ಗುರುವಾರ , ಜನವರಿ 23, 2020
20 °C

ಹೊಸ ಮನೆಗೆ ಕಿಟಕಿ ಬಾಗಿಲು

ಮಂಜುಳಾ ರಾಜ್ Updated:

ಅಕ್ಷರ ಗಾತ್ರ : | |

‘ಮನದ ಕಿಟಕಿ ಬಾಗಿಲುಗಳನ್ನು ತೆರೆದಾಗ, ಮುಕ್ತವಾಗಿ ಯೋಚಿಸಲು ಸಾಧ್ಯ’ ಎಂದಿದ್ದಾರೆ ಕವಿವರ್ಯರೊಬ್ಬರು. ಅಂತೆಯೇ ಮನೆಗೂ ನೈಸರ್ಗಿಕ ಗಾಳಿ ಬೆಳಕು ನೀಡುವ ಕಿಟಕಿ ಬಾಗಿಲುಗಳು ಇದ್ದಾಗಲೇ ಮನೆಯವರ ಆರೋಗ್ಯ ಕಾಪಾಡಲು ಸಾಧ್ಯ. ಆದ್ದರಿಂದ ಮನೆ ಕಟ್ಟಲು ಮುಂದಾದಾಗ ಸಮರ್ಪಕ ಪೂರ್ವ ಯೋಜನೆ ಅಗತ್ಯ. ಬರಿಯ ಸಿಮೆಂಟ್ ಇಟ್ಟಿಗೆಗಳ ಗೋಡೆಗಳೇ ಅಲ್ಲದೆ ಕಿಟಕಿ ಬಾಗಿಲುಗಳ ಬಗೆಗೂ ಆಲೋಚಿಸಿ ಯೋಜಿಸುವುದೂ ಮುಖ್ಯ.ಇತ್ತೀಚಿನ ದಿನಗಳಲ್ಲಿ ಗೃಹ ನಿರ್ಮಾಣದ ವೇಳೆ ಮನೆಯೊಳಗೆ ಹೆಚ್ಚು ವಿಭಾಗಗಳನ್ನು ಮಾಡುವುದಿಲ್ಲ. ಇದರಿಂದ ಬಾಗಿಲುಗಳ ಸಂಖ್ಯೆ ಕಡಿಮೆಯಾಗಿದೆ. ಪರಿಣಾಮ ಬಾಗಿಲುಗಳಿಗಾಗಿ ಮಾಡುತ್ತಿದ್ದ ಖರ್ಚು ಉಳಿಯುತ್ತಿದೆ.ಆದರೂ ಅಗತ್ಯವಿರುವಲ್ಲಿ ಕಿಟಕಿ ಬಾಗಿಲುಗಳನ್ನು ಇಡಲೇಬೇಕಲ್ಲಾ. ಆದ್ದರಿಂದ ಅವೆಲ್ಲದರ ಬಗ್ಗೆ ಮೊದಲೇ ಅಂದರೆ ನಕ್ಷೆಯ ಹಂತದಲ್ಲೇ ಯೋಚಿಸ ಬೇಕಾಗುತ್ತದೆ. ಯಾವ ಆಕಾರವಿರಬೇಕು? ಯಾವ ಯಾವ ವಿಭಾಗಕ್ಕೆ ಎಷ್ಟು ಕಿಟಕಿ ಮತ್ತು ಬಾಗಿಲುಗಳು ಇರಬೇಕು? ಎಂದು ನಿರ್ಧಾರ ಮಾಡುವ ಜೊತೆಗೇ ಅದಕ್ಕೆ ಬಳಸುವ ವಸ್ತುವಿನ ಬಗ್ಗೆಯೂ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ.ಕಿಟಕಿ, ಬಾಗಿಲೆಂದಾಗ ಹಿಂದೆಲ್ಲಾ ಮರವನ್ನಷ್ಟೇ ಬಳಸಲಾಗುತ್ತಿತ್ತು. ನಮ್ಮಲ್ಲಿ ಅದಕ್ಕೆ ಪರ್ಯಾಯವೂ ಇರಲಿಲ್ಲ.  ಕೆಲವು ವಾಣಿಜ್ಯ ಕಟ್ಟಡಗಳಿಗೆ ಉಕ್ಕಿನ ಚೌಕಟ್ಟುಗಳನ್ನು ಬಳಸಿದರೂ, ಮರದ ಬಳಕೆ ದೊಡ್ಡ ಪ್ರಮಾಣದಲ್ಲಿ ಮುಂದುವರಿದೇ ಇತ್ತು.