ಸೋಮವಾರ, ಮೇ 23, 2022
27 °C

ಹೋಮ್ ನರ್ಸ್...ಆ ಮುಖ ಈ ಮುಖ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಗರದ ಬದುಕಿನಲ್ಲಿ ಹಿರಿಯರ ಸೇವೆ, ಕಿರಿಯರ ಆರೈಕೆ ಎರಡಕ್ಕೂ ಸಮಯ ಇಲ್ಲದೇ ಇರುವುದಕ್ಕೆ ಬಹುತೇಕರು ಆರಿಸಿಕೊಂಡಿರುವ ಜೀವನಶೈಲಿಯೇ ಕಾರಣ. ಮಕ್ಕಳಿಗಾಗಿ ಪ್ಲೇ ಹೋಮ್, ಡೇ ಕೇರ್ ಮುಂತಾದ ವ್ಯವಸ್ಥೆ  ಸೃಷ್ಟಿಯಾದವು. `ಹೋಮ್ ಮೇಡ್~ಗಳು ದೊರೆತರು.ಆದರೆ ಹಿರಿಯರಿಗೆ ವೃದ್ಧಾಶ್ರಮಗಳಿದ್ದರೂ ನಮ್ಮ ಕೌಟುಂಬಿಕ ರಚನೆ ಇನ್ನೂ ಭದ್ರವಾಗಿದೆ. ಅಸ್ವಸ್ಥ ಹಿರಿಯರ ಆರೈಕೆಗೆ ಆಸ್ಪತ್ರೆಗಳಿಗಿಂತ ಮನೆಗಳೇ ಸುರಕ್ಷಿತ ಎಂಬುದು ಎಲ್ಲರ ಭಾವ. ಹಿರಿಯರೂ ಅಷ್ಟೆ, ಮನೆ ಬಿಟ್ಟು ಹೋದರೆ ಅರ್ಧ ಇಳಿದು ಹೋದಂತೆಯೇ ಆಗುತ್ತಾರೆ. ಇವರ ಅನುಕೂಲಕ್ಕಾಗಿ ಒಂದೂವರೆ ದಶಕದ ಹಿಂದೆ ಹೋಮ್ ನರ್ಸಿಂಗ್ ವ್ಯವಸ್ಥೆ ಆರಂಭವಾಯಿತು. 
ಹೋಮ್ ನರ್ಸ್ ಬೇಕಾದರೆ...

-ಮನೆಯಲ್ಲಿ ಸೌಹಾರ್ದ ವಾತಾವರಣದ ಸೃಷ್ಟಿಯಾಗಬೇಕು.

4ಲಿಖಿತ ಷರತ್ತುಗಳನ್ನು ಸ್ಪಷ್ಟವಾಗಿ ಓದಿ, ಚರ್ಚಿಸಿ ಮನವರಿಕೆಯಾದ ನಂತರವೇ ಸಹಿ ಹಾಕಬೇಕು.

-ಏಜೆನ್ಸಿ ಮುಖಾಂತರವೇ ರಜೆ ನೀಡುವ ನಿರ್ಧಾರವಾಗಬೇಕು.-ದೂರು ದುಮ್ಮಾನಗಳೇನೇ ಇದ್ದರೂ ಸಮಾಧಾನದಿಂದ ವಿವರಿಸಬೇಕು.   ಸೇವೆ ಒದಗಿಸುವ ಸಂಸ್ಥೆಗಳು

ಮಂಗಳೂರು ಮೂಲದ ದಾಸ್ ಫೌಂಡೇಶನ್ 9242730143,

ಸಂಜೀವಿನಿ 9739696807,

ಪುತ್ತೂರಿನ ಡಾ.ಗೌರಿ ಪೈ ರಾಜ್ಯದೆಲ್ಲೆಡೆ ಸೇವೆಗೆ ಶುಶ್ರೂಷಕಿಯರನ್ನು ಕಳುಹಿಸಿಕೊಡುತ್ತಾರೆ. 990201 0799

