ಶುಕ್ರವಾರ, ಮಾರ್ಚ್ 5, 2021
29 °C

ಹೊಸ ವಿದ್ಯುತ್ ದರ ನೀತಿ ಸಮರ್ಪಕವಾಗಿ ಜಾರಿಯಾಗಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೊಸ ವಿದ್ಯುತ್ ದರ ನೀತಿ ಸಮರ್ಪಕವಾಗಿ ಜಾರಿಯಾಗಲಿ

ಬಂಡವಾಳ ಹೂಡಿಕೆ ಮತ್ತು ವಿದ್ಯುತ್‌ ಉತ್ಪಾದನೆಯ ಪ್ರಮಾಣವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಹೊಸ ವಿದ್ಯುತ್‌ ದರ ನೀತಿಗೆ ಕೇಂದ್ರ ಸಚಿವ ಸಂಪುಟ ಒಪ್ಪಿಗೆ ಸೂಚಿಸಿದೆ. ವಿದ್ಯುತ್‌ ಕ್ಷೇತ್ರದಲ್ಲಿ ಸಮಗ್ರ ಬದಲಾವಣೆಯನ್ನು ತರುವ ನಿಟ್ಟಿನಲ್ಲಿ 2006ರ ವಿದ್ಯುತ್‌ ನೀತಿಗೆ ತಿದ್ದುಪಡಿ ಮಾಡಲೂ ಕೇಂದ್ರ ಸರ್ಕಾರ ನಿರ್ಧರಿಸಿದೆ.ದೇಶವು ಸದ್ಯ ವಿದ್ಯುತ್‌ ಕ್ಷೇತ್ರದಲ್ಲಿ ಎದುರಿಸುತ್ತಿರುವ ಸಮಸ್ಯೆಗಳನ್ನು ಗಮನಿಸಿದರೆ, ಇದೊಂದು ಸ್ವಾಗತಾರ್ಹ ನಿರ್ಧಾರ. ಇವತ್ತಿಗೂ ದೇಶದಲ್ಲಿ  ಸಾವಿರಾರು ಹಳ್ಳಿಗಳಿಗೆ ವಿದ್ಯುತ್‌ ಪೂರೈಕೆ ಆಗುತ್ತಿಲ್ಲ ಎನ್ನುವುದು ಗಮನಾರ್ಹ. ಇದು ಯೋಜನೆಗಳ ಕಾರ್ಯನಿರ್ವಹಣೆಯ ವೈಫಲ್ಯ ಮಾತ್ರವಲ್ಲ, ಅಭಿವೃದ್ಧಿಪಥದ ಅಸಮಾನತೆಯತ್ತಲೂ ಬೊಟ್ಟು ಮಾಡುತ್ತದೆ.ದಕ್ಷಿಣದ ಕೆಲವು ರಾಜ್ಯಗಳನ್ನು ಹೊರತುಪಡಿಸಿದರೆ, ಉತ್ತರ ಮತ್ತು ಈಶಾನ್ಯ ರಾಜ್ಯಗಳಲ್ಲಿ ಇವತ್ತಿಗೂ ಪರಿಸ್ಥಿತಿ ಸುಧಾರಿಸಿಲ್ಲ. ಬಿಹಾರ, ಜಾರ್ಖಂಡ್‌, ಮಧ್ಯಪ್ರದೇಶ, ಒಡಿಶಾ, ಉತ್ತರಪ್ರದೇಶ ಮತ್ತು ಪಶ್ಚಿಮ ಬಂಗಾಳದ ಎಲ್ಲ ಜಿಲ್ಲೆಗಳಲ್ಲಿ ಇತ್ತೀಚೆಗೆ ನಡೆಸಿದ ಸಮೀಕ್ಷೆಯೊಂದರ ಪ್ರಕಾರ, ಶೇಕಡ 96ರಷ್ಟು ಹಳ್ಳಿಗಳಿಗೆ ವಿದ್ಯುತ್‌ ಪೂರೈಕೆ ಆಗುತ್ತಿದೆ ಎನ್ನುವುದು ವಿದ್ಯುತ್‌ ಸಚಿವಾಲಯದ ಹೇಳಿಕೆ.