ಆದರೆ ಈಗ ಅರಣ್ಯಗಳೆಲ್ಲಾ ನಾಶವಾಗಿ ಮರದ ಬೆಲೆ ಗಗನಕ್ಕೇರಿರುವುದರಿಂದ ಮರ ಅದರಲ್ಲೂ ತೇಗದ ಮರದ ಬಳಕೆ ಒಂದು ರೀತಿಯಲ್ಲಿ ಲಕ್ಷುರಿ ವಿಷಯವಾಗಿ ಬಿಟ್ಟಿದೆ. ಜತೆಗೆ ಅದಕ್ಕೆ ಪರ್ಯಾ­ಯವಾದ ಅಷ್ಟೇ ಆಕರ್ಷಕವಾದ ಬೇರೆಯ ವಸ್ತು­ಗಳೂ ಮಾರುಕಟ್ಟೆಯಲ್ಲಿ ಲಭ್ಯವಿವೆ. ಈಗ ವಿಭಿನ್ನ ಆಕಾರ, ಶೈಲಿಯ ಕಿಟಕಿ ಬಾಗಿಲುಗಳಿಂದ  ಮನೆಗೆ ವಿಶಿಷ್ಟ, ನವ್ಯ, ಅದ್ಭುತ ರೂಪವನ್ನು ನೀಡಲು ಸಾಧ್ಯವಿದೆ. ಆಕಾರದಲ್ಲೂ ಭಿನ್ನತೆ, ಬಳಸುವ ವಸ್ತುಗಳಲ್ಲೂ ವಿಪುಲ ಆಯ್ಕೆಗಳಿವೆ. ವಿನ್ಯಾಸಕಾರರು ಕಿಟಕಿ ಮತ್ತು ಬಾಗಿಲುಗಳ ರೂಪು ರೇಷೆಗಳನ್ನು ನೀಡಿದರೂ, ಬಳಸುವ ವಸ್ತುಗಳ ಆಯ್ಕೆ ನಿಮ್ಮದೇ ಆಗಿರುತ್ತದೆ. ಆದ್ದರಿಂದ ಬಾಳಿಕೆ ಬರುವ, ನಿರ್ವಹಣೆಗೆ ಅನುಕೂಲವಾಗಿರುವ, ಸುಂದರವಾಗಿಯೂ ಕಾಣು­ವುದನ್ನು ಆರಿಸಿಕೊಳ್ಳಬೇಕಾಗುತ್ತದೆ. ಮುಖ್ಯವಾದ  ಆಯ್ಕೆಗಳೆಂದರೆ;

೧ ಅಲ್ಯುಮಿನಿಯಂ, ೨ ಉಕ್ಕು, ೩ ಮರ, ೪ ಯು.ಪಿ.ವಿ.ಸಿ.ಅಲ್ಯುಮಿನಿಯಂ

ಅಲ್ಯುಮಿನಿಯಂನಲ್ಲಿ ಗುಣಮಟ್ಟ ಆಕಾರ ಮತ್ತು ಶೈಲಿ ೧೯೭೦ರ ದಶಕದಲ್ಲಿ ಇದ್ದುದ­ಕ್ಕಿಂತಾ ಈಗ ಬಹಳಷ್ಟು ಬದಲಾವಣೆ ಕಂಡಿದೆ. ಹಾಗಿದ್ದೂ ಇದರಲ್ಲಿ ಅದರದೇ ಆದ ಅನುಕೂಲ, ಅನಾನು­ಕೂಲ ಎರಡೂ ಇವೆ.ಅಲ್ಯುಮಿನಿಯಂನ ತುಸು ಅಗ್ಗ. ಜೊತೆಗೆ ಬಹಳ ಹಗುರ. ಯಾವುದೇ ಆಕಾರಕ್ಕೆ ಬೇಕಾದರೂ ಅದನ್ನು ಸುಲಭವಾಗಿ ಬಾಗಿಸಲು ಸಾಧ್ಯ. ತಕ್ಕಮಟ್ಟಿಗೆ ಗಟ್ಟಿಯಾಗಿಯೂ ಇರುತ್ತದೆ, ಬಾಳಿಕೆಯೂ ಬರುತ್ತದೆ. ನಿರ್ವಹಣೆಯೂ ಸುಲಭ.