ಸೋಮವಾರ, ಮೇ 23, 2022
27 °C

ಹೋರಾಟದ ಹೊನ್ನ ಚಿತ್ರಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಅವನು ನಮ್ಮ ಶತ್ರು. ಆದರೆ, ಯುದ್ಧಕೋವಿದ. ಮಹಾಚೇತನ. ಅವನಿಗೆ ಇದೋ ನಮ್ಮ ಗೌರವ’- ಬ್ರಿಟಿಷ್ ಅಧಿಕಾರಿ ಪಳಸಿ ರಾಜನ ಶವವನ್ನಿರಿಸಿ ಈ ಸಾಲುಗಳನ್ನು ಹೇಳುತ್ತಾನೆ. ಸಿನಿಮಾ ಮುಗಿಯುವುದೇ ಈ ಸನ್ನಿವೇಶದಿಂದ. ನಾನು ನೋಡಿದ ‘ಪಳಸಿ ರಾಜ’ ಮಲೆಯಾಳಿ ಚಿತ್ರದಲ್ಲಿ ನನಗೆ ತುಂಬಾ ಹಿಡಿಸಿದ ದೃಶ್ಯವಿದು. ಭಾವುಕ ಸ್ವಭಾವದವನಾದ ನಾನು ಈ ದೃಶ್ಯ ನೋಡಿ ಗೊಳೋ ಎಂದು ಅತ್ತುಬಿಟ್ಟೆ. ಚಿತ್ರ ನನ್ನನ್ನು ಅಷ್ಟರಮಟ್ಟಿಗೆ ವಶಪಡಿಸಿಕೊಂಡುಬಿಟ್ಟಿತ್ತು.ಇಂಥ ವಸ್ತುವಿನ ಚಿತ್ರ ನನ್ನನ್ನು ಹೀಗೆ ಕಾಡುವುದು ಏಕೆ ಎಂದು ನನಗೆ ನಾನೇ ಅನೇಕ ಸಲ ಪ್ರಶ್ನೆ ಹಾಕಿಕೊಂಡಿದ್ದೇನೆ. ಅದಕ್ಕೆ ಬಹುಶಃ ನನ್ನ ಬಾಲ್ಯವೇ ಉತ್ತರವಿರಬಹುದು. ಶಾಲಾ ದಿನಗಳಲ್ಲಿ ನನಗೆ ಅಚ್ಚುಮೆಚ್ಚಾದ ವಿಷಯ ‘ಸಮಾಜ ಪರಿಚಯ’ (ಸೋಷಿಯಲ್ ಸ್ಟಡೀಸ್).ಉಳಿದೆಲ್ಲದಕ್ಕಿಂತ ಹೆಚ್ಚು ಅಂಕ ತೆಗೆಯುತ್ತಿದ್ದ ವಿಷಯವೂ ಅದೇ ಆಗಿತ್ತು. ‘ಫ್ಯಾನ್ಸಿ ಡ್ರೆಸ್ ಕಾಂಪಿಟೇಷನ್’ ಎಂದೊಡನೆ ನಾನು ಹಾಕುತ್ತಿದ್ದದ್ದು ಟಿಪ್ಪುವಿನದ್ದೋ, ಸುಭಾಷ್‌ಚಂದ್ರ ಭೋಸರದ್ದೋ ವೇಷ. ವೇದಿಕೆ ಮೇಲೆ ನಿಂತು ಆ ವೇಷಗಳಲ್ಲಿ ಒಂದೋ ಎರಡೋ ಮಾತಾಡುವಾಗಲೂ ನಾನು ಭಾವುಕನಾಗುತ್ತಿದ್ದೆ. ನಾನೇನಾದರೂ ನಟನಾಗದೇ ಹೋಗಿದ್ದಲ್ಲಿ ಯೋಧ ಆಗಿರುತ್ತಿದ್ದೆ. ನಿಜಕ್ಕೂ ಅದೇ ನನ್ನ ಕನಸಾಗಿತ್ತು.‘ಪಳಸಿ ರಾಜ’ ತರಹದ ಚಿತ್ರ ಅಷ್ಟೊಂದು ಆಪ್ತವಾಗುವುದು ನನ್ನ ಬಾಲ್ಯದ ಈಡೇರದ ಆ ಕನಸಿನಿಂದಲೇ ಇರಬೇಕು. ಕೊಟ್ಟಾಯಂ ವಂಶಕ್ಕೆ ಸೇರಿದ ಕೇರಳ ವರ್ಮ ಪಳಸಿ ರಾಜನು ಬ್ರಿಟಿಷರ ವಿರುದ್ಧ ನಡೆಸಿದ ಹೋರಾಟದ ಮೇಲೆ ‘ಪಳಸಿ ರಾಜ’ ಚಿತ್ರ ಕೇಂದ್ರಿತವಾಗಿದೆ. ಐತಿಹಾಸಿಕ ಚಿತ್ರ ಮಾಡುವುದು ತುಂಬಾ ಕಷ್ಟದ ಸಂಗತಿ. ಸಾಕಷ್ಟು ಅಧ್ಯಯನ, ಆ ಕಾಲಘಟ್ಟದ ಪರಿಕಲ್ಪನೆ, ಚರಿತ್ರೆಗೆ ಅಪಚಾರವೆಸಗದಂಥ ಎಚ್ಚರಿಕೆ,ಉಡುಗೆ-ತೊಡುಗೆಯ ಅರಿವು, ಅಂದಿನ ಸಾಮಾಜಿಕ ಪರಿಸ್ಥಿತಿಯ ಚಿತ್ರವತ್ತಾದ ಕಲ್ಪನೆ, ಬಿಗಿಯಾದ ಸ್ಕ್ರಿಪ್ಟ್, ಸಾಕಷ್ಟು ಹೋಂವರ್ಕ್- ಎಲ್ಲವನ್ನೂ ಅದು ಬಯಸುತ್ತದೆ.

