂ ಗ್ರಂಥಾಲಯಗಳಿವೆ. ನಗರದ ಶಾಖೆಯೊಂದರಲ್ಲಿ ಪುಸ್ತಕ ಪಡೆದವರು ಮುಂಬೈನಲ್ಲೂ ಹಿಂತಿರುಗಿಸಿ, ಮತ್ತೊಂದು ಪುಸ್ತಕ ಪಡೆಯುವ ವ್ಯವಸ್ಥೆ ಇಲ್ಲಿದೆ. ದೇಶದಲ್ಲಿ ಒಟ್ಟು 62 ಗ್ರಂಥಾಲಯಗಳನ್ನು ಸಂಸ್ಥೆ ಹೊಂದಿದೆ.



ಮನೆ ಬಾಗಿಲಿಗೆ ಪುಸ್ತಕ

ಆನ್‌ಲೈನ್‌ನಲ್ಲಿ ಮನವಿ ಮಾಡಿದರೆ ಮನೆ ಬಾಗಿಲಿಗೆ ಪುಸ್ತಕ ತಲುಪಿಸುವ ವ್ಯವಸ್ಥೆಯೂ ಇಲ್ಲಿದೆ. ಹೀಗೆ ಐದು ಬಾರಿ ಪುಸ್ತಕಗಳನ್ನು ತರಿಸಿಕೊಂಡರೆ ರೂ.50 ಪಾವತಿಸಬೇಕಾಗುತ್ತದೆ. ಎರಡು, ಮೂರು, ನಾಲ್ಕು ಪುಸ್ತಕಗಳು... ಹೀಗೆ ಆರು ಪ್ಲಾನ್‌ಗಳ ಆಯ್ಕೆಗಳು ಈ ಗ್ರಂಥಾಲಯದಲ್ಲಿವೆ. ಈ ಯೋಜನೆ ಸದಸ್ಯತ್ವ ಪಡೆಯುವ ಓದುಗರು ಗ್ರಂಥಾಲಯದ ಉಪಯೋಗ ಪಡೆದುಕೊಳ್ಳಬಹುದು.



ಫಿಕ್ಷನ್, ನಾನ್‌ಫಿಕ್ಷನ್, ವ್ಯವಹಾರ ಮತ್ತು ನಿರ್ವಹಣೆ, ವ್ಯಕ್ತಿತ್ವ ವಿಕಸನ, ಸಾಮಾನ್ಯ ಜ್ಞಾನ, ಮಕ್ಕಳ ಪುಸ್ತಕಗಳು, ನಿಯತಕಾಲಿಕೆ ಹಾಗೂ ಸ್ಥಳೀಯ ಭಾಷೆ ವಿಭಾಗಗಳು ಇಲ್ಲಿವೆ. ಬೆಳಿಗ್ಗೆ 10ರಿಂದ ರಾತ್ರಿ 9ರವರೆಗೆ ಜಸ್ಟ್ ಬುಕ್ಸ್ ಗ್ರಂಥಾಲಯ ತೆರೆದಿರುತ್ತದೆ. ಪ್ರತಿ ಸೋಮವಾರ ರಜೆ.



`ಸದಸ್ಯತ್ವ ಪಡೆದ ಓದುಗರಿಗೆ `ರೇಡಿಯೊ ಫ್ರೀಕ್ವೆಂಟ್ಲಿ ಐಡೆಂಟಿಫಿಕೇಶನ್ ಡಿವೈಸ್' (ಆರ್‌ಎಫ್‌ಐಡಿ) ಕಾರ್ಡ್ ನೀಡಲಾಗುತ್ತದೆ. ಆ ಕಾರ್ಡ್‌ನ ಸಹಾಯದಿಂದ ಅವರು ನಮ್ಮ ಯಾವುದೇ ಗ್ರಂಥಾಲಯದ ಶಾಖೆಗಳಲ್ಲಿ ಪುಸ್ತಕ ಪಡೆಯಬಹುದು, ಹಿಂತಿರುಗಿಸಬಹುದು. ಕುಟುಂಬದ ಯಾವೊಬ್ಬ ಸದಸ್ಯ ಬಂದೂ ಪುಸ್ತಕ ಪಡೆಯಬಹುದು. ನಮ್ಮಲ್ಲಿ ಎಂಟು ಲಕ್ಷ ಪುಸ್ತಕಗಳಿವೆ.



ಆಯಾ ಪ್ರದೇಶಗಳ ಓದುಗರ ಬೇಡಿಕೆ ಹಾಗೂ ಭಾಷಿಗರ ಸಂಖ್ಯೆಗೆ ಅನುಗುಣವಾಗಿ ಪುಸ್ತಕಗಳನ್ನು ಇಡಲಾಗುತ್ತದೆ. ಮಕ್ಕಳ ಪುಸ್ತಕಗಳಿಗೆ ಹೆಚ್ಚಾಗಿ ಬೇಡಿಕೆ ಇದೆ. ಫಿಕ್ಷನ್ ಪುಸ್ತಕಗಳದ್ದು ಎರಡನೇ ಸ್ಥಾನ. ಇವುಗಳ ಹೊರತಾಗಿ ಇತಿಹಾಸ, ಪ್ರವಾಸ ಹಾಗೂ ರಾಜಕೀಯ ಬರಹಗಳ ಪುಸ್ತಕಗಳನ್ನು ಹೆಚ್ಚು ಓದುತ್ತಾರೆ. ರಾಮಚಂದ್ರ ಗುಹಾ, ಅಮಿಶ್ ತ್ರಿಪಾಠಿ, ಜೆಫ್ರಿ ಆರ್ಚರ್ ಅವರ ಕೃತಿಗಳನ್ನು ಹೆಚ್ಚು ಇಷ್ಟಪಡುತ್ತಾರೆ.



