ಮಂಗಳವಾರ, ಮೇ 24, 2022
31 °C

ಹೋಟೆಲ್ ಉದ್ಯಮಿ ಕೃಷ್ಣ ಹೆಗಡೆ ಅಂತ್ಯಕ್ರಿಯೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೋಟೆಲ್ ಉದ್ಯಮಿ ಕೃಷ್ಣ ಹೆಗಡೆ ಅಂತ್ಯಕ್ರಿಯೆ

ಶಿರಸಿ (ಉ.ಕ.ಜಿಲ್ಲೆ): ಅಲ್ಪ ಕಾಲದ ಅನಾರೋಗ್ಯದಿಂದ ಸೋಮವಾರ ನಿಧನ ಹೊಂದಿದ ಹೋಟೆಲ್ ಉದ್ಯಮಿ ಕೃಷ್ಣ ಕಮಲಾಕರ ಹೆಗಡೆ (48) ಅಂತ್ಯಸಂಸ್ಕಾರ ಅವರ ತೋಟದ ಮನೆಯಾದ ತಾಲ್ಲೂಕಿನ ಕೆರೆಕೊಪ್ಪದಲ್ಲಿ ಮಂಗಳವಾರ ನಡೆಯಿತು.ತೀವ್ರ ಅನಾರೋಗ್ಯಕ್ಕೆ ತುತ್ತಾಗಿದ್ದ ಅವರು ಕೆಲ ದಿನಗಳ ಹಿಂದೆ ಹುಬ್ಬಳ್ಳಿಯ ವಿವೇಕಾನಂದ ಆಸ್ಪತ್ರೆಗೆ ದಾಖಲಾಗಿದ್ದರು. ಮೂತ್ರಪಿಂಡ ಹಾಗೂ ಲಿವರ್ ತೊಂದರೆಯಿಂದ ಬಳಲುತ್ತಿದ್ದ ಅವರನ್ನು ಬೆಳಗಾವಿಯ ಕೆಎಲ್‌ಇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತುಸು ಚೇತರಿಕೆ ಕಂಡಿದ್ದ ಅವರು ಸೋಮವಾರ ರಾತ್ರಿ ಕೊನೆಯುಸಿರೆಳೆದರು. ಅವರಿಗೆ ಪತ್ನಿ, ಇಬ್ಬರು ಪುತ್ರಿಯರು ಇದ್ದಾರೆ.ಹೋಟೆಲ್ ಉದ್ಯಮ ಹಾಗೂ ಆಹಾರ ಸಂಸ್ಕೃತಿಗೆ ವಿಭಿನ್ನ ಆಯಾಮ ನೀಡಿ ಬೆಂಗಳೂರಿನ `ನಮ್ಮೂರ ಹೋಟೆಲ್~ ಮೂಲಕ ಪ್ರಸಿದ್ಧಿ ಪಡೆದಿದ್ದ ಕೃಷ್ಣ ಹೆಗಡೆ (ಕೆ.ಕೆ) ಮೂಲತಃ ತಾಲ್ಲೂಕಿನ ಸೋಂದಾ ಸಮೀಪದ ಕೆಳಗಿನಕೇರಿಯವರು.

 