ಆದರೆ ತಾಪಮಾನವನ್ನು ತಡೆದುಕೊಳ್ಳುವುದಿಲ್ಲ. ಬಹಳ ಬೇಗ ಬಿಸಿಯಾಗಿ ಬಿಡುತ್ತದೆ. ಆದ್ದರಿಂದ ಚಳಿ ಗಾಳಿಯ ಪ್ರದೇಶಗಳಲ್ಲಿ ಇದರ ಬಳಕೆಯಿಂದ ಬಹಳಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು.  ಹಾಗಾಗಿ ಅಂತಹ ಪ್ರದೇಶಗಳಲ್ಲಿ ಅಲ್ಯುಮಿನಿಯಂ ಅಷ್ಟಾಗಿ ಪ್ರಯೋಜನಕಾರಿ ಅಲ್ಲ. ಹಾಗೊಮ್ಮೆ ಬಳಸಿದ್ದರೆ ಸಾಕಷ್ಟು ಮುಂಜಾಗರೂಕತೆಗಳನ್ನು ತೆಗೆದು ಕೊಳ್ಳಬೇಕಾಗುತ್ತದೆ. ಅಲ್ಲದೆ ನೋಡಲು ಅಂತಹ ಲಕ್ಷುರಿ ಲುಕ್ ನೀಡುವುದಿಲ್ಲ. ಸದ್ಯ ಇದು ವಾಣಿಜ್ಯ ಚಟುವಟಿಕೆಯ ಕಟ್ಟಡಗಳಲ್ಲಿ ಹೆಚ್ಚು ಬಳಕೆ­ಯಾಗುತ್ತದೆ.ಉಕ್ಕು

ಉಕ್ಕಿನ ಕಿಟಕಿಗಳು ಬಲಿಷ್ಟವಾಗಿರುತ್ತವೆ, ಬಾಳಿಕೆಯೂ ಬರುತ್ತವೆ. ಇವು ಬಾಗುವುದಿಲ್ಲ, ಶುಚಿ ಮಾಡಲೂ ಸುಲಭ. ನಿಮಗೆ ಬೇಕಾದ ಡಿಸೈನ್‌ಗಳಲ್ಲಿ ಲಭ್ಯವಿವೆ. ನಿಮ್ಮ ಮನೆಗೆ, ಮನಸ್ಸಿಗೆ ಹೊಂದುವಂತ­ಹುದನ್ನು ಆರಿಸಿ ಖರೀದಿಸಬಹುದು. ಬೆಂಕಿ ಮತ್ತು ಹವಾಮಾನದಿಂದ ಯಾವುದೇ ರೀತಿಯ ಹಾನಿಗೆ ಒಳ­ಗಾಗುವುದಿಲ್ಲ.  ಇಷ್ಟೆಲ್ಲಾ ಒಳ್ಳೆಯ ಗುಣಗ­ಳಿ-ದ್ದರೂ, ಇದು ಬಲು ಭಾರ ಮತ್ತು ಜೋಡಿಸುವಾಗಿ ಬಹಳ ಜಾಗರೂಕರಾಗಿರಬೇಕು ಎಂಬುದೇ ನಕಾರಾ­ತ್ಮಕ ಅಂಶವಾಗಿದೆ. ಅಲ್ಲದೇ, ಇದೇನೂ ಅಷ್ಟು ಅಗ್ಗವಲ್ಲ.ರಕ್ಷಣೆ ದೃಷ್ಟಿಯಿಂದ ಅನೇಕರು ಮುಂಬಾಗಿಲಿಗೆ ಗಟ್ಟಿಮುಟ್ಟಾದ ಉಕ್ಕಿನ ಬಾಗಿಲುಗಳನ್ನು ಹಾಕಿಸುತ್ತಾರೆ.  ಈ ಉಕ್ಕಿನ ಬಾಗಿಲುಗಳನ್ನು ಫೈಬರ್ ಗ್ಲಾಸ್ ಅಥವಾ ಮರದ ಬಾಗಿಲಿಗಿಂತಾ ಕಡಿಮೆ ಹಣದಲ್ಲಿ ಮಾಡಿಸಬಹುದು. ಇದಕ್ಕೆ ಹೊಂದಿ­ಕೊಳ್ಳುವಂತಹ ಗಾಜನ್ನು ಬಳಸಿದಾಗ ಮತ್ತೂ ಚಂದವೆನಿಸ ಬಹುದು.ಪ್ರತಿ ವಸ್ತುವಿಗೂ ತನ್ನದೇ ಆದ  ರೂಪಗಳಿರುತ್ತವೆ. ಪ್ರಯೋಜನದ ಜೊತೆಗೆ ಸಮಸ್ಯೆ ಎರಡನ್ನೂ ಅವಲೋಕಿಸಿ ನಿಮ್ಮ ಬಜೆಟ್‌ಗೆ ಮತ್ತು ನಿಮ್ಮ ಆಸಕ್ತಿಗೆ ಅನುಗುಣವಾದುದನ್ನು ಆಯ್ಕೆ ಮಾಡಬಹುದು.ಯು.ಪಿ.ವಿ.ಸಿ