ಆದರೆ ಈ ರಾಜ್ಯಗಳ ಒಟ್ಟು ಮನೆಗಳಲ್ಲಿ ಶೇಕಡ 69ರಷ್ಟು ಮನೆಗಳಿಗೆ ಮಾತ್ರ ವಿದ್ಯುತ್‌ ಸಂಪರ್ಕವಿದೆ ಎನ್ನುವುದನ್ನೂ ಸಮೀಕ್ಷೆ ಬಹಿರಂಗಪಡಿಸಿದೆ. ಸರ್ಕಾರ ಈಗ ಒಪ್ಪಿಕೊಂಡಿರುವ ಹೊಸ ನೀತಿ ಎಲ್ಲರಿಗೂ ವಿದ್ಯುತ್‌ ಸಂಪರ್ಕ ಒದಗಿಸಲು ನೆರವಾಗಲಿದೆ ಎನ್ನುವ ವಿಶ್ವಾಸವನ್ನು ಕೇಂದ್ರ ಇಂಧನ ಸಚಿವ ಪೀಯೂಷ್‌ ಗೋಯಲ್ ವ್ಯಕ್ತಪಡಿಸಿದ್ದಾರೆ.ಆದರೆ ಕಳೆದ ಹತ್ತು ವರ್ಷಗಳಲ್ಲಿ ಇಂಧನ ಖಾತೆಯನ್ನು ನಿರ್ವಹಿಸಿದ ಬಹುಪಾಲು ಸಚಿವರು ಕಾಲಕಾಲಕ್ಕೆ ಇದೇ ಭರವಸೆಯನ್ನು ವ್ಯಕ್ತಪಡಿಸಿರುವುದು ಸುಳ್ಳಲ್ಲ. ನೀತಿಯನ್ನು ಬದಲಾಯಿಸಿದಾಕ್ಷಣ ಎಲ್ಲ ಜನರಿಗೂ ವಿದ್ಯುತ್‌ ಸೌಲಭ್ಯ ಒದಗುತ್ತದೆ ಎನ್ನಲಾಗದು. ಯೋಜನೆಗಳ ಅನುಷ್ಠಾನಕ್ಕೆ ಕಾಲಬದ್ಧ ಮತ್ತು ಕಟ್ಟುನಿಟ್ಟಿನ ಶಿಸ್ತು ಅಗತ್ಯ.ವಿದ್ಯುತ್‌ ಕ್ಷೇತ್ರ ಎದುರಿಸುತ್ತಿರುವ ಸಮಸ್ಯೆಗಳು ಒಂದೆರಡಲ್ಲ. ಬಂಡವಾಳದ ಕೊರತೆ, ಉತ್ಪಾದನಾ ವೆಚ್ಚದ ಹೆಚ್ಚಳ, ವಿತರಣೆಯಲ್ಲಿ ಸೋರಿಕೆ, ಕಾರ್ಯಕ್ಷಮತೆಯ ಹಿನ್ನಡೆ, ಪಾರದರ್ಶಕ ನೀತಿಯ ಕೊರತೆ- ಹೀಗೆ ಈ ಸಮಸ್ಯೆಗಳನ್ನು ಪಟ್ಟಿ ಮಾಡಬಹುದು. ವಿದ್ಯುತ್ ಕ್ಷೇತ್ರದಲ್ಲಿ ಭಾರೀ ಪ್ರಮಾಣದಲ್ಲಿ ಖಾಸಗಿ ಬಂಡವಾಳ ಹರಿದುಬರುವ ನಿರೀಕ್ಷೆ, ಕಳೆದ ಐದು ವರ್ಷಗಳಿಂದ ನಿರೀಕ್ಷೆಯಾಗಿಯೇ ಉಳಿದಿದೆ.2010ರಿಂದೀಚೆಗಿನ ಖಾಸಗಿ ಕ್ಷೇತ್ರದ ಯೋಜನೆಗಳ ಅನುಷ್ಠಾನಗಳನ್ನು ಗಮನಿಸಿದರೆ ಇದು ಸ್ಪಷ್ಟವಾಗುತ್ತದೆ. 2010ರಲ್ಲಿ ಖಾಸಗಿ ಕ್ಷೇತ್ರದ 46 ವಿದ್ಯುತ್‌ ಯೋಜನೆಗಳಿಗೆ ಪ್ರಸರಣ ಸಂಪರ್ಕ ಮಂಜೂರಾಗಿದ್ದರೆ, 2014ರಲ್ಲಿ ಕೇವಲ 2 ಯೋಜನೆಗಳಿಗೆ ಮಾತ್ರ ಪ್ರಸರಣ ಸಂಪರ್ಕ ನೀಡಲಾಗಿದೆ. 2015ರಲ್ಲೂ ಖಾಸಗಿ ಕ್ಷೇತ್ರದ 2 ಯೋಜನೆಗಳು ಮಾತ್ರ ಪ್ರಸರಣ ಸಂಪರ್ಕ ಪಡೆದಿವೆ.