 

ನಿರ್ದೇಶಕ ಟಿ.ಹರಿಹರನ್ ಐತಿಹಾಸಿಕ ಚಿತ್ರ ಮಾಡಲು ಬೇಕಾದ ಮನಃಸ್ಥಿತಿ ಇರುವವರೇ ಹೌದು. ಅದಕ್ಕೇ ‘ಪಳಸಿ ರಾಜ’ ಕೇವಲ ಐತಿಹಾಸಿಕ ದಾಖಲೆಯಂತೆ ಮೂಡಿಬರದೆ ಭಾವುಕ ನೆಲೆಗಟ್ಟಿನಲ್ಲಿ ಚರಿತ್ರೆಯ ಅಧ್ಯಾಯವೊಂದನ್ನು ಕಣ್ಣಮುಂದೆ ಕಟ್ಟುವಂತೆ ಮೂಡಿದೆ. ಸಾಹಿತ್ಯ, ಸಿನಿಮಾ ಎರಡೂ ಕ್ಷೇತ್ರಗಳ ಪಟ್ಟುಗಳನ್ನು ಬಲ್ಲ ಹಿರಿಯರಾದ ಎಂ.ಟಿ.ವಾಸುದೇವನ್ ನಾಯರ್ ಈ ಚಿತ್ರಕ್ಕೆ ಸ್ಕ್ರಿಪ್ಟ್ ಬರೆದಿದ್ದಾರೆ. ಕ್ಯಾಮೆರಾಮನ್ ರಾಮ್‌ನಾಥ್ ಶೆಟ್ಟಿ ಜೊತೆಗೆ ದೊಡ್ಡ ಛಾಯಾಗ್ರಾಹಕರ ತಂಡವೇ ದುಡಿದಿದೆ.ಚಿತ್ರವನ್ನು ಕಮರ್ಷಿಯಲ್ ಚೌಕಟ್ಟಿಗೆ ಒಳಪಡಿಸಿರುವುದಕ್ಕೂ ಸಾಕಷ್ಟು ಸಾಕ್ಷಿಗಳಿವೆ. ಬಿಳಿ ಕುದುರೆ ಮೇಲೆ ಪಳಸಿ ರಾಜ ಬರುವ ದೃಶ್ಯಕ್ಕೆ ಫ್ರೇಮ್ ಇಟ್ಟಿರುವ ರೀತಿ ಇದಕ್ಕೊಂದು ಉದಾಹರಣೆ. ನಾನೂ ಕಮರ್ಷಿಯಲ್ ಚಿತ್ರಗಳ ರೋಚಕ ಕ್ಷಣಗಳನ್ನು ಇಷ್ಟಪಡುವವನಾದ್ದರಿಂದ ಈ ದೃಶ್ಯ ನನ್ನಲ್ಲಿ ರೋಮಾಂಚನ ಉಂಟುಮಾಡಿತು. ಇತ್ತೀಚೆಗೆ ನಾನು ನೋಡಿದ ಚಿತ್ರಗಳಲ್ಲೆಲ್ಲಾ ಅತ್ಯದ್ಭುತವಾದ ದೃಶ್ಯವಿದು ಎಂದು ಯಾವುದೇ ಅನುಮಾನವಿಲ್ಲದೆ ಹೇಳುತ್ತೇನೆ.‘ಪಳಸಿ ರಾಜ’ನ ಪಾತ್ರದಲ್ಲಿ ಮುಮ್ಮುಟ್ಟಿ ನಟಿಸಿದ್ದಾರೆ. ಅವರ ಅಭಿನಯದ ವಿಷಯದಲ್ಲಿ ಎರಡು ಮಾತಿಲ್ಲ. ಆದರೆ, ಅವರಿಗಿರುವ ಸ್ಟಾರ್ ಪಟ್ಟವನ್ನು ದೃಷ್ಟಿಯಲ್ಲಿಟ್ಟುಕೊಂಡೇ ಪಾತ್ರವನ್ನು ಬಿಂಬಿಸಲಾಗಿದೆ. ಹಾಗಾಗಿ ಪಳಸಿ ರಾಜ ಚಿತ್ರದಲ್ಲಿ ನಾಯಕ ಉತ್ಪ್ರೇಕ್ಷಿತನೇ ಹೌದು.