ಯು.ಪಿ.ವಿ.ಸಿ ವಿದೇಶಗಳಲ್ಲಿ ನೂರು ವರ್ಷಗಳ ಹಿಂದಿನಿಂದಲೂ ಜನಪ್ರಿಯ. ಈಗ ನಮ್ಮ ದೇಶದಲ್ಲೂ ಮರಕ್ಕೆ ಪರ್ಯಾಯವಾದುದನ್ನು ಎಲ್ಲರೂ ಹುಡುಕುತ್ತಿದ್ದಾರೆ. ಮರ ಬಹಳ ತುಟ್ಟಿ ಎಂಬ ಕಾರಣಕ್ಕೆ ಹಾಗೂ ಸುಂದರವಾಗಿಯೂ ಕಾಣುತ್ತದೆ ಎಂಬ ಅಭಿಪ್ರಾಯದಿಂದ ಈಗೀಗ ನಮ್ಮಲ್ಲೂ ಸಾಕಷ್ಟು ಜನ ‘ಯುಪಿವಿಸಿ’ ಬಳಸುತ್ತಿದ್ದಾರೆ.ಫ್ರೇಮ್‌ ಜೋಡಣೆ  ಸುಲಭ. ಪಾಲಿಷ್ ಅಥವಾ ಪೇಯಿಂಟ್ ಬೇಡವಾದ್ದರಿಂದ ನಿರ್ವಹಣೆಯೂ ಸುಲಭ.ಈಗ ಸಾಕಷ್ಟು ಕಂಪೆನಿಗಳು ಹುಟ್ಟಿ ಕೊಂಡಿದ್ದು ಸ್ಪರ್ಧೆ ಇರುವುದರಿಂದ ಬೆಲೆಯೂ ಕಡಿಮೆ ಇದೆ. ಮರದಂ­ತೆಯೇ ಕಾಣುವ ‘ಯುಪಿವಿಸಿ’, ಬಗೆಬಗೆ ಬಣ್ಣಗಳಲ್ಲೂ ಲಭ್ಯವಿದೆ. ಆದ್ದರಿಂದ ಗೋಡೆಯ ಹೊರ ಭಾಗಕ್ಕೆ ಕಾಣುವಂತೆ ಬಿಳಿಯದು ಮತ್ತು ಒಳಗಿನದಕ್ಕೆ ಬಣ್ಣದವುಗಳನ್ನು ಆರಿಸಿ ಕೊಳ್ಳಬಹುದು. ತೇಗದ ಮರದಂತೆ ಸೆಲ್‌ಗ್ರೇನ್ಗಳು ಮತ್ತು ಪಾಲಿಷ್ ಮಾಡಿದಂತೆಯೇ ಕಾಣುವುದು ಸಾಧ್ಯವಿದೆ.ಯುಪಿವಿಸಿ ಉತ್ಪನ್ನಗಳು ಸಾಮಾನ್ಯ ಮರದಂತೆ ಭಿನ್ನ ಹವಾಮಾನಗಳಲ್ಲಿ ಹಿಗ್ಗುವುದಾಗಲೀ, ಕುಗ್ಗು­ವುದಾಗಲೀ ಆಗುವುದಿಲ್ಲ. ತೇವದಿಂದ ಯಾವುದೇ ಬದಲಾವಣೆ, ಅಂದರೆ ಕೊಳೆಯುವುದೋ ಅಥವಾ ಬಾಗಿಲು ತೆರೆಯಲಾಗದಂತೆ ಬಿಗಿಯಾಗಿ ಹಿಡಿದು ಕೊಳ್ಳುವುದೋ ಆಗುವುದಿಲ್ಲ.  ಬೇಕಾದ ಆಕಾರದಲ್ಲಿ ಸುಲಭ ಲಭ್ಯ. ಸುರಕ್ಷತೆ ದೃಷ್ಟಿಯಿಂದಲೂ  ವಿಶ್ವಾಸಾ­ಹ­ರ್ವಾಗಿದ್ದು, ಮುಂಬಾಗಿಲು ಮತ್ತು ಹಿಂದಿನ ಬಾಗಿಲು­ಗಳಿಗೂ ಬಳಸಬಹುದು. ಮರಕ್ಕಿಂತ ಗಟ್ಟಿ ಇರುತ್ತದೆ.