ಕನ್ನಡದಲ್ಲಿ ಎಸ್.ಎಲ್. ಭೈರಪ್ಪ, ಭಾರತೀಸುತ ಅವರ ಕಾದಂಬರಿಗಳಿಗೆ ಹೆಚ್ಚು ಬೇಡಿಕೆ ಇದೆ. ಕನ್ನಡ ಪುಸ್ತಕಗಳ `ಮುನ್ನುಡಿ' ಗ್ರಂಥಾಲಯ ಬಸವನಗುಡಿಯಲ್ಲಿದೆ. ಇದು ಕನ್ನಡ ಪುಸ್ತಕಗಳಿಗೆ ಮೀಸಲು' ಎಂದು ಹೇಳುತ್ತಾರೆ ಜಸ್ಟ್‌ಬುಕ್ಸ್ ಸಿಎಲ್‌ಸಿ ಗ್ರಂಥಾಲಯಗಳ ಮಾರುಕಟ್ಟೆ ಮತ್ತು ಮಾರಾಟ ವ್ಯವಸ್ಥಾಪಕ ವಿನೋದ್ ಶಂಕರ್.



ಕೆಲವು ಸಾರ್ವಜನಿಕ ಗ್ರಂಥಾಲಯಗಳಲ್ಲಿ ನಿರ್ವಹಣೆ ಇಲ್ಲದೆ ಎಷ್ಟೋ ಪುಸ್ತಕಗಳು ಜಿರಳೆಗಳಿಗೆ ಆಹಾರವಾಗುತ್ತಿವೆ. ಇನ್ನು ಅಗತ್ಯ ಪುಸ್ತಕಗಳ ಕೊರತೆಯೂ ಎದ್ದುಕಾಣುತ್ತದೆ. ಇಂಥ ಸಂದರ್ಭದಲ್ಲಿ ಕಣ್ಣಿಗೆ ಕಾಣುವ ಖಾಸಗಿ ಮಾಲೀಕತ್ವದ ಗ್ರಂಥಾಲಯಗಳು ಸದ್ದಿಲ್ಲದೇ `ಅಕ್ಷರ' ಪ್ರೇಮಿಗಳ ತಾಣಗಳಾಗಿ ನೆಲೆನಿಲ್ಲುತ್ತವೆ. ಈ ಸಾಲಿನಲ್ಲಿ ಜಸ್ಟ್‌ಬುಕ್ಸ್ ಗ್ರಂಥಾಲಯವೂ ಸೇರಿದೆ.

ಸದಸ್ಯತ್ವ ಹಾಗೂ ಮಾಹಿತಿಗೆ: 080-6768 3682, www.justbooksclc.com.



ಸುಂದರ್ ರಾಜನ್ ಕಾಳಜಿಯ ಫಲ

ತಮಿಳುನಾಡಿನ ಸುಂದರ್ ರಾಜನ್ ಅವರು ಜಸ್ಟ್‌ಬುಕ್ಸ್ ಗ್ರಂಥಾಲಯ ಸಂಸ್ಥಾಪಕರು. ಗ್ರಂಥಾಲಯ ಸ್ಥಾಪನೆಗೆ ಒಂದು ಕಾರಣವಿದೆ. ಎಂಜಿನಿಯರ್ ವೃತ್ತಿಯಲ್ಲಿದ್ದ ಸುಂದರ್ ಅವರು ಪುಸ್ತಕಪ್ರೇಮಿ. ಹಾಗಾಗಿ ಗ್ರಂಥಾಲಯಕ್ಕೆ ಹೋಗುವ ಅಭ್ಯಾಸ ಬೆಳೆಸಿಕೊಂಡಿದ್ದರು. ಆದರೆ ವೈಟ್‌ಫೀಲ್ಡ್‌ನ ತಮ್ಮ ಮನೆ ಸುತ್ತಮುತ್ತ ಗ್ರಂಥಾಲಯವಿಲ್ಲದ್ದರಿಂದ ಅವರೇ ಸ್ವತಃ 2008ರಲ್ಲಿ ಜಸ್ಟ್‌ಬುಕ್ಸ್ ಹೆಸರಿನ ಗ್ರಂಥಾಲಯ ಪ್ರಾರಂಭಿಸಿದರು.