ಗೀತಾ ನರ್ಸಿಂಗ್ ಹೋಮ್:  99019 56283  

ಶುಶ್ರೂಷಕಿಯೊಬ್ಬರನ್ನು ಮನೆಯಲ್ಲಿರಿಸಿಕೊಂಡು 24 ಗಂಟೆಗಳ ಆರೈಕೆಯ ವ್ಯವಸ್ಥೆ ಮಾಡಲಾಯಿತು. ಆಸ್ಪತ್ರೆಯಲ್ಲಿ ಒಂದೆರಡು ದಶಕಗಳಷ್ಟು ಸೇವೆ ಸಲ್ಲಿಸಿದವರೇ ಸೇವೆಗೆ ಬರುತ್ತಿದ್ದರು. ಮನೆಯಲ್ಲಿ ಯಾವುದೇ ಹೆಚ್ಚಿನ ಒತ್ತಡ ಇಲ್ಲದ ಕೆಲಸದಿಂದಾಗಿ ಕೃತಜ್ಞತೆಯಿಂದಲೇ ಸೇವೆ ಸಲ್ಲಿಸುತ್ತಿದ್ದರು. ಆದರೆ ಎಲ್ಲರೂ ನಿವೃತ್ತಿಯಂಚಿನವರೇ ಆಗಿರುತ್ತಿರಲಿಲ್ಲ.ಕೆಲವೊಮ್ಮೆ ಹೊಸತಾಗಿ ವೃತ್ತಿಗೆ ಸೇರ್ಪಡೆ ಆಗುವವರಿಗೂ ಅವಕಾಶಗಳು ದೊರೆಯುತ್ತಿದ್ದವು. ಆಸ್ಪತ್ರೆಯಲ್ಲಿ ಪೂರ್ಣ ಪ್ರಮಾಣದ ಉದ್ಯೋಗ ನೀಡುವ ಮುನ್ನಾ ಅವಧಿ ಎಂದೂ ಹೇಳುತ್ತಿದ್ದರಿಂದ ಕಿರಿಯರೂ ಶ್ರದ್ಧೆಯಿಂದ ಕೆಲಸ ಮಾಡುತ್ತಿದ್ದರು. ಆರೈಕೆ ಮಾಡುತ್ತಿದ್ದರು.ಮೊದಮೊದಲು ಹೊರಗಿನಿಂದ ಬಂದವರು ಮನೆಗೆ ಹೊಂದಿಕೊಳ್ಳುತ್ತಾರೋ, ಇಲ್ಲವೋ ಎಂಬ ಅಳಕು ಮನೆಯವರಿಗೂ ಇರುತ್ತಿತ್ತು. ಆಕಸ್ಮಿಕವಾಗಿ ಹೊಂದಿಕೊಳ್ಳದಿದ್ದರೆ ಇನ್ನೊಂದು ವ್ಯವಸ್ಥೆ ಮಾಡಿಕೊಳ್ಳುವುದೂ ಕಷ್ಟಸಾಧ್ಯದ ಕೆಲಸವಾಗಿತ್ತು. ಹಾಗಾಗಿ ಮನೆಯವರೂ ಸೌಹಾರ್ದದಿಂದ ನೋಡಿ ಕೊಳ್ಳುತ್ತಿದ್ದರು.ಅದಕ್ಕೆ ತಕ್ಕ ಸೇವೆಯೂ ದೊರೆಯುತ್ತಿತ್ತು.  `ಯಾವ ಜನ್ಮದ ಋಣಾನುಬಂಧವೋ..? ತಾಯಿಗಿಂತ ಚೆನ್ನಾಗಿ ನೋಡಿ ಕೊಳ್ಳುತ್ತಾರೆ. ಹಣ ಹೋದರೂ ಚಿಂತೆಯಿಲ್ಲ, ನೆಮ್ಮದಿಯಿಂದ ಇರಬಹುದಲ್ಲ~ ಎಂಬ ಮನೋಭಾವ ಬೆಳೆಯಿತು.ಆದರೆ ಕಾಲ ಕಳೆದಂತೆಲ್ಲ ಇದಕ್ಕೂ ಕಮರ್ಷಿಯಲ್ ಸೋಂಕು ತಗುಲಿತು. ಸೇವೆ ಎಂಬುದು ನೇಪಥ್ಯಕ್ಕೆ ಸರಿದು, ನೀವಲ್ಲದಿದ್ದರೆ ಇನ್ನೊಂದು ಮನೆ ಎಂಬ ತಾತ್ಸಾರ ನರ್ಸಿಂಗ್ ಕ್ಷೇತ್ರದಲ್ಲಿ ಬೆಳೆಯಿತು. ದುಡ್ಡು ಕೊಟ್ಟರೆ ಒಬ್ಬರೇನು, ಹತ್ತು ಜನ ಬಂದಾರು ಎಂಬ ಅಹಂಭಾವ ಬೆಳೆಸಿಕೊಂಡವರೂ ಇದ್ದಾರೆ.ಪರಿಣಾಮ, ಹೆತ್ತವರ ಪಾಡು ಯಾರಿಗೂ ಬೇಡವಾಯಿತು. ಏಜೆನ್ಸಿಗಳ ಸಹಾಯಕ್ಕೆಂದು ಮುಂದಾದರೆ ಅಲ್ಲಿ ನೋಂದಣಿ ಶುಲ್ಕವೇ ಹುಬ್ಬೇರಿಸುವಂತಿದೆ. ಕನಿಷ್ಠ 2ರಿಂದ 10 ಸಾವಿರ ರೂಪಾಯಿಗಳವರೆಗೂ ನೋಂದಣಿ ಶುಲ್ಕವಿದೆ. ಈ ಶುಲ್ಕವನ್ನು ಒಂದು ತಿಂಗಳು, ಮೂರು, ಆರು ತಿಂಗಳು ಹೀಗೆ ವಿವಿಧ ಅವಧಿಗೆ ತಕ್ಕಂತೆ ವಿಂಗಡಿಸಲಾಗುತ್ತದೆ. ಅದನ್ನು ಮರಳಿಸಲಾಗುವುದಿಲ್ಲ.ನರ್ಸ್‌ಗಳಿಗೆ ನೀಡುವ ಸಂಬಳ ತಿಂಗಳಿಗೆ ಕನಿಷ್ಠ 7,500 ರೂಪಾಯಿಗಳಿಂದ ಆರಂಭವಾಗುತ್ತದೆ. ರೋಗಿಗಳ ಪರಿಸ್ಥಿತಿ, ಮನೆ, ಆಸ್ಪತ್ರೆಗೆ ಇರುವ ದೂರ ಮುಂತಾದವುಗಳನ್ನು ಪರಿಗಣಿಸಿ ಸಂಬಳವನ್ನು ನಿಗದಿಗೊಳಿಸಲಾಗುತ್ತದೆ.ಹೋಮ್ ನರ್ಸ್ ಅಂದ್ರೆ ಕೆಲಸದಾಳು ಅಲ್ಲ