ಇಷ್ಟೆಲ್ಲಾ ಅನುಕೂಲಗಳಿದ್ದರೂ ಮೊದಲಿನಿಂ­ದಲೂ ನಮ್ಮ ಸಂಪ್ರದಾಯ ಮತ್ತು ಪರಂಪರೆಯಿಂದ ಬೆಳೆದು ಬಂದ ಭಾವನೆಗಳು ನಮ್ಮನ್ನು ಹಿಡಿದಿಟ್ಟು ಕೊಳ್ಳಬಹುದು. ಏನೇ ಇರಲಿ ಖರೀದಿ ಮಾಡುವಾಗ ಚೆನ್ನಾಗಿ ಅವಲೋಕಿಸಿ ಆಯ್ಕೆ ಮಾಡಿಕೊಳ್ಳಬೇ­ಕಾಗುತ್ತದೆ. ಯು.ಪಿ.ವಿ.ಸಿ ಹವಾಮಾನವನ್ನು ತಡೆಯುವುದಾದರೂ ಗ್ರಿಲ್‌ಗಳನ್ನು ಒಳಗೊಂಡಂತಹ ಫ್ರೇಮ್‌ಗಳನ್ನು ಮಾಡಿಸುವುದು ಕಷ್ಟ ಸಾಧ್ಯ.‘ಫೆನೆಸ್ಟ್ರಾದಲ್ಲಿ ವಿಲ್ಲಾಗಳಲ್ಲಿ ಮಾಡಿದಂತಹ ಗ್ರಿಲ್‌ಗಳನ್ನು ಒಳಗೊಂಡಂತಹ ಫ್ರೇಮ್ ಸಾಧ್ಯವಿದ್ದರೂ ಅದು ಅಷ್ಟೊಂದು ಗಟ್ಟಿ ಇರುವುದಿಲ್ಲ. ಎಡಬಲ ಜಾರಿಸುವಂತಹ ಸ್ಲೈಡಿಂಗ್ ವಿಂಡೋಗಳಲ್ಲಿ ಕೊಳೆ ಕುಳಿತು ಕೊಳ್ಳುತ್ತದೆ. ಅಲ್ಲದೆ ಅದಕ್ಕೆ ಸೊಳ್ಳೆ ಪರದೆಗಳನ್ನು ಅಳವಡಿಸುವುದು ಕಷ್ಟ ಆದ್ದರಿಂದ ನನ್ನ ಆಯ್ಕೆ ಮರ’ ಎಂದು ಆರ್ಕಿಟೆಕ್ಟ್ ಅರ್ಜುನ್ ಹೇಳುತ್ತಾರೆ. ಯಾವುದೇ ವಿಷಯವಾಗಲೀ ಅಲ್ಲಿಯೂ ಅನುಕೂಲ ಮತ್ತು ಅನಾನುಕೂಲ ಸಾಮಾನ್ಯ. ಎರಡನ್ನೂ ಅಳೆದೂ ಸುರಿದೂ ಮಾಡಿ ಯೋಚಿಸಿದರೆ ನಿರ್ಧಾರ ಸುಲಭವಾಗುತ್ತದೆ.

ಭಾರತೀಯರ ಮನೆಗಳಲ್ಲಿ ಸಾಮಾನ್ಯವಾಗಿ ಮರಕ್ಕೆ ಹೆಚ್ಚು ಪ್ರಾಶಸ್ತ್ಯ. ಹಿಂದಿನಿಂದ ಬಂದಿರುವ ಕಾರಣವೂ ಇರಬಹುದು ಅಥವಾ ಮಿಕ್ಕವುಗಳೆಲ್ಲಾ ಅಷ್ಟೊಂದು ಗೊತ್ತಿಲ್ಲದವುಗಳಾದ್ದರಿಂದ ಹೊಸತನ್ನು ಒಪ್ಪಿಕೊಳ್ಳಲು ಮನಸ್ಸು ಒಪ್ಪದಿರ ಬಹುದು ಅಷ್ಟೆ.ಮರ

