ಬುಧವಾರ, ಜನವರಿ 29, 2020
29 °C

ಹೊಸ ಭರವಸೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಈ ಬಾರಿಯ ಪಂಚ ರಾಜ್ಯಗಳ ವಿಧಾನಸಭೆ ಚುನಾವಣೆ ಫಲಿತಾಂಶ­ಗಳಲ್ಲಿ ಎದ್ದು ಕಾಣಿಸುವಂತಹದ್ದು ಆಮ್‌ ಆದ್ಮಿ ಪಕ್ಷದ (ಎಎಪಿ) ಸಾಧನೆ. ದೆಹಲಿ ವಿಧಾನಸಭೆಯ 70 ಸ್ಥಾನಗಳಲ್ಲಿ 28 ಸ್ಥಾನಗಳನ್ನು ಗೆದ್ದಿ­ರುವ ಎಎಪಿ, ಚುನಾವಣಾ ರಾಜಕೀಯದ ರೂಪುರೇಷೆಯನ್ನೇ ಬದಲಿಸಿದೆ. ಚುನಾವಣೆಗಳನ್ನು ಗೆಲ್ಲಲು ಈಗ ಹಣಬಲ, ತೋಳ್ಬಲಗಳೇ ಮುಖ್ಯ ಎಂಬ ಬಲವಾದ ನಂಬಿಕೆ ಇದೆ. ಆದರೆ, ಅದು ಸಂಪೂರ್ಣ ಸತ್ಯ ಅಲ್ಲ ಎಂಬುದನ್ನು ಈ ಪಕ್ಷದ ಗೆಲುವು ದೃಢಪಡಿಸಿದೆ.ಎಎಪಿ ಬಗ್ಗೆ ಉದಾಸೀನ ಭಾವನೆ ಹೊಂದಿದ್ದ ಕಾಂಗ್ರೆಸ್ ಹಾಗೂ ಬಿಜೆಪಿಯಂತಹ ರಾಷ್ಟ್ರೀಯ ಪಕ್ಷಗಳಿಗೆ ಈ ಸಾಧನೆ ದೊಡ್ಡದೊಂದು ಅಚ್ಚರಿ. ಆಡಳಿತಾರೂಢ ಕಾಂಗ್ರೆಸ್ ಪಕ್ಷವಂತೂ ಕೇವಲ ಎಂಟು ಸ್ಥಾನ ಗಳಿಸಿ ಮೂರನೇ ಸ್ಥಾನಕ್ಕೆ ಕುಸಿದಿದೆ. ಮೂರು ಬಾರಿ ದೆಹಲಿ ಮುಖ್ಯಮಂತ್ರಿಯಾಗಿದ್ದ ಶೀಲಾ ದೀಕ್ಷಿತ್‌ ಅವರನ್ನು ಸುಮಾರು 25,000 ಮತಗಳ ಅಂತರದಿಂದ ಅರವಿಂದ ಕೇಜ್ರಿವಾಲ್‌ ಸೋಲಿಸಿರು­ವುದು ಎಎಪಿ ಸಾಧನೆಯ ದ್ಯೋತಕ. ಚುನಾವಣಾ ರಾಜಕಾರಣದಲ್ಲಿ ಮೂಡಿರುವ ಹೊಸ ಭರವಸೆಯ ಆರಂಭ ಇದು.