ಮಾಲಾ ಎಂಬುವವರು ಕಳೆದ ಮೂರು ವರ್ಷಗಳಿಂದಲೂ ಹೋಮ್ ನರ್ಸ್ ಸೇವೆಯನ್ನು ನಿಭಾಯಿಸುತ್ತಿದ್ದಾರೆ. ಅವರಿಗೆ ಎಲ್ಲ ರೀತಿಯ ಅನುಭವಗಳೂ ದಕ್ಕಿವೆ. ಅವರ ಪ್ರಕಾರ `ಸೇವೆ ಪಡೆಯುವ ಮೊದಲು ಗ್ರಾಹಕರು ಎಲ್ಲಾ ಷರತ್ತುಗಳನ್ನು ಸರಿಯಾಗಿ ಓದಿಕೊಳ್ಳುವುದೇ ಇಲ್ಲ.

 

ತಮ್ಮ ಅಗತ್ಯಕ್ಕೆ ತಕ್ಷಣಕ್ಕೆ ಒಬ್ಬರು ಸಿಕ್ಕದರಾಯಿತು ಎಂಬ ಧೋರಣೆಯಿಂದ ಸೇವೆಗೆ ಒಪ್ಪಿಕೊಂಡುಬಿಡುತ್ತಾರೆ. ಮನೆಗೆ ಕರೆದೊಯ್ದ ಮೇಲೆ, ಹೋಮ್ ನರ್ಸ್‌ಗೂ ಕೆಲಸದವರಿಗೂ ಇರುವ ವ್ಯತ್ಯಾಸವನ್ನೇ ಅರಿಯದವರಂತೆ ವರ್ತಿಸುತ್ತಾರೆ. ಹೋಮ್ ನರ್ಸ್‌ಗಳು ಕೇವಲ ರೋಗಿಗಳ ಆರೈಕೆಗೆ ಇರುತ್ತಾರೆ.ಮನೆಯವರ ಸೇವೆಗಲ್ಲ. ಅವರಿಗೆ ನೀಡಿದ ನಿಗದಿತ ಸೇವೆಗಳನ್ನು ಮಾತ್ರ ಅವರು ನಿಭಾಯಿಸಬಲ್ಲರು. ಸಂಸ್ಥೆಯು ತಮಗೆ ಮಾಡಲು ಹೇಳದ ಕೆಲಸಗಳನ್ನು ನಿರಾಕರಿಸುವ ಸಂಪೂರ್ಣ ಹಕ್ಕು ಅವರಿಗಿರುತ್ತದೆ. ಆದರೆ  ಕುಟುಂಬದವರ ಆದರ ಹಾಗೂ ಪ್ರೀತಿಯಿಂದಾಗಿ ಈ ಆರೈಕೆಯ ವ್ಯಾಪ್ತಿ ಹೆಚ್ಚಾಗಬಹುದು.ಅದು ಪರಸ್ಪರ ಸಂಬಂಧವನ್ನು ಅವಲಂಬಿಸಿರುತ್ತದೆ. ಹೇಳಿದ ಕೆಲಸವನ್ನು ಮಾಡುವುದಿಲ್ಲ ಎಂಬ ದೂರುಗಳೇ ನರ್ಸ್‌ಗಳ ಕುರಿತು ಹೆಚ್ಚಾಗಿ ಬರುತ್ತವೆ. ಆದರೆ ರೋಗಿಯ ಎಲ್ಲ ಕೆಲಸಗಳನ್ನೂ ಅವರು ಮಾಡಿರುತ್ತಾರೆ. ಅಷ್ಟು ತರಬೇತಿ  ನೀಡಿಯೇ ಮನೆಗೆ ಕಳುಹಿಸಲಾಗಿರುತ್ತದೆ~ ಎನ್ನುತ್ತಾರೆ ಅವರು.ಒಬ್ಬ ನರ್ಸ್ ಬಿಟ್ಟು ಹೋದರೆ ಇನ್ನೊಬ್ಬರನ್ನು ಬೇಗ ನಿಯೋಜಿಸುವುದಿಲ್ಲ ಎಂಬುದು ಗ್ರಾಹಕರ ಇನ್ನೊಂದು ದೂರು. ಇಲ್ಲಿಯೂ ಒಂದು ತೊಡಕಿದೆ ಎನ್ನುವ ಮಾಲಾ ಅದನ್ನು ಹೀಗೆ ಬಿಡಿಸಿ ಹೇಳುತ್ತಾರೆ: `ನರ್ಸ್‌ಗಳಿಗೆ ರಜೆ ನೀಡುವ ಮುನ್ನ ಅಥವಾ ಅವರನ್ನು ಸೇವೆಯಿಂದ ಬಿಡುಗಡೆಗೊಳಿಸುವ ಮುನ್ನ ಏಜೆನ್ಸಿಗೆ ಮಾಹಿತಿ ನೀಡಬೇಕು ಎಂಬ ಲಿಖಿತ ಷರತ್ತು ಇದೆ. ಏಜೆನ್ಸಿ ಪರ್ಯಾಯ ವ್ಯವಸ್ಥೆ ಕಲ್ಪಿಸಿದ ನಂತರವೇ ರಜೆ ನೀಡಬೇಕು. ಆದರೆ ಯಾರಿಗೂ ಮಾಹಿತಿ ನೀಡದೇ ನರ್ಸ್‌ಗಳು ಮನೆಯಿಂದ ನೇರವಾಗಿ ರಜೆ ಹೋದರೆ ಪರ್ಯಾಯ ವ್ಯವಸ್ಥೆ ಕಲ್ಪಿಸಲು ವಿಳಂಬವಾಗುತ್ತದೆ~.`ಒಬ್ಬ ಹೋಮ್ ನರ್ಸನ್ನು ನಿಗದಿಗೊಳಿಸಿದರೆ ಅವರಿಗೆ ವಾರಕ್ಕೊಂದು ದಿನ ಅಥವಾ ತಿಂಗಳಿಗೆ ಕನಿಷ್ಠ ಎರಡು ದಿನಗಳ ರಜೆಯನ್ನಾದರೂ ನೀಡಬೇಕು. ಅವರ ಸಂಪೂರ್ಣ ಖರ್ಚು ಹೊರಬೇಕು. ತಿಂಗಳ ಸಂಬಳವೂ ಸೇರಿದಂತೆ ಕನಿಷ್ಠ 12-15 ಸಾವಿರ ರೂಪಾಯಿಗಳ ವೆಚ್ಚವನ್ನು ಭರಿಸಲು ಸಿದ್ಧರಿರಬೇಕು. ಜೊತೆಗೆ ಇನ್ನೊಬ್ಬರನ್ನು ಮನೆಯ ಸದಸ್ಯರಂತೆ ಭಾವಿಸಿ, ತಪ್ಪುಗಳನ್ನು ತಿದ್ದುತ್ತ, ತಮಗೆ ಅಗತ್ಯವಿರುವಂತೆ ತರಬೇತಿ ನೀಡುವಷ್ಟು ವ್ಯವಧಾನ ಇರಬೇಕು. ಆಗ ಸುದೀರ್ಘ ಕಾಲದ ಸೇವೆ ಸಿಗುವುದು ಸಾಧ್ಯ~ ಎನ್ನುವುದು ಮಾಲಾ ಅವರ ಕಿವಿಮಾತು.ನಗರದಲ್ಲಿರುವ ಬಹುತೇಕ ಗ್ರಾಹಕರು ನರ್ಸ್‌ಗಳ ಬದಲಿಗೆ ಟ್ರೇನ್ಡ್ ರೋಬೊಗಳು ಬೇಕು ಎಂಬಂತೆ ವರ್ತಿಸುತ್ತಾರೆ. ಅವರಿಗೇನೂ ತಿಳಿಯುವುದಿಲ್ಲವೇ ಎಂದು ಮೂದಲಿಸುತ್ತಾರೆ. ಅವರ ಸಂಬಳದ ಬಗ್ಗೆ ಆಗಾಗ ಟೀಕಿಸುತ್ತಾರೆ.ಸೌಹಾರ್ದ ಭಾವವೇ ಇರದಿದ್ದರೆ ಸೇವೆ ಸಾಧ್ಯವೇ? ಎಂಬುದು ಅವರ ಪ್ರಶ್ನೆ. ಪರ್ಯಾಯ ವ್ಯವಸ್ಥೆ ಹಾಗೂ ಕೆಲಸ ಮಾಡದ ಬಗ್ಗೆ ಕೆಲವರು ಗ್ರಾಹಕರ ವೇದಿಕೆಯ ಕಟ್ಟೆ ಹತ್ತಿದ್ದೂ ಇದೆ. ಆದರೆ ಷರತ್ತುಗಳ ಒಪ್ಪಂದ ಕಾಪಿಯನ್ನು ತೋರಿಸಿದರೆ, ನಾವದನ್ನು ಓದಿರಲಿಲ್ಲ ಎಂದು ಒಪ್ಪಿಕೊಂಡಿದ್ದೂ ಇದೆ ಎನ್ನುತ್ತಾರೆ ಅವರು.ನಗರದ ಬಹುತೇಕ ಏಜೆನ್ಸಿಗಳಲ್ಲಿ ದಾಖಲಾಗಿರುವ ದೂರುಗಳು ಸಹ ಇಂಥವೇ ಆಗಿವೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.