ತಾಂತ್ರಿಕವಾಗಿ ಪ್ರಬಲವಾಗಿರುವ ಈ ಚಿತ್ರದಲ್ಲೂ ತಾರ್ಕಿಕ ತಪ್ಪುಗಳಿವೆ ಎಂದು ಕೆಲವು ಚರಿತ್ರಕಾರರು ಟೀಕಿಸಿದ್ದಾರೆ. ಪಳಸಿ ರಾಜ ಉಪಯೋಗಿಸಿರುವ ಕತ್ತಿಯ ಆಕಾರ ಆ ಕಾಲದ್ದಲ್ಲ, ಅವನೂ ಸೇರಿದಂತೆ ಆ ಕಾಲದ ಜನ ಕೂದಲನ್ನು ಬೆನ್ನಮೇಲೆ ಗಂಟುಹಾಕುತ್ತಿರಲಿಲ್ಲ;ಬದಲಿಗೆ ಶಿಖೆಯ ಎಡಭಾಗದಲ್ಲಿ ಗಂಟು ಹಾಕುತ್ತಿದ್ದರು, ಅಂಗಿಯಂಥ ದಿರಿಸನ್ನು ಪಳಸಿ ರಾಜ ಹಾಕುತ್ತಿರಲಿಲ್ಲ; ಅಂಗವಸ್ತ್ರ ಹೊದ್ದುಕೊಳ್ಳುತ್ತಿದ್ದ ಎಂಬಿತ್ಯಾದಿ ಲೋಪಗಳನ್ನು ಚರಿತ್ರಕಾರರು ಪಟ್ಟಿ ಮಾಡಿದ್ದಾರೆ.ಚಿತ್ರವನ್ನು ಸಾಮಾನ್ಯ ಪ್ರೇಕ್ಷಕನಾಗಿ ನಾನು ನೋಡಿದಾಗ ಇಂಥ ಲೋಪಗಳು ಮುಖ್ಯ ಎಂದು ಅನ್ನಿಸಲೇ ಇಲ್ಲ. ಯುದ್ಧ ಸನ್ನಿವೇಶಗಳಲ್ಲಿ ನೂರಾರು ಸಹಚರರ ಜೊತೆಗೆ ಪಳಸಿ ರಾಜ ನುಗ್ಗಿಬರುವ ದೃಶ್ಯಗಳ ಸಂಯೋಜನೆ ಅದ್ಭುತ. 1790ರಲ್ಲೇ ರಾಜನೊಬ್ಬನಿಗೆ ಬ್ರಿಟಿಷರ ವಿರುದ್ಧ ಇದ್ದ ಇಂಥ ಕಿಚ್ಚು ನನಗೆ ‘ಸಮಾಜ ಪರಿಚಯ’ದ ಇತರ ಅಧ್ಯಾಯಗಳನ್ನೂ ನೆನಪಿಗೆ ತಂದಿತು. ಚಿತ್ರವು ಅದರ ಕಲಾನಿರ್ದೇಶನದ ಜೊತೆಜೊತೆಗೂ ಭಾವುಕ ರೀತಿಯಲ್ಲಿ ವಿಷಯಗಳನ್ನು ದಾಟಿಸುವುದರಿಂದ ಚರಿತ್ರೆಯ ದೃಷ್ಟಿಯಲ್ಲಿ ಆಗಿರಬಹುದಾದ ಲೋಪಗಳು ಅಷ್ಟಾಗಿ ಗಮನಕ್ಕೆ ಬರುವುದಿಲ್ಲ. ಚರಿತ್ರೆಯ ಘಟನಾವಳಿಗಳನ್ನು ತಿರುಚದಿರುವುದು ಮುಖ್ಯವಾದ್ದರಿಂದ ಸಣ್ಣಪುಟ್ಟ ಲೋಪಗಳನ್ನು ನಾವು ನಿರ್ಲಕ್ಷಿಸಬಹುದು.