ಮರದ ಬಾಗಿಲು ಕಿಟಕಿಗಳೆಂದಾಗ ಮರ ಬಹಳ ತುಟ್ಟಿಯಂತೂ ಹೌದು. ಹಿಂದೆಲ್ಲಾ ತೇಗದ ಮರವನ್ನು ಬಿಟ್ಟು ಮತ್ಯಾವುದನ್ನೂ ಬಳಸುತ್ತಿರಲಿಲ್ಲ. ಈಗ ತೇಗದ ಬೆಲೆ ಗಗನಕ್ಕೆ ಮುಟ್ಟಿದೆ. ಮೂವತ್ತು ವರ್ಷಗಳ ಹಿಂದೆ ಇದ್ದ ಬೆಲೆಗೆ ಹೋಲಿಸಲಾಗದು. ಅದರಲ್ಲೂ ದೊಡ್ಡ ಗರ್ತಿನ ದಿಮ್ಮಿಗಳು (ಲಾಗ್) ಸಿಗುವುದು ಮತ್ತೂ ಕಷ್ಟ.ಮನೆ ಕಟ್ಟಲು ಮರದ ಆಯ್ಕೆ ಮಾಡಿಕೊಳ್ಳಬೇಕು ಎಂದಾಗ ಮೊದಲಿಗೆ ತೇಗದ ಮರವೇ ನೆನಪಾಗುತ್ತದೆ.ಹಿಂದೆ ಕರ್ನಾಟಕದಲ್ಲಿ ಹುಣಸೂರಿನ ತೇಗವನ್ನು ಬಹಳ ಹೆಚ್ಚಾಗಿ ಬಳಸುತ್ತಿದುದುಂಟು. ಎಲ್ಲಕ್ಕಿಂತಾ ಬಹಳ ಗಟ್ಟಿಯಾಗಿದೆ ಮತ್ತು ಸುಂದರವೂ ಆಗಿದೆ ಎಂಬುದೇ ಅದಕ್ಕೆ ಕಾರಣವಾಗಿತ್ತು. ಈಗ ಅದು ಮಾರು ಕಟ್ಟೆಯಲ್ಲಿ ಅಷ್ಟು ಲಭ್ಯವಿಲ್ಲ. ಈಗೆಲ್ಲಾ ಬರ್ಮಾ ಟೀಕ್‌ ಹೆಸರೇ ಬಹಳವಾಗಿ ಕೇಳಿ ಬರುತ್ತಿದೆ.ಮನೆಗೆ ಅಗತ್ಯವಾದ ಕಿಟಕಿ ಬಾಗಿಲುಗಳನ್ನು ತಯಾರಿಸಿಕೊಳ್ಳಲು  ಅಗತ್ಯವಾದ ಮರಗಳಲ್ಲೂ ಬಹಳಷ್ಟು ಆಯ್ಕೆಗಳಿವೆ. ಇದರಲ್ಲಿ ಮೊದಲಿಗೆ ಬರುವುದೇ ಟೀಕ್. ನಂತರ ಬರ್ಮಾ ಟೀಕ್, ಘಾನಾ ಟೀಕ್, ಕೊಲಂಬಿಯಾ ಟೀಕ್, ಹೊನ್ನೆ, ಕೆಂಪು ಸಾಲ್, ಬಿಳಿಯ ಸಾಲ್, ಕಾಡು ಮರ (ಜಂಗಲ್ ಹುಡ್). ಬರ್ಮಾ ಟೀಕ್‌ (ತೇಗ) ಬಳಸಿ ಹೊರಗೆ ಪೇಂಟ್ ಮಾಡಿಸಿ ಒಳಗೆ ಪಾಲಿಷ್  ಮಾಡಿದರೆ ನೋಡಲು ಬಲು ಚಂದ. ಇದು ಮನೆಗೆ ಲಕ್ಷುರಿ ಲುಕ್ ಕೊಡುತ್ತದೆ. ಪಾಲಿಷ್ ಮಾಡಿದಾಗ ಮರದಲ್ಲಿನ ಗ್ರೇನ್‌ಗಳು ಆಕರ್ಷಕವಾಗಿ ಕಾಣುತ್ತವೆ.ಆದರೆ, ಟೀಕ್‌ ಭಾರಿ ಖರ್ಚಿನ ಬಾಬತ್ತು ಎನಿಸಿದರೆ, ಆಗ ಘಾನಾ ಟೀಕ್ ಆಯ್ಕೆ ಮಾಡಿಕೊಳ್ಳಬಹುದು.  ಆದರೆ ಅದರಲ್ಲಿ ಅಷ್ಟು ಗ್ರೇನ್ಸ್ ಇರುವುದಿಲ್ಲ ಮತ್ತು ಬರ್ಮಾ ಟೀಕ್‌ಗೆ ಹೋಲಿಸಿದಾಗ ಬಿಳಿಯ ಬಣ್ಣದ್ದೆನಿಸಿ ಕೊಳ್ಳುತ್ತದೆ. ಗಂಟುಗಳೂ ಸಾಕಷ್ಟಿರುತ್ತವೆ. ಆಕಾರದಲ್ಲಿ ಸ್ವಲ್ಪ ಮಟ್ಟಿನ ವಿರೂಪಗಳಿರುತ್ತದೆ.