ಐದು ವರ್ಷಗಳ ಹಿಂದೆ ಉಷ್ಣ ವಿದ್ಯುತ್‌ ಉತ್ಪಾದನಾ ವಲಯದಲ್ಲಿ ಒಟ್ಟು 46 ಯೋಜನೆಗಳು ವಿದ್ಯುತ್‌ ಜಾಲಕ್ಕೆ ಸಂಪರ್ಕ ಪಡೆದಿದ್ದು, ಅದರಲ್ಲಿ 35 ಖಾಸಗಿ ಯೋಜನೆಗಳಾಗಿದ್ದವು. 2015ರಲ್ಲಿ ಈ ಕ್ಷೇತ್ರದಲ್ಲಿ ಜಾಲಕ್ಕೆ ಸಂಪರ್ಕ ಪಡೆದಿರುವ ಎರಡೂ ಯೋಜನೆಗಳು ಸರ್ಕಾರಿ ವಲಯದ್ದು.ಈ ಹಿನ್ನೆಲೆಯಲ್ಲಿ ಹೊಸ ನೀತಿಯು ಖಾಸಗಿ ಬಂಡವಾಳ ಹೂಡಿಕೆಯನ್ನು ಹೆಚ್ಚಿಸುವತ್ತ ತುರ್ತು ಗಮನ ಹರಿಸಬೇಕಿದೆ. ವಿದ್ಯುತ್‌ ದರ ದುಬಾರಿಯಾದಷ್ಟೂ ಉದ್ಯಮಗಳಲ್ಲಿ ಬಳಕೆ ಕಡಿಮೆಯಾಗುತ್ತಿದೆ ಎನ್ನುವುದೂ ಇಲ್ಲಿ ಗಮನಾರ್ಹ. ಕಳೆದ ವರ್ಷದ ಕೈಗಾರಿಕಾ ವಿದ್ಯುತ್‌ ಬಳಕೆಯ ಅಂಕಿ ಅಂಶಗಳೂ ಇದನ್ನು ಸಮರ್ಥಿಸುತ್ತಿವೆ.ಸ್ಥಾಪಿತ ವಿದ್ಯುತ್‌ ಉತ್ಪಾದನಾ ಸಾಮರ್ಥ್ಯ 2,68,603 ಮೆಗಾವಾಟ್‌ ಇದ್ದಾಗ್ಯೂ, ಕಳೆದ ವರ್ಷ ಬೇಸಿಗೆಯಲ್ಲಿ ಅತ್ಯಧಿಕವೆಂದರೆ 1,34,892 ಮೆಗಾವಾಟ್‌  ಮಾತ್ರ ಬಳಕೆಯಾಗಿತ್ತು. ಕಳೆದ ಮೂರು ವರ್ಷಗಳಲ್ಲಿ ಉತ್ಪಾದನಾ ಸಾಮರ್ಥ್ಯ ವಾರ್ಷಿಕ ಶೇಕಡ 13.7ರಷ್ಟು ವೃದ್ಧಿಯಾಗಿದ್ದರೂ, ಬಳಕೆಯಲ್ಲಿ ವಾರ್ಷಿಕ ಶೇಕಡ 6ರಷ್ಟು ಮಾತ್ರ ವೃದ್ಧಿಯಾಗಿದೆ.ಸಚಿವ ಸಂಪುಟ ಒಪ್ಪಿಗೆ ಸೂಚಿಸಿರುವ ಹೊಸ ದರ ನೀತಿ ಈ ಎಲ್ಲ ಸಮಸ್ಯೆಗಳನ್ನೂ ಎದುರಿಸಲು ಸಹಾಯಕವಾಗಲಿ. ಮುಖ್ಯವಾಗಿ ಘನತ್ಯಾಜ್ಯಗಳಿಂದ ಪೂರ್ಣಪ್ರಮಾಣದಲ್ಲಿ ವಿದ್ಯುತ್‌ ಉತ್ಪಾದನೆ ಮತ್ತು 2022ರ ವೇಳೆಗೆ ಶೇಕಡ 8ರಷ್ಟು ಸೌರವಿದ್ಯುತ್‌ ಬಳಸುವ ಯೋಜನೆಗಳು ನಿಖರವಾಗಿ ಜಾರಿಗೆ ಬಂದರೆ ಮಹತ್ವದ ಬದಲಾವಣೆಗಳನ್ನು ಸಾಧಿಸಬಹುದು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.