ಚಿತ್ರದ ಪ್ರಾರಂಭದಲ್ಲಿ ಹಿನ್ನೆಲೆಯಲ್ಲಿ ಧ್ವನಿಯೊಂದು ಮೂಡುತ್ತದೆ. ಅದು ಮೋಹನ್‌ಲಾಲ್ ಅವರ ಧ್ವನಿ ಎಂಬುದು ಕೇರಳ ಚಿತ್ರರಂಗ ದೊಡ್ಡ ಚಿತ್ರವನ್ನು ಹೇಗೆ ಇನ್ನಷ್ಟು ದೊಡ್ಡದು ಮಾಡುತ್ತದೆಂಬುದಕ್ಕೆ ಪುಷ್ಟಿ ಕೊಡುತ್ತದೆ. ಭಾವುಕ ಕ್ಷಣಗಳನ್ನು ಕಾಡುವಂತೆ ಮಾಡುವಲ್ಲಿ ರಸೂಲ್ ಪೂಕುಟ್ಟಿ ಅವರ ಶಬ್ದ ವಿನ್ಯಾಸ ಹಾಗೂ ಇಳಯರಾಜ ಅವರ ಸಂಗೀತ ಸಂಯೋಜನೆ ಎರಡರ ಪಾಲೂ ಹಿರಿದು. ನಾನು ಮೊದಲೇ ಬಣ್ಣಿಸಿದ ಚಿತ್ರದ ಕ್ಲೈಮ್ಯಾಕ್ಸ್ ಅಷ್ಟೊಂದು ತೀವ್ರವಾಗಿ ಮೂಡಿದ್ದರೆ ಅದಕ್ಕೆ ಕಾರಣ ಅವರಿಬ್ಬರೇ.ಮೊದಲೇ ಐತಿಹಾಸಿಕ ಚಿತ್ರ. ಹದಿನೆಂಟನೇ ಶತಮಾನದ ರಾಜನ ಕಥೆ. ಅದನ್ನು ಪ್ರೇಕ್ಷಕರು ಹೇಗೆ ಸ್ವೀಕರಿಸಿಯಾರು ಎಂಬ ಆತಂಕ ಚಿತ್ರತಂಡಕ್ಕೆ ಇರಲಿಲ್ಲವೇ ಎಂಬ ಪ್ರಶ್ನೆ ನನಗೂ ಮೊದಲು ಇತ್ತು. ಆದರೆ, ಚಿತ್ರ ನೋಡಿದ ಮೇಲೆ ಅದಕ್ಕೆ ತಂತಾನೇ ಉತ್ತರ ಸಿಕ್ಕಿತು. ಆಮೇಲೆ ಅದರ ಕಲೆಕ್ಷನ್ ಕಥೆಗಳನ್ನು ಓದಿ ದಂಗಾದೆ. ‘ಪಳಸಿ ರಾಜ’ ಚಿತ್ರದ ಸ್ಯಾಟಲೈಟ್ ಹಕ್ಕು ಎರಡು ಕೋಟಿ 60 ಲಕ್ಷ ರೂಪಾಯಿಯನ್ನು ತಂದಿದೆ.ಈ ಸಿನಿಮಾ ನೂರು ದಿನ ಓಡಿದ್ದಷ್ಟೇ ಅಲ್ಲದೆ, 20 ಕೋಟಿ ರೂಪಾಯಿ ಗಳಿಸಿದೆ. ‘ಟ್ವೆಂಟಿ: 20’ (35 ಕೋಟಿ), ‘ಕ್ಲಾಸ್‌ಮೇಟ್ಸ್’ (24 ಕೋಟಿ) ಚಿತ್ರಗಳ ನಂತರದ ಸ್ಥಾನ ಗಳಿಕೆಯಲ್ಲಿ ಈ ಚಿತ್ರಕ್ಕೇ ಸಲ್ಲುತ್ತದೆ. ಮಲೆಯಾಳ ಚಿತ್ರೋದ್ಯಮ ಕನ್ನಡದಕ್ಕಿಂತ ವ್ಯಾಪಕ ಮಾರುಕಟ್ಟೆ ಹೊಂದಿದೆ ಎಂಬುದಕ್ಕೆ ಈ ಅಂಕಿಅಂಶ ಉದಾಹರಣೆ.