ಕೊಲಂಬಿಯಾ ಟೀಕ್ ವಿಷಯಕ್ಕೆ ಬಂದರೆ ಗಟ್ಟಿಯಾಗಿರುತ್ತದೆ ಮತ್ತು ವಿರೂಪ ಕಡಿಮೆ.ಹೊನ್ನೆ ಮರ ಗಟ್ಟಿಯಾಗಿಯೇನೂ ಇರುತ್ತದೆ. ವಿರೂಪವೂ ಕಡಿಮೆ. ಆದರೆ ನೀರು ತಾಗಿದರೆ ಅಥವಾ ತೇವಾಂಶ ಹೆಚ್ಚಾದರೆ ಹಳದಿ ಬಣ್ಣವನ್ನು ಹೊರಬಿಡುತ್ತದೆ. ಆದ್ದರಿಂದ ಹೊನ್ನೆ ಮರದ ಬಾಗಿಲು, ಕಿಟಕಿಗಳಿಗೆ ಪಾಲಿಷ್‌ ಮಾಡಲು ಸಾಧ್ಯವಿಲ್ಲ. ಏನೇ ಇದ್ದರೂ ಪೇಯಿಂಟ್ ಮಾಡಲೇಬೇಕಾಗುತ್ತದೆ.

ಇನ್ನು ಸಾಲ್‌ ಮರ. ಕೆಂಪು ಮತ್ತು ಬಿಳಿಯ ಸಾಲ್‌ನಲ್ಲಿ ಕೂದಲೆಳೆಯಷ್ಟು ಸೀಳು ಸಾಮಾನ್ಯವಾಗಿ ಕಾಣಬರುತ್ತದೆ. ಆದರೆ ಅದನ್ನು ಪಾಲಿಷ್‌ನಿಂದ ಮುಚ್ಚ ಬಹುದು. ನಿಮ್ಮ ಆಯ್ಕೆಯ ಮರವನ್ನು ಆರಿಸಿದ ನಂತರವೂ ಇನ್ನೂ ಕೆಲವು ವಿಷಯಗಳನ್ನು ಗಮನಿಸಬೇಕಾಗುತ್ತದೆ.೧ ನೀವು ಮರದ ದಿಮ್ಮಿ ಅಂದರೆ ಪೂರ್ಣ ಲಾಗ್ ತೆಗೆದು ಕೊಳ್ಳುತ್ತೀರೋ ಅಥವಾ ಕಟ್ ಪೀಸ್‌ಗಳನ್ನು ಕೊಳ್ಳುತ್ತೀರೋ?೨ ವೇಸ್ಟೇಜ್ ಎಷ್ಟಾಗುತ್ತದೆ?೩ ಮರ ಎಷ್ಟು ಹಳೆಯದೆಂದು ತಿಳಿದುಕೊಳ್ಳಲು ಕಾರ್ಪೆಂಟರ್‌ನ ಸಲಹೆ ತೆಗೆದುಕೊಳ್ಳಿ೪ ಮರದಲ್ಲಿರುವ ಕೊರತೆ, ಡಿಫೆಕ್ಟ್‌ ಗಮನಿಸಿ.೫ ಸೀಸನ್ ಆಗಿದೆಯೇ? ಇಲ್ಲದಿದ್ದರೆ ಎಷ್ಟು ಕಾಲ ಸೀಸನ್ ಆಗ ಬೇಕು ಮತ್ತು ನೈಸರ್ಗಿಕ ಇಲ್ಲವೇ ಕೃತಕ ಸೀಸನ್ ಮಾಡಿಸುತ್ತೀರೋ ನಿರ್ಧರಿಸಿ. ಎಲ್ಲಕ್ಕೂ ನಂಬಿಕಸ್ಥ ಕಾರ್ಪೆಂಟರನ ಸಲಹೆ ಸೂಕ್ತ.ಮರ ಬಳಕೆ ಅನುಕೂಲ