ರಾಜಕಾರಣಿಗಳಿಲ್ಲದೆ ಹುಟ್ಟಿದ ರಾಜಕೀಯ ಪಕ್ಷ ಎಎಪಿ.  ಭ್ರಷ್ಟಾಚಾರ­ದಿಂದ ಕೂಡಿದ ಹದಗೆಟ್ಟ ಆಡಳಿತ ವ್ಯವಸ್ಥೆಯನ್ನು ಸ್ವಚ್ಛಗೊಳಿಸುವ ಬದ್ಧತೆ­ಯಿಂದ  ಹೋರಾಟಕ್ಕಿಳಿದ ಕಾರ್ಯಕರ್ತರನ್ನೊಳಗೊಂಡ ಪಕ್ಷ ಇದು. ಈ ಪಕ್ಷ­ದಲ್ಲಿರುವ ಪ್ರಮುಖರು ಯಾರೂ ಸಕ್ರಿಯ ರಾಜಕಾರಣದಲ್ಲಿದ್ದವರಲ್ಲ. ಎರಡು ವರ್ಷಗಳ ಹಿಂದೆ ಅಣ್ಣಾ ಹಜಾರೆ ಹಾಗೂ ಕೇಜ್ರಿವಾಲ್ ಸೃಷ್ಟಿಸಿದ ‘ಲೋಕ­ಪಾಲ್ ಚಳವಳಿ’ ಕವಲಾಗಿ ಒಡೆದು ಸೃಷ್ಟಿಯಾದ ರಾಜಕೀಯ ಪಕ್ಷ.ಈ ಹೋರಾಟದ ಚೈತನ್ಯ ಅಲ್ಪಾವಧಿಯಲ್ಲೇ ಬೃಹತ್‌ ಶಕ್ತಿಯಾಗಿ ಬೆಳೆದದ್ದು ಬೆರಗುಗೊಳಿಸುವಂತಹ ಸಂಗತಿ. ಮನೆಮನೆಗೆ ಹೋಗಿ ನಡೆಸಿದ ಪ್ರಚಾರ­ವಲ್ಲದೇ ಸಾಮಾಜಿಕ ಮಾಧ್ಯಮಗಳನ್ನು ಚುನಾವಣಾ ಪ್ರಚಾರಕ್ಕೆ ಆ ಪಕ್ಷ ಪರಿಣಾಮಕಾರಿಯಾಗಿ ಬಳಸಿಕೊಂಡಿದೆ.  ಚುನಾವಣಾ ಸಂಕೇತವಾಗಿ ಪೊರ­ಕೆಯ ಬಳಕೆಯಂತೂ ಭಾರತದ ಚುನಾವಣಾ ರಾಜಕಾರಣದಲ್ಲಿ ಹೊಸತು.ಮಧ್ಯಮ ವರ್ಗದವರಷ್ಟೇ ಅಲ್ಲದೆ, ಕೊಳೆಗೇರಿ ಜನರನ್ನೂ ಒಲಿಸಿಕೊಳ್ಳುವಲ್ಲಿ ಎಎಪಿ ಯಶಸ್ವಿಯಾಗಿದೆ. ಆ ಮೂಲಕ ಎಲ್ಲರನ್ನೂ ಒಳಗೊಳ್ಳುವ ಪಕ್ಷ ಎಂಬ ಸಂದೇಶ ರವಾನಿಸುವಲ್ಲಿ ಸಫಲವಾಗಿದೆ.  ಭ್ರಷ್ಟಾಚಾರ ಹಾಗೂ ಬೆಲೆ ಏರಿಕೆ ಬಗ್ಗೆ ಜನರ ಆಕ್ರೋಶವನ್ನು ತನ್ನ ಪರ ಮತವಾಗಿ ಪರಿವರ್ತಿಸಿಕೊಳ್ಳು­ವಲ್ಲಿಯೂ ಅದು  ಯಶಸ್ವಿಯಾಗಿದೆ.  ಆದರೆ  ರಾಷ್ಟ್ರಮಟ್ಟದಲ್ಲಿ ಲೋಕ­ಸಭಾ ಚುನಾವಣೆಯಲ್ಲಿ ಈ ಯಶಸ್ಸು ಹೇಗೆ ಪರಿಣಾಮ  ಬೀರಬಹುದು ಎಂಬುದು ಚರ್ಚಾಸ್ಪದ.ಕ್ಲಿಷ್ಟಕರವಾದ ಸುದೀರ್ಘ ದಾರಿಯನ್ನು ಎಎಪಿ ಸವೆಸಬೇಕಿದೆ. ಅಸ್ಸಾಂನಲ್ಲಿ ವಿದ್ಯಾರ್ಥಿ ಚಳವಳಿಯಲ್ಲಿ ಮೂಡಿ ಬಂದ ಅಸ್ಸಾಂ ಗಣ ಪರಿಷತ್, ನಂತರ  ಅಸ್ಸಾಂನಲ್ಲಿ ಸರ್ಕಾರ ರಚಿಸಿ ಇತಿಹಾಸ ನಿರ್ಮಿಸಿತ್ತು. ಆದರೆ  ನಂತರದ ದಿನಗಳಲ್ಲಿ ಅದು ಕೂಡ ಉಳಿದ ರಾಜಕೀಯ ಪಕ್ಷಗಳಿಗಿಂತ ಭಿನ್ನವಾಗೇನೂ ಉಳಿಯಲಿಲ್ಲ. ಹೀಗಾಗಿ ಅಧಿಕಾರ ರಾಜ­ಕಾರಣ­ದಲ್ಲಿ ಎಎಪಿ ಮೈಮರೆಯಬಾರದು, ಜವಾಬ್ದಾರಿಗಳನ್ನು ನಿಭಾಯಿಸುವುದು ಮುಖ್ಯ. ತಾನು ಪ್ರತಿಪಾದಿಸುವ ಮೌಲ್ಯಗಳು ಚುನಾವಣಾ ರಾಜಕಾರಣದಲ್ಲಿ ಮಸುಕಾಗದಂತೆ ಎಎಪಿ ಎಚ್ಚರ ವಹಿಸಬೇಕಿದೆ.

ಪ್ರತಿಕ್ರಿಯಿಸಿ (+)