ನಿರ್ದೇಶಕರಿಗೆ ನಾಯಕ ನಟನ ಇಮೇಜಿನ ಹಂಗು ಇಲ್ಲ. ಪಾತ್ರದ ಪೋಷಣೆಯಲ್ಲಿ ಉತ್ಪ್ರೇಕ್ಷೆ ಕಂಡುಬಂದರೂ ಇತಿಹಾಸದ ಸಣ್ಣಸಣ್ಣ ಘಟನೆಗಳ ಬಗ್ಗೆ ಅವರಿಗಿರುವ ಆಸ್ಥೆ ಮೆಚ್ಚತಕ್ಕ ಅಂಶ. ಎದಚೆನ ಕುಂಕನ್ ಪಾತ್ರದಲ್ಲಿ ಶರತ್‌ಕುಮಾರ್ ಗತ್ತು, ಮೇಕಪ್ಪೇ ಇಲ್ಲದೆಯೂ ಸುಂದರವಾಗಿ ಕಾಣುವ ಕನ್ನಿಹಾ, ನೀಲಿ ಪಾತ್ರಕ್ಕೆ ಜೀವ ತುಂಬಿರುವ ಪದ್ಮಪ್ರಿಯಾ, ನ್ಯೂಯಾರ್ಕ್‌ನ ಹೆಸರಾಂತ ನಟಿ ಲಿಂಡಾ ಅರ್ಸೆಲಿನೊ ಚಿತ್ತಾಪಹಾರಿ ಅಭಿನಯ ಎಲ್ಲವೂ ಚಿತ್ರದ ಒಟ್ಟಂದವನ್ನು ಹೆಚ್ಚಿಸಿವೆ.ಮತ್ತೆ ಒಂದು ಪ್ರಶ್ನೆ- ಯಾಕೆ ಇಂಥ ಚಿತ್ರಗಳನ್ನು ಮಾಡಬೇಕು? ಅದರ ನಂತರ ಇನ್ನೊಂದು ಪ್ರಶ್ನೆ- ಇಂಥ ಚಿತ್ರವನ್ನು ಜನ ನೋಡುವುದು ಯಾಕೆ? ರಾಜನಾಗಲೀ, ಯೋಧನಾಗಲೀ ದೇಶಕ್ಕಾಗಿ ಹೋರಾಡುವ ಕಥೆಯ ಹೂರಣವನ್ನು ಭಾವುಕತೆಯ ಕಣದಲ್ಲಿಟ್ಟು ಒಬ್ಬಟ್ಟು ತಟ್ಟಿದರೆ ಅದು ಖಂಡಿತ ರುಚಿಯಾಗಿಯೇ ಇರುತ್ತದೆ ಎಂಬುದು ನಾನು ಕಂಡುಕೊಂಡ ಉತ್ತರ. ಆದರೂ ಈ ಕಾಲಮಾನದಲ್ಲಿ ಪೀರಿಯೆಡ್ ಸಿನಿಮಾ ಮಾಡಲು ಗಟ್ಟಿ ಗುಂಡಿಗೆ ಬೇಕು. ಅದಕ್ಕೂ ಮಿಗಿಲಾಗಿ ಮಲೆಯಾಳ ಚಿತ್ರರಂಗದಲ್ಲಿರುವ ‘ಗುಣಮಟ್ಟಕ್ಕಾಗಿ ಒಗ್ಗಟ್ಟು’ ಎಂಬ ಮಂತ್ರವೂ ಅನುರಣಿಸಬೇಕು.ಕೇರಳ ವರ್ಮ ಪಳಸಿ ರಾಜನ ಗತ್ತು, ಹೋರಾಟ, ತ್ಯಾಗ ನನ್ನನ್ನು ಮಲಗುವಾಗ ಅನೇಕ ಸಲ ಕಾಡಿದ್ದಿದೆ. ಮುಮ್ಮುಟ್ಟಿ ಅಲ್ಲದೆ ಆ ಪಾತ್ರವನ್ನು ಬೇರೆ ಯಾರು ಮಾಡಲು ಸಾಧ್ಯವಿತ್ತು ಎಂದು ನಾನು ಅನೇಕ ಸಲ ಕೇಳಿಕೊಂಡ ಪ್ರಶ್ನೆಗೆ ಮಾತ್ರ ಇನ್ನೂ ಉತ್ತರ ಸಿಕ್ಕಿಲ್ಲ. ಚಿತ್ರವೊಂದು ಕಾಡಬೇಕಾದದ್ದು ಹೀಗೆಯೇ ಅಲ್ಲವೇ?

ಲೇಖಕರು ಚಲನಚಿತ್ರ ನಟ, ನಿರ್ಮಾಪಕ

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.