೧ ತಾಪಮಾನವನ್ನು ತಡೆಯುವ ಶಕ್ತಿ ಇರುತ್ತದೆ.೨ ವಿದ್ಯುತ್ ಮತ್ತು ಶಾಖದಿಂದ ಯಾವುದೇ ತೊಂದರೆ ಇಲ್ಲ, ಮೂಲತಃ ಅದು ಬ್ಯಾಡ್ ಕಂಡಕ್ಟರ್ ಆಗಿರುವುದರಿಂದ ರಕ್ಷಣೆ ನೀಡುತ್ತದೆ.೩ ನೋಡಲು ಆಕರ್ಷಕವಾಗಿರುವುದೇ ಅಲ್ಲದೆ ನೀವು ಬಯಸಿದ ಫಿನಿಷಿಂಗ್‌ ನೀಡಲು ಸಾಧ್ಯವಿದೆ.೪ ತುಕ್ಕು ಹಿಡಿಯುತ್ತದೆ ಎಂಬ ಭಯವಿಲ್ಲ. ಪಾಲಿಷ್ ಅಥವಾ ಪೇಯಿಂಟ್ ಯಾವುದನ್ನೇ ಆದರೂ ಮಾಡಬಹುದು.೫ ನಿರ್ವಹಣೆ ಸುಲಭ, ಯಾವುದೇ ರೀತಿಯ ಬದಲಾವಣೆ ಸಾಧ್ಯ ಮತ್ತು ಒಳ್ಳೆಯ ಗುಣಮಟ್ಟದ ಮರದ ಬಳಕೆ ಮಾಡಿದಾಗ ಬಾಳಿಕೆಯೂ ಬರುತ್ತದೆ.ಒಂದೇ ರೀತಿಯ ಮರ ಬಳಸ ಬೇಕೆಂದೇನಿಲ್ಲ, ಡಾ: ಹರಿ ಕಿರಣ್ ಅವರು ತಮ್ಮ ಹೊಸದಾಗಿ ಕಟ್ಟಿಸುತ್ತಿರುವ ಮನೆಗೆ ಬಾಗಿಲುಗಳ ‘ವಾಸ್ಕಾಲ್’ ಅಂದರೆ ಮನೆಯ ಮುಂಬಾಗಿಲ ಫ್ರೇಮ್್ಗೆಗೆ ಟೀಕ್ ಮರವನ್ನು ಬಳಸಿ ಫ್ಲಶ್ ಡೋರ್ಸ್ ಅನ್ನು ಬಳಸುತ್ತಿದ್ದಾರೆ. ಈ ರೀತಿ ಮಿಕ್ಸ್ ಅಂಡ್ ಮ್ಯಾಚ್ ಮಾಡಬಹುದು ಒಂದೇ ರೀತಿಯದೇ ಬಳಸ ಬೇಕೆಂದೇನಿಲ್ಲ. ಮನೆಯ ಒಳಭಾಗಕ್ಕೆ ಕಿಟಕಿ ಮತ್ತು ಬಾಗಿಲಿನ ಫ್ರೇಮ್‌ಗೆ ಸಾಲ್ ಬಳಸಿ ಬಾಗಿಲು ಮತ್ತು ಕಿಟಕಿಗಳಿಗೆ ಹೊನ್ನೆ ಅಥವಾ ಮತ್ತಿ ಮರ ಬಳಸಬ­ಹುದು. ಕಿಟಕಿಗಳಿಗೆ ಯು.ಪಿ.ವಿ.ಸಿ ಸಹಾ ಬಳಸ ಬಹುದು. ನೋಡಲು ಮರದಷ್ಟೇ ಚಂದವಾಗಿ­ರುತ್ತದೆ, ದೇವರ ಮನೆ ಮತ್ತು ಮುಂಬಾಗಿಲಿಗೆ ತೇಗದ ಮರ ಬಳಸಿದರೆ ಬಾತ್ ರೂಮ್‌ಗೆ ತೇವ ತಡೆಯುವ ಯು.ಪಿ.ವಿ.ಸಿ ಬಳಸಬಹುದು.ಒಟ್ಟಿನಲ್ಲಿ ಒಂದು ಮನೆಯನ್ನು ಕಟ್ಟಿಸುವ ಹಂತ­ದಲ್ಲಿ ಎಷ್ಟು ವಿಷಯಗಳನ್ನು ತಿಳಿದು ಕೊಂಡರೂ ಸಾಲದು. ಜೀವನದಲ್ಲಿ ಒಂದೇ ಬಾರಿ ಮನೆ ಕಟ್ಟುವು­ದರಿಂದ ಆಯ್ಕೆಗಳು ವಿಫುಲವಾಗಿರುವುದರಿಂದ ನಿಮ್ಮ ಜಾಣ್ಮೆಯನ್ನು ಒರೆಗೆ ಹಚ್ಚಿ ನಿರ್ಧಾರಗಳನ್ನು ತೆಗೆದು ಕೊಳ್ಳುವುದು ಸೂಕ್ತವಂತೂ ಹೌದು.

 

ಪ್ರತಿಕ್ರಿಯಿಸಿ (+)