ಆರಂಭವಾದ ಎರಡು ತಿಂಗಳಲ್ಲೇ ಓದುಗರಿಂದ ಉತ್ತಮ ಪ್ರತಿಕ್ರಿಯೆ ಬಂದಿತು. ನಂತರ ಬೇರೆ ಬೇರೆ ಬಡಾವಣೆಗಳಲ್ಲೂ ಶಾಖೆಗಳು ಆರಂಭವಾಗತೊಡಗಿದವು. ಇದೀಗ 35 ಶಾಖೆಗಳನ್ನು ಹೊಂದಿದ್ದು, ಒಂದೊಂದು ಶಾಖೆಯಲ್ಲೂ 900ಕ್ಕೂ ಹೆಚ್ಚು ಸದಸ್ಯರನ್ನು ಒಳಗೊಂಡಿದೆ.



ನಗರದ ಜಸ್ಟ್‌ಬುಕ್ಸ್ ಶಾಖೆಗಳು

ವೈಟ್‌ಫೀಲ್ಡ್ (ಐದು ಕಡೆ), ಜೆ.ಪಿ.ನಗರ, ಬೆಳ್ಳಂದೂರು, ಇಂದಿರಾನಗರ, ಕಲ್ಯಾಣ ನಗರ, ಎಚ್.ಎಸ್.ಆರ್. ಬಡಾವಣೆ, ಫ್ರೇಜರ್‌ಟೌನ್, ಕೋರಮಂಗಲ (ಎರಡು ಕಡೆ), ಮಧುರಾ ಗಾರ್ಮೆಂಟ್ಸ್, ಜಯನಗರ, ಆರ್‌ಎಂವಿ 2ನೇ ಹಂತ, ಡಾಲರ್ಸ್ ಕಾಲೊನಿ, ಸರ್ಜಾಪುರ ರಸ್ತೆ, ಮಲ್ಲೇಶ್ವರ, ವಿಜಯ ಬ್ಯಾಂಕ್ ಲೇಔಟ್, ವಿಜಯನಗರ, ಎಇಸಿಎಸ್ ಲೇಔಟ್, ರಾಜರಾಜೇಶ್ವರಿ ನಗರ, ಶಂಕರ್‌ನಗರ, ಯಲಹಂಕ, ಬನಶಂಕರಿ, ವಿದ್ಯಾರಣ್ಯಪುರ, ಎಲೆಕ್ಟ್ರಾನಿಕ್ ಸಿಟಿ, ಬಸವೇಶ್ವರನಗರ, ಕಗ್ಗದಾಸಪುರ, ರಾಜಾಜಿನಗರ.



ಹಣ ಉಳಿತಾಯ

ನಗರದ ಎಂಟು ಗ್ರಂಥಾಲಯಗಳಲ್ಲಿ  ಸದಸ್ಯತ್ವ ಇದೆ. ಮೂರು ದಿನಕ್ಕೆ ಒಂದು ಪುಸ್ತಕ ಓದುತ್ತೇನೆ. ವರ್ಷಕ್ಕೆ 325ಕ್ಕೂ ಹೆಚ್ಚು ಪುಸ್ತಕಗಳನ್ನು ಓದಬಹುದು. ಇದೇ ಪುಸ್ತಕಗಳನ್ನು ಖರೀದಿಸಿ ಓದಿದರೆ 36 ಸಾವಿರ ರೂಪಾಯಿಗೂ ಹೆಚ್ಚು ಖರ್ಚಾಗುತ್ತದೆ. ಇಂದಿರಾನಗರದ ಗ್ರಂಥಾಲಯಕ್ಕೆ ಹೋದರೆ ಪೆಟ್ರೋಲ್ ಖರ್ಚು ಸೇರುತ್ತದೆ. ಹಾಗಾಗಿ ಮಲ್ಲೇಶ್ವರದ ಗ್ರಂಥಾಲಯಕ್ಕೆ ಬರುತ್ತೇನೆ. ನಮ್ಮಂಥ ಓದುಗರಿಗೆ ಈ ಜಸ್ಟ್‌ಬುಕ್ಸ್ ಹೆಚ್ಚು ಅನುಕೂಲವಾಗಿದೆ.

-ವಿವೇಕ್ ರೈ, ಸದಾಶಿವನಗರ



ಸಣ್ಣಕಥೆ ಇಷ್ಟ

ಪ್ರತಿದಿನ ಬರುತ್ತೇನೆ. ಕಾಮಿಕ್ಸ್ ಹಾಗೂ ಸಣ್ಣಕಥೆಗಳು ಇಷ್ಟವಾಗುತ್ತವೆ. ಕೆಲವು ಪುಸ್ತಕಗಳು ಸಿಗದಿದ್ದಾಗ, ಆ ಪುಸ್ತಕ ಬೇರೆ ಬಡಾವಣೆಯ ಗ್ರಂಥಾಲಯದಲ್ಲಿದ್ದರೆ ಏಳು ದಿನಗಳಲ್ಲಿ ತರಿಸಿಕೊಡುತ್ತಾರೆ.

- ಸುಕೃತ್, ವಿದ್ಯಾರ್ಥಿ, ಪೂರ್ಣಪ್ರಜ್ಞಾ ಎಜುಕೇಶನ್ ಸೆಂಟರ್

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.