ಕಡು ಬಡತನದಲ್ಲಿ ಹುಟ್ಟಿ ಬೆಳೆದು ಹತ್ತನೇ ತರಗತಿ ನಂತರ ಉದ್ಯೋಗಕ್ಕಾಗಿ ಮನೆ ಬಿಟ್ಟು ಹೊರಟ ಅವರು ಬಾಣಸಿಗನಾಗಿ ಬದುಕಿನಲ್ಲಿ ಯಶಸ್ಸಿನ ಹೆಜ್ಜೆ ಇಡುತ್ತ ಸಾಗಿದರು. ರದ್ದಿ ಕಾಗದದ ಅಂಗಡಿಯಲ್ಲಿ ಹೊಟ್ಟೆಪಾಡಿಗಾಗಿ ಕೆಲಸ ಪ್ರಾರಂಭಿಸಿದ ಅವರು ನಂತರ ಮುಂಬೈನ ಒಬೆರಾಯ್ ಹೋಟೆಲ್‌ನಲ್ಲಿ ಕೇಟರಿಂಗ್ ತರಬೇತಿ ಪಡೆದು, ಅಡುಗೆ ಕ್ಷೇತ್ರದಲ್ಲಿ ಪರಿಣತಿ ಸಾಧಿಸಿದರು.ಯೂರೋಪ್, ಕೊಲ್ಲಿ ರಾಷ್ಟ್ರಗಳು ಸೇರಿದಂತೆ 18ಕ್ಕೂ ಹೆಚ್ಚು ದೇಶಗಳಲ್ಲಿ ಒಂದು ದಶಕಕ್ಕೂ ಅಧಿಕ ಕಾಲ ಹೋಟೆಲ್ ಉದ್ಯಮದಲ್ಲಿ ಕೆಲಸ ಮಾಡಿದರು. ಸ್ವದೇಶಕ್ಕೆ ಆಗಮಿಸಿದ ಕೆ.ಕೆ. ವಿಶಿಷ್ಟ ಮಾದರಿಯ ಹೋಟೆಲ್ ಉದ್ಯಮ ಪರಿಚಯಿಸಿದರು. ಬೆಂಗಳೂರಿನಲ್ಲಿ `ನಮ್ಮೂರ ಹೋಟೆಲ್~ ಪ್ರಾರಂಭಿಸಿ, ತೂಕ ಮಾಡಿ ಅಡುಗೆ ಪದಾರ್ಥ ನೀಡುವ ಮೂಲಕ ಹೋಟೆಲ್ ಉದ್ಯಮದಲ್ಲಿ ಹೊಸ ಕಲ್ಪನೆ ಮೂಡಿಸಿದರು.ಅಷ್ಟೇ ಅಲ್ಲದೇ ಮಲೆನಾಡಿನ ಹಳ್ಳಿ ಮನೆಯ ಆಹಾರ ಪದ್ಧತಿಯನ್ನು ತಮ್ಮ ಹೋಟೆಲ್ ಉದ್ಯಮದಲ್ಲಿ ಅಳವಡಿಸಿಕೊಂಡು ಯಶ ಕಂಡರು. ಹೋಟೆಲ್ ಉದ್ಯಮವನ್ನೇ ನೆಚ್ಚಿಕೊಂಡಿದ್ದ ಕೆ.ಕೆ. ತಮ್ಮ ವಿಶಿಷ್ಟ ಬಾಣಸಿಗ ಉಡುಗೆಯ ಮೂಲಕ ಜನರ ಗಮನ ಸೆಳೆಯುತ್ತಿದ್ದರು.ಮುಂಬೈ, ಹೈದ್ರಾಬಾದ್‌ನ್ಲ್ಲಲೂ ಹೋಟೆಲ್ ಉದ್ಯಮದಲ್ಲಿ ತೊಡಗಿಕೊಂಡಿದ್ದ ಅವರು ಒಂದೆರಡು ವರ್ಷಗಳ ಈಚೆಗೆ ತಮ್ಮ ಮೂಲ ನೆಲೆಗೆ ಆಗಮಿಸಿ ಶಿರಸಿಯಲ್ಲಿ `ನಮ್ಮೂರ ಊಟ~ ಹೋಟೆಲ್ ಪ್ರಾರಂಭಿಸಿದ್ದರು.ಈ ಭಾಗದ ಗ್ರಾಮೀಣ ಆಹಾರ ಸಂಸ್ಕೃತಿಯ ಪದ್ಧತಿ ಹೊಂದಿದ್ದ `ನಮ್ಮೂರ ಊಟ~ಕ್ಕೆ ಬರುವ ಪ್ರವಾಸಿಗರಿಗೆ ಬಾಳೆ ಎಲೆಯ ಊಟ, ಮಹಿಳೆಯರೇ ಊಟ ಬಡಿಸುವ ಕ್ರಮ ವಿಶಿಷ್ಟ ಅನುಭವ ನೀಡುತ್ತಿತ್ತು.  ನಿತ್ಯ ಗೆಳೆಯರೊಂದಿಗೆ ಕುಳಿತು ಹರಟುತ್ತಿದ್ದ ~ನಮ್ಮೂರ ಊಟ~ ಹೋಟೆಲ್ ಎದುರಿನ ಬಿದಿರು ಮಂಚದ ಸುತ್ತ ಇಂದು ಮೌನ ಆವರಿಸಿದೆ. ಮಂಗಳವಾರ ಕೆರೆಕೊಪ್ಪದಲ್ಲಿ ನಡೆದ ಅಂತ್ಯಕ್ರಿಯೆಯಲ್ಲಿ ಕೃಷ್ಣ ಹೆಗಡೆಯವರ ಸ್ನೇಹಿತರು, ಅನೇಕ ಗಣ್ಯರು ಪಾಲ್ಗೊಂಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.